Thursday, 19th September 2024

Champai Soren: ಬಿಜೆಪಿ ಸೇರ್ಪಡೆಯಾದ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್

Champai Soren

ರಾಂಚಿ: ಶೀಘ್ರದಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿರುವ ಜಾರ್ಖಂಡ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು , ಮಾಜಿ ಮುಖ್ಯಮಂತ್ರಿ, ಜಾರ್ಖಂಡ್‌ ಮುಕ್ತಿ ಮೋರ್ಚಾ (Jharkhand Mukti Morcha-JMM)ದ ಹಿರಿಯ ನಾಯಕ ಚಂಪೈ ಸೊರೆನ್ (Champai Soren) ಇಂದು (ಆಗಸ್ಟ್‌ 30) ಬಿಜೆಪಿ ಸೇರ್ಪಡೆಯಾಗಿದ್ದಾರೆ.

ರಾಂಚಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಂಪೈ ಸೊರೆನ್‌ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಈ ವೇಳೆ ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮವಂತ ಬಿಸ್ವಾ ಶರ್ಮ ಉಪಸ್ಥಿತರಿದ್ದರು.

https://x.com/ANI/status/1829468033607160117

ಒಂದು ಕಾಲದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಸಂಸ್ಥಾಪಕ ಶಿಬು ಸೊರೆನ್ ಅವರ ಆಪ್ತರಾಗಿದ್ದ ಸೊರೆನ್ ಬುಧವಾರ (ಆಗಸ್ಟ್‌ 28) ಜೆಎಂಎಂ ಅನ್ನು ತೊರೆದಿದ್ದರು. ಶಿಬು ಸೊರೆನ್ ಅವರಿಗೆ ಬರೆದ ಪತ್ರದಲ್ಲಿ, “ಕುಟುಂಬದಂತಿದ್ದ ಜೆಎಂಎಂ ಅನ್ನು ತೊರೆಯುತ್ತೇನೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಕೆಲವೊಂದು ಘಟನೆಗಳ ಕಾರಣದಿಂದ ನಾನು ತುಂಬಾ ನೋವಿನಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಪಕ್ಷವು ತನ್ನ ತತ್ವದಿಂದ ವಿಮುಖವಾಗಿದೆ ಎಂದು ಹೇಳಲು ನನಗೆ ನೋವಾಗುತ್ತಿದೆ” ಎಂದು ತಮ್ಮ ನಿರ್ಧಾರಕ್ಕೆ ಕಾರಣ ವಿವರಿಸಿದ್ದರು.

ಶೇ. 26ರಷ್ಟು ಪರಿಶಿಷ್ಟ ಪಂಗಡದವರಿರುವ ಜಾರ್ಖಂಡ್‌ನ ಬುಡಕಟ್ಟು ಪ್ರದೇಶದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಚಂಪೈ ಸೊರೆನ್ ಅವರ ಸೇರ್ಪಡೆಯು ಬಹುದೊಡ್ಡ ಕೊಡುಗೆ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಲ್ಪ ಅವಧಿಗೆ ಮುಖ್ಯಮಂತ್ರಿ ಪಟ್ಟ 

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ‌ ಜಾರಿ ನಿರ್ದೇಶನಾಲಯ (Enforcement Directorate) ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ (Hemant Soren) ಅವರನ್ನು ವಶಕ್ಕೆ ಪಡೆದಾಗ ಈ ವರ್ಷದ ಫೆಬ್ರವರಿಯಲ್ಲಿ ಚಂಪೈ ಸೊರೆನ್‌ ಜಾರ್ಖಂಡನ್‌ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಅವರು  ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದು  5 ತಿಂಗಳು ಮಾತ್ರ. ಜಾಮೀನು ಪಡೆದ ಹೇಮಂತ್‌ ಸೊರೆನ್‌ ಜುಲೈಯಲ್ಲಿ ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದಾರೆ.

“ತುಂಬಾ ಅವಮಾನದ ನಂತರ, ನಾನು ಪರ್ಯಾಯ ಮಾರ್ಗವನ್ನು ಹುಡುಕಬೇಕಾಯಿತು. ಮುಖ್ಯಮಂತ್ರಿಯೊಬ್ಬರ ಕಾರ್ಯಕ್ರಮವನ್ನು ಇನ್ನೊಬ್ಬ ವ್ಯಕ್ತಿ ರದ್ದುಗೊಳಿಸುವುದಕ್ಕಿಂತ ಹೆಚ್ಚು ಅವಮಾನಕರವಾದುದು ಪ್ರಜಾಪ್ರಭುತ್ವದಲ್ಲಿ ಬೇರೊಂದಿದೆಯೇ? ಜುಲೈ 3 ರಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜೀನಾಮೆ ನೀಡುವಂತೆ ನನ್ನನ್ನು ಒತ್ತಾಯಿಸಲಾಯಿತು. ಅವರು (ಮುಖ್ಯಮಂತ್ರಿ ಹೇಮಂತ್ ಸೊರೆನ್) ತಮ್ಮ ಕುರ್ಚಿಯ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದರು. ನನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಪಕ್ಷದಲ್ಲಿ ನನಗೆ ಅಸ್ತಿತ್ವವಿಲ್ಲ ಎಂದು ನಾನು ಭಾವಿಸಿ ಹೊರ ಬಂದಿದ್ದೇನೆ” ಎಂದು ಚಂಪೈ ಸೊರೆನ್ ಹೇಳಿದ್ದರು.

ಜಾರ್ಖಂಡ್‌ ಸಚಿವರಾಗಿ ಜೆಎಂಎಂನ ಹಿರಿಯ ನಾಯಕ ರಾಮ್‌ದಾಸ್‌ ಸೊರೆನ್‌ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಚಂಪೈ ಸೊರೆನ್‌ ಅವರಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯಪಾಲ ಸಂತೋಷ್‌ ಕುಮಾರ್‌ ಗಂಗಾವರ್‌ ಪ್ರಮಾಣ ವಚನ ಬೋಧಿಸಿದರು.

Leave a Reply

Your email address will not be published. Required fields are marked *