ಹುಳಿಯಾರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಹುಳಿಯಾರಿನಲ್ಲಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಅವರು ಮಾತನಾಡಿ, ಕೇಂದ್ರ ಸರ್ಕಾರ ಅನೇಕ ಕಾನೂನು ತಿದ್ದುಪಡಿ ತಂದು ಬಂಡವಾಳಶಾಹಿಗಳ ಕೈ ಬಲಪಡಿಸುವ ಕೆಲಸವನ್ನು ಮಾಡಿದೆ. ಇದರಿಂದ ಗುಲಾಮಗಿರಿ ಸಂಸ್ಕೃತಿಗೆ ದೇಶ ಹೆಜ್ಜೆ ಹಾಕಿದ್ದು ಕಾರ್ಮಿಕ ಮತ್ತು ರೈತ ತನ್ನ ಸ್ವಾತಂತ್ರ÷್ಯ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾನೆ. ಹಾಗಾಗಿ ಹಣಕಾಸು ವಲಯ ಸೇರಿ ದಂತೆ ರೈಲ್ವೆ, ವಿಮಾನಯಾನ, ಆರೋಗ್ಯ, ಶಿಕ್ಷಣ, ವಿದ್ಯುತ್, ದೂರ ಸಂಪರ್ಕ, ಬ್ಯಾಂಕ್, ವಿಮಾ ಮತ್ತತರ ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಆದಾಯ ತೆರಿಗೆ ವ್ಯಾಪ್ತಿಗೆ ಬರುವ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ 7500 ರೂ. ನೀಡಬೇಕು. ನರೇಗಾದಲ್ಲಿ ವಾರ್ಷಿಕ 200 ದಿನ ಉದ್ಯೋಗ ನೀಡಬೇಕು. ನಗರ ಪ್ರದೇಶಕ್ಕೂ ನರೇಗ ವಿಸ್ತರಿಸಬೇಕು, ಕನಿಷ್ಟ ಕೂಲಿ ಯನ್ನು 600 ರೂಗೆ ಏರಿಸಬೇಕು, ಎಲ್ಲಾ ಕಾರ್ಮಿಕರಿಗೆ ಪಿಂಚಣಿ ಒದಗಿಸಬೇಕು ಸೇರಿದಂತೆ ರೈತ ಮತ್ತು ಕಾರ್ಮಿಕ ಸಂಘಟನೆಗಳ ಅನೇಕ ಬೇಡಿಕೆಗಳನ್ನು ಇಡೇರಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಶಿವಣ್ಣ, ದಸೂಡಿ ನಾಗರಾಜು, ಕಂಪನಹಳ್ಳಿ ಪ್ರಕಾಶ್, ಪಾತ್ರೆ ಸತೀಶ್, ಶಿವಣ್ಣ, ಸರ್ವೇಯರ್ ಗುರೂಜಿ ಎಚ್.ಎನ್.ರಾಜು, ಬಸವರಾಜು, ಬನಶಂಕರಯ್ಯ, ಮರುಳಯ್ಯ, ವಿರೂಪಾಕ್ಷಪ್ಪ, ದಾಸಪ್ಪ ಮತ್ತಿತರರು ಇದ್ದರು.