ಸ್ತನಗಳು ಫಿಟ್ ಆಗಿ ನಿಲ್ಲಲು ಮಹಿಳೆಯರು ಬ್ರಾ ಧರಿಸುತ್ತಾರೆ. ಕೆಲವರು ಬ್ರಾ (Bra Tips) ಧರಿಸದೆ ಮನೆಯಿಂದ ಹೊರಗೆ ಹೋಗುವುದೇ ಇಲ್ಲ. ಆದರೆ ಕೆಲವರಿಗೆ ಬ್ರಾ ಧರಿಸುವುದೆಂದರೆ ಕಿರಿಕಿರಿ! ಬ್ರಾ ಧರಿಸುವುದರಿಂದ ಕೆಲವರಿಗೆ ಎದೆ ಕಟ್ಟಿದ ಅನುಭವ. ಹಾಗಾಗಿ ಬ್ರಾ ಧರಿಸುವುದಿಲ್ಲ. ಆದರೆ ಕೆಲವರು ಬ್ರಾ ಧರಿಸದಿದ್ದರೆ ಕಂಫರ್ಟ್ ಆಗಿರುವುದಿಲ್ಲ ಎನ್ನುತ್ತಾರೆ. ಹಾಗಾದ್ರೆ ಬ್ರಾ ಧರಿಸದಿರುವುದು ಸ್ತನಗಳಿಗೆ ಕೆಟ್ಟದ್ದೇ? ಇದರಿಂದ ಸಮಸ್ಯೆಗಳು ಕಾಡುತ್ತದೆಯೇ? ಹೀಗೆ ಹಲವಾರು ಪ್ರಶ್ನೆಗಳು ಹಲವರ ಮನಸ್ಸಿನಲ್ಲಿ ಮೂಡುತ್ತವೆ. ಹಾಗಾದ್ರೆ ಬ್ರಾ ಧರಿಸದಿದ್ದಾಗ ಏನಾಗುತ್ತದೆ? ಇದಕ್ಕೆ ತಜ್ಞರ ಉತ್ತರ ಏನು ಎಂಬುದನ್ನು ತಿಳಿಯೋಣ.
ಬ್ರಾ ಧರಿಸದೆ ಇರುವುದರಿಂದ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಬ್ರಾ ಹಾಕದಿದ್ದರೆ ಸ್ತನಗಳ ಚರ್ಮವು ಜೋತುಬೀಳಲು ಶುರುವಾಗಬಹುದು. ಬ್ರಾ ಮಹಿಳೆಯರ ಸ್ತನವನ್ನು ಜೋತು ಬೀಳದಂತೆ ಕಾಪಾಡುತ್ತದೆ. ಆದರೆ ಬ್ರಾ ಧರಿಸದಿದ್ದರೆ ಕೆಲವೊಂದು ಪ್ರಯೋಜನಗಳೂ ಇವೆ. ಇದು ದೇಹದಲ್ಲಿನ ರಕ್ತಪರಿಚಲನೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ . ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಎನ್ನುವುದು ಕೆಲವು ತಜ್ಞರ ಅಭಿಮತ.
ಆದರೆ ಬ್ರಾ ಧರಿಸದಿದ್ದರೆ ಸ್ತನದ ಗಾತ್ರ ಹೆಚ್ಚಾಗಬಹುದು ಮತ್ತು ಇದರಿಂದ ಚರ್ಮ ಜೋತುಬೀಳಬಹುದು ಎಂದು ಕೆಲವು ತಜ್ಷರು ಎಚ್ಚರಿಸುತ್ತಾರೆ. ಬ್ರಾ ಸ್ತನಗಳ ಗಾತ್ರವನ್ನು ಕುಗ್ಗಿಸುತ್ತದೆ ಎಂಬ ಅಭಿಪ್ರಾಯವೂ ಇದೆ. ಹಾಗಾಗಿ ಸ್ತನಗಳ ಗಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುವಂತಹ ಬ್ರಾ ಧರಿಸಬೇಕು. ಕೆಲವರು ಪಕ್ಕೆಲುಬುಗಳು, ಕುತ್ತಿಗೆ, ಬೆನ್ನು ಅಥವಾ ಭುಜದ ನೋವನ್ನು ಅನುಭವಿಸುತ್ತಿದ್ದರೆ, ಇವೆಲ್ಲದಕ್ಕೂ ಬ್ರಾ ಕೂಡ ಕಾರಣವಾಗಿರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ದಿನದಲ್ಲಿ ಎಷ್ಟು ಹೊತ್ತು ಬ್ರಾ ಧರಿಸಬೇಕು?
ದೊಡ್ಡ ಸ್ತನಗಳನ್ನು ಹೊಂದಿರುವವರು ಸ್ತನಗಳಿಗೆ ಸರಿಹೊಂದುವಂತಹ ಬ್ರಾವನ್ನು ಧರಿಸಲೇ ಬೇಕು. ಇಂಥವರು ದಿನವಿಡೀ ಬ್ರಾ ಧರಿಸಬೇಕಾಗುತ್ತದೆ. ಯಾಕೆಂದರೆ ಇಲ್ಲವಾದರೆ ಸ್ತನದ ಭಾರಕ್ಕೆ ನೋವಾಗಬಹುದು. ಇದು ಸ್ನಾಯು ಅಂಗಾಂಶದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಂತ ಇಂಥವರು ಬಿಗಿಯಾದ ಬ್ರಾಗಳನ್ನು ಧರಿಸಬಾರದು. ಇದರಿಂದ ಅನೇಕ ದೈಹಿಕ ಸಮಸ್ಯೆಗಳು ಎದುರಾಗಬಹುದು.
ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆ ಬಳಸಿ ಚರ್ಮ, ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ
ಹಾಗೆಯೇ, ಸ್ತನದ ಗಾತ್ರ ಚಿಕ್ಕದಾಗಿರುವವರು ಅಗತ್ಯವಿರುವಂತಹ ಸಂದರ್ಭಗಳಲ್ಲಿ ಮಾತ್ರ ಬ್ರಾ ಧರಿಸಬಹುದು. ದಿನವಿಡೀ ಧರಿಸುವ ಅಗತ್ಯವಿಲ್ಲ. ಯಾಕೆಂದರೆ ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಸ್ತನಗಳು ದೊಡ್ಡದಿರಲಿ, ಚಿಕ್ಕದಿರಲಿ, ರಾತ್ರಿಯ ವೇಳೆ ಯಾರೂ ಬ್ರಾ ಧರಿಸದಿರುವುದು ಸೂಕ್ತ. ರಾತ್ರಿ ಮಲಗುವಾಗಲೂ ಬ್ರಾ ಧರಿಸಿದರೆ ಇದರಿಂದ ಸ್ತನಗಳ ಬಳಿ ರಕ್ತಪರಿಚಲನೆಗೆ ಅಡ್ಡಿಯಾಗಬಹುದು. ಆರೋಗ್ಯ ಸಮಸ್ಯೆ ಕಾಡಬಹುದು ಎನ್ನುವುದು ತಜ್ಞ ವೈದ್ಯರ ಸಲಹೆ.