Saturday, 14th December 2024

ಪಂಚರಾಜ್ಯ ಚುನಾವಣೆ ಬಲಾಬಲ !

Election Commission Of India

ಅವಲೋಕನ

ಡಾ.ಸತೀಶ ಕೆ.ಪಾಟೀಲ

ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಈ ಸಲದ ಪಂಚ ರಾಜ್ಯಗಳಾದ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ,
ಆಸ್ಸಾಂ, ಪುದಚೇರಿಗಳಲ್ಲಿ ಯಾರಿಗೆ ಅಲ್ಲಿಯ ಮತದಾರ ಜೈಕಾರ ಹಾಕುತ್ತಾನೆ ಎನ್ನುವುದು ಸದ್ಯದ ಕುತೂಹಲ.

ಸದ್ಯದ ಪರಿಸ್ಥಿತಿ ಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಈ ಸಲ ಕೇಸರಿ ಪಕ್ಷವಾದ ಬಿ.ಜೆ.ಪಿ.ಯಿಂದ ತೀವ್ರ ಪೈಪೋಟಿ ಎದುರಿಸಿಯೂ ಮತ್ತೆ ಅಧಿಕಾರ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಅದೇ ರೀತಿ ತಮಿಳುನಾಡಿನಲ್ಲಿ ಎ.ಐ.ಎ.ಡಿ.ಎಂ.ಕೆ. ಪಕ್ಷದ ಪೈಪೋಟಿ ನಡುವೆ ಡಿ.ಎಂ.ಕೆ. ಪಕ್ಷವು ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕೇರಳದಲ್ಲಿ ಕಾಂಗ್ರಸ್ ನೇತೃತ್ವದ ಯು.ಡಿ.ಎಫ್. ಮೈತ್ರಿಕೂಟವು ಎಡಪಕ್ಷಗಳ ನೇತೃತ್ವದ ಮೈತ್ರಿಕೂಟವಾದ ಎಲ್.ಡಿ.ಎಫ್.ಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ಆಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷದ ಪೈಪೋಟಿಯ ನಡುವೆಯೂ ಮತ್ತೆ ಬಿ.ಜೆ.ಪಿ. ಅಧಿಕಾರ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಕಾಂಗೈ ನೇತೃತ್ವದ ಡಿ.ಎಂ.ಕೆ. ಮತ್ತು ಎ.ಐ.ಎ.ಡಿ.ಎಂ.ಕೆ. ನೇತೃತ್ವದ ಬಿ.ಜೆ.ಪಿ. ಪಕ್ಷಗಳ ಮಧ್ಯ ನೇರ ಹಣಾಹಣಿ ಏರ್ಪಟ್ಟಿದೆ. ಹಾಗಾದರೆ ಈ ಪಂಚರಾಜ್ಯಗಳಲ್ಲಿ ಯಾವ ಪಕ್ಷವು ಅಧಿಕಾರಕ್ಕೆ ಬರುತ್ತದೆ. ಅದಕ್ಕೆ ಕಾರಣವಾದ ಅಂಶರಗಳತ್ತ ನೋಟ ಹರಿಸುವುದು ಅಗತ್ಯವೆನಿಸುತ್ತದೆ.

ಮೊದಲನೆಯದಾಗಿ ಒಟ್ಟು ೨೯೪ ಸ್ಥಾನಗಳಿರುವ ಪಶ್ಚಿಮ ಬಂಗಾಳ ರಾಜ್ಯದತ್ತ ಲಕ್ಷ್ಯ ಹಾಯಿಸಿದಾಗ, ಕಳೆದ ಚುನಾವಣೆಯಲ್ಲಿ
ಟಿ.ಎಂ.ಸಿ. ೨೦೯ ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಏರಿತ್ತು. ಕಾಂಗೈ ೨೩, ಎಡಪಕ್ಷಗಳು ೧೯, ಬಿ.ಜೆ.ಪಿ. ೨೭, ಇತರ ೩೧
ಸ್ಥಾನಗಳನ್ನು ಗಳಿಸಿದ್ದವು. ಮೂರು ದಶಕಗಳ ಕಮೂನಿಷ್ಟ್ ಪಕ್ಷಗಳ ಕೆಂಪು ಕೋಟೆಯನ್ನು ಭೇದಿಸಿ ಕಳೆದ ೧೦ ವರ್ಷಗಳಿಂದ ಅಧಿಕಾರ ಸ್ಥಾಪಿಸಿದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಈ ಸಲ ಕೇಸರಿ ಪಕ್ಷವಾದ ಬಿ.ಜೆ.ಪಿ. ತೀವ್ರ ಪೈಪೋಟಿ ನೀಡುತ್ತಿದೆ. ಆದರೂ ಕಳೆದ ಬಾರಿಗಿಂತ ಕೆಲ ಸ್ಥಾನಗಳನ್ನು ಈ ಬಾರಿ ತೃಣಮೂಲ ಕಾಂಗ್ರೆಸ್ ಕಳೆದುಕೊಂಡರು ಮತ್ತೆ ಅಧಿಕಾರ ಸ್ಥಾಪಿಸುವ ಹುಮ್ಮಸ್ಸಿನಲ್ಲಿದೆ.

ಇದಕ್ಕೆ ಕಾರಣವಾದ ಅಂಶಗಳತ್ತ ಗಮನಿಸಿದಾಗ ಮೊದಲನೆಯದು ಸಿ.ಎಂ. ಮಮತಾ ಬ್ಯಾನರ್ಜಿ ಹೊಂದಿರುವ ಜನಪ್ರಿಯತೆ ಯನ್ನು ಹಿಂದಿಕ್ಕುವ ನಾಯಕ ವಿರೋಧಿ ಪಕ್ಷದಲ್ಲಿ ಇಲ್ಲದೆ ಇರುವುದು. ಮಮತಾ ಬ್ಯಾನರ್ಜಿಯವರನ್ನು ಮೀರಿಸುವ ಸಿ.ಎಂ. ಅಭ್ಯರ್ಥಿ ಇಲ್ಲದೆ ಇರುವುದು ತೃಣಮೂಲ ಕಾಂಗ್ರೆಸ್ಸಿಗೆ ಈ ಚುನಾವಣೆಯಲ್ಲಿ ವರವಾದರೆ ವಿರೋಧಿ ಪಾಳಯಕ್ಕೆ ಹಾನಿಯುಂಟು ಮಾಡುವ ಅಂಶವಾಗಿದೆ. ಇನ್ನೂ ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳಾದ ಕನ್ಯಾ ಶ್ರೀಪ್ರಾಡೆಕ್ಟ್, ಕೂಲಿ ಕಾರ್ಮಿಕರ ವೇತನ ಹೆಚ್ಚಳ, ೧೦೦ ದಿನಗಳ ಉದ್ಯೋಗ ಯೋಜನೆ ಇನ್ನು ಮುಂತಾದ ಅಭಿವೃದ್ಧಿ ಕಾರ್ಯಗಳು ನಮ್ಮ ಕೈ ಹಿಡಿಯುತ್ತವೆ ಎನ್ನುವ ಲೆಕ್ಕಾಚಾರವು ಟಿ.ಎಂ.ಸಿ. ಪಕ್ಷದ್ದು.

ಇನ್ನೊಂದು ಪ್ರಮುಖ ಅಂಶವೆಂದರೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಘೋಷಣೆಗೆ ಮುನ್ನವೇ ವ್ಯಾಪಕ ಹಿಂಸಾಚಾರವು ತೃಣಮೂಲ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಕಾರ್ಯಕರ್ತರ ನಡುವೆ ಏರ್ಪಟ್ಟಿದೆ. ಮಮತಾ ಬ್ಯಾನರ್ಜಿ ಯವರು ಬಂಗಾಳದ ಅಸ್ಮಿತೆ ಮತ್ತು ಸ್ಥಳೀಯ ವಿಷಯಗಳನ್ನು ಪ್ರಮುಖ ಅಸವಾಗಿ ಚುನಾವಣೆಯಲ್ಲಿ ಬಳಸುತ್ತಿದ್ದು ಇದು ಕೂಡಾ ಅವರಿಗೆ ಲಾಭ ತರುವ ಒಂದು ಅಂಶವಾಗಿದೆ. ಇನ್ನೊಂದು ಪ್ರಮುಖ ಅಂಶವೆಂದರೆ ಪಶ್ಚಿಮ ಬಂಗಾಳದಲ್ಲಿ ಶೇ. ೩೦ರಷ್ಟು ಇರುವ ಮುಸ್ಲಿಂ ಜನಾಂಗದ
ಬೆಂಬಲ ತೃಣಮೂಲ ಕಾಂಗ್ರೆಸ್ ಕಡೆಗೆ ಇರುವುದು ಮಮತಾ ಬ್ಯಾನರ್ಜಿಯವರ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

ಈ ಕಾರಣಕ್ಕಾಗಿ ಟಿ.ಎಂ.ಸಿ. ಪಕ್ಷವು ಈ ಚುನಾವಣೆಯಲ್ಲಿ ೪೨ ಸ್ಥಾನಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಇನ್ನು ಕೇಂದ್ರದ ಬಿ.ಜೆ.ಪಿ. ಸರಕಾರದಿಂದ ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯು ಶ್ರೀಸಾಮಾನ್ಯರ ಕೋಪಕ್ಕೆ ಕಾರಣವಾಗಿದೆ. ಈ ಅಂಶವು ಈ ಚುನಾವಣೆಯಲ್ಲಿ ತಮಗೆ ಲಾಭ ತರಬಹುದು ಎನ್ನುವ ಲೆಕ್ಕಾಚಾರವಿದೆ. ಕಳೆದ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೧೮ ಸ್ಥಾನಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿತ್ತು.

ಆದರೆ ಒಂದು ಗಮನಿಸುವ ಅಂಶವೆಂದರೆ ವಿಧಾನಸಭೆ ಚುನಾವಣೆಗೂ ಹಾಗೂ ಲೋಕಸಭಾ ಚುನಾವಣೆಗೂ ವ್ಯತ್ಯಾಸವಿರು ತ್ತದೆ. ಇಲ್ಲಿ ಜನ ಸಿ.ಎಂ. ಅಭ್ಯರ್ಥಿಯನ್ನು ನೋಡಿ ಮತ ಚಲಾಯಿಸುತ್ತಾರೆ ವಿನಾ ಪ್ರಧಾನಿಯನ್ನಲ್ಲಾ. ಈ ಅಂಶದ ಲಾಭವು ಮಮತಾ ಬ್ಯಾನರ್ಜಿಯವರಿಗೆ ಆಗುತ್ತದೆ ಎನ್ನುವ ಲೆಕ್ಕಾಚಾರವಿದೆ. ಇನ್ನು ಬಿ.ಜೆ.ಪಿ. ಈ ಚುನಾವಣೆಯಲ್ಲಿ ಅಬ್ಬರಿಸುತ್ತಿದ್ದರೂ ಆ ಪಕ್ಷಕ್ಕೆ ತಳಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಬಲ ಸಂಘಟನೆಯಲ್ಲಿ ಮತ್ತು ಪ್ರಬಲ ನಾಯಕತ್ವವು ರಾಜ್ಯದಲ್ಲಿ ಇಲ್ಲದೇ
ಇರುವುದು ಈ ಅಂಶವು ತೃಣಮೂಲ ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರದ ಕನಸು ಕಾಣುವಂತೆ ಮಾಡಿದೆ.

ಇನ್ನು ಬಾಂಗ್ಲಾ ವಲಸಿಗರಿಗೆ ಮಮತಾ ಬ್ಯಾನರ್ಜಿ ಆಶ್ರಯ ಕಲ್ಪಿಸಿದ್ದು ಈ ಎಲ್ಲಾ ಅಂಶಗಳು ನಮಗೆ ಈ ಚುನಾವಣೆಯಲ್ಲಿ ನೆರಗೆ
ಬರುತ್ತವೆ ಎನ್ನುವ ವಿಶ್ವಾಸದಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷವು ಇದೆ. ಇನ್ನು ವಿರೋಧ ಪಕ್ಷವಾದ ಬಿಜೆಪಿಗೆ ಯಾವ
ಅಂಶಗಳು ನೆರವಿಗೆ ಬರುತ್ತವೆ ಮತ್ತು ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ಈ ಚುನಾವಣೆಯಲ್ಲಿ ಯಾವ ಅಂಶಗಳು ಕೈ
ಕೊಡಬಹುದು ಎನ್ನುವುದನ್ನು ನೋಡಿದಾಗ ಮೊದಲನೆ ಯದು ಆಡಳಿತ ವಿರೋಧೀ ಅಲೆ.

ಮಮತಾ ಬ್ಯಾನರ್ಜಿ ಯವರ ಕಳೆದ ೧೦ ವರ್ಷಗಳ ಆಡಳಿತ ಅವಧಿಯಲ್ಲಿ ಹೆಚ್ಚಾದ ಭ್ರಷ್ಟಾಚಾರ ಮತ್ತು ಕೈಗಾರಿಕೆಗಳನ್ನು ಸ್ಥಾಪಿಸದೇ ನೀರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿರುವುದು. ಬದಲಾವಣೆ ಬಯಸುವ ಮತದಾರ ವರ್ಗವು ಹುಟ್ಟಿಕೊಂಡಿರು ವುದು ಈ ಅಂಶಗಳು ಮಮತಾ ಬ್ಯಾನರ್ಜಿ ಯವರಿಗೆ ಕಹಿ ಯಾದರೆ ಬಿಜೆಪಿಗೆ ಸಿಹಿಯಾಗಬಹುದು. ಇನ್ನೊಂದು ಪ್ರಮುಖ ಅಂಶವೆಂದರೆ ಅದು ಬಿಜೆಪಿ ಪ್ರತಿಪಾದಿಸುತ್ತಿರುವ ರಾಷ್ಟ್ರೀಯತೆ ಮತ್ತು ಹಿಂದೂತ್ವ. ಮಮತಾ ಬ್ಯಾನರ್ಜಿ ಅವರು ಶ್ರೀರಾಮ ಘೋಷಣೆಗೆ ವಿರೋಧ ವ್ಯಕ್ತಪಡಿಸಿದ್ದು ಮತ್ತು ಮುಸ್ಲಿಂ ಪರಧೋರಣೆ ಅನುಸರಿಸಿದ್ದು ಬಿಜೆಪಿಗೆ ಒಂದು ಪ್ರಬಲ ಅಸ್ತ್ರ ಸಿಕ್ಕಂತೆ
ಆಗಿದೆ. ಅದು ಹಿಂದೂಗಳ ಮತಗಳನ್ನು ಸೆಳೆಯುವ ತಂತ್ರ ಅನುಸರಿಸುತ್ತಿದೆ.

ಈ ಅಂಶವು ಟಿ.ಎಂ.ಸಿ. ಪಕ್ಷಕ್ಕೆ ಹಾನಿ ಉಂಟು ಮಾಡಿದರೆ ಬಿ.ಜೆ.ಪಿ. ಪಕ್ಷಕ್ಕೆ ಲಾಭ ತರುವ ಅಂಶವಾಗಿದೆ. ಇನ್ನು ರಾಜ್ಯದಲ್ಲಿ ಬಿ.ಜೆ.ಪಿ. ದಿನೇ ದಿನೇ ಪ್ರಬಲವಾಗುತ್ತಿರುವುದು ಮತ್ತು ಕೇಂದ್ರದಲ್ಲಿ ಅಧಿಕಾರ ದಲ್ಲಿರುವುದು. ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಬಂಗಾಳದ ಅಭಿವೃದ್ಧಿ ಮಾಡುತ್ತವೆ ಎನ್ನುವ ವಿಚಾರವು ತಕ್ಕಮಟ್ಟಿಗೆ ಬಿ.ಜೆ.ಪಿ.ಗೆ ನೆರವಾಗುವ ಸಾಧ್ಯತೆ ಇದೆ. ಇನ್ನು
ಎಡಪಕ್ಷಗಳ ಮತಗಳು ಈಗ ಕೇಸರಿ ಪಕ್ಷದ ಕಡೆಗೆ ವಾಲುತ್ತಿರುವುದು ಮಮತಾ ಬ್ಯಾನರ್ಜಿ ಅವರ ನಿದ್ರಾ ಭಂಗಕ್ಕೆ ಕಾರಣವಾಗಿದೆ. ಈ ಅಂಶವು ರಾಜ್ಯದಲ್ಲಿ ಬಿ.ಜೆ.ಪಿ. ಬಲಗೊಳ್ಳಲು ಕಾರಣ.

ಇನ್ನು ತೃಣಮೂಲ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ ಸುವೇಂದ ಅಧಿಕಾರಿ ಸೇರಿ ಹಲವು ಶಾಸಕರು ಪಕ್ಷವನ್ನು ಬಿಟ್ಟು ಬಿ.ಜೆ.ಪಿ. ಸೇರುತ್ತಿರು ವುದು ಕೂಡಾ ಬಿ.ಜೆ.ಪಿ. ವಿಶ್ವಾಸ ಹೆಚ್ಚಿಸುವಂತೆ ಮಾಡಿದ್ದು, ಟಿ.ಎಂ.ಸಿ. ಪಕ್ಷಕ್ಕೆ ಚಿಂತೆಯನ್ನು ಉಂಟು ಮಾಡಿದೆ. ಕೇಂದ್ರ ಸರಕಾರದ ಕಿಸಾನ್ ಸಮ್ಮಾನ ಯೋಜನೆಯೂ ಸೇರಿದಂತೆ ಹಲವು ಯೋಜನೆಗಳನ್ನು ರಾಜ್ಯದಲ್ಲಿ ಮಮತಾ ಸರಕಾರ ಜಾರಿಗೆ ತರದೆ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಅಸಾವುದ್ದೀನ್ ಓವೈಸಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಿದರೆ ಆಗ ಮುಸ್ಲಿಂ ಮತಗಳ ವಿಭಜನೆಯಾಗಿ ಅದು ನೇರವಾಗಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ಗೆ ಹಾನಿಯುಂಟು ಮಾಡಿದರೆ ಬಿಜೆಪಿಗೆ ಲಾಭ ತರಬಹುದು. ಇನ್ನು ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಅಬ್ಬರ ಕಡಿಮೆಯಾಗಿದ್ದು, ಅದರ ಲಾಭ ಬಿಜೆಪಿಗೆ ಆಗುತ್ತದೆ. ಈ ಮೇಲಿನ ಅಂಶಗಳು ಮಮತಾ
ಬ್ಯಾನರ್ಜಿ ಅವರಿಗೆ ಹಿನ್ನಡೆ ತಂದರೆ ಬಿಜೆಪಿಗೆ ಲಾಭ ತರುವ ಅಂಶಗಳಾಗಿವೆ.

ಆದರೂ ಈ ಸಲದ ಚುನಾವಣೆಯಲ್ಲಿ ಕಳೆದ ಚುನಾವಣೆಗಿಂತ ಕಡಿಮೆ ಸ್ಥಾನಗಳನ್ನು ಪಡೆದರೂ ಮತ್ತೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಮತ್ತೊಂದು ರಾಜ್ಯ ತಮಿಳುನಾಡಿನತ್ತ ಗಮನಿಸಿ ದಾಗ ಒಟ್ಟು ೨೩೪ ವಿಧಾನಸಭೆಯ ಸ್ಥಾನಗಳಲ್ಲಿ ಕಳೆದ ಚುನಾವಣೆಯಲ್ಲಿ ಎ.ಐ.ಎ.ಡಿ.ಎಂ.ಕೆ. ಪಕ್ಷವು ೧೨೪ ಸ್ಥಾನಗಳನ್ನು
ಗಳಿಸಿದರೆ ಡಿ.ಎಂ.ಕೆ. ೯೭, ಕಾಂಗ್ರೆಸ್ ೦೭, ಇತರ ೦೨ ಸ್ಥಾನಗಳನ್ನು ಗಳಿಸಿದ್ದವು. ಕಳೆದ ಬಾರಿ ಜನಪ್ರಿಯ ಅಮ್ಮಾ ಯೋಜನೆ ಗಳ ಮೂಲಕ ಸತತ ಎರಡನೆಯ ಬಾರಿಗೆ ಜಯಭೇರಿ ಬಾರಿಸಿದ್ದು, ಜಯಲಲಿತಾ ಅವರ ಎ.ಐ.ಎ.ಡಿ.ಎಂ.ಕೆ. ಪಕ್ಷವು ಈ ಬಾರಿ ಡಿ.ಎಂ.ಕೆ. ಪಕ್ಷದಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ.

ತಮಿಳುನಾಡಿನ ಇಬ್ಬರೂ ರಾಜಕೀಯ ದಿಗ್ಗಜರಾದ ಎಂ. ಕರುಣಾನಿಧಿ ಮತ್ತು ಜಯಲಲಿತಾ ಅವರ ನಿಧನದಿಂದ ಅವರ ಅನುಪಸ್ಥಿತಿಯಲ್ಲಿ ಈ ಚುನಾವಣೆ ನಡೆಯು ತ್ತಿರುವುದು ಎರಡು ದ್ರಾವಿಡ ಪಕ್ಷಗಳಿಗೆ ಇವರ ಅನುಪಸ್ಥಿತಿಯು ಕಾಡುತ್ತಿದೆ. ಸದ್ಯದ
ಪರಿಸ್ಥಿತಿಯಲ್ಲಿ ಸ್ಟಾಲಿನ್ ನೇತೃತ್ವದ ಡಿ.ಎಂ.ಕೆ. ಪಕ್ಷವು ಅಧಿಕಾರ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಕಾರಣವಾಗಿರುವ ಅಂಶಗಳನ್ನು ಪರಿಶೀಲಿಸಿದರೆ ಮೊದಲನೆಯದು ಆಡಳಿತ ವಿರೋಧಿ ಅಲೆ, ಸಿ.ಎಂ. ಪಳನಿಸ್ವಾಮಿ ಅವರ ವಿರುದ್ಧ ಇರುವ ಆಡಳಿತ ವಿರೋಧಿ ಅಲೆ ಮತ್ತು ಬದಲಾವಣೆ ಬಯಸುವ ಮತದಾರ ವರ್ಗವು ಹುಟ್ಟಿ ಕೊಂಡಿದ್ದು, ಎರಡನೆ ಯದು ಜಯಲಲಿತಾ ಇಲ್ಲದೆ ಇರುವುದು ಎ.ಐ.ಎ.ಡಿ.ಎಂ.ಕೆ. ಪಕ್ಷಕ್ಕೆ ಈ ಚುನಾವಣೆ ಹಿನ್ನಡೆ ತರುವ ಅಂಶವಾಗಿದೆ.

ಸಿ.ಎಂ. ಪಳನಿಸ್ವಾಮಿ ಮತ್ತು ಡಿ.ಸಿ.ಎಂ. ಓ.ಪನ್ನೀರುಸೆಲ್ವಂ ನಾಯಕತ್ವದಲ್ಲಿಯೇ ಪಕ್ಷವು ಚುನಾವಣೆಯನ್ನು ಎದುರಿಸುತ್ತಿದ್ದು, ಇವರು ತಮಿಳುನಾಡಿನಾದ್ಯಂತ ಜನಪ್ರಿಯತೆ ಹೊಂದಿಲ್ಲದಿರುವುದು ಕೂಡಾ ಒಂದು ಕಾರಣ. ಇನ್ನು ಎ.ಐ.ಎ.ಡಿ.ಎಂ.ಕೆ. ಪಕ್ಷದಿಂದ ಬೇರೆಯಾಗಿ ಜಯಲಲಿತಾ ಅವರ ಸಂಬಂಧಿ ಟಿ.ಟಿ.ವಿ. ದಿನಕರನ್ ಹೊಸ ಪಕ್ಷ ಸ್ಥಾಪಿಸಿದ್ದು ಅವರ ಎ.ಎಂ.ಎಂ.ಕೆ
ಪಕ್ಷವು ಮತಗಳ ವಿಭಜನೆ ಮಾಡಿದರೆ ಅದು ನೇರವಾಗಿ ಡಿ.ಎಂ.ಕೆ. ಪಕ್ಷಕ್ಕೆ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರವಿದೆ.

ಇನ್ನು ಡಿ.ಎಂ.ಕೆ ಪಕ್ಷದ ನಾಯಕ ಸ್ಟಾಲಿನ್ ಅವರು ನೀಡಿದ ಅಗ್ಗದ ಭರವಸೆಗಳಾದ ಪ್ರತಿ ಗೃಹಣಿಯರಿಗೆ ಪ್ರತಿ ತಿಂಗಳು ಸಾವಿರ ರು. ಸಹಾಯಧನ, ನೀರುದ್ಯೋಗ ಹೋಗಲಾಡಿಸಲು ಪ್ರತಿ ವರ್ಷ ೧೦ ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡುವ ಮೂಲಕ ಮಹಿಳೆಯರು ಮತ್ತು ಯುವಕರನ್ನು ಗಮನದಲ್ಲಿಟ್ಟುಕೊಂಡು ಭರ್ಜರಿ ಆಫರ್ ನೀಡಿದ್ದಾರೆ. ಈ ಅಂಶವು ಈ ಚುನಾವಣೆ ಯಲ್ಲಿ ತಮ್ಮ ನೆರವಿಗೆ ಬರುತ್ತವೆ ಎನ್ನುವ ಲೆಕ್ಕಾಚಾರವನ್ನು ಡಿ.ಎಂ.ಕೆ. ಪಕ್ಷವು ಹೊಂದಿದೆ.

ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿನ ಯಶಸ್ಸು ಡಿ.ಎಂ.ಕೆ. ಪಕ್ಷದ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ. ಇದರ ಜತೆಗೆ ಕಾಂಗ್ರೆಸ್ ಪಕ್ಷದ ಜತೆಗಿನ ಮೈತ್ರಿಯಿಂದ ಅಲ್ಪಸಂಖ್ಯಾತ ಮತಗಳು ಲಭಿಸುತ್ತವೆ ಎನ್ನುವ ಲೆಕ್ಕಾಚಾರವಿದೆ. ಎ.ಐ.ಎ.ಡಿ.ಎಂ.ಕೆ.
ಪಕ್ಷವು ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಪರಿಣಾಮದ ಲಾಭ ಡಿ.ಎಂ.ಕೆ. ಪಕ್ಷಕ್ಕೆ ಆಗುತ್ತದೆ ಎನ್ನುವ ಅಂಶ ಪ್ರಮುಖ ವಾಗಿದೆ.

ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಎಂ.ಕೆ. ಪಕ್ಷವು ತೀವ್ರ ಪೈಪೋಟಿ ನೀಡಿತ್ತು. ಈ ಸಲ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸ ಡಿ.ಎಂ.ಕೆ. ಪಕ್ಷದ್ದು. ಇನ್ನು ಎಂ.ಕೆ. ಸ್ಟಾಲಿನ್ ಅವರ ನಾಯಕತ್ವದಿಂದ ಹೆಚ್ಚಿನ ಲಾಭ ಡಿ.ಎಂ.ಕೆ. ಪಕ್ಷಕ್ಕೆ ಆಗುತ್ತದೆ ಎನ್ನುವ ಲೆಕ್ಕಾಚಾರವಿದೆ. ಈ ಮೇಲಿನ ಅಂಶಗಳಿಂದ ಈ ಸಲ ತಮಿಳುನಾಡಿನಲ್ಲಿ ಡಿ.ಎಂ.ಕೆ. ಪಕ್ಷವು ಅಧಿಕಾರದ ಕನಸು ಕಾಣುವಂತೆ ಮಾಡಿವೆ.

ಇನ್ನು ಬಿಜೆಪಿ, ಎಐಎಡಿಎಂಕೆ ಪಕ್ಷಗಳ ಜತೆ ಮೈತ್ರಿಕೂಟ ರಚನೆ ಮಾಡಿಕೊಂಡಿರುವ ಆಡಳಿತರೂಢ ಎಐಎಡಿಎಂಕೆ ಪಕ್ಷವು ಸಿ.ಎಂ. ಪಳನಿಸ್ವಾಮಿ ಅವರ ಸರಕಾರ ಘೋಷಿಸಿರುವ ಜನಪ್ರಿಯ ಯೋಜನೆಗಳಾದ ರೈತರ ಸಾಲ ಮನ್ನಾ ಮತ್ತು ಜಯಲಲಿತಾ ಅವರು ಜಾರಿಗೆ ತಂದ ಜನಪ್ರಿಯ ಅಮ್ಮಾ ಯೋಜನೆಗಳು ಮತ್ತು ಈ ಚುನಾವಣೆ ಸಮಯದಲ್ಲಿ ಸಿ.ಎಂ. ಪಳನಿಸ್ವಾಮಿ ವನ್ನಿಯಾರ ಸಮುದಾಯಕ್ಕೆ ಶೇ. ೧೦ರಷ್ಟು ಮೀಸಲಾತಿಯನ್ನು ಘೋಷಿಸಿದ್ದು, ನೌಕರ ನಿವೃತ್ತಿ ವಯಸ್ಸಿನ ಹೆಚ್ಚಳ ಮಾಡಿದ್ದು, ಈ ಯೋಜನೆಗಳು ಈ ಸಲದ ಚುನಾವಣೆಯಲ್ಲಿ ತಮ್ಮ ಕೈ ಹಿಡಿಯುತ್ತವೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.

ಇನ್ನೂ ಈ ಚುನಾವಣೆಯಲ್ಲಿ ಸಿ.ಎಂ. ಪಳನಿಸ್ವಾಮಿ ಅವರು ಪ್ರತಿವರ್ಷ ಒಂದು ಕುಂಟುಂಬಕ್ಕೆ ೦೬ ಎಲ್.ಪಿ.ಜಿ. ಸಿಲಿಂಡರ್ ‌ಗಳನ್ನು ಉಚಿತ ವಾಗಿ ನೀಡುತ್ತೇವೆ ಮತ್ತು ಹಿರಿಯ ಮಹಿಳೆಯರಿಗೆ ಪ್ರತಿ ತಿಂಗಳು ೧,೫೦೦ರು.ಗಳ ಸಹಾಯಧನ ನೀಡುತ್ತೇವೆ ಎನ್ನುವ ಭರವಸೆಗಳು ತಮ್ಮ ಕೈ ಹಿಡಿಯುತ್ತವೆ ಎನ್ನುವ ಲೆಕ್ಕಾಚಾರದಲ್ಲಿದೆ. ಇದಲ್ಲದೆ ಕರುಣಾನಿಧಿ ಅವರ ಅನುಪಸ್ಥಿತಿಯು ತಮಗೆ ವರವಾಗುತ್ತದೆ ಎನ್ನುವ ಇನ್ನೊಂದು ಲೆಕ್ಕಾಚಾರವನ್ನು ಎ.ಐ.ಎ.ಡಿ.ಎಂ.ಕೆ. ಪಕ್ಷವು ಹೊಂದಿದೆ.

ಇನ್ನು ಬಿಜೆಪಿಯೊಂದಿಗೆ ಮೈತ್ರಿಕೂಟ ರಚಿಸಿ ಕೊಂಡಿರುವುದರ ಲಾಭ ತಮಗೆ ಆಗುತ್ತದೆ ಎನ್ನುವ ಇನ್ನೊಂದು ಅಂಶದಿಂದ ಎ.ಐ.ಎ.ಡಿ.ಎಂ.ಕೆ. ಪಕ್ಷವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿನಲ್ಲಿ ಡಿ.ಎಂ.ಕೆ. ಪಕ್ಷವು ಅಧಿಕಾರಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗಿ ಗೋಚರಿಸುತ್ತವೆ.

(ಮುಂದುವರಿಯಲಿದೆ)