ಅಮರಾವತಿ: ಪರೀಕ್ಷೆ (10 ಮತ್ತು 12ನೇ ತರಗತಿ) ಆಯೋಜನೆ ವಿಚಾರವಾಗಿ ಸುಪ್ರೀಂ ಕೋರ್ಟ್’ನಿಂದ ಎಚ್ಚರಿಕೆ ಪಡೆದ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರ ಪರೀಕ್ಷೆಗಳನ್ನು ರದ್ದು ಮಾಡಿದೆ.
ಕರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ವಿಚಾರವಾಗಿ ಗುರುವಾರ ಸುಪ್ರೀಂ ಕೋರ್ಟ್ ಆಂಧ್ರ ಪ್ರದೇಶ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಸಾಂಕ್ರಾಮಿಕ ಪರಿಸ್ಥಿತಿ ಬಹಳ ಅನಿಶ್ಚಿತವಾಗಿದೆ ಮತ್ತು ಜುಲೈ ಕೊನೆಯ ವಾರದಲ್ಲಿ ಏನಾಗಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಯಾವುದೇ ಮಾರಣಾಂತಿಕ ಘಟನೆಗಳು ಸಂಭವಿಸಿದಲ್ಲಿ ರಾಜ್ಯ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಮೃತರ ಕುಟುಂಬಗಳಿಗೆ ಕಡ್ಡಾಯವಾಗಿ 1 ಕೋಟಿ ರೂ ಪರಿಹಾರ ನೀಡಲೇಬೇಕು ಎಂದು ಎಚ್ಚರಿಕೆ ನೀಡಿತ್ತು.
ಇದರ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ರದ್ದು ಮಾಡಿದೆ. ಆಂಧ್ರ ಪ್ರದೇಶ ಶಿಕ್ಷಣ ಸಚಿವ ಎ ಸುರೇಶ್ ಅವರು, ಸುಪ್ರೀಂಕೋರ್ಟ್ ಆದೇಶ ಮತ್ತು ನಿರ್ಬಂಧಗಳಿಗೆ ಅನುಸಾರವಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ. ಹೀಗಾಗಿ ಪರೀಕ್ಷೆಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.