ಕುರುಕ್ಷೇತ್ರ : ಹರಿಯಾಣದ ಕುರುಕ್ಷೇತ್ರದಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ನಾಯಕರು ಬಿಜೆಪಿಯ ಕುರುಕ್ಷೇತ್ರ ಲೋಕಸಭಾ ಸದಸ್ಯ ನಾಯಾಬ್ ಸಿಂಗ್ ಅವರನ್ನು ಎಳೆದಾಡಿ, ಕಾರಿನ ಗಾಜು ಒಡೆದು ಗಲಭೆ ಎಬ್ಬಿಸಿರುವುದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ನ ನಾಲ್ಕು ಸದಸ್ಯರನ್ನು ಬಂಧಿಸಿರುವ ಪೊಲೀಸರು, ಗಲಭೆ, ಕಾರು ಹಾನಿ ಮತ್ತು ಕೊಲೆಯ ಯತ್ನದ ಕೇಸು ದಾಖಲಿಸಿದ್ದಾರೆ.
ಸಂಸದ ನಾಯಾಬ್ ಸಿಂಗ್ ಅವರು ಮಂಗಳವಾರ ಕುರುಕ್ಷೇತ್ರದ ಮಾಜ್ರಿ ಮೊಹಲ್ಲಾಗೆ ಹೋಗಿದ್ದಾಗ ಸ್ಥಳದಲ್ಲಿ ಜಮಾಯಿಸಿದ ರೈತ ಚಳುವಳಿಕಾರರು, ಸಿಂಗ್ ಅವರು ಕಾರಿನೊಳಗೆ ಕೂತಾಗ ಕಪ್ಪು ಬಾವುಟ ತೋರಿಸುತ್ತಾ ವಾಹನವನ್ನು ಸುತ್ತುವರೆದರು. ಸಿಂಗ್ರನ್ನು ಹಿಡಿದು ಹೊರಗೆಳೆಯಲು ಪ್ರಯತ್ನಿಸಿದರು.
ಕೆಲವರು ಗಾಜನ್ನು ಒಡೆದರು. ಸಿಂಗ್ ಅವರು ಸ್ವಲ್ಪದರಲ್ಲೇ ಪಾರಾಗಿದ್ದು, ಅವರನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಕೊಂಡೊ ಯ್ದರು ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ. ಈ ಬಗ್ಗೆ ಮೊಕದ್ದಮೆ ದಾಖಲಿಸಿದ ಶಹಬಾದ್ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ