Sunday, 15th December 2024

ಗಾಂಧೀಜಿಯ ಬೆಳಗಾವಿ ಭೇಟಿ

ಸಾಂದರ್ಭಿಕ

ಡಾ.ಎಸ್.ಬಿ.ಬಸೆಟ್ಟಿ

ಬೆಳಗಾವಿಯಲ್ಲಿ ಬಹಿರಂಗ ಸಭೆ 9ನೇ ನವೆಂಬರ್ 1920ರಂದು ನಡೆಯಿತು. ಈ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಗಾಂಧೀಜಿ ಹೀಗೆ ಹೇಳಿದರು. ಮಾರುತಿ ಗುಡಿಯಲ್ಲಿ ನಾನು ಕಂಡ ದೃಶ್ಯದಿಂದ ನನ್ನ ಮೇಲಾದ ಪ್ರಭಾವವನ್ನು ಶಬ್ದಗಳಿಂದ ವರ್ಣಿಸಲಾರೆ.

ಪೂನಾದಲ್ಲಿಯೂ ನನಗೆ ಇಂಥದೇ ಅನುಭವ ಆಗಿತ್ತು. ಜನ ತಮ್ಮ ಪ್ರೀತಿಯನ್ನು ತಮ್ಮ ಒಡವೆಗಳನ್ನು ನನ್ನ ಮೇಲೆ ಮಳೆಗರೆ ದರು. ಅವರಿಗೆ ಗೊತ್ತು ರಾಮರಾಜ್ಯ ಪಡೆಯಲು ಸ್ವರಾಜ್ಯ ಸಂಪಾದಿಸಲು ನಾನು ಒಡವೆಗಳನ್ನು ಕೇಳಿದ್ದೇನೆ. ನಮ್ಮ ಕೋಟೀ ಶ್ವರರು ಇದಕ್ಕೆೆ ಸಮನಾಗಿ ಏನೂ ಕೊಟ್ಟಿಲ್ಲ. ಅವರ ಕಾಲಿಗೆ ಬಿದ್ದು ದಾನ ಕೇಳಿದಾಗ ಸ್ವಲ್ಪ ಅವರ ಮನಸ್ಸು ಕರಗಬಹುದು ಅಷ್ಟೇ. ಹೆಂಗಸರಿಗೆ ನಾನು ಏನೂ ಭಿನ್ನಹ ಮಾಡಬೇಕಾಗಲಿಲ್ಲ. ಸ್ವಯಂ  ಪ್ರೇರಣೆಯಿಂದ ಪ್ರೀತಿಯಿಂದ ನಾನು ಕೇಳಿದ್ದೇನ್ನೆಲ್ಲ ಕೊಟ್ಟರು. ಈ ಪ್ರೀತಿಯ ಕಾಣಿಕೆಗೆ ಕೋಟಿಗಟ್ಟಲೇ ದಾನ ಸಮ ಅಲ್ಲ.

ಶಹಾಪುರದಲ್ಲಿ ಜನರು ನಿಧಿ ಅರ್ಪಿಸಿದ್ದು. ಆನಂತರ ಖಾನಾಪುರ, ನಂದಗಡ, ಅಳ್ನಾವರ, ಹಳ್ಯಾಳಗಳ ಪ್ರವಾಸ ಮುಗಿಸಿಕೊಂಡು ಮರುದಿವಸ 10ನೇ ನವೆಂಬರ್ 1920ರಂದು ಗಾಂಧೀಜಿ ಧಾರವಾಡಕ್ಕೆ ತೆರಳಿದರು. ಧಾರವಾಡ ಭೇಟಿ (10ನೇ ನವೆಂಬರ್ 1920):
ಮಹಾತ್ಮಾ ಗಾಂಧೀಜಿಯವರು ಧಾರವಾಡಕ್ಕೆ 10ನೇ ನವೆಂಬರ್ 1920ರಂದು ಮುಂಜಾನೆ ಗಾಂಧೀಜಿ ಧಾರವಾಡ ತಲುಪಿ ಕೊಂಡರು. ಅವರೊಡನೆ ಶೌಕತ್ ಅಲಿಯವರೂ ಬಂದಿದ್ದಿರು.

ಅವರು ಮೊದಲನೆಯ ದಿನ ಉಳ ಬಸಪ್ಪನ ಗುಡ್ಡದ ದೇವಸ್ಥಾನದ ಮುಂಭಾಗದಲ್ಲಿ ಸ್ಟೇಶನ್ ರೋಡಿನ ಮಗ್ಗಿನ ಬಯಲಿನಲ್ಲಿ ಸಾರ್ವಜನಿಕ ಭಾಷಣ ಮಾಡಿದರು. ಮರುದಿನ ಮುಂಜಾನೆ ಇಂದಿನ ಎಮ್ಮಿಕೇರಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಅಂದಿನ ಧಾರವಾಡ ನಗರ ಸಭೆಯ ಅಧ್ಯಕ್ಷರಾಗಿದ್ದ ನಾರಾಯಣ ಕರಗುದರಿಯವರ ಮನೆಯ ಹತ್ತಿರವಿರುವ ಗಾಯಕವಾಡ ಬಂಗ್ಲೆಯಲ್ಲಿ ಅವರ ಜೊತೆಗೇ ಸಂಭಾಷಣೆಯಲ್ಲಿ ತೊಡಗಿದ್ದರು.

ಮರುದಿನ ಧಾರವಾಡದಿಂದ ಹುಬ್ಬಳ್ಳಿಗೆ 11ನೇ ನವೆಂಬರ್ 1920ರಂದು ಪ್ರವಾಸ ಕೈಕೊಂಡರು. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಯಲ್ಲಿ 11ನೇ ನವೆಂಬರ್ 1920ರಂದು ಶ್ರೀ ಸಿದ್ಧಾರೂಢ ಸ್ವಾಮೀಜಿಗೆ ಖಾದಿ ತೊಡಿಸಿದರು ಗಾಂಧೀಜಿ. ಇದು ಧಾರವಾಡ ಜಿಲ್ಲೆ ಯಲ್ಲಿ ಗಾಂಧೀಜಿ ಹೆಜ್ಜೆಗುರುತು.

1920ರಲ್ಲಿ ಶ್ರೀ ಸಿದ್ಧಾರೂಢ ಸ್ವಾಮೀಜಿಗೆ ಖಾದಿ ತೊಡಿಸಿದ ಬಾಪೂಜಿ. ಸದಾಕಡಿಮೆ ಬಟ್ಟೆ ತೊಟ್ಟು ಬದುಕಿ ಬಾಳಿದ ಹುಬ್ಬಳ್ಳಿಯ ಶ್ರೀಸಿದ್ಧಾರೂಢರಿಗೆ ಮಹಾತ್ಮಾ ಗಾಂಧೀಜಿ ತಮ್ಮ ಪ್ರೀತಿಯ ಖಾದಿ ತೊಡಿಸುವ ಮೂಲಕ ಗೌರವ ಸಲ್ಲಿಸಿದರಲ್ಲದೇ ಆ ಎರಡು ಅಪ್ರತಿಮ ಮೇರು ವ್ಯಕ್ತಿತ್ವಗಳು ಒಂದಾದ ಕ್ಷಣವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಹಲವಾರು ಹುಬ್ಬಳ್ಳಿಗರಿಗೆ ಒಲಿದು ಬಂದಿತ್ತು. 1920ರಲ್ಲಿ ಹುಬ್ಬಳ್ಳಿಗೆ ಮಹಾತ್ಮಾ ಗಾಂಧೀಜಿ ಆಗಮಿಸಿದಾಗ ಕಾಂಗ್ರೆಸ್ ಸಭೆಗೆ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಬೇಕು ಎಂದು ಇಡೀ ಊರಿನಲ್ಲಿ ಚರ್ಚೆ ನಡೆಯಿತು.

ಆಗ ಎಲ್ಲರೂ ಶ್ರೀಸಿದ್ಧಾರೂಢ ಸ್ವಾಮೀಜಿ ಅವರೇ ಇದಕ್ಕೆ ಅರ್ಹ ಸೂಕ್ತ ವ್ಯಕ್ತಿ ಎಂದು ಹಲವರು ಸಲಹೆ ನೀಡಿದರು. ಆಗ ಹೆಚ್ಚಿನವರು ಈ ಮಾತನ್ನು ಒಪ್ಪಿಕೊಂಡು ಶ್ರೀಸಿದ್ಧಾರೂಢರ ಬಳಿ ಹೋಗಿ ಅವರನ್ನು ಒಪ್ಪಿಸಿದರು. ಆಗ ಸಭೆಯ ದಿನ ಹುಬ್ಬಳ್ಳಿಗೆ ಆಗಮಿಸಿದ ಮಹಾತ್ಮಾ ಗಾಂಧೀಜಿ ಅವರು ಶ್ರೀಸಿದ್ಧಾರೂಢ ಎಂದರೆ ಯಾರು? ಅವರನ್ನು ನಾನು ನೋಡಬೇಕು ಎಂದರು. ಮಠಕ್ಕೆ ಬಂದಾಗ ನೂರಾರು ಭಕ್ತರೊಂದಿಗೆ ಅರೆಬೆತ್ತಲೆಯಾಗಿ ಮಠದ ಊಟದ ಹಾಲಿನಲ್ಲಿ ಪ್ರಸಾದ ಸ್ವೀಕರಿಸುತ್ತಿದ್ದ ಶ್ರೀಸಿದ್ಧಾ ರೂಢರನ್ನು ‘ಇವರೇ ಸಿದ್ಧಾರೂಢರು’ ಎಂದು ಗಾಂಧೀಜಿ ಅವರಿಗೆ ಜನರು ಪರಿಚಯಿಸಿದರು.

ಶ್ರೀಸಿದ್ಧಾರೂಢರೊಂದಿಗೆ ಮಾತುಕತೆ ನಡೆಸಿದ ಗಾಂಧೀಜಿ ಹೆಚ್ಚು ಕಡಿಮೆ ತಮ್ಮದೇ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದ
ಸಿದ್ಧಾರೂಢರನ್ನು ಭೇಟಿ ಮಾಡಿದ್ದಕ್ಕೆ ತುಂಬಾ ಸಂತಸಗೊಂಡಿದ್ದರು. ಆದರೆ ಗಾಂಧೀಜಿ ಅವರಿಗೆ ಒಂದು ಸಮಸ್ಯೆ ಎದುರಾಗಿತ್ತು. ಸದಾ ಅರೆಬೆತ್ತಲೆಯಾಗಿರುವ ಇಂತಹ ದೊಡ್ಡ ವ್ಯಕ್ತಿಗೆ ಖಾದಿ ತೊಡಿಸುವುದು ಹೇಗೆ? ಎಂದು ಪ್ರಶ್ನಿಸಿದರು. ಆಗ ಶ್ರೀ ಸಿದ್ಧಾರೂಢರ ಬಳಿ ಜನರು ಹೋಗಿ ಈ ಸಮಸ್ಯೆ ಹೇಳಿಕೊಂಡಾಗ ನಾನು ಗಾಂಧಿಯಂಥ ವ್ಯಕ್ತಿಗಾಗಿ ಖಾದಿ ತೊಡುವುದಷ್ಟೇ ಅಲ್ಲ, ದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ನಾನು ಸನ್ಯಾಸಿಯಾದ ಮಾತ್ರಕ್ಕೆ ನನಗೆ ದೇಶ ಬೇಡವೇ? ಎಂದು ಪ್ರಶ್ನಿಸಿದ್ದರು.

ಅಂತಿಮವಾಗಿ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ಸಂಯುಕ್ತ ಕರ್ನಾಟಕ ಪತ್ರಿಕೆ ಕಚೇರಿಯ ಆವರಣದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿದ್ದ ಶ್ರೀ ಸಿದ್ಧಾರೂಢರು ದೇಶಕ್ಕಾಗಿ ಗಾಂಧೀಜಿಯಂಥ ಶ್ರೇಷ್ಠ ವ್ಯಕ್ತಿಯೊಂದಿಗೆ ಎಲ್ಲರೂ
ಹೆಜ್ಜೆ ಹಾಕಬೇಕು ಎಂದು ಕರೆಕೊಟ್ಟಿದ್ದರು. ಈ ಎಲ್ಲ ಮಾಹಿತಿಯನ್ನು ಶ್ರೀಸಿದ್ಧಾರೂಢ ಮಠದ ಆಡಳಿತ ಮಂಡಳ ಸಂಗ್ರಹಿಸಿ ಟ್ಟುಕೊಂಡಿದೆ.

ಧಾರವಾಡದಿಂದ 11ನೇ ನವೆಂಬರ್ 1920ರಂದು ಹುಬ್ಬಳ್ಳಿ, ಗದಗಗೆ ಆಗಮಿಸಿದರು. ಈ ಎರಡು ಊರುಗಳಲ್ಲಿ 12 ಸಾವಿರ ರುಪಾಯಿ ಕೂಡಿತು. ಗದಗಿನಿಂದ ಬಾಗಲಕೋಟೆಗೆ ಮತ್ತು ಬಿಜಾಪುರಕ್ಕೆ ಹೋಗುವ ಕಾರ್ಯಕ್ರಮವಿತ್ತು. ಆದರೆ ದೇವಲ್ಸ್
ಸರ್ಕಸ್‌ನ ಮಾಜಿ ವ್ಯವಸ್ಥಾಪಕರಾದ ರಾಮಭಾವು ಪಟವರ್ಧನ ಎಂಬುವರು ಗಾಂಧೀಜಿಯವರನ್ನು ಕಂಡು ಸಾಂಗ್ಲಿಯ ಜನ ಲೋಕಮಾನ್ಯರ ಸ್ಮಾರಕಕ್ಕೆ ಒಂದು ಲಕ್ಷ ರುಪಾಯಿ ಕೂಡಿಸಿದ್ದಾರೆ ಎಂದು ಹೇಳಿ ಗಾಂಧಿಯವರನ್ನು 12 ನವೆಂಬರ್ 1920 ರಂದು ಸಾಂಗ್ಲಿಗೆ ಕರೆದೊಯ್ದರು.

ನಿಪ್ಪಾಣಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗಗಳ ಪ್ರವಾಸದ ಒಂದು ಮಹತ್ವದ ಘಟನೆ ಎಂದರೆ ಎರಡು – ಮೂರು ರಾಷ್ಟ್ರೀಯ ಶಾಲೆ ಮತ್ತು ಖಾದಿ ಅಂಗಡಿಗಳ ಪ್ರಾರಂಭ. ಆ ಕಾಲದಲ್ಲಿ ಸುಮಾರಾಗಿ 1918-1919ರ ಕಾಲದಲ್ಲಿ ಕರ್ನಾಟಕವೂ ಸೇರಿದಂತೆ ಇಡೀ ಭಾರತವನ್ನೂ ಜಾಗತೀಕವಾಗಿ ಹಬ್ಬಿದ ‘ಸ್ಪ್ಯಾನಿಷ್ ಪ್ಲೂ’ ಎಂಬ ಸಾಂಕ್ರಾಮಿಕ ಮಹಾಮಾರಿಯಿಂದ
ನರಳಿತ್ತು. ಹಾಗೆಯೇ ಬ್ರಿಟಿಷರ ಸರಕಾರದ ಸಾಮ್ರಾಜ್ಯ ವಿಸ್ತರಣವಾದ ಹಾಗೂ ದುರಾಡಳಿತದಿಂದ ದೇಶದ ಸಂಪತ್ತೆಲ್ಲಾ ಬರಡಾಗುವುದರ ಜೊತೆಗೆ ಸ್ಥಳೀಯ ಕರಕುಶಲತೆಗಳೂ, ಗ್ರಾಮೀಣ ಗುಡಿ ಕೈಗಾರಿಕೆಗಳೂ ಅವನತಿಯ ಹಂತವನ್ನು ತಲುಪಿತ್ತು.
ಇಂತಹ ಅತ್ಯಂತ ಜಟಿಲವಾದ ಪರಿಸ್ಥಿತಿಯಲ್ಲಿ ಗಾಂಧೀಜಿ ತಮ್ಮ ನೇತೃತ್ವದ ಮೂಲಕ ನವ ಚೈತನ್ಯದ ಬೆಳಕನ್ನು ನೀಡಿದ್ದರು.

ಸರ್ವಧರ್ಮ ಸಮಭಾವ, ಐಕ್ಯತೆ, ಸೋದರತೆ, ಸ್ವದೇಶಿ ಹಾಗೂ ಸತ್ಯಾಗ್ರಹದ ಅರಿವನ್ನು ನೀಡಿ ಗಾಂಧೀಜಿ ಜನರಲ್ಲಿ ಆತ್ಮವಿಶ್ವಾಸ ವನ್ನು ಮೂಡಿಸಿದ್ದರು. ಇದರಿಂದಾಗಿಯೇ ಗಾಂಧೀಯುಗದ ಮಹಾ ಚಳುವಳಿಯಾಗಿ ಅಸಹಕಾರದ ಆಂದೋಲನವು ಗಾಢವಾದ ಪರಿಣಾಮಗಳನ್ನುಂಟು ಮಾಡಿತು.

ಈಗ ಅದೇ ಗಾಂಧೀಜಿ ಅಸಹಕಾರ ಆಂದೋಲನದ (1920ರಿಂದ2020ಕ್ಕೆ) ಶತಮಾನದ ನೆನಪಿನಲ್ಲಿ ನಾವಿದ್ದೇವೆ. ಈಗ ಭಾರತ ವನ್ನು ಹಾಗೂ ಮಾನವತೆಯನ್ನು ಕೋವಿಡ್-19ಎಂಬ ಮಹಾಮಾರಿಯು ವಿಶ್ವವ್ಯಾಪಿ ಕಾಡುತ್ತಾ ಇದೆ. ಭಾರತ ಗಡಿಯಲ್ಲಿ ಚೀನಾದ ವಿಸ್ತರಣಾವಾದಿ ಯುದ್ದೋನ್ಮಾದವು ನಡೆದಿದೆ. ಇದಲ್ಲದೆಯೇ ಚೀನಾದೇಶದ ವಸ್ತುಗಳು, ತಂತ್ರಾಂಶಗಳು  ಹಾಗೂ ಉದ್ಯಮಗಳು ನಮ್ಮ ದೇಶದಲ್ಲಿರುವ ಅವಕಾಶ ಗಳನ್ನೂ, ಆರ್ಥಿಕತೆಯನ್ನೂ ಕಬಳಿಸುವ ಹಂತದಲ್ಲಿವೆ.

ಈ ಎಲ್ಲಾ ಸಂದಿಗ್ಧತೆಗಳ ಸಂದರ್ಭದಲ್ಲಿ ನಮಗೆ ಗಾಂಧೀಜಿ ತೋರಿಸಿ ಕೊಟ್ಟಿರುವ ಅಭಯ ಪ್ರಜ್ಞೆಯ ಸಹಿತವಾದ ಮಾನವೀ ಯತೆ, ಸತ್ಯಾಗ್ರಹ, ಸ್ವದೇಶಿ, ಸ್ವಸಹಾಯ, ಸ್ವಾವಲಂಭನೆ, ಸಮಭಾವ, ನೈರ್ಮಲ್ಯ, ಆರೋಗ್ಯಮಯ ಜೀವನ ಹಾಗೂ ಸರ್ವೋ ದಯಗಳ ಕಾಯಕದ ಮಾರ್ಗ, ಶ್ರಮ, ಸಂಸ್ಕೃತಿಯ ಮೌಲ್ಯವನ್ನು ಉದ್ದೀಪನಗೊಳಿಸಿದ್ದರು. ಇವು ನಮಗೆಲ್ಲಾ ದಾರಿದೀಪ ವಾಗಬೇಕು. ಮುಂಬರುವ ತಲೆಮಾರುಗಳ ಜನ, ರಕ್ತ, ಮಾಂಸ ಗಳಿಂದಾದ ಇಂತಹ ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ನಡೆದಾಡಿದ್ದನೆಂಬುದನ್ನು ಬಹುಶಃ ನಂಬಲಾರರು ಎಂದು ಖ್ಯಾತ ವಿಜ್ಞಾನಿ ಅಲ್ಬರ್ಟ ಐನ್‌ಸ್ಟೀನ್ ಮಹಾತ್ಮಾ ಗಾಂಧೀಯ ವರನ್ನು ಕುರಿತು ಹೇಳಿದ್ದರು.

‘My life is my message ಎಂಬ ಮಾತನ್ನು ಸ್ವತಃ ಗಾಂಧೀಜಿ ಹೇಳಿದ್ದರು. ‘ನನ್ನ ಬದುಕೇ ನನ್ನ ಸಂದೇಶ’ವೆಂದು ಪ್ರಾಯಶಃ ಗಾಂಧೀಜಿಯವರ ಸಮಕಾಲೀನರಿಗಾರಿಗೂ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಅಂಥ ಬದುಕನ್ನು ಬದುಕಿದ ವರು ಗಾಂಧೀಜಿ.
ಭಯೋತ್ಪಾದನೆ, ಯುದ್ಧದ ಕಾರ್ಮೋಡಗಳು ಕವಿಯುತ್ತಿರುವ ಇಂದಿನ ಸಂದರ್ಭದಲ್ಲಿ ಗಾಂಧಿ ಚಿಂತನೆಯ ಪ್ರಸ್ತುತತೆ ಮತ್ತೊಮ್ಮೆ ಮುನ್ನೆಲೆಗೆ  ಬರುತ್ತಿದೆ.