Sunday, 15th December 2024

ಇನ್ನೊಮ್ಮೆ ಮುಷ್ಕರದ ಹಾದಿಯಲ್ಲಿ ಬ್ಯಾಂಕ್ ಸಿಬ್ಬಂದಿ

ಅಭಿವ್ಯಕ್ತಿ

ರಮಾನಂದ ಶರ್ಮಾ

ಬ್ಯಾಂಕ್ ಸಿಬ್ಬಂದಿಗಳಿಗೂ ಮುಷ್ಕರಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ ಇದ್ದಂತೆ ಕಾಣುತ್ತದೆ. ಮುಷ್ಕರಗಳು ಅವರ ಕಾರ್ಯದ ಒಂದು ಅವಿಭಾಜ್ಯ ಅಂಗ ಎನ್ನುವಂತೆ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರ ನಡೆಸುತ್ತಾರೆ ಎನ್ನುವ ಟೀಕೆಯಲ್ಲಿ ಅರ್ಥ ವಿಲ್ಲದಿಲ್ಲ.

2017ರ ನವೆಂಬರ್ 1 ರಿಂದ 2022ರ ಅಕ್ಟೋಬರ್ 31ರವರೆಗಿನ ಐದು ವರ್ಷದ ಅವಧಿಗೆ ಆಗಬೇಕಿದ್ದ ತಮ್ಮ ವೇತನ ಪರಿಷ್ಕರಣೆಗೆ ಅವರು ಮೂರು ವರ್ಷಗಳ ಕಾಲ ಪ್ರತಿಭಟನೆ ಮತ್ತು ಮುಷ್ಕರ ನಡೆಸಿ ಕಳೆದ ಜುಲೈ ತಿಂಗಳಿನಲ್ಲಿ ಶೇ.15ರಷ್ಟು ವೇತನ ಹೆಚ್ಚಳ ಪಡೆಯಲಾಗಿದೆ. ಸರಕಾರ ಮತ್ತು ಬ್ಯಾಂಕ್ ಗ್ರಾಹಕರು ನಿಟ್ಟುಸಿರು ಬಿಡುತ್ತಿರುವಂತೆ, ಪುನಃ ಮಾಚ್ 15 ಮತ್ತು 16ರಂದು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.

ಬ್ಯಾಂಕ್ ಸಿಬ್ಬಂದಿಗಳು ತಮ್ಮ ಮುಷ್ಕರ ಪುನಃ ಆರಂಭಿಸುತ್ತಿರುವುದು ಜನಸಾಮಾನ್ಯರಲ್ಲಿ, ಸರಕಾರದಲ್ಲಿ ಮತ್ತು ಬ್ಯಾಂಕಿಂಗ್
ವಲಯದಲ್ಲಿ ಅಚ್ಚರಿ ಮೂಡಿಸಿದೆ. ದುಡಿಯುವ ವರ್ಗ ಜಿಂದಾಬಾದ್ – ಮುರ್ದಾಬಾದ್ ಎಂದು ಗಂಟಲ ನರ ಉಬ್ಬಿಸಿ ಮುಷ್ಟಿ ಎತ್ತಿ ಬೀದಿಗಿಳಿದರೆ ಅದರ ಹಿಂದೆ ಹಣದುಬ್ಬರದ ದಿನಗಳಲ್ಲಿ ತಿಂಗಳ ಕೊನೆ ಕಾಣಿಸುವ ಹಣಕಾಸು ಬೇಡಿಕೆಗಳು ಇರುತ್ತವೆ.

ಆದರೆ, ಈ ಬಾರಿಯ ಬ್ಯಾಂಕ್ ಸಿಬ್ಬಂದಿಗಳ ಮುಷ್ಕರ ಹಣಕಾಸು ಬೇಡಿಕೆಗಳಿಗೆ ಇರದೇ ಬ್ಯಾಂಕುಗಳ ಖಾಸಗೀಕರಣದ ಪ್ರಸ್ತಾವದ ವಿರುದ್ಧ ಇರುವುದು ಒಂದು ವಿಶೇಷ. ಈ ಖಾಸಗೀಕರಣದಲ್ಲಿ ಬ್ಯಾಂಕುಗಳಲ್ಲಿ ಸರಕಾರದ ಹೂಡಿಕೆ ಶೇ. 50ಕ್ಕಿಂತ ಕಡಿಮೆಯಾಗಿ
ಆಡಳಿತದ ಚುಕ್ಕಾಣಿ ಖಾಸಗಿ ಕೈಪಾಲಾಗುತ್ತದೆ. ಬ್ಯಾಂಕ್ ಸಿಬ್ಬಂದಿಗಳ ಮುಷ್ಕರದ ಇತಿಹಾಸವನ್ನು ತಿರುವಿದರೆ, ಅವರು
ತಮ್ಮ ಪ್ರತಿಯೊಂದು ಸೌಲಭ್ಯವನ್ನು, ಹಣಕಾಸು ಅಥವಾ ಹಣಕಾಸೇತರ ಯಾವುದೇ ಇರಲಿ ಸುದೀರ್ಘ ಹೋರಾಟದ ನಂತರ ವಷ್ಟೇ ಪಡೆದಿದ್ದನ್ನು ಕಾಣಬಹುದು. ಅವರು ಅನುಭವಿಸುತ್ತಿರುವ ಪ್ರತಿಯೊಂದು ಸಂಬಳ ಸೌಲಭ್ಯದ ಹಿಂದೆ ಪ್ರತಿಭಟನೆ, ಮುಷ್ಕರ, ಅಮಾನತು ಮತ್ತು ನೌಕರಿಯಿಂದ ತೆಗೆದು ಹಾಕುವಂಥ ಕಡತಗಳ ಗುಡ್ಡೆೆಯೇ ಇದೆ ಎಂದು ಬ್ಯಾಂಕ್ ಕಾರ್ಮಿಕ ನಾಯಕರು ಅಭಿಮಾನದಿಂದ ಹೇಳುತ್ತಾರೆ.

2021-22ರ ಬಜೆಟ್ ಮಂಡಿಸುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಎರಡು ದೊಡ್ಡ ಬ್ಯಾಾಂಕುಗಳು ಮತ್ತು ಒಂದು ಸಾಮಾನ್ಯ ವಿಮೆ ಕಂಪನಿಯನ್ನು ಖಾಸಗೀಕರಣ ಗೊಳಿಸಲಾಗುವುದು ಎಂದು ಪ್ರಕಟಿಸುತ್ತಿದ್ದಂತೆ ಇದನ್ನು ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಗಳು ಮಾಡು ಇಲ್ಲವೆ ಮಡಿ ಹೋರಾಟದ ಸೂಚನೆನೀಡಿದ್ದರು. ಸದ್ಯ ಎರಡು ದಿನಗಳ ಮುಷ್ಕರದ ಕರೆ ನೀಡಿದ್ದು,ಅವರಿಗೆ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ದೊರಕದಿದ್ದರೆ, ಇದು ತೀವ್ರಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈ ಎರಡು ಬ್ಯಾಂಕುಗಳ ಖಾಸಗೀಕರಣ ಈ ನಿಟ್ಟಿನಲ್ಲಿ ಆರಂಭಮಾತ್ರವಾಗಿದ್ದು ಮುಂದಿನ ದಿನಗಳಲ್ಲಿ ಇದು ಬ್ಯಾಂಕಿಂಗ್ ಉದ್ಯಮ ವನ್ನು ಸಂಪೂರ್ಣವಾಗಿ ವ್ಯಾಪಿಸಬಹುದು ಎಂದು ಅವರು ಸಿಡಿದಿದ್ದಾರೆ.

ಖಾಸಗೀಕರಣ ಜನಸಾಮಾನ್ಯರು ಭಾವಿಸುವಂತೆ ಹೊಸ ಪರಿಕಲ್ಪನೆ ಏನು ಅಲ್ಲ. 1969 ಜುಲೈ 19ರ ವರೆಗೆ ದೇಶದಲ್ಲಿ ಎಲ್ಲಾ ಬ್ಯಾಂಕುಗಳು ಖಾಸಗಿ ಒಡೆತನದಲ್ಲಿಯೇ ಇದ್ದವು. 1969ರಲ್ಲಿ ಕಾಂಗ್ರೆಸ್ ಇಬ್ಬಾಗವಾದ ನಂತರ, ಅಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ತಮ್ಮ ಪಕ್ಷದಲ್ಲಿದ್ದ ಕೆಲವು ಪಟ್ಟಭದ್ರರನ್ನು ನಿಯಂತ್ರಿಸಲು ಎಡಪಂಥೀಯರನ್ನು ಒಲಿಸಿ ಕೊಳ್ಳುವ
ಅನಿವಾರ್ಯತೆ ಉಂಟಾಗಿತ್ತು. ಅಂತೆಯೇ ತಮ್ಮ ಸಿದ್ಧಾಂತಗಳಿಗೆ ಸಮಾಜವಾದಿ ಲೇಪ ಕೊಡಲು, ಸಮಾಜದಲ್ಲಿ ಆರ್ಥಿಕವಾಗಿ ಕೆಳಸ್ತರದಲ್ಲಿದ್ದ ವರಿಗೆ ಕೂಡಾ ಬ್ಯಾಂಕಿಂಗ್ ಸೌಲಭ್ಯ ದೊರಕುವಂತೆ ಮಾಡಲು 1969ರಲ್ಲಿ 19 ಬ್ಯಾಂಕುಗಳನ್ನು ಮತ್ತು ತಮ್ಮ ಎರಡನೆ ಅವಧಿಯಲ್ಲಿ 1980ರಲ್ಲಿ 6 ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದರು. ಅವರ ಈ ದಿಟ್ಟ ಹೆಜ್ಜೆ ದೇಶದಲ್ಲಿ ಸಮಾಜವಾದದ ಪರಿಕಲ್ಪನೆಯನ್ನು ಮೂಡಿಸುವುದರೊಂದಿಗೆ , ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಯಿತು. ಈವರೆಗೆ ಕೇವಲ ಕೆಲವರಿಗೆ ಸೀಮಿತವಾಗಿದ್ದ ಬ್ಯಾಂಕ್ ಸಾಲ ಸೌಲಭ್ಯಗಳು ಮತ್ತು ಉದ್ಯೋಗಗಳು ಎಲ್ಲರ ಕೈಗೆಟುಕು ವಂತಾಯಿತು.

ಖಾಸಗೀಕರಣಕ್ಕೆ ವಿರೋಧವೇಕೆ? ದೇಶದಲ್ಲಿನ ಬ್ಯಾಂಕಿಂಗ್ ಇತಿಹಾಸವನ್ನು ಬಗೆದು ನೋಡಿದಾಗ ಬ್ಯಾಂಕುಗಳ ಖಾಸಗೀಕರಣಕ್ಕೆ ಏಕೆ ವಿರೋಧ ಎನ್ನುವ ಕೆಲವು ಮಹತ್ವದ ಕಾರಣಗಳ ಅರಿವಾಗುತ್ತದೆ. ಬ್ಯಾಂಕಿಂಗ್ ಆನ್ ಸೋಷಿಲ್ ಜಸ್ಟಿಸ್ ಪ್ರಕಾರ 1963ರಲ್ಲಿ 188 ಜನರು ದೇಶದ ಬ್ಯಾಂಕುಗಳ ಶೇ. 75 ರಿಸೋರ್ಸ್ ಅನ್ನು ನಿಯಂತ್ರಿಸುತ್ತಿದ್ದರು. ಈ ಬ್ಯಾಂಕುಗಳ ನಿರ್ದೇಶಕ ಮಂಡಳಿಯಲ್ಲಿ ಶೇ.90ರಷ್ಟು ನಿರ್ದೇಶಕರು ಬಿಜಿನೆಸ್ ಮತ್ತು ಉದ್ಯಮಿಗಳಾಗಿದ್ದರು. ಒಟ್ಟೂ ಸಾಲದಲ್ಲಿ ಮೂರನೇ ಎರಡು ಭಾಗವನ್ನು 650 ಖಾತೆಗಳಲ್ಲಿ ಇತ್ತು.

ಒಂದು ಬ್ಯಾಂಕಿನ 10 ನಿರ್ದೇಶಕರುಗಳಿಗೆ 182 ಕಂಪನಿಗಳಲ್ಲಿ ಅಸಕ್ತಿ ಇದ್ದರೆ, ಇನ್ನೊಂದು ಬ್ಯಾಂಕಿನ ನಿರ್ದೇಶಕರುಗಳಿಗೆ 104  ಕಂಪನಿಗಳಲ್ಲಿ ಮತ್ತು ಮತ್ತೊಂದು ಬ್ಯಾಂಕಿನ 40ನಿರ್ದೇಶಕರುಗಳಿಗೆ 53 ಕಂಪನಿಗಳಲ್ಲಿ ಅಸಕ್ತಿ ಇತ್ತಂತೆ. ಈ ನಿರ್ದೇಶಕರುಗಳು ತಮ್ಮ ಬ್ಯಾಂಕಿನ ರಿಸೋರ್ಸನ್ನು ಅನಿಯಂತ್ರಿತವಾಗಿ ಬಳಸುವುದ ರೊಂದಿಗೆ ಪರಸ್ಪರ ಒಪ್ಪಂದದ ಮೂಲಕ ಬೇರೆ ಬ್ಯಾಂಕು ಗಳಿಂದಲೂ ಸಹಾಯ ಪಡೆಯುತ್ತಿದ್ದರಂತೆ.

1935ರಿಂದ 1947ರ ವರೆಗೆ 900 ಬ್ಯಾಂಕುಗಳು ಮುಚ್ಚಿದ್ದವು ಅಥವಾ ಬ್ಯಾಂಕುಗಳನ್ನು ಬೇರೆ ಬ್ಯಾಂಕು ಗಳ ಸಂಗಡ ವಿಲೀನಗೊಳಿಸಿ ಠೇವಣಿದಾರನ್ನು ರಕ್ಷಿಸಲಾಗಿತ್ತು. 1947- 69ರ ಅವಧಿಯಲ್ಲಿ 665 ಬ್ಯಾಂಕುಗಳು ಬ್ಯಾಂಕಿಂಗ್ ನಕಾಶೆಯಿಂದ ತೆಗೆಯಲ್ಪಟ್ಟವು. 2004ರಿಂದ 2014ರ ಅವಧಿಯಲ್ಲಿ ಗ್ಲೋಬಲ್ ಟ್ರಸ್ಟ್‌, ಟೈಮ್ಸ್‌ ಬ್ಯಾಂಕ್, ಸೌಥ್ ಗುಜರಾತ್ ಬ್ಯಾಂಕ್, ಸೆಂಚೂರಿಯನ್ ಬ್ಯಾಂಕ್,
ಯುನೆಟೆಡ್ ವೆಸ್ಟರ್ನ್ ಬ್ಯಾಂಕ್, ಗಣೇಶ್ ಬ್ಯಾಂಕ್, ಲಾರ್ಡ್ ಕೃಷ್ಣಾ ಬ್ಯಾಂಕ್, ಬ್ಯಾಂಕ್ ಆಫ್ ರಾಜಸ್ತಾನ್, ಐಎನ್‌ಜಿ ವೈಶ್ಯ
ಬ್ಯಾಂಕ್, ನೈನಿತಾಲ್ ಬ್ಯಾಂಕ್ ಮತ್ತು ಭಾರತ್ ಓವರ್ಸೀಸ್ ಬ್ಯಾಂಕುಗಳು ಮುಚ್ಚಲ್ಪಟ್ಟವು.

ಗುರು ರಾಘವೇಂದ್ರ ಬ್ಯಾಂಕ್, ಬ್ಯಾಂಕ್ ಮತ್ತು ಪಿಎಂಸಿ ಬ್ಯಾಂಕುಗಳು ಇತ್ತೀಚಿನ ಉದಾಹರಣೆಗಳು. ಯೆಸ್ ಬ್ಯಾಂಕನ್ನು ಬಹು ಕಷ್ಟದಲ್ಲಿ ಬದುಕಿಸಲಾಗಿದೆ. ಬಾಗಿಲು ಮುಚ್ಚಿದ ಹಲವು ಸಹಕಾರಿ ಬ್ಯಾಂಕುಗಳ ಹೆಸರು ಈ ಪಟ್ಟಿಯಲ್ಲಿ ಕಾಣುತ್ತಿಲ್ಲ. ಕೆಲವು ಬ್ಯಾಂಕುಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳು ಬದುಕಿಸಿದ್ದು ಒಂದು ವಿಶೇಷ. ವೈಫಲ್ಯಗೊಂಡು ಮತ್ತು ರಕ್ಷಿಸಲಾಗದ ಬ್ಯಾಂಕು ಗಳಲ್ಲಿ ಅದೆಷ್ಟು ಜನರು ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದಾರೋ? ಈ ನಿಟ್ಟಿನಲ್ಲಿ ನಿಖರ ಅಂಕೆ ಸಂಖ್ಯೆಗಳು ಲಭ್ಯವಿಲ್ಲ.

ಈಗೇನೋ ಒಂದು ಖಾಸಗಿ ಬ್ಯಾಂಕ್ ವೈಫಲ್ಯಗೊಂಡರೆ ಅದನ್ನು ರಾಷ್ಟ್ರೀಕೃತ ಬ್ಯಾಂಕ್‌ಗೆ ತಗುಲಿಸಿ ಗ್ರಾಹಕರ, ಮುಖ್ಯವಾಗಿ ಠೇವಣಿದಾರರನ್ನು ಉಳಿಸಬಹುದು. ಎಲ್ಲವೂ ಖಾಸಗಿ ಬ್ಯಾಂಕುಗಳೇ ಆದರೆ ಯಾವ ಬ್ಯಾಂಕ್‌ನ ತಲೆಗೆ ಕಟ್ಟಬಹುದು? ಲಾಭವೇ ಮುಖ್ಯ ವಾಗಿರುವ ಖಾಸಗಿ ಬ್ಯಾಂಕುಗಳು ಈಹೊರೆಯನ್ನು ಹೊರಬಹುದೇ? ಸರಕಾರ ತನ್ನ ಆದೇಶದ ಮೂಲಕ ರಾಷ್ಟ್ರೀ ಕೃತ ಬ್ಯಾಂಕುಗಳನ್ನು ಬಗ್ಗಿಸಬಹುದು ಮತ್ತು ಅವು ಇಂತಹ ನಿರ್ದೇಶನವನ್ನು ಪಾಲಿಸಬೇಕಾಗುತ್ತದೆ.

ಆದರೆ, ಖಾಸಗಿ ಬ್ಯಾಂಕುಗಳನ್ನು ಮಣಿಸಲು ಸಾಧ್ಯವೇ? ಹಾಗೆಯೇ ಇಂದು ದೇಶದ ಪ್ರತಿಯೊಂದು ಆರ್ಥಿಕ ಯೋಜನೆಗಳ ಅನುಷ್ಠಾನ ಮುಖ್ಯವಾಗಿ ಬಡತನೋದ್ಧಾರದ ಯೋಜನೆಗಳು ಸರಕಾರಿ ಬ್ಯಾಂಕುಗಳ ಮೂಲಕವೇ ಅಗುತ್ತದೆ. ಇದರಲ್ಲಿ ಖಾಸಗಿ ಬ್ಯಾಂಕುಗಳ ಪಾಲು ಕಾಟಾಚಾರಕ್ಕೆ ಎನ್ನುವಂತಿದೆ. ಬ್ಯಾಂಕುಗಳು 41.75 ಕೋಟಿ ಜನಧನ ಖಾತೆಗಳನ್ನು ತೆರೆದಿದ್ದು ಅದರಲ್ಲಿ ಸರಕಾರಿ ಬ್ಯಾಂಕುಗಳ ಪಾಲು ಶೇ.97ರಷ್ಟಿದ್ದು, 33.05 ಕೋಟಿ ಖಾತೆಗಳನ್ನು ತೆರೆದಿವೆ.

ಖಾಸಗಿ ಬ್ಯಾಂಕುಗಳ ಪಾಲು ಕೇವಲ 1.25 ಕೋಟಿಗಳು ಮತ್ತು ಗ್ರಾಮೀಣ ಬ್ಯಾಂಕುಗಳ ಪಾಲು 7.45 ಕೋಟಿಗಳು. ಖಾಸಗೀಕರಣದ ಷರತ್ತುಗಳು ಇನ್ನೂ ಸ್ಪಷ್ಟವಾಗಬೇಕಾಗಿದೆ. ನೂರಾರು ನಿಯಂತ್ರಣ ಗಳು ಮತ್ತು ಹೆಜ್ಜೆ ಹೆಜ್ಜೆಗೆ ಅಡೆತಡೆಗಳು ಇರುವಾಗಲೇ ಸರಕಾರಿ ಬ್ಯಾಂಕುಗಳು ಹಳಿ ತಪ್ಪುವಾಗ, ಹೆಚ್ಚಿಗೆ ಮೂಗುದಾರವಿಲ್ಲದ ಖಾಸಗಿ ಬ್ಯಾಂಕುಗಳು ಸದೃಢವಾಗಿ ನಿಲ್ಲಬಹುದೇ ಎಂದು ಬ್ಯಾಂಕ್ ಕಾರ್ಮಿಕ ಸಂಘಗಳು ಪ್ರಶ್ನಿಸುತ್ತಿವೆ. ಗ್ರಾಹಕರ ಠೇವಣಿ ರೂಪದಲ್ಲಿರುವ ಅಪಾರ ಸಂಪತ್ತನ್ನು ಕೆಲವೇ ಜನರ ಸುಪರ್ದಿಗೆ ನೀಡುವುದು ಎಷ್ಟು ಸರಿ ಎನ್ನುವ ಅವರ ಎಚ್ಚರಿಕೆಯ ಹಿತೋಕ್ತಿಯಲ್ಲಿ ಅರ್ಥವಿದೆ.

ಗ್ರಾಹಕರ ಠೇವಣಿ ರಾಷ್ಟ್ರೀಯ ಸಂಪತ್ತು ಮತ್ತು ಇದನ್ನು ಜನಸಾಮಾನ್ಯರ ಕಲ್ಯಾಣಕ್ಕೆ ಮತ್ತು ರಾಷ್ಟಾಭಿವೃದ್ಧಿಗೆ ಬಳಸುವ ಅನಿವಾರ್ಯತೆ ಇದ್ದು, ಖಾಸಗಿ ಬ್ಯಾಂಕುಗಳಲ್ಲಿ ಇದು ಕೆಲವೇ ಜನರ ಪಾಲಾಗುವ ಭಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಯೆಸ್ ಬ್ಯಾಂಕ್ ಹಗರಣವನ್ನು ಉದಾಹರಿಸುತ್ತಾರೆ. ಖಾಸಗೀಕರಣದ ಹೆಜ್ಜೆ ದೇಶ ಸಮಾಜವಾದದಿಂದ ಬಂಡವಾಳಶಾಹಿಯತ್ತ ಒಲಿಯುತ್ತಿರುವುದರ ಸಂಕೇತ ಎಂದು ಅವರು ಅರ್ಥೈಸುತ್ತಿದ್ದಾರೆ.

ಖಾಸಗೀಕರಣದ ಹಿಂದಿನ ಇನ್ನೊಂದು ಕಾರಣ, ಬ್ಯಾಂಕುಗಳು ಇನ್ನಿತರ ಸಾರ್ವಜನಿಕ ರಂಗದ ಉದ್ಯಮಗಳಂತೆ ಲಾಭ ಗಳಿಸು ತ್ತಿಲ್ಲ ಮತ್ತು ಕೊಟ್ಟ ಸಾಲ ವಸೂಲಾಗುತ್ತಿಲ್ಲ. ಅನುತ್ಪಾದಕ ಅಸ್ತಿಗಳು ಮತ್ತು ಸುಸ್ತಿ ಸಾಲ ದಿನದಿಂದ ದಿನಕ್ಕೆ 2017-18 ರಲ್ಲಿ ಬ್ಯಾಂಕುಗಳ ಒಟ್ಟೂ ಲಾಭ 155585 ಲಕ್ಷ ಕೋಟಿ ಕೋಟಿ ಅದರೆ, 2018-19 ರಲ್ಲಿ 149804 ಲಕ್ಷ ಕೋಟಿಗಳು. ಆದರೆ ಬ್ಯಾಂಕುಗಳು ಕ್ರಮವಾಗಿ ಈ ವರ್ಷಗಳಲ್ಲಿ 270953 ಮತ್ತು 216410 ಲಕ್ಷ ಕೋಟಿಯನ್ನು ಅನುತ್ಪಾದಕ ಮತ್ತು ಸುಸ್ತಿ ಸಾಲಕ್ಕೆ ವರ್ಗಾಯಿಸಿದ್ದು 85371 ಮತ್ತು 66606 ಕೋಟಿ ನಷ್ಟವನ್ನು ತೋರಿಸಿವೆ.

2008-09 ರಿಂದ 2014-15 ರ ವರೆಗೆ ನಿರಂತರವಾಗಿ ಅನುತ್ಪಾದಕ ಮತ್ತು ಸುಸ್ತಿ ಸಾಲಕ್ಕೆ ಲಾಭವನ್ನು ವರ್ಗಾಯಿಸಿದ ಮೇಲೂ ಅವು ನಿವ್ವಳ ಲಾಭವನ್ನು ಗಳಿಸಿವೆ. ರಿಸರ್ವ ಬ್ಯಾಂಕ್‌ನ Trend Progress Report ಪ್ರಕಾರ ಬ್ಯಾಂಕುಗಳು ಕಳೆದ 10 ವರ್ಷಗಳಲ್ಲಿ 8.83 ಲಕ್ಷಕೋಟಿ ಸಾಲವನ್ನು ರೈಟ್ ಆಪ್ ಮಾಡಿವೆ. ಬ್ಯಾಂಕುಗಳಲ್ಲಿ ಸಾಲ ವಸೂಲಾತಿಗೆ ಪರಿಣಾಮಕಾರಿ ಮತ್ತು ಶೀಘ್ರ ಪರಿಹಾರ ನೀಡುವ ನೀತಿ ನಿಯಮಾವಳಿಗಳು ಮತ್ತು ಕಾನೂನುಗಳು ಬೇಕೇ ವಿನಹ ಖಾಸಗೀ ಕರಣ ಮದ್ದಲ್ಲ ಎಂದು ಅವರು
ವಾದಿಸುತ್ತಾರೆ.

ಖಾಸಗೀಕರಣವನ್ನು ನೆಗಡಿ ಬಂದರೆ ಮೂಗು ಕೊಯ್ಯುವ ಚಿಕಿತ್ಸೆ ಎಂದು ಅವರು ಪ್ರತಿಭಟಿಸುತ್ತಿದ್ದಾರೆ. ತಮ್ಮ ಠೇವಣಿಗೆ ಹೆಚ್ಚಿನ ಬಡ್ಡಿ, ತೆಗೆದುಕೊಳ್ಳುವ ಸಾಲಕ್ಕೆ ಕಡಿಮೆ ಬಡ್ಡಿ, ವಿಶೇಷ ಕಿರಿ-ಕಿರಿ ಇಲ್ಲದೇ ಕೇಳಿದಷ್ಟು ಸಾಲ, ಠೇವಣಿ ಸುರಕ್ಷಿತತೆ ಮತ್ತು ವಿಳಂಬ ರಹಿತ ಸೇವೆ ದೊರಕುವ ತನಕ ಯಾರೂ ಖಾಸಗೀಕರಣವನ್ನು ಪ್ರಶ್ನಿಸುವುದಿಲ್ಲ. ಬ್ಯಾಂಕ್ ಸಿಬ್ಬಂದಿಗಳು ಉದ್ಯೋಗ ಭದ್ರತೆ
ಮತ್ತು ಹೆಚ್ಚಿನ ಸಂಬಳಕ್ಕಾಗಿ ಖಾಸಗೀಕರಣವನ್ನು ವಿರೋಧಿಸುತ್ತಾರೆ ಎನ್ನುವ ವಾದವನ್ನು ಅವರೂ ಒಕ್ಕೊರಲಿನಿಂದ
ಪುರಸ್ಕರಿಸುತ್ತಾರೆ.

ಪ್ರತಿಯೊಬ್ಬರೂ efficiency, productivity ಮತ್ತು profitability ಬಗೆಗೆ ಯೊಚಿಸುತ್ತಾರೆ ವಿನಾ ಇದರಿಂದಾಗುವ ದೂರಗಾಮಿ ಆರ್ಥಿಕ ಸಾಮಾಜಿಕ ತಲ್ಲಣದ ಬಗೆಗೆ ಚಿಂತಿಸುವುದಿಲ್ಲ ಎಂದು ಅವರು ಅಪಾದಿಸುತ್ತಾರೆ. ಬೆಳಗಾದರೆ ಅಳಿಯನ ಮೋರೆ ಕಾಣುತ್ತದೆ ಎನ್ನುವಂತೆ, ಬ್ಯಾಂಕುಗಳ ವಿಲೀನದ ಗೊಂದಲ ಈಗ ಅರ್ಥವಾಗುತ್ತಿರುವಂತೆ ಖಾಸಗೀಕರಣದ ಪರಿಣಾಮವೂ  ಒಂದರೆಡು ವರ್ಷಗಳಲ್ಲಿ ಅನಾವರಣಗೊಂಡು ಖಾಸಗೀಕರಣದ ವಿರೋಧಿಗಳ ನಿಲುವು ಅರ್ಥವಾಗುತ್ತದೆ ಎಂದು ಅವರು ಎಚ್ಚರಿಸುತ್ತಾರೆ. ಮುಷ್ಕರ ಬೇಕಿತ್ತೆ ಎಂದು ಪ್ರಶ್ನಿಸುವವರು ಒಂದೆರಡು ವರ್ಷಗಳಲ್ಲಿ ತಮ್ಮ ನಿಲುವನ್ನು ಬದಲಾಯಿಸುವುದನ್ನು ತಳ್ಳಿ ಹಾಕಲಾಗದು ಎಂದು ದೃಢವಾಗಿ ಹೇಳುತ್ತಾರೆ.