Thursday, 12th December 2024

ಬದುಕಿನ ಮಾರ್ಗ ಭಗವದ್ಗೀತೆ

Bhagavd Gita

ತನ್ನಿಮಿತ್ತ

ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಭಗವದ್ಗೀತೆಯು ಒಂದು ಮತಕ್ಕೆ ಸೀಮಿತವಾದ ಗ್ರಂಥವಲ್ಲ, ಆದರೂ ಲೋಕದಲ್ಲಿ ತಪ್ಪು ಅಭಿಪ್ರಾಯಕ್ಕೆ ಒಳಗಾಗಿದೆ. ಅಷ್ಟು ಮಾತ್ರವಲ್ಲದೇ ಇದು ವೈರಾಗ್ಯ ಉಂಟು ಮಾಡುವ ಗ್ರಂಥವಾದ್ದರಿಂದ, ಇದನ್ನು ಓದಿ ತಮ್ಮ ಮಕ್ಕಳಿಗೆ ಎಲ್ಲಿ ವೈರಾಗ್ಯ ಗಂಟು ಬಿದ್ದು ಬಿಡುತ್ತದೆಯೋ, ಎಂದು ಕೆಲವು ಅರೆಮರುಳರು, ಬೆಪ್ಪರು, ತಮ್ಮ ಹೊಟ್ಟೆಯನ್ನು ತಾವೇ ಕಿವುಚಿಕೊಳ್ಳುತ್ತಾರೆ.

ವೈರಾಗ್ಯ ಎನ್ನುವುದು ಅಷ್ಟು ಸುಲಭವಾಗಿ ಗಂಟು ಬೀಳುವಂಥದ್ದಲ್ಲ. ಒಂದು ವೇಳೆ ಯಾರಲ್ಲಾದರೂ ವೈರಾಗ್ಯದ ಲಕ್ಷಣ ಕಾಣಿಸಿ ದರೆ ಆತನಷ್ಟು ಅದೃಷ್ಟ ಶಾಲಿ ಇನ್ನೊಬ್ಬರಿಲ್ಲ. ಜಗತ್ತಿನಲ್ಲಿ ವಿರಕ್ತಿಗೆ ಸಮಾನವಾದ ಭಾಗ್ಯವು ಬೇರೊಂದಿಲ್ಲ. ವೈರಾಗ್ಯ ವೆಂದರೆ ಯಾವ ಪ್ರಾಪಂಚಿಕ ಸುಖ – ಸಾಧನಗಳೂ ಇಲ್ಲದೇ ದಾರಿದ್ರ್ಯದಿಂದ, ನಿರಾಶೆಯಿಂದ ಒಂದು ಮೂಲೆಯಲ್ಲಿ ಮುದುರಿ ಕೊಂಡು ಸಾವಿಗೆ ಕಾಯುವ ವ್ಯಕ್ತಿಯಲ್ಲಿ ಇರಬೇಕಾದ್ದು ಎಂದು ಜನರಲ್ಲಿ ತಪ್ಪು ತಿಳಿವಳಿಕೆಯಿದೆ.

ಸಾವಿಗೆ ಕಾಯುವ ಅಂಥ ಕೈಲಾಗದ ನಿರ್ಜೀವ ಮೂರ್ಖರ ಬಾಯಿಗೆ ನೀರು ಹಾಕಬೇಕೇ ಹೊರತು ಭಗವದ್ಗೀತೆಯನ್ನಲ್ಲ. ಬೇಕು ಬೇಕೆನಿಸಿದ ಸಾಧನಗಳನ್ನು ಸಂಪಾದಿಸಿ ಅವುಗಳು ತನ್ನ ಪಾದದಡಿಯಲ್ಲಿ ಉರುಳಾಡುತ್ತಿದ್ದರೂ, ಅವುಗಳ ಜತೆಗೆ ಮೋಹ ಹೊಂದದೇ ಇರುವುದು ವೈರಾಗ್ಯವೆನಿಸುವುದು. ಈ ಲೋಕದಲ್ಲಿ ಬದುಕಲಿಕ್ಕೆ ಬೇಕಾದ ಮೂಲ ವಸ್ತುಗಳನ್ನು ಸಂಪಾದಿಸಿ ಕೊಳ್ಳಲಿಕ್ಕೆ ಕಷ್ಟ ಪಡುವವರು ಪರಲೋಕದ ಬುತ್ತಿಯನ್ನೇನು ಸಾಧಿಸಿಯಾರು.

ಅಟ್ಟಕ್ಕೆ ಹಾರಲಾಗದವನು ಬೆಟ್ಟಕ್ಕೆ ಹಾರಿಯಾನೇ. ಆದ್ದರಿಂದ ಪ್ರಾಪಂಚಿಕ ಸುಖ – ಸಾಧನಗಳನ್ನು ಗಳಿಸಲಾರದವನು ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಲಿಕ್ಕಾಗಿ ಪರಮಾರ್ಥವನ್ನು ಸಾಧಿಸುತ್ತಾನೆ ಎನ್ನುವುದು ಹಗಲುಗನಸಿನ ಮಾತಾಗಿದೆ. ಈ ಅರ್ಥವನ್ನು ಸಮರ್ಥ ರಾಮದಾಸರು ತಮ್ಮ ದಾಸಬೋಧ ಗ್ರಂಥದಲ್ಲಿ ಬಹಳ ಕಡೆ ಎತ್ತಿ ಹೇಳಿದ್ದಾರೆ.

ಆದ್ದರಿಂದ ತನ್ನ ಮನುಷ್ಯತ್ವವು ಸಾರ್ಥಕ ವಾಗಬೇಕಾದರೆ ತನ್ನ ಮತ್ತು ತನ್ನ ಕುಟುಂಬದ ಹೊಟ್ಟೆ – ಬಟ್ಟೆಯನ್ನು ಸಂಪಾ ದಿಸಲು ಶಕ್ತನಾಗಿರುವುದು ಮಾತ್ರವಲ್ಲದೇ ಸಾರ್ವಜನಿಕವಾದ ಯಾವುದೇ ವ್ಯವಹಾರದಲ್ಲಿ – ಜೀವನದಲ್ಲಿ ಏನು ಬಂದರೂ ದಕ್ಷತೆಯಿಂದ ಬಡಿದಾಡಿ ವಿಜಯಿಯಾಗಬಲ್ಲ ಗಟ್ಟಿ ಗುಂಡಿಗೆಯವ ನಾಗಿರಬೇಕು. ಜೀವನದಲ್ಲಿ ಯಾವ ಪರಿಸ್ಥಿತಿ ಎದುರಾದರೂ ಮುಗುಳ್ನಕ್ಕು ಎದುರಿಸುವ ಧೈರ್ಯಶಾಲಿಯಾಗಿರಬೇಕು. ಸಾಮರ್ಥ್ಯ ಹೊಂದಿರಬೇಕು. ಅಂಥವನೇ ಅಧ್ಯಾತ್ಮಕ್ಕೆ ಸರಿಯಾದ ಅಧಿಕಾರಿಯಾಗುವರು.

ಹಾಗೆಯೇ ಲೋಕದಲ್ಲಿ ಬೇಕಾದಷ್ಟು ಸಾಮರ್ಥ್ಯ ವಂತರು, ಧೈರ್ಯಶಾಲಿಗಳು, ತುಂಬಾ ಐಶ್ವರ್ಯ ಉಳ್ಳವರು ಸಾಕಷ್ಟು ಜನ ಇದ್ದಾರೆ. ಆದರೆ ಅವರೆಲ್ಲರೂ ಭಗವದ್ಗೀತೆಗೆ ಅಧಿಕಾರಿಗಳಾಗುವುದಿಲ್ಲ. ಅವರೆಲ್ಲರಲ್ಲೂ ಅದರ ಬಗ್ಗೆ ಆಸಕ್ತಿಯೂ ಇರುವುದಿಲ್ಲ. ಅಧಿಕಾರವೂ ಇರುವುದಿಲ್ಲ.

ಕೇವಲ ಸಾಮರ್ಥ್ಯ – ಐಶ್ವರ್ಯಗಳಿಂದಾಗಿ ಅವರಿಗೆ ಅದರ ಅಧಿಕಾರ ಬರುವುದು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಇರುವಷ್ಟು ದಿನ ಹೊಟ್ಟೆ – ಬಟ್ಟೆಗಳ ಸಮೃದ್ಧಿ ಇರಬೇಕು. ವಸ್ತು – ವಾಹನ ಸೇವಕರು ಮೊದಲಾದ ಐಶ್ವರ್ಯವಿರಬೇಕು. ಈ ಲೋಕದ ಸುಖ ವನ್ನೆಲ್ಲ ಅನುಭವಿಸಬೇಕು ಎಂದೆಲ್ಲಾ ಈ ಲೋಕದಿಂದ, ಮತ್ತು ಈ ದೇಹದಿಂದ ಸಿಗುವ ಸುಖಗಳಿಗೆ ಮಾತ್ರ ಸೀಮಿತರಾಗಿ ಅದರಲ್ಲಿಯೇ ಬಿದ್ದು ಒದ್ದಾಡುವವರ ಮುಂದೆ ಭಗವದ್ಗೀತೆಯು ತನ್ನ ಬಾಯಿಯ ಬೀಗವನ್ನು ತೆಗೆಯುವುದಿಲ್ಲ.

ಈ ಲೋಕದ ಎಲ್ಲ ಸುಖಗಳೂ ಬೇಕು. ಮತ್ತು ಆ ಎಲ್ಲ ಸುಖಗಳನ್ನೂ ಮೀರಿದ, ಇನ್ನೂ ಹೆಚ್ಚಿನ ಗಾಢವಾದ ಶಾಶ್ವತವಾದ ಸುಖ ಬೇಕು ಎಂದು ಬಯಸುವ ಧೀರನಾದರೆ ಮಾತ್ರ ಅವನಿಗೆ ಗೀತಾದೇವಿಯ ಕರುಣೆಯಾದೀತು. (ಅವನಿಗೆ ಗೀತೆ ಅರ್ಥವಾದೀತು). ಆದ್ದರಿಂದ ಭಗವದ್ಗೀತೆಯು ಅರ್ಥವಾಗಬೇಕಾದರೆ ಅರ್ಥ ಮಾಡಿಕೊಳ್ಳ ಬಯಸುವವನ ಹೃದಯದಲ್ಲಿ ಸುಖದ ಆಶೆ ತುಂಬಾ
ತೀವ್ರವಾಗಿರಬೇಕು. ಈ ವಸ್ತುಗಳಿಂದ ಸಿಗುತ್ತಿರುವ ಸುಖಕ್ಕಿಂತ ಹೆಚ್ಚಿನ ಮಟ್ಟದ ಸುಖವನ್ನು ಪಡೆಯಬೇಕೆಂದು ಅವನ ಮನಸ್ಸು ಆತುರಗೊಳ್ಳಬೇಕು. ಹೆಚ್ಚು ಹೆಚ್ಚು ಸುಖದ ರಾಶಿಯನ್ನು ಕೊಳ್ಳೆ ಹೊಡೆಯಬೇಕೆಂಬ ಮಹತ್ತರ ಆಸೆ ಉಳ್ಳವನೇ ಗೀತೆಯ ಅರ್ಥ
ಅರಿಯಲು ಅಧಿಕಾರಿಯಾಗಲು ಯೋಗ್ಯನಾಗುವನು.

ವೈರಾಗ್ಯವೆಂದರೆ – ಎಲ್ಲ ಸುಖಸಾಧನಗಳನ್ನೂ ತೊರೆಯುವಂಥದ್ದೆಂದು ತಿಳಿಯಬಾರದು. ಎಲ್ಲಕ್ಕಿಂತ ಹೆಚ್ಚಿನ ಸುಖದ
ಬಯಕೆಯೆಂದು ತಿಳಿಯಬೇಕು. ಇನ್ನೂ ಕೆಲವರು ಭಗವದ್ಗೀತೆಯೆಂದರೆ – ಮುಪ್ಪಿನ ಕಾಲದಲ್ಲಿ ಓದತಕ್ಕ ಗ್ರಂಥವೆಂದು
ತಿಳಿಯುವರು. ಮೊದಲೇ ಹೇಳಿದಂತೆ ವಿರಕ್ತಿ ಎಂಬ ವಿಷಯದ ತಪ್ಪು ತಿಳಿವಳಿಕೆಯೇ ಆಗಿದೆ. ಅದಲ್ಲದೇ ಭಗವದ್ಗೀತೆಯು
ಪಾರಮಾರ್ಥಿಕ ಗ್ರಂಥವಾದ್ದರಿಂದ ಲೋಕ ವ್ಯವಹಾರದಲ್ಲಿ ಅದರ ಉಪಯೋಗವೇನೂ ಇಲ್ಲವೆಂಬ ಬೆಪ್ಪುತನ ಇನ್ನೊಂದು
ಕಾರಣವಾಗಿದೆ.

ಇದು ಪಾರಮಾರ್ಥಿಕ ಗ್ರಂಥವೇನೋ ನಿಜವೇ, ಆದರೆ ವ್ಯವಹಾರದಲ್ಲಿ ಅದರ ಉಪಯೋಗವಿಲ್ಲದೇ ಇಲ್ಲ. ಜಗತ್ತಿನಲ್ಲಿ ಸರ್ವೈ ಶ್ವರ್ಯ ಸಂಪನ್ನರೂ ಕೂಡ ತಮ್ಮ ಜೀವನದ ತಾಪತ್ರಯ ಗಳಿಂದ ಬೆಂದು ನಿಟ್ಟುಸಿರು ಬಿಡುವುದನ್ನು ನಾವು ನೋಡುತ್ತಲೇ ಇದ್ದೇವೆ. ಅಂಥವರಿಗೆ ಯಾವ ಸುಖಕ್ಕೆ ಏನು ಕೊರತೆ. ಆದರೂ ಅವರಲ್ಲಿ ಇರಬೇಕಾದಷ್ಟು ಸಮಾಧಾನವಿಲ್ಲ. ತಮ್ಮ ಐಶ್ವರ್ಯಾದಿ ಸಾಧನಗಳೆಲ್ಲ ಎಂದೆಂದಿಗೂ ತಮ್ಮವೇ. ತಾವೇ ಉತ್ಪತ್ತಿ ಮಾಡಿದ್ದು. ತಮಗೇ ಸೇರಿದ್ದು ಎಂಬುದಾಗಿ ಅಶಾಂತಿ ಯಿರುತ್ತದೆ. ಗೀತೆಯು ಆ ತಪ್ಪು ತಿಳಿವಳಿಕೆಗಳ ಬೇರನ್ನು ಕಿತ್ತೊಗೆಯುತ್ತದೆ.

ಜಗತ್ತೆಂಬುದು ತುದಿ – ಮೊದಲು ಕಾಣದ ಸಮುದ್ರದಂತಿದೆ. ಆ ಸಮುದ್ರದಲ್ಲಿ ಈಜುವ ಮರ್ಮವನ್ನು ನಾವು ತಿಳಿಯದೇ ಹೋದರೆ ಪದೇ ಪದೆ ಮುಳುಗಿ ಮೂಗು – ಬಾಯಿಗಳಲ್ಲೆಲ್ಲ ಉಪ್ಪುು ನೀರು ತುಂಬುತ್ತದೆ. ಮೀನು ಮೊಸಳೆಗಳ ಭಯ ಕಾಡುತ್ತದೆ. ಇಂತಹ ಜಗತ್ತೆಂಬ ಸಮುದ್ರದಲ್ಲಿ ಸಮರ್ಥವಾಗಿ ಈಜಲಿಕ್ಕೆ ಭಗವದ್ಗೀತೆಯೇ ಸದ್ಗುರುವಾಗಿದೆ. ಈಗಲೋ ಆಗಲೋ ಸಾಯಲು
ಸಿದ್ಧರಾಗಿರುವವರು ಈಜು ಕಲಿತರೂ, ನೀರಿನ ಮೇಲೆ ತೇಲುವ ಆನಂದವನ್ನು ಹೆಚ್ಚು ಕಾಲ ಅನುಭವಿಸಲಾರರು. ಹುಡುಗರು
ಈ ವಿದ್ಯೆಯನ್ನು ಕಲಿತರೆ ಹಾಯಾಗಿ ಸಾಕಷ್ಟು ಸಮಯ ಈಜಬಹುದು. ಮುದುಕರಿಗಿಂತಲೂ, ಹುಡುಗರಿಗೆ ಈ ಈಜು ಕಲಿಯುವ ಅಗತ್ಯವಿದೆ. ಹಾಗಾಗಿ ಬಾಲಕ – ಬಾಲಕಿಯರೇ ಈ ಭಗವದ್ಗೀತೆಯ ಅಧ್ಯಯನಕ್ಕೆ ಸರಿಯಾದ ಅಧಿಕಾರಿಗಳು.

ಭಗವದ್ಗೀತೆ ಯಾಕೆ ಓದಬೇಕು?
ಎಷ್ಟೇ ಓದಿದರೂ ಈ ಭಗವದ್ಗೀತೆ ಅರ್ಥ ವಾಗುತ್ತಿಲ್ಲ.! ಆದರೂ ಈ ಭಗವದ್ಗೀತೆಯನ್ನು ಯಾಕೆ ಓದಬೇಕು? ಎಂದು ತಾತನನ್ನು ಪ್ರಶ್ನಿಸಿದ ಮೊಮ್ಮಗ. ಸಮಯ ಬಂದಾಗ ಕ್ಲಿಯರ್ ಆಗಿ ಹೇಳುತ್ತೇನೆ ಬಿಡೋ ಎಂದ! ಆ ದಿನ ಬಂದೇ ಬಂತು. ಒಂದು ದಿನ ಮೊಮ್ಮಗನನ್ನು ಕರೆದುಕೊಂಡು ಹೊರಗೆ ಹೋದ.

ತಾತ ಅಲ್ಲಿ ಒಂದು ಇದ್ದಿಲಿನ ಬಟ್ಟಿ ಇತ್ತು. ಕಟ್ಟಿಗೆ ಸುಟ್ಟು ಇದ್ದಿಲಾಗಿ ಬದಲಾದ ಮೇಲೆ ಒಂದು ತಟ್ಟೆಯಲ್ಲಿ ಇದ್ದಿಲನ್ನು ಮೊದಲೇ ಕ್ಲೀನ್ ಮಾಡಿದ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿದ್ದರು ಕೂಲಿಗಳು..! ಲಂಚ್ ಟೈಮ್ ಆದ ಕಾರಣ ಅವರೆಲ್ಲಾ ಹತ್ತಿರದಲ್ಲಿದ್ದ ಮರದ ಬಳಿ ಕುಳಿತು ಊಟ ಮಾಡುತ್ತಿದ್ದರು. ಆಗ ಅಲ್ಲೇ ಇದ್ದ ಇದ್ದಿಲಿನ ಮಸಿ ಅಂಟಿಕೊಂಡಿದ್ದ ತಟ್ಟೆಯನ್ನು ಮೊಮ್ಮಗನಿಗೆ ಕೊಟ್ಟು ಅಗೋ ಅಲ್ಲಿ ಕಾಣಿಸುತ್ತಿರುವ ನದಿಯಿಂದ ನೀರು ತೆಗೆದುಕೊಂಡು ಬಾ.. ಎಂದು ಹೇಳಿದ.!

ಅದೇಗೆ ಸಾಧ್ಯ ತಾತ ರಂಧ್ರಗಳುಳ್ಳ ಈ ತಟ್ಟೆಯನ್ನು ನೀರನ್ನು ಹೇಗೆ ತರಲಿ? ಎಂದ ಮೊಮ್ಮಗ. ಪರ್ವಾಗಿಲ್ಲ ವೇಗವಾಗಿ ಬಾ ಎಂದು ಹೇಳಿದ ತಾತ. ಮೊದಲ ಸಲ 10 ನಿಮಿಷಗಳಲ್ಲಿ ಬಂದ.! ಪ್ರತಿಫಲ: ತಾತನ ಬಳಿ ಬರುವ ವೇಳೆಗೆ ತಟ್ಟೆಯಲ್ಲಿನ ನೀರು ಖಾಲಿ. (ಪರ್ವಾಗಿಲ್ಲ.. ಈ ಸಲ ಇನ್ನಷ್ಟು ವೆಗವಾಗಿ ಬಾ.. ಎಂದ ತಾತ.!) ಎರಡನೇ ಸಲ 8 ನಿಮಿಷಗಳಲ್ಲಿ ಬಂದಪ್ರತಿಫಲ:
ತಾತನ ಬಳಿ ಬರುವ ವೇಳೆಗೆ ತಟ್ಟೆೆಯಲ್ಲಿ ನೀರು ಖಾಲಿ (ಪರ್ವಾಗಿಲ್ಲ.. ಈ ಸಲ ಇನ್ನಷ್ಟು ವೇಗವಾಗಿ ಬಾ.. ಎಂದ ತಾತ!) ಮೂರನೇ ಸಲ 5 ನಿಮಿಷಗಳಲ್ಲೇ ಬಂದ. ಪ್ರತಿಫಲ: ನೀರು ಖಾಲಿ ಈ ರೀತಿ 5 ಸಲ ಮಾಡಿದ ಬೇಸರದಿಂದ ಇನ್ನು ನಾನು
ತರಲ್ಲ ತಾತ.. ಎಷ್ಟೇ ತಂದರೂ ಎಷ್ಟೇ ಪ್ರಯತ್ನಿಸಿದರೂ ವೇಸ್ಟ್.

ಇಲ್ಲಿಗೆ ಬರುವವರೆಗೂ ಆ ನೀರು ಉಳಿಯುತ್ತಿಲ್ಲ ಎಂದ ಮೊಮ್ಮಗ ! ಆಗ ತಾತ ಆ ತಟ್ಟೆೆಯನ್ನು ನೋಡು? ಎಂದ. ನೋಡಿದ. ಏನು ಅರ್ಥವಾಯಿತು ಎಂದ ತಾತ. ಏನೂ ಅರ್ಥ ವಾಗಲಿಲ್ಲ ಎಂಬಂತೆ ತಲೆ ಆಡಿಸಿದ ಮೊಮ್ಮಗ..!ಆಗ ತಾತ ಮೊದಲು ಈ ತಟ್ಟೆೆ ಇದ್ದಿಲಿನ ಮಸಿಯಿಂದ ಕಪ್ಪಗಿತ್ತು, ನೀನು ಈ ತಟ್ಟೆೆಯಲ್ಲಿ ನೀರು ತೆಗೆದುಕೊಂಡು ಬಂದ ಮೇಲೆ. ನಿಧಾನಕ್ಕೆ ಮಸಿಯೆಲ್ಲಾ ಹೋಗಿ. ಈಗ ನೋಡು ಹೊಸ ತಟ್ಟೆಯಂತೆ ಎಷ್ಟು ಸ್ವಚ್ಛವಾಗಿದೆ. ಅದೇ ರೀತಿ ಭಗವದ್ಗೀತೆ ಓದಿದರೆ ನಮಗೂ ಹಾಗೆಯೇ ಆಗುತ್ತದೆ. ಅರ್ಥ ಆಗಲಿ ಆಗದಿರಲಿ, ನೆನಪಿರಲಿ, ಇಲ್ಲದಿರಲಿ ಭಗದ್ಗೀತೆ ಓದಿದರೆ ಕ್ರಮವಾಗಿ ನಮ್ಮ ಆಲೋಚನೆಗಳಲ್ಲಿ, ನಮ್ಮ ಯೋಚನೆಯಲ್ಲಿ ನಮಗೆ ಗೊತ್ತಿಲ್ಲದಂತೆ ಒಂದು ಒಳ್ಳೆಯ ಬದಲಾವಣೆ ಬರುತ್ತದೆ.

ಇದು ಕೂಡಲೆ ಗೊತ್ತಾಗಲ್ಲ ಸಂದರ್ಭ ಬಂದಾಗ ಹೊರಬೀಳುತ್ತದೆ. ನಮಗೆ ಒಳಿತಾಗುತ್ತದೆ. ಬಂಧುಗಳೇ ದಯವಿಟ್ಟು ಪವಿತ್ರ ಗ್ರಂಥವನ್ನು ಓದಿ. ತಮ್ಮ ಮಕ್ಕಳನ್ನೂ ಓದಿಸಿ. ಅಡಿಗಡಿಗೆ ಮಲಿನ ಗೊಳ್ಳುತ್ತಲೇ ಇರುವ ಇದ್ದಿಲಿನ ತಟ್ಟೆಯಂಥ ನಮ್ಮ ಮನಸ್ಸನ್ನು ಶುಚಿಗೊಳಿಸುವ ಅಮೃತ ಗಂಗೆಯದು.

ಬದುಕಿನ ಮಾರ್ಗ ಭಗವದ್ಗೀತೆ: ಭಗವದ್ಗೀತೆಯ ಅಂತರಾಳದ ಅರ್ಥವನ್ನು ಎಳೆ ಎಳೆಯಾಗಿ ತಿಳಿದುಕೊಳ್ಳುವುದು ಅಗತ್ಯ. ಗೀತೆಯಲ್ಲಿನ ಸಂದೇಶ ಸಮಾಜದ ಹಿತಕ್ಕಾಗಿ ಅನ್ವಯಿಸುತ್ತವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಭಗವದ್ಗೀತೆ ಮಾನವ ಕುಲಕ್ಕೆ ಎಷ್ಟು ಪ್ರಯೋಜನ ಎಂಬುದರ ಕುರಿತು ಅರ್ಥ ಮಾಡಿಕೊಳ್ಳಬೇಕು.

ಪ್ರಸ್ತುತ ಭಗವದ್ಗೀತೆ ಸಂದೇಶ ಎಷ್ಟು ಅಗತ್ಯ?

ಜೀವನ ನೀತಿ ಎಲ್ಲರಿಗೂ ಬೇಕು. ಭಗವದ್ಗೀತೆಯಲ್ಲಿ ಕೃಷ್ಣಮಾನವರು ಎಂದು ಹೇಳಿದ್ದಾನೆ ವಿನಾ ಬ್ರಾಹ್ಮಣರು ಎಂದು
ಎಲ್ಲೂ ಹೇಳಿಲ್ಲ. ಮನುಷ್ಯ ಮಾತ್ರವಲ್ಲ, ಸಕಲ ಜೀವರಾಶಿ ಗಳನ್ನು ಯಾರೂ ಪ್ರೀತಿಯಿಂದ ನೋಡುತ್ತಾರೋ ಅವರು
ನನಗೆ ಅತ್ಯಂತ ಪ್ರಿಯಕರನಾದವರು ಎಂದು ಕೃಷ್ಣ ಪರಮಾತ್ಮ ಉಪದೇಶಿಸಿದ್ದಾನೆ. ಜೀವನ ನೀತಿ ಬಯಸುವ ಎಲ್ಲರಿಗೂ
ಭಗವದ್ಗೀತೆ ಅನ್ವಯಿಸುತ್ತದೆ. ಇದು ಯಾವುದೇ ಒಂದು ಜಾತಿ, ಕೋಮಿಗೆ ಸೀಮಿತವಲ್ಲ.

ಯುವಕರಿಗೆ ಗೀತೆ ಸಂದೇಶ ಏನು?
ಯಾವುದೇ ಮೌಲ್ಯಗಳು ಶ್ರೇಯಸ್ಸಿನ ಮಾರ್ಗಗಳು ಹೇಳುವಾಗ ಚಾಪಲ್ಯಕ್ಕೆ ಬಲಿಯಾಗ ಬಾರದು ಎಂದು ತಿಳಿಸಿವೆ. ದೈವಿ ಸಂಪನ್ನವಾದ ಮುಖಗಳನ್ನು ಹೇಳುವಾಗ ಅಭಯ, ಮನಸ್ಸು ಶುದ್ಧಿ, ಸತ್ ಸಂಶುದ್ಧಿ, ಭೌತಿಕ ವಿಷಯಗಳಲ್ಲಿನ ಆಸಕ್ತಿ ತೊರೆದು ಜ್ಞಾನ ಸಾಧನೆಯಲ್ಲಿ ನಿಷ್ಠೆ ಇಟ್ಟಾಗ ಹಾದಿ ತಪ್ಪುತ್ತಿರುವ ಯುವಕರು ಸರಿದಾರಿಗೆ ಬರುತ್ತಾರೆ ಎಂದು ಗೀತೆ ವಿಶ್ಲೇಷಿಸಿದೆ.

ಸದ್ಗ್ರಂಥಗಳ ಅಧ್ಯಯನ, ತಪಸ್ಸು, ವ್ರತ, ಉಪವಾಸ, ಆಹಾರದಲ್ಲಿ ಸಂಯಮ ಮಾಡಿದರೆ ಮನಸ್ಸು ವಿಕಾರವಾಗುವುದಿಲ್ಲ. ಮನಸ್ಸು ವಿಕಾರವಾದಾಗ ದುಶ್ಚಟಗಳಿಗೆ ಬಲಿಯಾಗುತ್ತಾನೆ. ಆದ್ಯೆ, ಪ್ರಾಮಾಣಿಕತೆ, ಮನಸ್ಸು ಈ ಮೂರೂ ಕೃತಿಯಲ್ಲಿ ತರಬೇಕು. ಸತ್ಯ, ಅಕ್ರೋಶ, ತ್ಯಾಗ, ಶಾಂತಿ, ಅಪ ಐಶ್ವರ್ಯ, ದಯೆ, ರಾಗ, ಸ್ಥೆೆರ್ಯ, ಅದ್ರೋಹ ಇವುಗಳನ್ನು ಅನುಸರಿಸಬೇಕು. ದರ್ಪ,
ದುರಾಭಿಮಾನ, ಪಾರುಷ, ನಿಷ್ಠುರವಾದ ಕ್ರಿಯೆ, ಮತ್ಸರ, ಫಲ ಕಾಮನೆ ಇವುಗಳನ್ನು ಜೀವನದಲ್ಲಿ ತ್ಯಾಗ ಮಾಡಿದಾಗ
ಯುವ ಸಮೂಹ ಸನ್ಮಾರ್ಗದಲ್ಲಿ ಸಾಗುತ್ತದೆ ಎಂಬ ಸಂದೇಶ ಗೀತೆ ನೀಡಿದೆ.

ಒಬ್ಬ ಮನುಷ್ಯ ಯಾವ ರೀತಿ ಜೀವನ ಸಾಗಿಸಬೇಕು ಎಂಬುದನ್ನು ಗೀತೆ ನಮಗೆ ತಿಳಿಸಿಕೊಡುತ್ತದೆ. ಗೀತೆಯು ಕೇವಲ ಮೇಲ್ನೋಟದ ಅರ್ಥವನ್ನು ತಿಳಿದರೆ ಸಾಲದು. ಗೀತೆಯ ಅಂತಾರಾಳದ ಭಾವೆ ಅರ್ಥ ಮಾಡಿಕೊಳ್ಳಬೇಕು. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ॥

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ
ಯುಗೇ ಯುಗೇ॥

ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ.

ಮಾನವ ಕುಲಕ್ಕೆ ಸನ್ಮಾರ್ಗ: ನನ್ನದಲ್ಲದ ವಸ್ತುವಿಗಾಗಿ ಜಗಳವಾಡಿ ಪ್ರಾಣ ಕಳೆದುಕೊಳ್ಳುತ್ತಿರುವ ಮನುಷ್ಯರಿಗೆ ವಿಶ್ವ ರೂಪ ದರ್ಶನ ಒಂದು ಪಾಠವಿದ್ದಂತೆ. ಜಗತ್ತಿನಲ್ಲಿರುವ ಎಲ್ಲ ವಸ್ತುಗಳನ್ನು ಭಗವಂತ ತನ್ನ ದೇಹದಲ್ಲಿ ಹುದಗಿಸಿಟ್ಟಿದ್ದಾನೆ.  ಹೀಗಿರುವಾಗ ನಾನು, ನನ್ನದು ಎಂಬ ಅಹಂಕಾರವೇಕೆ?. ಕೇವಲ ಅರ್ಜುನನಿಗೆ ಮಾರ್ಗದರ್ಶನ ತೋರಿದ್ದಲ್ಲ. ಇಡಿ ಮಾನವ
ಕುಲಕ್ಕೆ ಗೀತೆ ಸನ್ಮಾರ್ಗ ತೋರಿದೆ. ಯಾವುದೇ ಕರ್ಮ ಮಾಡಿದರೂ ಕೊನೆಯಲ್ಲಿ ಶ್ರೀಕೃಷ್ಣಾರ್ಪಣ ಮಸ್ತು ಅಂತ
ಹೇಳುತ್ತೇವೆ. ಕೃಷ್ಣನ ದೇಹದಿಂದ ಉತ್ಪತ್ತಿ ಆದ ವಸ್ತು.

ಆತನಿಗೆ ಸಮರ್ಪಿಸುವುದೇ ಇದರ ಅರ್ಥ. ನಿನ್ನಿಂದಲೇ ಪಡೆದಿದ್ದು ನಿನಗೆ ಅರ್ಪಿಸುವೆ ಎನ್ನುವುದೇ ಕೃಷ್ಣಾರ್ಪಣ ಮಸ್ತು. ಇಡಿ ಪ್ರಪಂಚದಲ್ಲಿರುವ ಎಲ್ಲ ವಸ್ತುಗಳು ಕೃಷ್ಣನಲ್ಲಿದ್ದವು. ನಿನ್ನೆದೇನಿಲ್ಲ ಮಾನವ ಎಲ್ಲವೂ ನನ್ನದೇ ಎಂಬ ಸಂದೇಶ ಸಾರಲು ಕೃಷ್ಣ ಅರ್ಜುನನಿಗೆ ವಿಶ್ವರೂಪ ದರ್ಶನ ತೋರಿಸಿದ್ದಾನೆ.