Friday, 22nd November 2024

ಜಿಲ್ಲೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಉಚಿತ ಪ್ರದರ್ಶನ: ಯತ್ನಾಳ್

ಬೆಂಗಳೂರು: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ಬಿಜೆಪಿ ಶಾಸಕರು, ಸಚಿವರು ಪ್ರಚಾರ ನೀಡುತ್ತಿದ್ದಾರೆ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಸಿನಿಮಾವನ್ನು ನೋಡಿ ಬಹುವಾಗಿ ಮೆಚ್ಚಿ ಕೊಂಡಾಡಿದ್ದಾರೆ.

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾರ್ಚ್ 15 ರಂದು ಎಲ್ಲ ಶಾಸಕರು, ಸಚಿವರಿಗೆ ಮಂತ್ರಿ ಮಾಲ್‌ನಲ್ಲಿ ಸಿನಿಮಾ ವೀಕ್ಷಣೆಗೆ ವಿಶೇಷ ಶೋ ಆಯೋಜನೆ ಮಾಡಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ತಮ್ಮ ಜಿಲ್ಲೆಯಲ್ಲಿ ಉಚಿತವಾಗಿ ಪ್ರದರ್ಶಿಸುವುದಾಗಿ ಘೋಷಿಸಿದ್ದಾರೆ!

”ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕತೆ ಹೊಂದಿರುವ ಈ ಸಿನಿಮಾ ಒಂದು ರೀತಿ ಎಲ್ಲ ಹಿಂದುಗಳಿಗೆ ಜಾಗೃತಿ ಮೂಡಿಸುತ್ತಿದೆ. ನಾವು ಎಚ್ಚರಗೊಳ್ಳದಿದ್ದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಈ ಸಿನಿಮಾ ತೋರಿಸುತ್ತಿದೆ ಹಾಗಾಗಿ ಈ ಸಿನಿಮಾವನ್ನು ಎಲ್ಲರೂ ನೋಡಬೇಕು” ಎಂದಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಕೆಲವು ಚಿತ್ರಮಂದಿರಗಳ ಮಾಲೀಕರು ಸಿನಿಮಾ ಬಿಡುಗಡೆ ಮಾಡಲು ಹೆದರುತ್ತಿದ್ದರು. ನಾನು ಚಿತ್ರಮಂದಿರ ಮಾಲೀಕರ ಬಳಿ ಮಾತನಾಡಿ ಅವರ ಮನವೊಲಿಸಿದ್ದೇನೆ. ಅಷ್ಟು ಮಾತ್ರವಲ್ಲದೆ ಸತತ ಒಂದು ವಾರಗಳ ಕಾಲ ಮಧ್ಯಾಹ್ನದ ಶೋ ಅನ್ನು ಉಚಿತವಾಗಿ ಪ್ರದರ್ಶಿಸುವಂತೆ ಸೂಚಿಸಿದ್ದೇನೆ. ಉಚಿತ ಶೋನ ಹಣವನ್ನು ನಾನೇ ಭರಿಸಲಿದ್ದೇನೆ” ಎಂದು ಯತ್ನಾಳ್ ಹೇಳಿದ್ದಾರೆ.

ನಮ್ಮ ಜಿಲ್ಲೆಯ ಜನಗಳೆಲ್ಲರೂ ಆ ಸಿನಿಮಾ ನೋಡಬೇಕು. ಹೀಗೆ ನಾವು ಎಲ್ಲವನ್ನೂ ಮರೆಯುತ್ತಾ ಸಾಗಿದರೆ ನಮ್ಮ ಮುಂದಿನ ಭವಿಷ್ಯ ಹೇಗಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ನಾವು ಜನ ಆ ಸಿನಿಮಾ ನೋಡಬೇಕು’ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಮಧ್ಯ ಪ್ರದೇಶ, ಗುಜರಾತ್ ಸೇರಿದಂತೆ ಇನ್ನೂ ಕೆಲವು ರಾಜ್ಯಗಳಲ್ಲಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ದೊರೆತಿದೆ. ಮಧ್ಯ ಪ್ರದೇಶದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಲೆಂದೇ ಪೊಲೀಸರಿಗೆ ವಿಶೇಷ ರಜೆಯನ್ನು ಮಂಜೂರು ಮಾಡಲಾಗಿದೆ.