ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಮೊದಲೇ ಸಂಪುಟ ವಿಸ್ತರಣೆಯ ಸಿಹಿ ದೊರೆಯಲಿದ್ದು, ಏಳು ಶಾಸಕರನ್ನು ಸಚಿವರು ಜ.13 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿಯ ನಂತರ ನಗರಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಈ ಕುರಿತು ಮಾಹಿತಿ ನೀಡಿದ್ದು, ಏಳು ಶಾಸಕರನ್ನು ಮಂತ್ರಿಗಳನ್ನಾಗಿ ಮಾಡುವ ಸಂಬಂಧ ಹೈಕಮಾಂಡ್ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಸಂಕ್ರಾತಿ ಹಬ್ಬದ ಹಿಂದಿನ ದಿನ ಅಂದರೆ, ಜ.13ರ ಮಧ್ಯಾಹ್ನದ ವೇಳೆಗೆ ಅವರೆಲ್ಲರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದಿದ್ದಾರೆ.
ಯಾರ್ಯಾರಿಗೆ ಸ್ಥಾನ?: ಸಿಎಂ ನೀಡಿದ ಮಾಹಿತಿಯ ಅನ್ವಯ ಕೆಲವು ಬದಲಾವಣೆ ಹೊರತುಪಡಿಸಿ ಉಳಿದೆಲ್ಲ ಅವರ ನಿರೀಕ್ಷೆ ಯಂತೆ ನಡೆಯಲಿದೆ. ವಲಸಿಗರ ಪೈಕಿ ಎಂಟಿಬಿ ನಾಗರಾಜ್, ಆರ್.ಶಂಕರ್, ಎಚ್. ವಿಶ್ವನಾಥ್ ಮತ್ತು ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಬೇಕು. ಆದರೆ, ವಿಶ್ವನಾಥ್ ಅವರ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಕಾನೂನು ತೊಡಕಿದ್ದು, ಅವರನ್ನು ಉಳಿದು ಮೂವರು ಸಚಿವರಾಗುವುದು ಖಚಿತ ಎನ್ನಲಾಗುತ್ತಿದೆ. ಮೂಲ ಬಿಜೆಪಿಗರ ಪೈಕಿ ನಾಲ್ವರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ.
ಸಂಭವನೀಯ ಪಟ್ಟಿ
ಎಂಟಿಬಿ ನಾಗರಾಜ್
ಆರ್.ಶಂಕರ್
ಮುನಿರತ್ನ
ಅರವಿಂದ ಲಿಂಬಾವಳಿ
ಮುರುಗೇಶ್ ನಿರಾಣಿ
ಉಮೇಶ್ ಕತ್ತಿ
ಸಿ.ಪಿ. ಯೋಗೀಶ್ವರ್
ಕೊನೆಯ ಕ್ಷಣದ ಬದಲಾವಣೆ
ಬಸವರಾಜ್ ಯತ್ನಾಳ್
ಜೆ.ಪಿ.ನಡ್ಡಾ ಕರೆ: ದೆಹಲಿಯಲ್ಲಿ ಗೃಹಸಚಿವ ಅಮಿತ್ ಶಾ ಭೇಟಿಯ ನಂತರ ಸಿಎಂ ಬೆಂಗಳೂರು ವಿಮಾನ ಏರಿದ್ದರು.
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆಗೆ ಸಮಾಲೋಚನೆ ನಡೆಸಿದ ಅಮಿತ್ ಶಾ ಸಿಎಂ ನೀಡಿದ ಪಟ್ಟಿಗೆ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೆ.ಪಿ.ನಡ್ಡಾ ಸಿಎಂ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಸಂಪುಟ ವಿಸ್ತರಣೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸಿಎಂ ಸಂಪುಟ ವಿಸ್ತರಣೆಯ ಘೋಷಣೆ ಮಾಡಿದ್ದಾರೆ.