Sunday, 15th December 2024

ಅನ್ನನಾಳದಲ್ಲಿ ರಂಧ್ರ ಉಂಟಾಗಿ ರಕ್ತಸ್ರಾವವಾಗುತ್ತಿದ್ದ ನಾಲ್ಕು ವರ್ಷದ ಬಾಲಕಿಗೆ ಯಶಸ್ವಿ ಸಂಕೀರ್ಣ ಚಿಕಿತ್ಸೆ

ಬೆಂಗಳೂರು: ಪೋರ್ಟಲ್ ಸಿರೆ ಥ್ರಂಬೋಸಿಸ್ (PVT) ಸಮಸ್ಯೆಯಿಂದ ಅನ್ನನಾಳದಲ್ಲಿ ರಂಧ್ರ ಉಂಟಾಗಿ ರಕ್ತಸ್ರಾವವಾಗುತ್ತಿದ್ದ ನಾಲ್ಕು ವರ್ಷದ ಬಾಲಕಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯ ಶಿಶುವೈದ್ಯ ಡಾ.ಯೋಗೇಶ್ ಕುಮಾರ್ ಗುಪ್ತಾ ಮತ್ತು ಅವರ ತಂಡ ಅಪರೂಪದ ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ, ಈ ಕುರಿತು ಮಾತನಾಡಿ ಡಾ. ಯೋಗೇಶ್‌ ಕುಮಾರ್‌ ಗುಪ್ತಾ, ಯಕೃತ್‌ ಕಾಯಿಲೆಯಿಂಧ ಉಂಟಾಗುವ ಪೋರ್ಟಲ್‌ ಸಿರೆ ಥ್ರಂಬೋಸಿಸ್‌ ರಕ್ತವನ್ನು ಸಾಗಿಸುವ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಅನ್ನನಾಳದಲ್ಲಿ ರಂಧ್ರವೇರ್ಪಟ್ಟು ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ. ನಾಲ್ಕು ವರ್ಷದ ಬಾಲಕಿಯೂ ಸಹ ಕಳೆದ ೩ ತಿಂಗಳಿನಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಆಹಾರ ಸೇವನೆಯೂ ಸಾಧ್ಯವಾಗದೇ ಅಪೌಷ್ಠಿಕತೆಯಿಂದ ಬಳಲುತ್ತಿದ್ದಳು. ಕೆಲವೇ ತಿಂಗಳಲ್ಲಿ ಆ ಬಾಲಕಿ ಸಂಪೂರ್ಣ ಕುಸಿದು, ಸಾವು ಬದುಕಿನ ನಡುವೆ ಹೋರಾಡುವ ಸ್ಥಿತಿಗೆ ತಲುಪಿದ್ದಳು.

ಈ ಮೊದಲು ಸಹ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ರಕ್ತಸ್ತ್ರಾವ ಹೀಗೇ ಮುಂದುವರೆದಿದ್ದರೆ ಆ ಬಾಲಕಿ ಬದುಕಲು ಸಾಧ್ಯವಿರಲಿಲ್ಲ. ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿದ್ದರಿಂದ ಆ ಮಗುವು ಗುಣವಾಗು ವಂತಾಯಿತು. ಅನ್ನನಾಳದಿಂದ ಉಂಟಾದ ರಕ್ತಸ್ತ್ರಾವದಿಂದ ಸಾಕಷ್ಟು ಸೋಂಕಿಗೂ ಮಗು ಒಳಗಾಗಿತ್ತು, ಪ್ರತಿಯೊಂದಕ್ಕೂ ಅತಿ ಜಾಗರೂಕತೆಯಿಂದ ಚಿಕಿತ್ಸೆ ನೀಡಲಾಗಿದೆ. ಪ್ರಾರಂಭದಲ್ಲಿ ಅನ್ನನಾಳದ ರಂಧ್ರ ಮುಚ್ಚುವುದೇ ಸಾಲಿನ ಕೆಲಸವಾಗಿತ್ತು, ಸಣ್ಣ ವಯಸ್ಸಿನ ಮಗು ಆಗಿದ್ದರಿಂದ ಅತಿ ಹೆಚ್ಚು ಜಾಗರೂಕತೆಯಿಂದ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಪ್ರಸ್ತುತ ಬಾಲಕಿಯ ರಂಧ್ರ ಮುಚ್ಚಲಾಗಿದ್ದು, ರಕ್ತಸ್ತ್ರಾವವೂ ಸಂಪೂರ್ಣವಾಗಿ ನಿಂತಿದೆ. ಆ ಬಾಲಕಿಯು ಆಹಾರ ಸೇವನೆ ಮಾಡಲು ಪ್ರಾರಂಭಿಸಿದ್ದಾರೆ ಎಂದು ವಿವರಣೆ ನೀಡಿದರು.

ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಾಲ್ಕು ವರ್ಷದ ಮಗುವಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನಮ್ಮ ಆಸ್ಪತ್ರೆ ವೈದ್ಯರ ತಂಡ ಮತ್ತೊಮ್ಮೆ ತಮ್ಮ ಸಾಮರ್ಥ್ಯ ವನ್ನು ಪ್ರದರ್ಶಿಸಿದ್ದಾರೆ. ಫೋರ್ಟಿಸ್‌ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಚಿಕಿತ್ಸಾ ವಿಧಾನಗಳು ಇರುವ ಕಾರಣ ಯಾವುದೇ ಸವಾಲಿನ ಪ್ರಕರಣವಾದರೂ ನಮ್ಮ ವೈದ್ಯರು ಯಶಸ್ವಿಯಾಗುತ್ತಾರೆ ಎಂದು ಹೇಳಿದರು.