ಮೈಸೂರು: ಮೈಸೂರು ಚೆನ್ನೈ ಪ್ರಯಾಣಿಕರಿಗೆ ಸಂತಸದ ಸುದ್ದಿ ಹೊರಬಿದ್ದಿದೆ. ಬಹುನಿರೀಕ್ಷಿತ ಮೈಸೂರು ಚೆನ್ನೈ ಬುಲೆಟ್ ಟ್ರೈನ್ ಹಳಿ ನಿರ್ಮಾಣ ಕಾರ್ಯಕ್ಕೆ ಶೀರ್ಘದಲ್ಲೇ ಸರ್ವೆ ಕಾರ್ಯ ನಡೆಯಲಿದೆ.
ರೈಲ್ವೆ ಇಲಾಖೆ ಚೆನ್ನೈ ಮೈಸೂರು ಮಾರ್ಗದಲ್ಲಿ ಬಹುನಿರೀಕ್ಷಿತ ಹೈಸ್ಪೀಡ್ ರೈಲು ಕಾರಿಡಾರ್‌ನ್ನು ನಿರ್ಮಿಸುವ ಸಿದ್ಧತೆಗಳನ್ನು ನಡೆಸಿದೆ. ಹೀಗಾಗಿ, ಮೈಸೂರು-ಚೆನ್ನೈ ನಡುವಿನ ಬುಲೆಟ್ ಟ್ರೈನ್ ಮಾರ್ಗ ನಿರ್ಮಾಣಕ್ಕಾಗಿ ಶೀಘ್ರದಲ್ಲೇ ವೈಮಾನಿಕ ಸಮೀಕ್ಷೆ ನಡೆಯಲಿದೆ. ಬಳಿಕ ಸಂಪೂರ್ಣ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಲಾಗುತ್ತದೆ.
ಹೈಸ್ಪೀಡ್ ರೈಲುಗಳು ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸಬಲ್ಲವು. ಸೆಮಿ ಹೈಸ್ಪೀಡ್ ರೈಲು ಮಾರ್ಗದಲ್ಲಿ ಗರಿಷ್ಠ 160 ಕಿ.ಮೀ ವರೆಗೆ ಸಂಚರಿಸಬಲ್ಲವು. ಶೀಘ್ರದಲ್ಲೇ ಮೈಸೂರು – ಚೆನ್ನೈ ಬುಲೆಟ್ ಟ್ರೈನ್ ಹಳಿ ನಿರ್ಮಾಣ ಕಾರ್ಯದ ಸಮೀಕ್ಷೆ ಕೂಡ ನಡೆಯಲಿದೆ.
ಮೈಸೂರು-ಬೆಂಗಳೂರು-ಚೆನ್ನೈ ಹೈಸ್ಪೀಡ್ ಬುಲೆಟ್ ಟ್ರೈನ್ ಯೋಜನೆ ದೇಶದ ಪ್ರಮುಖ ಏಳು ಪ್ರಮುಖ ಹೈಸ್ಪೀಡ್ ಯೋಜನೆಯಲ್ಲಿ ದಕ್ಷಿಣ ಭಾರತದ ಏಕೈಕ ಯೋಜನೆಯಾಗಿದೆ. ಈಗ ಮೈಸೂರಿನಿಂದ ಚೆನ್ನೈಗೆ ಸುಮಾರು 10 ರಿಂದ 11 ಗಂಟೆಯವರೆಗೆ ಪ್ರಯಾಣಿಸಬೇಕಿದೆ. ಒಂದು ವೇಳೆ ಬುಲೆಟ್ ಟ್ರೈನ್ ಸಂಚರಿಸಿದಲ್ಲಿ ಈ ಅವಧಿಯಲ್ಲಿ 7 ಗಂಟೆಗಳ ಉಳಿತಾಯವಾಗಲಿದೆ.
ಇದರಿಂದಾಗಿ, ಮೈಸೂರು, ಬೆಂಗಳೂರು ಹಾಗೂ ಚೆನ್ನೈ ನಡುವೆ ಸಂಚರಿಸುವವರಿಗೆ ಇದರಿಂದ ಪ್ರಯೋಜನವಾಗಲಿದೆ. ಮಾತ್ರವಲ್ಲದೆ ಉದ್ಯಮದ ಬೆಳವಣಿ ಗೆಗೂ ಸಾಕಷ್ಟು ಪ್ರಯೋಜನವಾಗಲಿದೆ. ವಿಮಾನ ನಿಲ್ದಾಣಕ್ಕೆ ತೆರಳುವುದು, ಅಲ್ಲಿನ ಪರಿಶೀಲನೆ ಹಾಗೂ ಇನ್ನಿತರ ಪ್ರಕ್ರಿಯೆಗಳನ್ನು ಮುಗಿಸುವ ವೇಳೆಗೆ ರೈಲಿ ನಲ್ಲಿ ಚೆನ್ನೈ ಹಾಗೂ ಮೈಸೂರು ನಡುವೆ ಸಂಚರಿಸಬಹುದಾಗಿದೆ.
ಹೈಸ್ಪೀಡ್ ಬುಲೆಟ್ ಟ್ರೈನ್‌ನ ಮತ್ತೊಂದು ವಿಶೇಷತೆ ಎಂದರೆ ಭೂಕಂಪದ ಮುನ್ಸೂಚನೆ ನೀಡುವ ತಂತ್ರಜ್ಞಾನ ಅಳವಡಿಸಿದೆ. ಚಲಿಸಲಿರುವ ಮಾರ್ಗದಲ್ಲಿ ಒಂದು ವೇಳೆ ಭೂಕಂಪಿಸುವ ಸಂಭವ ಇದ್ದಲ್ಲಿ ಮುಂಚಿತವಾಗಿ ಎಚ್ಚರಿಕೆ ಸಂದೇಶ ರವಾನಿಸುವುದರೊಂದಿಗೆ ಅಲರಾಂ ಮೊಳಗಲಿದೆ.
ಈ ರೈಲು ನಿಲುಗಡೆಯಾಗಲಿರುವ ತಾಣಗಳೆಂದರೆ ಮೈಸೂರು, ಮಂಡ್ಯ, ಚೆನ್ನಪಟ್ಟಣ, ಬೆಂಗಳೂರು, ಬಂಗಾರಪೇಟೆ, ಚಿತ್ತೂರು, ಅರಕೊಣಮ್, ಪೊನ್ನಮಲೈ, ಚೆನ್ನೈ.