Saturday, 21st September 2024

Banana Peel Tips: ಬಾಳೆಹಣ್ಣಿನ ಸಿಪ್ಪೆ ಬಳಸಿ ಚರ್ಮ, ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

Banana Peel Tips

ಬೆಂಗಳೂರು : ನಮ್ಮಲ್ಲಿ ಹೆಚ್ಚಿನ ಜನರು ಬಾಳೆಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ಬಾಳೆಹಣ್ಣಿನ ಸಿಪ್ಪೆಯು ಕೂಡ ಪ್ರಯೋಜನಕಾರಿಯಾಗಿದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಹೌದು ಬಾಳೆಹಣ್ಣಿನ ಸಿಪ್ಪೆ(Banana Peel Tips)ಯನ್ನು ಬಳಸಿ ಕೂದಲು ಮತ್ತು ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಬಾಳೆ ಹಣ್ಣಿನಂತೆಯೇ, ಅದರ ಸಿಪ್ಪೆಯಲ್ಲಿ ಜೀವಸತ್ವಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳು ಸಮೃದ್ಧವಾಗಿವೆ. ಹಾಗಾಗಿ ಇವು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತವೆ. ಹಾಗಾದ್ರೆ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿಕೊಂಡು ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದನ್ನು ತಿಳಿಯಿರಿ.

ಹೊಳೆಯುವ ಚರ್ಮಕ್ಕಾಗಿ:
ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿ ಮೃದುವಾದ , ಕೋಮಲವಾದ ತ್ವಚೆಯನ್ನು ಪಡೆಯಬಹುದು. ಸಿಪ್ಪೆಯಲ್ಲಿ ಲ್ಯೂಟಿನ್ ಮತ್ತು ವಿಟಮಿನ್ ಸಿ ಮತ್ತು ಇ ನಂತಹ ಆ್ಯಂಟಿ ಆಕ್ಸಿಡೆಂಟ್‍ಗಳಿವೆ. ಇದು ವಾತಾವರಣದ ಮಾಲಿನ್ಯದಿಂದ ಚರ್ಮಕ್ಕಾಗುವ ಹಾನಿಯನ್ನು ಹಾಗೂ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಿಪ್ಪೆಯಲ್ಲಿರುವ ಪೋಷಕಾಂಶಗಳು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಮತ್ತು ಚರ್ಮವನ್ನು ಮೃದು ಮತ್ತು ಹೆಚ್ಚು ತಾಜಾತನಗೊಳಿಸುತ್ತದೆ.

Banana Peel Tips

• ಬಾಳೆಹಣ್ಣಿನ ಸಿಪ್ಪೆಯನ್ನು ಚರ್ಮಕ್ಕೆ ಬಳಸಲು ಸುಲಭವಾದ ಮಾರ್ಗವೆಂದರೆ ಸಿಪ್ಪೆಯ ಒಳಭಾಗವನ್ನು ನೇರವಾಗಿ ಚರ್ಮದ ಮೇಲೆ ಇಟ್ಟು ನಿಧಾನವಾಗಿ ಮಸಾಜ್ ಮಾಡುವುದು. ಇದು ತೇವಾಂಶವನ್ನು ಲಾಕ್ ಮಾಡುತ್ತದೆ ಮತ್ತು ಶುಷ್ಕ ಅಥವಾ ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಮುಖದ ಮೇಲೆ ಸಿಪ್ಪೆಯನ್ನು ಕೆಲವು ನಿಮಿಷಗಳ ಕಾಲ ಉಜ್ಜಿದ ನಂತರ, ಸುಮಾರು 10-15 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ನೀರಿನಿಂದ ತೊಳೆದು ಮಾಯಿಶ್ಚರೈಸರ್ ಅನ್ನು ಹಚ್ಚಿ.

• ಇನ್ನು ಹೆಚ್ಚು ಫಲಿತಾಂಶ ಪಡೆಯಲು ಸಿಪ್ಪೆಯನ್ನು ಮೊಸರು ಮತ್ತು ಜೇನುತುಪ್ಪದಂತಹ ಹೈಡ್ರೇಟಿಂಗ್ ಪದಾರ್ಥಗಳೊಂದಿಗೆ ಬೆರೆಸುವ ಮೂಲಕ ನೀವು ಬಾಳೆಹಣ್ಣಿನ ಸಿಪ್ಪೆಯ ಫೇಸ್ ಮಾಸ್ಕ್ ಅನ್ನು ತಯಾರಿಸಬಹುದು. ಇದು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ನಿಧಾನವಾಗಿ ಎಕ್ಸ್ಫೋಲಿಯೇಟ್ ಮಾಡುತ್ತದೆ, ಆದರೆ ಜೇನುತುಪ್ಪವು ಬ್ಯಾಕ್ಟೀರಿಯಾಗಳಿಂದಾಗುವ ಹಾನಿಯನ್ನು ತಡೆಯುತ್ತದೆ. ಅದು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಈ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.

ಹೊಳೆಯುವ ಕೂದಲಿಗಾಗಿ:
ಬಾಳೆಹಣ್ಣಿನ ಸಿಪ್ಪೆ ಚರ್ಮಕ್ಕೆ ಮಾತ್ರವಲ್ಲ ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದು ಕೂದಲಿಗೆ ಹೆಚ್ಚು ತೇವಾಂಶ ಮತ್ತು ಹೊಳಪನ್ನು ನೀಡುತ್ತದೆ. ಬಾಳೆಹಣ್ಣಿನ ಸಿಪ್ಪೆಗಳಲ್ಲಿನ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಸಿಯಮ್ ಇದ್ದು, ಇದು ಕೂದಲನ್ನು ಬಲಪಡಿಸುತ್ತದೆ ಮತ್ತು ಸೀಳು ಒಡೆಯುವುದನ್ನು ತಡೆಯುತ್ತದೆ.

• ಬಾಳೆಹಣ್ಣಿನ ಸಿಪ್ಪೆಯನ್ನು ಕೂದಲಿಗೆ ಬಳಸುವುದಾದರೆ, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಂತಹ ಎಣ್ಣೆಯೊಂದಿಗೆ ಬೆರೆಸಿ ಬಳಸಿ. ಈ ಬಾಳೆಹಣ್ಣಿನ ಸಿಪ್ಪೆಯ ಹೇರ್ ಮಾಸ್ಕ್ ಅನ್ನು ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಬೇಕು. ಇದು ಕೂದಲಿಗೆ ಆಳವಾದ ಕಂಡೀಷನಿಂಗ್ ಮಾಡುತ್ತದೆ. ಮಾಸ್ಕ್ ಹಚ್ಚಿ 20-30 ನಿಮಿಷಗಳ ಕಾಲ ಬಿಡಿ. ನಂತರ ಶಾಂಪೂ ಬಳಸಿ ತೊಳೆಯಿರಿ. ಈ ಪ್ರಕ್ರಿಯೆಯು ಒಣಗಿದ, ಹಾನಿಗೊಳಗಾದ ಕೂದಲಿಗೆ ತೇವಾಂಶವನ್ನು ನೀಡುತ್ತದೆ ಮತ್ತು ಇದು ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.

• ಇನ್ನೂ ಬಾಳೆಹಣ್ಣಿನ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ ಅದರಿಂದ ಕೂದಲನ್ನು ತೊಳೆಯಬಹುದು. ಶಾಂಪೂ ಮಾಡಿದ ನಂತರ, ಕೂದಲಿಗೆ ಹೊಳಪು ಮತ್ತು ನಯವಾಗಿಸಲು ಈ ಬಾಳೆಹಣ್ಣಿನ ಸಿಪ್ಪೆಯ ನೀರನ್ನು ಕೊನೆಯಲ್ಲಿ ಕೂದಲು ತೊಳೆಯಲು ಬಳಸಿ. ಈ ನೈಸರ್ಗಿಕ ವಿಧಾನವು ಮಂದ ಕೂದಲಿಗೆ ಹೊಳಪನ್ನು ನೀಡುತ್ತದೆ.

ಇದನ್ನೂ ಓದಿ:ಹೊಳೆಯುವ ತ್ವಚೆಗಾಗಿ ಆಲಂ ಅನ್ನು ಹೀಗೆ ಬಳಸಿ

ಈ ರೀತಿಯಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿಕೊಂಡು ನೈಸರ್ಗಿಕ ವಿಧಾನದಲ್ಲಿ ನಿಮ್ಮ ಕೂದಲು ಮತ್ತು ಚರ್ಮದ ಆರೋಗ್ಯ ಕಾಪಾಡಿಕೊಳ್ಳಿ. ಇದರಿಂದ ನಿಮ್ಮ ಕೂದಲು ಮತ್ತು ಚರ್ಮಕ್ಕೆ ಯಾವುದೇ ರಾಸಾಯನಿಕಗಳಿಂದ ಹಾನಿಯಾಗುವುದಿಲ್ಲ.