ಕೃಷಿಯನ್ನು ಉದ್ಯಮ ಎಂದು ಪರಿಗಣಿಸಿ, ಕೃಷಿ ಸರಕುಗಳಿಗೆ ಲಾಭದಾಯಕ ಬೆಲೆ ನಿಗದಿ ಪಡಿಸಬೇಕು. ಭೂ ಸುಧಾರಣೆ ಹಾಗೂ ಭೂ ಹಂಚಿಕೆ ಕಾರ್ಯಕ್ರಮಗಳನ್ನು ಜಾರಿ ಮಾಡ ಬೇಕು. ಕುಟುಂಬದಲ್ಲಿ ಕನಿಷ್ಠ ಒಬ್ಬರಿಗೆ ಕೆಲಸ, ಸ್ವಯಂ ಉದ್ಯೋಗಕ್ಕೆ ನೆರವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಬೀದಿಗಿಳಿದು ಪ್ರತಿಭಟಿಸಿದರು. ಇದೇ ಸಮಯದಲ್ಲಿ 1980ರ ಜುಲೈನಲ್ಲಿ ನರಗುಂದ-ನವಲಗುಂದದಲ್ಲಿ ಹೋರಾಟ ನಡೆಯಿತು.
1980ರ ಆ.1 ರಂದು ತಾಲ್ಲೂಕಿನ ಸಿಪಿಐ ಹಾಗೂ ಸಿಪಿಐ(ಎಂ) ಮುಖಂಡ ಎ.ವಿ.ಅಪ್ಪಸ್ವಾಮಿರೆಡ್ಡಿ, ಎಚ್.ಎಸ್.ರಾಮರಾವ್, ಎನ್.ವಿ.ನಾಗಭೂಷಣಾಚಾರಿ, ಡಿ.ಆರ್.ಜಯರಾಮರೆಡ್ಡಿ, ಡಿ.ಎನ್.ವೆಂಕಟರೆಡ್ಡಿ ಸೇರಿದಂತೆ 36 ರೈತ ನಾಯಕರು ಎ.ವಿ.ಅಪ್ಪ ಸ್ವಾಮಿರೆಡ್ಡಿ ಮನೆಯಲ್ಲಿ ಸಭೆ ನಡೆಸಿದರು.
ಚಳವಳಿಯಲ್ಲಿ ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಲು ತೀರ್ಮಾನಿಸಿದರು. 1980 ಆ.7 ರಂದು ಪಟ್ಟಣದಲ್ಲಿ ರೈತ ನಾಯಕರು ಕೆಂಬಾವುಟಗಳನ್ನು ಹಿಡಿದು ಮೆರವಣಿಗೆ ಮಾಡಿದರು. ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದರು. ಅಂದಿನ ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ ಪೊಲೀಸರು ಲಾಠಿ ಪ್ರಹಾರ ಮಾಡಿದರು.