ಬೆಂಗಳೂರು
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ನಾಗಠಾಣದಲ್ಲಿ ಕರ್ನಾಟಕ ಮೂಲದ ಸ್ವಾಮೀಜಿ ಹತ್ಯೆಯ ಸತ್ಯಾಸತ್ಯತೆ ಹೊರಗೆಡವಬೇಕು. ರಾಜ್ಯದ ಗೃಹಸಚಿವರು ಮಹಾರಾಷ್ಟ್ರದ ಗೃಹಸಚಿವರೊಂದಿಗೆ ಮಾತನಾಡಿ ಅಲ್ಲಿರುವ ಉಳಿದ ಲಿಂಗಾಯತ ಶ್ರೀಗಳಿಗೆ ರಕ್ಷಣೆಗೆ ಮುಂದಾಗಬೇಕೆಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಹಾರಾಷ್ಟ್ರದಲ್ಲಿ ಹತ್ಯೆಯಾದ ಸ್ವಾಮೀಜಿ ಕರ್ನಾಟಕದ ಬಳ್ಳಾರಿಯ ಹಗರಿಬೊಮ್ಮನಹಳ್ಳಿಯ ಮೂಲದವರಾಗಿದ್ದು, ಮಹಾರಾಷ್ಟ್ರ ದ ನಾಗಠಾಣದಲ್ಲಿ ಮಠ ಕಟ್ಟಿಕೊಂಡಿದ್ದರು.
ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ನಾಗಪುರದಲ್ಲಿ ಪಶುಪತಿ ಶಿವಾಚಾರ್ಯರನ್ನು ಹತ್ಯೆ ಮಾಡಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಆದರೂ ಈ ಹತ್ಯೆಯ ಹಿಂದಿನ ಸತ್ಯ ಹೊರಬರಬೇಕು. ಹತ್ಯೆಗೆ ಕಾರಣವನ್ನು ಬಹಿರಂಗ ಪಡಿಸಬೇಕು.ನಮ್ಮಗೃಹ ಸಚಿವರು ಅಲ್ಲಿನ ಗೃಹ ಸಚಿವರ ಜೊತೆ ಚರ್ಚಿಸಬೇಕು ಎಂದು ಒತ್ತಾಯಿಸಿದರು.
ಬಿಎಂಟಿಸಿ ಬಸ್ ಪಾಸ್ ಏರಿಕೆಗೆ ಕಿಡಿಕಾರಿದ ಖಂಡ್ರೆ, ಪ್ರಯಾಣಿಕರಿಗೆ ಬಸ್ ದರ ಹೊರೆಯಾಗಿದೆ. 5ರೂ ಕೊಟ್ಟು ಹೋಗುವ ಕಡೆ 50, 70 ರೂ ನೀಡಬೇಕಾಗಿದೆ. ಈಗಲೇ ಕೊವಿಡ್ ನಿಂದ ಜನಸಾಮಾನ್ಯರು ಕಷ್ಟಕ್ಕೊಳಗಾಗಿದ್ದಾರೆ. ಇಂತಹ ಕಷ್ಟದಲ್ಲಿ ಪಾಸ್‌ಗೆ ಇಷ್ಟೊಂದು ಹಣ ಕೊಡುವುದಂದರೆ ಇನ್ನಷ್ಟು ಕಷ್ಟವೇ ಆಗಿದೆ. ಇದು ಜನಸಾಮಾನ್ಯರಿಗೆ ಹೊರೆಯಾಗಿದೆ. ಕೂಡಲೇ ಸರ್ಕಾರ ಈ ಹೊರೆಯನ್ನು ಇಳಿಸಬೇಕು ಎಂದರು.
ಕೇಂದ್ರದ ವಿದ್ಯುತ್ ನೂತನ ತಿದ್ದುಪಡಿ ಕಾಯ್ದೆಗೂ ವಿರೋಧ ವ್ಯಕ್ತಪಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷರು, ಕೇಂದ್ರ ಸರ್ಕಾರ ಪದೇ ಪದೇ ಇಂತಹ ಕೆಲಸ ಮಾಡುತ್ತಿದೆ. ಕೃಷಿ ರಾಜ್ಯದ ವ್ಯಾಪ್ತಿಗೆ ಬರಲಿದೆ. ಕೃಷಿಕರು ರಾಷ್ಟ್ರದ ಬೆನ್ನೆಲುಬು ಕೂಡ ಹೌದು. ಇವತ್ತು ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸಂಕಷ್ಟದಲ್ಲಿ ನಮ್ಮ ರೈತರು ಜೀವನ ನಡೆಸುತ್ತಿದ್ದಾರೆ. ನಮ್ಮಲ್ಲಿ ರೈತರ ಪಂಪ್ ಸೆಂಟ್ ಗೆ ಉಚಿತ ವಿದ್ಯುತ್ ನೀಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರವೇ ಈ ಯೋಜನೆ ತಂದಿತ್ತು. ಆದರೆ ಕೇಂದ್ರ ರೈತರಿಗೆ ಸಂಕಷ್ಟ ನೀಡಲು ಹೊರಟಿದೆ. ಯೂನಿಟ್ ಒಂದಕ್ಕೆ ದರ ವಿಧಿಸಲು ಹೊರಟಿದ್ದಾರೆ. ಅದಾನಿಯಂತವರಿಗೆ ಅನುಕೂಲ ಮಾಡಿಕೊಡುತ್ತಿದೆ. ಇದು ಕಾಯ್ದೆಯನ್ನು ಜಾರಿಗೆ ತರುವುದು ಸರಿಯಲ್ಲ.ರಾಜ್ಯದಲ್ಲಿ ಇದನ್ನು ಜಾರಿಗೆ ತರಲು ಪ್ರಯತ್ನಿಸಿದರೆ ಪಕ್ಷದಿಂದ ಅನಿವಾರ್ಯವಾಗಿ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.