Wednesday, 23rd October 2024

ಯುವನಾಯಕ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಗೆಲ್ಲಲಿದೆ: ಶ್ರೀರಾಮುಲು

ಶಿರಾ: ಯುವನಾಯಕ ವಿಜಯೇಂದ್ರ ನೇತೃತ್ವದಲ್ಲಿ ಶಿರಾ ಉಪಚುನಾವಣೆ ಎದುರಿಸುತ್ತಿದ್ದು ಯಡಿಯೂರಪ್ಪನವರು ಹಾಗು ಮೋದೀಜಿ ಮಾಡಿದ ಅಭಿವೃದ್ದಿ ಕೆಲಸವನ್ನು ಮುಂದಿಟ್ಟುಕೊಂಡು ಶಿರಾದಲ್ಲಿ ಮತಯಾಚನೆ ಮಾಡುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಬಿ.ಜೆ.ಪಿ. ಕಛೇರಿ ಸೇವಾಸದನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ಕಂಡರೆ ಅವರ ಮೇಲೆ ಅನುಕಂಪ ಮೂಡುತ್ತದೆ. ಅವರು ಶಿರಾ ಕ್ಷೇತ್ರವನ್ನು ಪ್ರತಿಷ್ಟೆಯನ್ನಾಗಿ ತೆಗೆದುಕೊಂಡಿದ್ದಾರಂತೆ. ಅವರ ಪ್ರತಿಷ್ಟೆ ಇಲ್ಲಿ ವರ್ಕೋಟ್ ಆಗುವುದಿಲ್ಲ. ಜಯಚಂದ್ರ ಆರೇಳು ಬಾರಿ ಗೆದ್ದರೂ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ. ಹಾಗಾಗಿ ಬಿ.ಜೆ.ಪಿ.ಗೆ ಜನ ಮತ ನೀಡಲಿದ್ದಾರೆ. ನೆರೆ ನಿರ್ವಹಣೆಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಲಿದೆ. ಸಿ.ಎಂ.ಯಡಿಯೂರಪ್ಪ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕದಲ್ಲಿದ್ದಾರೆ. ವೈಮಾನಿಕ ಸಮೀಕ್ಷೆ ಕೂಡಾ ಮಾಡಿದ್ದಾರೆ.

ವಿಜಯೇಂದ್ರರ ನಿಮಗೆಲ್ಲ ನಾಯಕರೆಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಮೇಲೆ ಇದೇ ಮೊದಲ ಚುನಾವಣೆ ಹಾಗಾಗಿ ಎಲ್ಲಾ ರಾಜಕೀಯಗೊಳಿಸುತ್ತಿದ್ದಾರೆ. ಅವರು ಗೆಲ್ಲುವ ಅನಿವಾರ್ಯತೆ ಇದೆ. ಎಲ್ಲಿ ಕಾಂಗ್ರೆಸ್ ಸೋಲುತ್ತೋ ಅನ್ನೋ ಭಯ ಕಾಡ್ತಿದೆ. ಹಾಗಾಗಿ ಸೋಲಿನ ಭಯದಿಂದ ನಿರಾಶರಾಗಿ ಮಾತನಾಡುತ್ತಿದ್ದಾರೆ ಎಂದರು.

ಪದೇ ಪದೇ ನಮ್ಮ ನಾಯಕ ನಮ್ಮ ನಾಯಕ ಎಂದು ವಿಜಯೇಂದ್ರರನ್ನು ಶ್ರೀರಾಮುಲು ಸಂಬೋಧಿಸುತ್ತಿದ್ದು ಸರ್ವೇ ಸಾಮಾನ್ಯ ವಾಗಿತ್ತು. ಸುದ್ದಿಗೋಷ್ಟಿಯಲ್ಲಿ ಎಸ್.ಆರ್.ಗೌಡ, ನಗರ ಅಧ್ಯಕ್ಷ ವಿಜಯರಾಜು, ಕೃಷ್ಣಮೂರ್ತಿ, ಎಮ್ಮೇರಹಳ್ಳಿ ಗೋವಿಂದ ರಾಜು, ಪ್ರಕಾಶ್ ಮುದ್ದರಾಜು, ಕೋಟೆ ರವಿ ಮುಂತಾದವರು ಉಪಸ್ಥಿತರಿದ್ದರು.