Thursday, 12th December 2024

ಕರ್ನಾಟಕದಲ್ಲಿ ಬಿಜೆಪಿ ಕೋಮು ರಾಜಕಾರಣ ಮಾಡುತ್ತಿದೆ: ಸಾಹಿತಿ ಸಿದ್ದರಾಮಯ್ಯ

ತುಮಕೂರು: ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಬಿಜೆಪಿ ಪಕ್ಷ ಕೋಮು ಮತ್ತು ದ್ವೇಷ ರಾಜಕಾರಣದ ಪ್ರಯೋಗಶಾಲೆ ಯಾಗಿ ಮಾಡಿಕೊಂಡಿದ್ದು,ಇದರಿಂದ ಕರುನಾಡಿನ ಜನರನ್ನು ಹೊರತರುವ ನಿಟ್ಟಿನಲ್ಲಿ ಸಮಾನ ಮನಸ್ಕರ ಒಕ್ಕೂಟ, ಸ್ಥಳೀಯ ಜಾಗೃತ ಮನಸ್ಸುಗಳ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಮಾನ ಮನಸ್ಕರ ಒಕ್ಕೂಟ ಡಾ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ,ಕೋಮುವಾದ ಮತ್ತು ದ್ವೇಷ ರಾಜಕಾರಣದಿಂದ ಇಂದು ಪ್ರಜಾಪ್ರಭುತ್ವ ಆತಂಕದಲ್ಲಿದೆ.ಸಂವಿಧಾನವನ್ನು ಹಾಳು ಮಾಡುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದು,ಇದರ ವಿರುದ್ದ ಸಾಹಿತಿ ಗಳು,ಕಲಾವಿದರು,ವೈದ್ಯರು,ವಕೀಲರು,ಯುವಜನರು,ವಿದ್ಯಾರ್ಥಿಗಳು, ರೈತ-ದಲಿತ ಮಹಿಳಾ ಮತದಾರರ ಸಮನ್ವಯದಿಂದ ದ್ವೇಷ ಭಾಷಣಗಳಿಗೆ ನಮ್ಮ ಮತ ಇಲ್ಲ. “ಹಣ, ಹೆಂಡ, ಸೀರೆ, ಪಂಚೆ ಹಂಚುವವರಿಗೆ ನಮ್ಮ ಮತ ಇಲ್ಲ. ಪ್ರೀತಿಗೆ, ಕರುಣೆಗೆ, ಸೌಹಾರ್ಧತೆಗೆ ನಮ್ಮ ಮತ” ಎಂಬ ಘೋಷವಾಕ್ಯದೊಂದಿಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ,ಕಳೆದ ಎರಡು ತಿಂಗಳಿನಿಂದ ನಾವೆಲ್ಲರೂ ಹಲವಾರು ಸಭೆಗಳನ್ನು ಮಾಡಿ,ಪ್ರವಾಸ ಮಾಡಿ ಜನರಿಗೆ ಮಾಧ್ಯಮಗಳ ಮೂಲಕ ರಾಜ್ಯದಲ್ಲಿ ಕೋಮುವಾದ, ದ್ವೇಷ ರಾಜಕಾರಣಕ್ಕೆ ವಿರುದ್ದವಾಗಿ ಮತ ಚಲಾಯಿಸುವಂತೆ ಮನವಿ ಮಾಡುತ್ತಾ ಬಂದಿದ್ದೇವೆ  ಎಂದರು.
ಮಹಿಳಾ ಹೋರಾಟಗಾರತಿ ಬಾ.ಹ.ರಮಾಕುಮಾರಿ ಮಾತನಾಡಿ,ಬಿಜೆಪಿ ಕಳೆದ 9 ವರ್ಷಗಳಿಂದ ಸುಳ್ಳು ಹೇಳಿಕೊಂಡೇ ಬರುತ್ತಿದೆ.ಮಹಿಳಾ ರಕ್ಷಣೆ, ಮಹಿಳಾ ಮೀಸಲಾತಿ ಬಗ್ಗೆ ದೊಡ್ಡ ಜಾಹಿರಾತು ನೀಡುತ್ತಿರುವ ಬಿಜೆಪಿ, ಆ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆಯೇ ಎಂದು ನೋಡಿದರೆ,ಅದೆಲ್ಲಾ ಸುಳ್ಳು ಎಂಬುದು ಗೊತ್ತಾಗುತ್ತದೆ ಎಂದರು.
ಸಾಹಿತಿ ಡಾ.ಎಲ್.ಎನ್.ಮುಕುಂದರಾಜ್ ಮಾತನಾಡಿ,ಮತದಾರರ ಜಾಗೃತಿ ಎಂಬುದು ನಿರಂತರವಾಗಿ ನಡೆಯುವ ಕಾರ್ಯಕ್ರಮವಾಗಿದೆ.ಆದರೆ ಜನರಿಗೆ ಸತ್ಯ ಹೇಳಲು ಹೊರಟಿರುವ ನಮ್ಮಂತಹ ಸಾಹಿತಿಗಳು ಅನುಭವಿಸುತ್ತಿರುವ ನೋವುಗಳು ಸಾಕಷ್ಟಿವೆ ಎಂದು ಕಿಡಿಕಾರಿದರು.
ಲೇಖಕ ಶ್ರೀಪಾದಭಟ್ ಮಾತನಾಡಿ,ರಾಜ್ಯದ ಜನತೆ, ಡಬಲ್ ಇಂಜಿನ್ ಸರಕಾರ ಜಾರಿಗೆ ತಂದಿರುವ ಜನವಿರೋಧಿ, ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಮತ್ತು ಅರ್ಥಿಕ ಹಿಂದುಳಿದವರಿಗೆ ಮೀಸಲಾತಿ ಇವುಗಳ ಬಗ್ಗೆ ಚರ್ಚೆ ನಡೆಸಿ, ಇವುಗಳನ್ನು ಯಾರ ಲಾಭಕ್ಕಾಗಿ ಎಂಬ ಪ್ರಶ್ನೆಗಳನ್ನು ಎತ್ತಬೇಕಿದೆ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾಗೃತ ಮತದಾರರ ವೇದಿಕೆಯ ಸಂಚಾಲಕ ಡಾ.ಹೆಚ್.ವಿ.ರಂಗಸ್ವಾಮಿ,ಡ್ಯಾಗೇರಹಳ್ಳಿ ವಿರೂಪಾಕ್ಷ,ನಟರಾಜಪ್ಪ ಇದ್ದರು.