ನವದೆಹಲಿ: ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಮತದಾರರಿಗೆ ಉಚಿತ ಕೊಡುಗೆಗಳನ್ನು ನೀಡಲು ಯೋಜನೆ ರೂಪಿಸು ತ್ತಿದ್ದಾರೆ ಮತ್ತು ರಾಜ್ಯ ಚುನಾವಣಾ ಆಯೋಗ ಕೈಗೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸಲ್ಲಿಸಿದ ದೂರಿನ ಕುರಿತು ‘ತಕ್ಷಣ ಸೂಕ್ತ ಕ್ರಮ’ ತೆಗೆದುಕೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಸೂಚಿಸಿದೆ.
ರಾಜ್ಯ ಸಿಇಒಗೆ ಬರೆದ ಪತ್ರದಲ್ಲಿ, ಮಾದರಿ ನೀತಿ ಸಂಹಿತೆ ಮತ್ತು ಸಂಬಂಧಿತ ಕಾನೂನುಗಳ ನಿಬಂಧನೆಗಳನ್ನು ಗಮನದಲ್ಲಿಟ್ಟು ಕೊಂಡು ಕ್ರಮ ಕೈಗೊಳ್ಳುವಂತೆ ಇಸಿ ಚೂಚಿಸಿದೆ ಮತ್ತು ಆದಷ್ಟು ಬೇಗ ಈ ಕುರಿತು ವರದಿ ನೀಡುವಂತೆ ಕೋರಿದೆ.
ಮಾಜಿ ಪ್ರಧಾನಿ ದೇವೇಗೌಡರು ಚುನಾವಣಾ ಸಮಿತಿಗೆ ನೀಡಿದ ದೂರಿನ ಆಧಾರದ ಮೇಲೆ ಮಾ.21 ರಂದು ಇಸಿ ಪತ್ರ ಬರೆದಿದೆ.
ಬೆಂಗಳೂರು(ಗ್ರಾಮೀಣ) ಲೋಕಸಭಾ ಕ್ಷೇತ್ರದಲ್ಲಿ ‘ಭ್ರಷ್ಟ ಚಟುವಟಿಕೆಗಳನ್ನು’ ತಡೆಯಲು ರಾಜ್ಯ ಚುನಾವಣಾ ಯಂತ್ರ ಕ್ಷಿಪ್ರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಜೆಡಿಎಸ್ ನಾಯಕ ಆರೋಪಿಸಿದ್ದಾರೆ.
”ಸಂಬಂಧಿಸಿದ ಅಧಿಕಾರಿಯಿಂದ ಕರ್ತವ್ಯಲೋಪ ಮಾತ್ರವಲ್ಲದೆ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಹೋದರ ಹಾಲಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹೆದರುತ್ತಿದ್ದಾರೆ” ಎಂದು ದೇವೇಗೌಡರು ದೂರಿದ್ದಾರೆ.