Sunday, 15th December 2024

ಕಳ್ಳನಿಗೆ ಸರಿಯಾಗಿ ಬುದ್ದಿ ಕಲಿಸಿದ ಕಾವೇರಿ

ಸುಧಕ್ಕನ ಕಥೆಗಳು
ಸುಧಾಮೂರ್ತಿ

ಪಟ್ಟಣದಲ್ಲಿ ಬೆಳೆದ ಮಕ್ಕಳಿಗೆ ಹಳ್ಳಿಯ ಜೀವನ ಚೆನ್ನ ಅನಿಸಿದರೂ ಅವರಿಗೆ ಕೃಷಿಯ ಬಗ್ಗೆ ಏನೂ ಗೊತ್ತಿರಲಿಲ್ಲ.  ಅನುಷ್ಕಾ ಳಂತೂ ‘‘ಅಜ್ಜಿ ನಮ್ಮ ಮನೆಯ ಮುಂದೆ ಮಾವಿನ ಇದೆಯಲ್ಲಾ, ಅದೇ ಥರ ಅಕ್ಕಿಯ ಮರವು ಇರುವುದಾ?  ಗೋದಿಯೂ ಹಾಗೆ ಬರುವುದೇ? ಎಂದಾಗ ಎಲ್ಲರೂ ನಕ್ಕರು.

ಉಳಿದವರೆಲ್ಲಾ ಅವಳಿಗಿಂತ ದೊಡ್ಡವರು. ಅದಲ್ಲದೇ ಇದಕ್ಕೂ ಮೊದಲು ಅಜ್ಜಿ ಅವರಿಗೆ ಹೊಲ, ತೋಟ, ಗದ್ದೆಗಳಿಗೆ ಕರೆದು ಕೊಂಡು ಹೋಗಿದ್ದಳು. ಅಜ್ಜ ಅವರೊಡನೆ ಕೂತುಕೊಂಡು ನಗುತ್ತಿದ್ದರು. ಮಕ್ಕಳೇ ರೈತನ ಕಷ್ಟ ತಿಳಿಯಬೇಕಾದರೆ ನೀವು ಒಂದು ಸಲ ಉತ್ತಿ, ಬಿತ್ತಿ, ಬೆಳೆ ಬೆಳೆದು ನೋಡಬೇಕು.ಅದಲ್ಲದೇ ಒಂದು ಬಾರಿ ಸುಗ್ಗೀನೂ ಮಾಡಬೇಕು. ‘‘ಅಜ್ಜ ಉತ್ತೋದು ಅಂದ್ರೇನು? ಎಂದಳು ಕೃಷ್ಣಾ. ರೈತರ ಶಬ್ದಕೋಶವೇ ಬೇರೆ. ರೈತನಿಲ್ಲದೆ ನಿಮಗೆ ಬೆಳೆಯಿಲ್ಲಂದ ರಘು. ‘‘ಸರಿ ಇವತ್ತು ನಾನು ಕಾವೇರಿ ಕಥೆ ಹೇಳ್ತೀನಿ. ಅದರಲ್ಲಿ ಎಲ್ಲ ಬರ‌್ತದೆ ಎಂದಳು ಅಜ್ಜಿ. ಬನ್ನಿ ನಾವೆಲ್ಲರೂ ಈಗ ಕಾವೇರಿಯ ಮನೆಗೆ ಹೋಗೋಣ.
*****
ಊರ ಆಚೆ ಇತ್ತು ಕಾವೇರಿಯ ತುಂಡು ಹೊಲ. ಹೊಲ ದೇವಸ್ಥಾನಕ್ಕೆ ಹೊಂದಿಕೊಂಡಿತ್ತು. ಗ್ರಾಮದೇವತೆ ತುಂಬ ಪ್ರಸಿದ್ಧಳು. ಅನೇಕ ಭಕ್ತಾದಿಗಳು ಬರುತ್ತಿದ್ದರು. ಹೊಲದ ಅಂಚಿನಲ್ಲಿ ಕಾವೇರಿಯ ಮುರುಕು ಮನೆ. ಮನೆಯಲ್ಲಿ ಗಂಡ ಹೆಂಡಿರು ಇಬ್ಬರೇ. ಕಾವೇರಿಯ ಗಂಡ ಸೋಮು ಮಹಾಸೋಮಾರಿ. ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಸದಾ ಮಲಗಿಯೇ ಇರೋದು ಅವನ
ಅಭ್ಯಾಸ. ಅಕಸ್ಮಾತ್ ಎದ್ದರೆ ಊಟ ತಿಂಡಿ ಮುಗಿಸಿ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಹಾಳು ಹರಟೆ ಹೊಡೆಯುತ್ತಿದ್ದ.

ಕಾವೇರಿಯ ಮಾತು ಸೋಮು ಎಂದೂ ಕೇಳಲಿಲ್ಲ. ಸಾಕಾಗಿ ಕಾವೇರಿ ಒಬ್ಬಳೇ ಬೆಳಗಿನಿಂದ ರಾತ್ರಿಯವರೆಗೂ ಒಂದೇ ಸಮನೆ ದುಡಿಯುತ್ತಿದ್ದಳು. ಬದುಕು ಅದರಲ್ಲಿ ಸಾಗುತ್ತಿತ್ತು. ನೆಲಗಟ್ಟಿಯಾಗಿತ್ತು. ಅದನ್ನು ಉತ್ತಬೇಕಿತ್ತು. ಮಣ್ಣನ್ನು ನೆಲದಿಂದ ಕಿತ್ತಿ ಮೇಲೆ ಹಾಕಿ ಹೊಸ ಮಣ್ಣು ಸಡಿಲ ಮಾಡುವುದೇ ಉತ್ತುವುದು. ಉತ್ತಿದ ಮೇಲೆ ಬಿತ್ತಿದರೆ ಬೀಜ ಮೊಳಕೆ ಒಡೆದು ಚೆನ್ನಾಗಿ ಬೆಳೆಯುತ್ತದೆ. ಪಾಪ ಕಾವೇರಿ ಏನು ಮಾಡಿಯಾಳು? ಒಂದು ದಿನ ಹೊಲದಲ್ಲಿ ಕಲ್ಲು ಆರಿಸುವಾಗ ಒಬ್ಬ ಆಗಂತುಕ ಅವಳ ಹತ್ತಿರ ಬಂದ. ಭರ್ಜರಿ ಮೀಸೆ, ನೀಳವಾದ ತೆಳುಕಾಯ, ಚೂಪಾದ ಕಣ್ಣು, ಇವನನ್ನು ಇದಕ್ಕೂ ಮೊದಲು ನೋಡಿದ ನೆನಪು ಕಾವೇರಿಗೆ ಆಗಲೇ ಇಲ್ಲ. ಆತ ವಿನಯದಿಂದ ‘‘ತಂಗಿ, ನೀನ್ಯಾಕೆ ಈ ಹೊಲ ಉತ್ತುತ್ತೀಯಾ? ಕಲ್ಲು ನೆಲ ಇದು. ಸುಮ್ಮನೆ ಮಾರಿ ಬಿಡು. ಈ ತುಂಡು ನೆಲದಿಂದ ನಿನಗೆ ಏನೂ ಲಾಭ ಬರೋದಿಲ್ಲ. ನಾನು ಸಾವಿರ ರು. ಕೊಡ್ತೀನಿ ಎಂದ. ಕಾವೇರಿ ಇನ್ನೊಮ್ಮೆ ಆತನನ್ನು ನೋಡಿದಳು. ಏನೋ ಮೋಸ ಇದೆ ಅನಿಸಿ, ‘‘ಇಲ್ಲ ನಾನು ಮಾರೋದಿಲ್ಲ’’ ಎಂದಳು.

ಬಂದವನು ಮತ್ತೆ ಚೌಕಾಸಿಮಾಡಿ ಬೆಲೆ ಏರಿಸುತ್ತಲೇ ಹೊರಟ. ಈಗ ಆತ ಕೊನೆಗೆ ಐದು ಸಾವಿರ ರು. ಎಂದ. ಬಂದವನು ಹೆಸರಾಂತ ಕಳ್ಳ. ಅವನಿಗೆ ಈ ಹೊಲ ಕೊಂಡು ರಾತ್ರಿಯಲ್ಲಿ ಸುರಂಗ ಕೆಲಸಮಾಡಿ ದೇವಸ್ಥಾನದ ಒಳಗೆ ಹೋಗಿ ದೇವರ ಒಡವೆ ಕೊಳ್ಳುವುದು ಎಂದು ಯೋಜನೆ ಮಾಡಿಕೊಂಡಿದ್ದ. ದೇವತೆಯ ಮೇಲೆ ಬೇಕಾದಷ್ಟು ಬೆಲೆ ಬಾಳುವ ಒಡವೆಗಳಿದ್ದವು. ಕಾವೇರಿಗೆ ಇದ್ಯಾವುದೂ ಗೊತ್ತಿಲ್ಲ. ಆದರೆ ಏನೋ ಮೋಸವಿದೆ ಎನ್ನುವುದು ತಿಳಿಯಿತು. ‘‘ ನಾನು ಈ ಜಮೀನು ಯಾವ ಹಣಕ್ಕೂ ಮಾರೋದಿಲ್ಲ. ನಮ್ಮ ಹಿರಿಯರು ಚೆನ್ನಾಗಿ ಬಾಳಿ ಬದುಕಿದವರು. ನಾವು ಈಗ ಬಡತನದಲ್ಲಿ ಇದ್ದೇವೆ. ಆದರೆ ನಮ್ಮ ಮನೇಲಿ ಹಿರಿಯರು ಹೇಳ್ತಾ ಬಂದಿದ್ದಾರೆ. ಕಷ್ಟಕಾಲಕ್ಕೆ ಇರಲಿ ಅಂತಾ ಚಿನ್ನಾನ ಹುಗಿದು ಇಟ್ಟಿದ್ದಾರಂತೆ. ಆದರೆ ಎಲ್ಲಿ ಗೊತ್ತಿಲ್ಲ.
ಎಲ್ಲಿಯೋ ಈ ಹೊಲದಲ್ಲಿ ಇದೆ. ಅದಕ್ಕೆ ಮಾರೋದಿಲ್ಲ ಎಂದಳು.

ಕಾವೇರಿಯ ಈ ಮಾತು ಕೇಳಿ ಕಳ್ಳ ಖುಷಿಯಾದ. ಎಂಥಾ ಮೂರ್ಖ ಹೆಂಗಸು ಇವಳು. ನೆಲದಲ್ಲಿ ಇರುವ ನಿಧಿ ಬಗ್ಗೆ ಹೇಳಿಬಿಟ್ಟಳು. ಇವಳನ್ನು ಸುಲಭವಾಗಿ ಮೋಸಮಾಡಬಹುದು ಎಂದುಕೊಂಡ. ‘‘ಆಗಲಿ ತಂಗಿ ನಿಮ್ಮ ಹೊಲ ನಿಮಗೆ ಇರಲಿ ಎಂದು ಹೇಳಿ ಹೊರಟ. ಊರಿನಲ್ಲಿ ಇರುವ ಇನ್ನೊಂದು ದೇವಸ್ಥಾನದಲ್ಲಿ ಉಳಿದ. ಕಾವೇರಿ ನಸು ನಕ್ಕಳು. ಕತ್ತಲಾದ ಮೇಲೆ ಕಾವೇರಿಗೆ ‘‘ಖಣ್’’ ‘‘ಖಣ್’’ ಎನ್ನುವ ಸಪ್ಪಳ ಕೇಳಿಸಿತು. ಅವಳಿಗೆ ತನ್ನ ಹೊಲವನ್ನು ಯಾರೋ ಉತ್ತುತ್ತಿದ್ದಾರೆಂದು ಗೊತ್ತೂ ಆಯಿತು.

ಅವಳು ಹೊರಗೆ ಹೋಗದೆ ನಿಶ್ಚಿಂತೆಯಿಂದ ಮಲಗಿದಳು. ಅವಳ ಊಹೆ ಸರಿಯಾಗಿತ್ತು. ಕಳ್ಳ ರಾತ್ರಿ ಬಂದು ಇಡೀ ಹೊಲವನ್ನು ಉತ್ತುತ್ತಿದ್ದ. ಎಲ್ಲಿಯಾದರೂ ನಿಧಿ ಕಾಣಿಸುವುದೋ ಎಂದು ಹುಡುಕುತ್ತಿದ್ದ. ಬೆಳಿಗ್ಗೆ ಕಾವೇರಿ ಏಳುವ ಹೊತ್ತಿಗಾಗಲೇ ಕಳ್ಳನಿಗೆ ಈ ಹೊಲದಲ್ಲಿ ಯಾವ ನಿಧಿಯೂ ಇಲ್ಲ ಎಂದು ಗೊತ್ತಾಗಿ ನಿರಾಶೆಯಿಂದ, ಕೋಪದಿಂದ ಹೊರಟುಹೋದ.  ಯಾವ ತೊಂದರೆ ಯಿಲ್ಲದೆ ಕಾವೇರಿಯ ಉತ್ತುವ ಕೆಲಸ ಮುಗಿದಿತ್ತು. ಕಾವೇರಿ ಸಂತೋಷದಿಂದ ಬೀಜ ಹಾಕಿದಳು. ಕೆಲ ತಿಂಗಳು ಕಳೆದವು. ಮಳೆ ಚೆನ್ನಾಗಿ ಆಯಿತು. ಬೆಳೆ ಚೆನ್ನಾಗಿ ಬಂದಿತು. ಈಗ ಸುಗ್ಗಿಯ ವೇಳೆ, ಕಾಳನ್ನು ಬಿಡಿಸಿ, ಸ್ವಚ್ಛಮಾಡಿ ಚೀಲಕ್ಕೆ ತುಂಬುವುದೇ ಸುಗ್ಗಿ. ಕಳ್ಳ ಈ ಬಾರಿ ಬೇರೆ ವೇಷದಲ್ಲಿ ಮತ್ತೆ ಬಂದ. ಕಾವೇರಿಯ ಮನೆಯಲ್ಲಿ ಜೋಡಿಸಿದ ಭತ್ತದ ಚೀಲ ನೋಡಿ ಬಹಳ ಅಸೂಯೆಪಟ್ಟ.

ಸಂತೋಷದಿಂದ ಇರುವ ಆಲಸಿ ಸೋಮುವನ್ನು ನೋಡಿ ‘‘ಅಣ್ಣ, ನಾನು ಪ್ರಾಮಾಣಿಕ ಈ ಹೊತ್ತು ರಾತ್ರಿ ಇಲ್ಲಿ ಇರಲೇ ಎಂದ. ಹಿಂದೆ ಮುಂದೆ ನೋಡದೆ ಸೋಮು ಅವನಿಗೆ ಚಾಪೆ, ದಿಂಬು ಮತ್ತು ಊಟವನ್ನು ಕೊಟ್ಟು ಹೊರಗಿನ ಚಾವಡಿಯಲ್ಲಿ ಇರಲು ಹೇಳಿದ. ಕಳ್ಳನ ಕಿವಿಯ ಹಿಂದೆ ಇರುವ ಕರಿಯ ಮಚ್ಚೆಯನ್ನು ಸೂಕ್ಷ್ಮವಾಗಿ ಕಾವೇರಿ ಗುರುತಿಸಿದ್ದಳು. ಈ ಬಾರಿ ಆತ ವೇಷ ಬದಲಾಯಿಸಿದರೂ ಕಾವೇರಿಗೆ ಬಂದವನು ಹೋದಬಾರಿ ಬಂದ ಮೋಸಗಾರನೆಂದು ಗೊತ್ತಾಯಿತು.

ಈ ಬಾರಿ ಮತ್ಯಾವ ಯೋಜನೆಯೋ ತಿಳಿಯದು ಅಂದುಕೊಂಡಳು. ಕೋಪದಿಂದ ಈ ಬಾರಿ ಭತ್ತದ ಚೀಲಕ್ಕೆ ಬೆಂಕಿ ಇಡಬೇಕೆಂದು ಕೊಂಡಿದ್ದ. ಕಾವೇರಿ ಗಟ್ಟಿಯಾಗಿ ಅಡುಗೆ ಮನೆಯಿಂದ ಸೋಮನನ್ನು ಉದ್ದೇಶಿಸಿ ಹೇಳಿದಳು. ‘‘ ಈ ಹೊತ್ತು ಪಕ್ಕದ ಊರಿನಲ್ಲಿ ಹನುಮಂತನ ದೇವರ ಉತ್ಸವ ಇದೆ. ರಾತ್ರಿ ತೇರು ಎಳಿತಾರಂತೆ. ಈಗ ಹೋಗಿ ನಾಳೆ ಬರೋಣ ಎಂದಳು. ಸೋಮು ಕೂಡಲೇ ಸಿದ್ಧನಾದ. ಈಗ ಕಾವೇರಿ ಗಟ್ಟಿಯಾಗಿ ‘‘ಈ ಚೀಲವನ್ನು ಮುಂಗಡಕೊಟ್ಟವರು ಬಂದು ಒಯ್ತಾರ, ಮುಂಗಡದ ಹಣ.

ಗೋಡೆಯಲ್ಲಿ ಇರುವ ಗೂಡಿನಲ್ಲಿ ಇಟ್ಟು ಮುಚ್ಚಿಬಿಟ್ಟಿದ್ದೇನೆ. ಕಳ್ಳರ ತೊಂದರೆ ನಮ್ಮೂರಲ್ಲಿ ಜಾಸ್ತಿ ಎಂದಳು. ಗಂಡ ಹೆಂಡತಿ ಇಬ್ಬರೂ ಬಂದ ಅತಿಥಿಗೆ ‘‘ಜೋಪಾನ ಬೇಗ ಮಲಗಿಕೊಳ್ಳಿ. ನಾಳೆ ಮಧ್ಯಾಹ್ನ ಒಳಗೆ ಬರ್ತೀವಿ ಎಂದರು. ಕಳ್ಳನಿಗೆ  ಸಂತೋಷ ವಾಯಿತು. ಈ ಚೀಲಗಳಿಗೆ ಬೆಂಕಿಹಚ್ಚಿದರೆ ಏನು ಲಾಭ? ಅದರ ಬದಲು ಮನೆಯ ಗೋಡೆ ಒಡೆದರೆ ಬೇಕಾದಷ್ಟು ಹಣಸಿಗುತ್ತದೆ. ಹೇಗೋ ಇದು ಚಿಕ್ಕ ಹಳೆಯ ಮನೆ. ಒಂದು ಗಂಟೆಯಲ್ಲಿಯೇ ಕೆಲಸವಾಗುವುದು. ಹೇಗಾದರೂ ಅವರು ನಾಳೆ ಬರುತ್ತಾರಲ್ಲ ಅಂದುಕೊಂಡ. ಹಾರೆಯಿಂದ ಮನೆ ಒಡೆಯುತ್ತಾ ಹೋದ. ಹಳೆಯ ಗೋಡೆ ಮನೆ ಕುಸಿದುಬಿದ್ದಿತು. ಆದರೆ ಎಲ್ಲಿಯೂ ಹಣ ಸಿಗಲಿಲ್ಲ. ಕಳ್ಳನ ಕೋಪ ತಾರಕಕ್ಕೇರಿತು. ಅಷ್ಟರಲ್ಲಿ ಅವನಿಗೆ ಕಾವೇರಿ ಮತ್ತು ಊರಿನವರು ಬರುವುದು ಕಾಣಿಸಿತು. ಚೀಲಕ್ಕೆ
ಬೆಂಕಿಹಚ್ಚಲೂ ಸಾಧ್ಯವಾಗದೇ ಓಡಿಹೋದನು. ಕಾವೇರಿ ಪಕ್ಕದೂರಿಗೆ ಹೋಗಿರಲಿಲ್ಲ. ಅದೇ ಊರಿನಲ್ಲಿ ಹನುಮಂತನ ದೇವಸ್ಥಾನಕ್ಕೆ ಹೋಗಿದ್ದಳು. ಬರುವಾಗ ಮುಂಗಡ ಹಣಕೊಟ್ವವರನ್ನು ಕರೆದುಕೊಂಡು ಬಂದಿದ್ದಳ ಮುಂಗಡದ ಹಣ ಅವಳ ಬಳಿಯಲ್ಲಿಯೇ ಇದ್ದಿತು.

ಅನಾಯಸವಾಗಿ ಖರ್ಚಿಲ್ಲದೆ ಮನೆಯನ್ನು ಕಳ್ಳ ಬೀಳಿಸಿದ್ದ. ಫಸಲಿನ ಹಣದಿಂದ ಕಾವೇರಿ ಒಳ್ಳೆಯ ಮನೆಯನ್ನೇ ಕಟ್ಟಿದಳು.
ಒಂದು ವರ್ಷ ಕಳೆಯಿತು. ಕಳ್ಳನ ಕೋಪ ಆರಿರಲಿಲ್ಲ. ಈ ಬಾರಿ ಆತ ಬಳೆಗಾರನ ವೇಷ ಹಾಕಿಕೊಂಡು ಬಳೆಯ ಚೀಲವನ್ನು ಹೊತ್ತು ಕಾವೇರಿಯ ಮನೆಯ ಹತ್ತಿರದ ದೇವಸ್ಥಾನಕ್ಕೆೆ ಬಂದ. ಅವನ ಉದ್ದೇಶ ಈ ಬಾರಿ ಕಾವೇರಿ ಹೇಗೆ ಇದ್ದಾಳೆ ನೋಡಬೇಕೆ ನಿಸಿತ್ತು. ಕಾವೇರಿ ಕೂಡಲೇ ಕಳ್ಳನನ್ನು ಗುರುತಿಸಿದಳು.

ಅವಳೂ ಕಳ್ಳನ ನಿರೀಕ್ಷೆಯಲ್ಲಿ ಇದ್ದಳು. ಅದಕ್ಕೆ ಹಳೆಯ ಸೀರೆ ಉಟ್ಟಿದ್ದಳು. ಬಳೆಗಾರನ ಸುತ್ತಲೂ ಅನೇಕ ಮಹಿಳೆಯರು ನೆರೆದಿ ದ್ದರು. ಕಾವೇರಿ ಮತ್ತೆ ಅಲ್ಲಿ ಎಲ್ಲರೊಡನೆ ಸೇರಿದಳು. ‘‘ಏನೇ ಕಾವೇರಿ ಮೈಮೇಲೆ ಏನೂ ಚಿನ್ನ ಇಲ್ಲ. ಮುಖ ಏಕೋ ಬಾಡಿದೆ? ಏನು ಸಮಾಚಾರ? ಎಂದು ನೆರೆದಿದ್ದವರೆಲ್ಲಾ ಕೇಳಿದರು. ‘‘ ಏನು ಹೇಳಲಿ? ನಮ್ಮ ಯಜಮಾನರು ಚಿನ್ನ ಇದ್ರೆ ಯಾವಾಗಲೂ ಭಯ. ಅದಕ್ಕೆ ಒಂದು ಗಂಟುಕಟ್ಟಿ ಪಕ್ಕದಲ್ಲಿ ಇರೋ ಅರಣ್ಯದ ಅರಳೇಮರದ ಪೊಟರೆಯಲ್ಲಿ ಇಟ್ಟು ಬಂದಿ ದ್ದಾರೆ. ಹಬ್ಬ ಇದ್ದಾಗ ಅವರೇ ತಂದುಕೊಡ್ತಾರೆ. ಮತ್ತೆ ಅಲ್ಲಿಗೆ ಹೋಗಿ ಇಡ್ತಾರೆ ಎಂದಳು. ಕಳ್ಳ ಈಗ ಬಹಳ ಸಂತೋಷ ಪಟ್ಟ. ಈ ಸರ್ತಿ ಸರಿಯಾದ ವಿಳಾಸ ಸಿಕ್ಕಿದೆ ಎಂದುಕೊಂಡು ಸಾಯಂಕಾಲ ಪಕ್ಕದ ಅರಣ್ಯಕ್ಕೆ ಹೋದ. ಅರಳೆಮರ ಅದರಲ್ಲಿ ರುವ ಪೊಟರೆ ಕಾಣಿಸಿತು. ಆತುರ ಆತುರದಿಂದ ಅದರ ಕಡೆಗೆ ಹೋಗುವಾಗ ದಪ್ಪನೆ ಖೆಡ್ಡಾಗೆ ಬಿದ್ದ.

ಆನೆಗಳನ್ನು ಅರಣ್ಯದಲ್ಲಿ ಹಿಡಿಯಲು ಆಳವಾದ ಗುಂಡಿ ತೋಡಿರುತ್ತಾರೆ. ಅದಕ್ಕೆ ಖೆಡ್ಡಾ ಅನ್ನುತ್ತಾರೆ. ಕಳ್ಳ ಗುಂಡಿಗೆ ಬಿದ್ದ. ಕಾಲು ಮುರಿದುಕೊಂಡ. ಕಾವೇರಿಯ ಈ ನಿಖರ ಬುದ್ಧಿ ಎಲ್ಲರಿಗೂ ತಿಳಿಯಿತು. ಕಳ್ಳನನ್ನು ಹಿಡಿದುಕೊಟ್ಟ ಕಾವೇರಿಯನ್ನು ಎಲ್ಲರೂ ಹೊಗಳಿದರು. ಆ ದೇಶದ ರಾಜ ಅವಳನ್ನು ಕರೆಯಿಸಿ ಸನ್ಮಾನ ಮಾಡಿದ. ಹೆಂಡತಿಯ ಸಾಹಸ, ಜಾಣ್ಮೆ ನೋಡಿ
ಸೋಮುಗೆ ತಾನೂ ಅವಳಂತೆ ಆಗಬೇಕು ಎನಿಸಿತು. ಅವನೂ ಮುಂದೆ ಎದ್ದು ದುಡಿಯಲು ಆರಂಭಿಸಿದ.

ಮಕ್ಕಳೆಲ್ಲರೂ ಸಂತೋಷದಿಂದ ಚಪ್ಪಾಳೆ ತಟ್ಟಿದರು. ‘‘ಅಜ್ಜಿ ನಮಗೆ ನೀನು ಇನ್ನು ಮೇಲೆ ಸ್ವಲ್ಪ ಬೆಳೆ ಬಗ್ಗೆ ಹೇಳಬೇಕು. ಯಾವ ಬಳ್ಳಿಯಿಂದ ಯಾವ ತರಕಾರಿ,ಯಾವ ಗಿಡದಿಂದ ಯಾವ ಫಲ, ಯಾವ ಎಲೆಯಿಂದ ಏನು ಉಪಯೋಗ, ಯಾವ ಹೂವಿ ನಿಂದಲೂ ನಾವು ತರಕಾರಿ ತಿನ್ನಬಹುದು ನೀವು ಹೇಳಬೇಕು ಎಂದು ಮಕ್ಕಳು ಒಕ್ಕೂರಲಿನಿಂದ ಹೇಳಿದರು. ಅದರಲ್ಲಿ ಏನಿದೆ. ನೀವು ನನ್ನ ಜತೆ ಒಂದು ಸಾರಿ ತರಕಾರಿ ತೋಟಕ್ಕೆ ಬನ್ನಿ. ನಾನು ಹೇಳ್ತೀನಿ. ಹಾಲು ಕೇವಲ ಪ್ಯಾಕೆಟ್‌ನಿಂದ ಬರೋದಿಲ್ಲ. ಗೋದಿಹಿಟ್ಟು, ಅಕ್ಕಿಹಿಟ್ಟು ಸೂಪರ್ ಮಾರ್ಕೇಟ್‌ನಿಂದ ಬರೋದಿಲ್ಲ. ನೀವು ನಿಸರ್ಗದಿಂದ ಬೇಕಾದ್ದನ್ನು ಕಲೀಬಹುದು. ಅಲ್ಲದೇನೂ ಮನೆಯ ಔಷಧಿನೂ ಮಾಡ್ಕೊಬಹುದು ಎಂದಳು.