ಗಾಂಧಿನಗರ: ನೀರಿನಲ್ಲಿ ಕಂಡುಬರುವ ದೈತ್ಯ ಪ್ರಾಣಿ ಮೊಸಳೆ (Crocodile) ಧುತ್ತನೆ ಕಣ್ಣೆದುರು ಅದೂ ಕಾಲೇಜಿನ ಅಂಗಳದಲ್ಲಿ ಪ್ರತ್ಯಕ್ಷವಾದರೆ ಒಂದುಕ್ಷಣ ಎಂತಹ ಧೈರ್ಯವಂತನಾದರೂ ನಡುಗಲೇಬೇಕು. ಹೌದು, ಇಂತಹ ಅಪರೂಪದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಗುಜರಾತ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ಬೃಹತ್ ಗಾತ್ರದ ಮೊಸಳೆಯೊಂದು ಕಾಲೇಜು ಅಂಗಳದಲ್ಲಿ ಪ್ರತ್ಯಕ್ಷವಾಗಿದೆ. ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಈ ಮೊಸಳೆಯನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಡಲಾಗಿದೆ (Viral Video).
ವಡೋದರದ ಮಹಾರಾಜ ಸಯಾಜಿರಾವ್ ಯೂನಿವರ್ಸಿಟಿ ಆಫ್ ಬರೋಡದ ಕ್ಯಾಂಪಸ್‌ನಲ್ಲಿ ಈ ಮೊಸಳೆ ಕಂಡುಬಂದಿದೆ. ಕಾಲೇಜು ಪಕ್ಕದಲ್ಲೇ ವಿಶ್ವಾಮಿತ್ರಿ ನದಿ ಹರಿಯುತ್ತಿದ್ದು, ಪ್ರವಾಹಕ್ಕೆ ಇಲ್ಲಿಂದ ಕೊಚ್ಚಿಕೊಂಡು ಮೊಸಳೆ ಕಾಲೇಜು ಅಂಗಳಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ʼʼಈ ದೈತ್ಯ ಗಾತ್ರದ ಮೊಸಳೆ ಸುಮಾರು 11 ಅಡಿ ಉದ್ದವಿತ್ತು. ಝೂವಾಲಜಿ ವಿಭಾಗದ ಸಮೀಪ ಕಂಡು ಬಂದ ಇದನ್ನು ಬಳಿಕ ರಕ್ಷಿಸಿ ಸುರಕ್ಷಿತ ಜಾಗಕ್ಕೆ ಸಾಗಿಸಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
https://x.com/ANI/status/1829044115041873930
ʼʼಕಳೆದ 5 ದಿನಗಳಲ್ಲಿ ಸುಮಾರು 10 ಮೊಸಳೆಗಳನ್ನು ರಕ್ಷಿಸಿದ್ದೇವೆ. ಈ ಪೈಕಿ 8 ಮೊಸಳೆಗಳನ್ನು ನಮ್ಮ ಬಳಿಯಲ್ಲಿ ಇದ್ದು ಉಳಿದ 2 ಮೊಸಳೆಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ನದಿ ನೀರಿನ ಮಟ್ಟ ಇಳಿದ ಬಳಿಕ ಈ ಮೊಸಳೆಗಳನ್ನು ಸ್ಥಳಾಂತರಿಸುತ್ತೇವೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಡೋದರದಲ್ಲಿ ಸುಮಾರು 17 ಕಿ.ಮೀ.ನಷ್ಟು ಹರಿಯುವ ವಿಶ್ವಾಮಿತ್ರಿ ನದಿ ಮೊಸಳೆಗಳ ಆವಾಸಸ್ಥಾನವಾಗಿದೆ. ಇಲ್ಲಿ ಸುಮಾರು 300 ಮೊಸಳೆಗಳಿವೆ. ಕಳೆದ ತಿಂಗಳು ವಡೋದರ ಒಂದರಲ್ಲೇ ಸುಮಾರು 21 ಮೊಸಳೆಗಳನ್ನು ರಕ್ಷಿಸಲಾಗಿದೆ. ಜೂನ್‌ನಲ್ಲಿಯೂ 4 ಮೊಸಳೆಗಳನ್ನು ರಕ್ಷಿಸಿ ಮರಳಿ ನದಿಗೆ ಬಿಡಲಾಗಿತ್ತು.
ಧಾರಾಕಾರ ಮಳೆಗೆ ನಲುಗಿದ ಗುಜರಾತ್
ಗುಜರಾತ್‌ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ವಡೋದರದಲ್ಲಿ ಪ್ರವಾಹದ ಸ್ಥಿತಿ ತಲೆದೋರಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಅಜ್ವ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರ ಬಿಟ್ಟಿದ್ದರಿಂದ ವಿಶ್ವಾಮಿತ್ರಿ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ.
28 ಮಂದಿ ಬಲಿ
ಗುಜರಾತ್‌ನಲ್ಲಿ ಇದುವರೆಗೆ ಮಳೆ ಸಂಬಂಧಿತ ದುರಂತದಲ್ಲಿ 28 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ವಿವಿಧ ಭಾಗಗಳನ್ನು ನೆರೆ ನೀರು ಆವರಿಸಿದ್ದು, 17,800 ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ಗುಜರಾತ್‌ನ ಆರೋಗ್ಯ ಸಚಿವ ರಿಷಿಕೇಶ್ ಪಟೇಲ್ ತಿಳಿಸಿದ್ದಾರೆ. ವಡೋದರಾದಲ್ಲಿ ಆಗಸ್ಟ್ 28ರವರೆಗೆ 5,000ಕ್ಕೂ ಹೆಚ್ಚು ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಮತ್ತು 12,000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕರಾವಳಿ ಪ್ರದೇಶದಲ್ಲಿ ಆಗಸ್ಟ್ 30ರ ತನಕ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.