Thursday, 14th November 2024

Viral Video: ಮಕ್ಕಳ ಕೈಯಲ್ಲರಳಿದ ಹೂವಿನ ರಂಗೋಲಿಯನ್ನು ಕಾಲಲ್ಲಿ ಹೊಸಕಿ ಹಾಕಿದ ಮಹಿಳೆ; ವಿಡಿಯೊ ವೈರಲ್

Viral Video

ಬೆಂಗಳೂರು: ಬೆಂಗಳೂರಿನಲ್ಲಿ ಮಕ್ಕಳು ಮಾಡಿದ ಪೂಕಳಂ ಕಾಲಲ್ಲಿ ಒದ್ದು ಹಾಳು ಮಾಡಿದ ಘಟನೆ ವರದಿಯಾಗಿದೆ. ಅದರ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ಸಿಕ್ಕಾಪಟ್ಟೆ ವೈರಲ್ (Viral Video)ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪೂಕ್ಕಳಂ ಎಂದರೆ ಹೂವುಗಳಿಂದ ಮಾಡಿದ ರಂಗೋಲಿಯಾಗಿದೆ. ಇದನ್ನು ಹೆಚ್ಚಾಗಿ ಓಣಂ ಹಬ್ಬದ ಸಮಯದಲ್ಲಿ ಮಾಡಲಾಗುತ್ತದೆ. ಕೇರಳದ ಮೂಲದ ಕೆಲವು ಮಕ್ಕಳು ತಮ್ಮ ಹಬ್ಬದ ಆಚರಣೆಯ ಸಲುವಾಗಿ ರೆಡಿ ಮಾಡಿದ ಹೂವಿನ ರಂಗೋಲಿಯನ್ನು ಮಹಿಳೆಯೊಬ್ಬಳು ಕಾಲಿನಿಂದ ತುಳಿದು ಹಾಳು ಮಾಡಿದ್ದಾಳೆ.

ಬೆಂಗಳೂರಿನ ಈ ವಿಡಿಯೊ ಶೇರ್ ಆದ ನಂತರ ವೈರಲ್ ಆಗಿದ್ದು, ಜನರು ವಿಡಿಯೊ ನೋಡಿ ಆಕ್ರೋಶಗೊಂಡಿದ್ದಾರೆ. ವಿಡಿಯೊದಲ್ಲಿ ಮಹಿಳೆ ಮೊದಲು ಪೂಕಳಂ ಬಗ್ಗೆ ವಾದಿಸುತ್ತಿರುವುದು ಕಂಡುಬಂದಿದೆ, ನಂತರ ಜನರು ಅವಳನ್ನು ತಡೆಯಲು ಪ್ರಯತ್ನಿಸಿದ್ದರಿಂದ ಕೋಪಗೊಂಡ ಅವಳು ಇಡೀ ರಂಗೋಲಿಯನ್ನು ಕಾಲಿನಿಂದ ತುಳಿದು ಹಾಳುಮಾಡಿದ್ದಾಳೆ. ಥಣಿಸಂದ್ರದ ಮೊನಾರ್ಕ್ ಸೆರಿನಿಟಿ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಆದರೆ ಈ ಘಟನೆ ನಡೆದ ದಿನಾಂಕ ತಿಳಿದುಬಂದಿಲ್ಲ.

ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ‘ನಾಚ್ 1ಕೇತಾ’ ಹ್ಯಾಂಡಲ್ ಹಂಚಿಕೊಳ್ಳಲಾಗಿದೆ. “ಬೆಂಗಳೂರಿನ ಥಣಿಸಂದ್ರದ ಮೊನಾರ್ಕ್ ಸೆರಿನಿಟಿ ನಿವಾಸಿ ಸಿಮಿ ನಾಯರ್, ಮಕ್ಕಳು ಪ್ರೀತಿಯಿಂದ ಮಾಡಿದ ಪೂಕಳಂ ಅನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿದ್ದಾಳೆ” ಎಂದು ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್ ಅನ್ನು ನಿನ್ನೆ ಹಂಚಿಕೊಳ್ಳಲಾಗಿದ್ದು, 700 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ.

ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆ ಬಳಸಿ ಚರ್ಮ, ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

ಕಾಮೆಂಟ್ ವಿಭಾಗದಲ್ಲಿ, ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನ ಜನರು ಮಹಿಳೆಯ ನಡವಳಿಕೆಯನ್ನು ಖಂಡಿಸಿದ್ದಾರೆ ಮತ್ತು ಅವಳನ್ನು ಪೊಲೀಸರಿಗೆ ಒಪ್ಪಿಸಲು ತಿಳಿಸಿದ್ದಾರೆ. “ಇದು ಅಸಂವಿಧಾನಿಕ, ಪ್ರತಿಯೊಬ್ಬರಿಗೂ ಧರ್ಮದ ಹಕ್ಕಿದೆ. ಆಕೆಯ ವಿರುದ್ಧ ಪ್ರಕರಣ ದಾಖಲಿಸಲಿಲ್ಲವೇ?” ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. “ಅತೃಪ್ತ ವ್ಯಕ್ತಿಗಳು ಇತರರ ಸಂತೋಷಗಳನ್ನು ಸಹ ನಾಶಪಡಿಸುತ್ತಾರೆ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. “ಮಹಿಳೆಗೆ ಒಳ್ಳೆಯ ಓಣಂ ಔತಣವನ್ನು ಏಕೆ ನೀಡಲಿಲ್ಲ?” ಎಂದು ಇನ್ನೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.