ಲಂಡನ್: ಲಾರ್ಡ್ಸ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯವನ್ನು ಭಾರತವು 151 ರನ್ ಗಳ ಅಂತರದಿಂದ ರೋಚಕವಾಗಿ ಗೆದ್ದು ಕೊಂಡಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗೆಲ್ಲಲು 272 ರನ್ ಗುರಿ ಪಡೆದಿರುವ ಇಂಗ್ಲೆಂಡ್ 51.5 ಓವರ್ ಗಳಲ್ಲಿ 120 ರನ್ ಗಳಿಸಿ ತನ್ನ ಹೋರಾಟ ಮುಗಿಸಿತು. ವೇಗಿಗಳಾದ ಮುಹಮ್ಮದ್ ಸಿರಾಜ್ (4-32) ಯಶಸ್ವಿ ಬೌಲರ್ ಎನಿಸಿಕೊಂಡರೆ, ಬುಮ್ರಾ(3-33) ಹಾಗೂ ಇಶಾಂತ್ ಶರ್ಮಾ(2-13) ಸಿರಾಜ್ ಗೆ ಉತ್ತಮ ಸಾಥ್ ನೀಡಿದರು.
ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿ ಮಿಂಚಿದ ಕನ್ನಡಿಗ ಕೆ.ಎಲ್. ರಾಹುಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಆರಂಭಿಕರಾದ ಬರ್ನ್ಸ್ ಹಾಗೂ ಡೊಮಿನಿಕ್ ಸಿಬ್ಲೆ ಖಾತೆ ತೆರೆಯುವ ಮೊದಲೇ ಬುಮ್ರಾ ಹಾಗೂ ಶಮಿಗೆ ವಿಕೆಟ್ ಒಪ್ಪಿಸಿದ ಕಾರಣ ಇಂಗ್ಲೆಂಡ್ ಅತ್ಯಂತ ಕಳಪೆ ಆರಂಭ ಪಡೆಯಿತು. ಟೀ ವಿರಾಮದ ಬಳಿಕ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಎರಡು ಎಸೆತಗಳಲ್ಲಿ 2 ವಿಕೆಟನ್ನು ಕಬಳಿಸಿ ಇಂಗ್ಲೆಂಡ್ 90 ರನ್ ಗೆ 7 ವಿಕೆಟ್ ಕಳೆದುಕೊಳ್ಳು ವಂತೆ ಮಾಡಿದರು. ನಾಯಕ ಜೋ ರೂಟ್ (33)ವಿಕೆಟನ್ನು ಉರುಳಿಸಿದ ಬುಮ್ರಾ ಭಾರತದ ಗೆಲುವಿನ ಆಸೆ ಹೆಚ್ಚಿಸಿದರು.
ಟೀ ವಿರಾಮಕ್ಕೆ ಮೊದಲು ಹಸೀಬ್ ಹಮೀದ್ (9)ಹಾಗೂ ಜಾನಿ ಬೈರ್ ಸ್ಟೋವ್ (2)ವಿಕೆಟನ್ನು ಉರುಳಿಸಿದ ಇಶಾಂತ್ ಶರ್ಮಾ ಇಂಗ್ಲೆಂಡಿಗೆ ಹಿನ್ನಡೆ ಉಂಟು ಮಾಡಿದರು.
ಇದಕ್ಕೂ ಮೊದಲು ಭಾರತವು 298/8ಕ್ಕೆ 2ನೇ ಇನಿಂಗ್ಸ್ ಡಿಕ್ಲೇರ್ ಮಾಡಿ 271 ರನ್ ಮುನ್ನಡೆ ಪಡೆಯಿತು. ಇಂಗ್ಲೆಂಡ್ ಗೆ ಕಠಿಣ ಸವಾಲು ಒಡ್ಡಿತು.