ಸ್ವಾಸ್ಥ್ಯ ಸಂಪದ
ಡಾ.ಎಸ್.ಪಿ.ಯೋಗಣ್ಣ
yoganna55@gmail.com
ಭಾರತೀಯ ಪ್ರಾಚೀನ ಆರೋಗ್ಯ ವಿಜ್ಞಾನ ವೇದ, ಉಪನಿಷತ್ ಮತ್ತು ಭಗವದ್ಗೀತೆಗಳಲ್ಲಿಯೇ ಮನಸ್ಸನ್ನು ಗುರುತಿಸಿರುವು ದಲ್ಲದೇ ಮನುಷ್ಯನಲ್ಲಿ ಮನಸ್ಸು ಪ್ರಧಾನ ಎಂಬ ಅಂಶವನ್ನು ಬಹಳ ಹಿಂದೆಯೇ ಅರಿತಿದೆ. ಇದು ನಮ್ಮ ಪುರಾತನರಿಗಿದ್ದ ವೈಜ್ಞಾನಿಕ ದೃಷ್ಟಿಕೋನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಮನಸ್ಸು ಆತ್ಮದ ಹೊರಸಲಕರಣೆಯಾಗಿದ್ದು, ದೇಹವನ್ನು ನಿಯಂತ್ರಿಸುವ ಅದ್ವಿತೀಯ ಶಕ್ತಿಯಾಗಿದೆ. ಮನಸ್ಸು ಮೆದುಳಿ ನಲ್ಲಿದೆಯೋ ಅಥವಾ ಜೀವ ಕೋಶಗಳಲ್ಲೆಲ್ಲ ಇದ್ದು, ಅವೆಲ್ಲವುಗಳ ಸಮೂಹ ಮನಸ್ಸೋ ಎಂಬುದರ ಬಗ್ಗೆ ಜಿಜ್ಞಾಸೆಯಿದೆ. ಆದರೂ ಮನಸ್ಸು ಮೆದುಳು, ನರಮಂಡಲ ಮತ್ತು ಒಳಸುರಿಕೆ ಗ್ರಂಥಿಗಳು (ಎಂಡೋಕ್ರೈನ್ ಗ್ಲ್ಯಾಂಡ್ಸ್) ಸುರಿಕೆ ಮಾಡುವ ಹಾರ್ಮೋನ್‌ಗಳ ಮೂಲಕ ಪ್ರತಿಯೊಂದು ಜೀವಕೋಶಗಳನ್ನು ನಿಯಂತ್ರಿಸುತ್ತದೆ ಎಂಬುದು ನಿರ್ವಿವಾದದ ವೈಜ್ಞಾನಿಕ ಸಂಗತಿ.
ಮನಸ್ಸಿನ ಕಾರ್ಯಗಳು
ಮನಸ್ಸು ಆತ್ಮವನ್ನು ಸುತ್ತುವರೆದಿದ್ದು, ಮನಸ್ಸು ಚಂಚಲರಹಿತವಾಗಿ ಸ್ಥಿರವಾದಾಗ ಆತ್ಮ ಮೇಲುಸ್ತರಕ್ಕೆ ಬರುತ್ತದೆ. ಆತ್ಮ ಮೇಲುಸ್ತರಕ್ಕೆ ಬಂದಾಗ ನಿರಂತರ ಸಂತೋಷದ ಸ್ಥಿತಿ ಉಂಟಾಗುತ್ತದೆ. ಇದನ್ನೇ ‘ಚಿತ್ ಆನಂದ’ ಎನ್ನುವುದು. ಆತ್ಮವು ಅತೀತಶಕ್ತಿಯ(ದೇವರು) ಕಣವಾಗಿರುವುದರಿಂದ ಆತ್ಮಸ್ಪರ್ಶವಾಗುತ್ತಿದ್ದಂತೆ ಅತೀತಶಕ್ತಿಯ ಸ್ಪರ್ಶ ವಾಗಿ ಜ್ಞಾನೋದಯ ವಾಗುತ್ತದೆ.
ಜ್ಞಾನೋದಯವೆಂದರೆ ಅತೀತ ಶಕ್ತಿಯ ಅರಿವು ಮತ್ತು ಸ್ಪರ್ಶ ಹಾಗೂ ತನಗೆ ಸೃಷ್ಟಿಯ ಎಲ್ಲವುಗಳೊಡನೆ ಇರುವ ಅವಿನಾ ಭಾವ ಸಂಬಂಧದ ಸಮಗ್ರ ಅರಿವು. ಈ ಅರಿವಾಗುತ್ತಿದ್ದಂತೆ ಎಲ್ಲವನ್ನೂ ಸಮಚಿತ್ತದಿಂದ ಜೋಡಿಸಿ ಸಮಗ್ರವಾಗಿ ನೋಡುವ ಮತ್ತು ಸಮಗ್ರ ದೃಷ್ಟಿಕೋನದಿಂದ ಕಾರ್ಯವನ್ನು ಕೈಗೊಳ್ಳುವ ಭಾವ ಉಂಟಾಗುತ್ತದೆ. ಸೃಷ್ಟಿಯಲ್ಲಿನ ಎಲ್ಲವೂ ಅತೀತಶಕ್ತಿಯ ನಿಯಂತ್ರಣದಲ್ಲಿರುವ ಅರಿವುಂಟಾಗಿ ಸೃಷ್ಟಿಯಲ್ಲಿನ ಎಲ್ಲವುಗಳನ್ನೂ ಪೋಷಿಸುವ ಆಲೋಚನೆಗಳು ಕಾರ್ಯಗತವಾಗುತ್ತವೆ.
ಮನುಷ್ಯನ ಎಲ್ಲ ಲೌಕಿಕ ಕಾರ್ಯಗಳು ಮನಸ್ಸಿನಲ್ಲಿ ಉತ್ಪತ್ತಿಯಾಗುವ ಆಲೋಚನೆಗಳಿಂದಲೇ ಜರುಗುವುದರಿಂದ ಮತ್ತು ಆ ಆಲೋಚನೆಗಳಿಗನುಗುಣವಾಗಿ ಜರುಗುವ ಕಾರ್ಯಗಳಿಗನುಸಾರವಾಗಿ ಬದುಕಿನಲ್ಲಿ ಸುಖ ದುಃಖಗಳುಂಟಾಗುತ್ತವೆ. ಆದುದರಿಂದ ಮನಸ್ಸಿನಲ್ಲಿ ಉದ್ಭವವಾಗುವ ಆಲೋಚನೆಗಳ ನಿಗ್ರಹ ಅತ್ಯವಶ್ಯಕ. ಉಂಟಾದ ಆಲೋಚನೆಗಳಿಗನುಗುಣವಾಗಿ ಕೈಗೊಳ್ಳಬೇಕಾದ ಕಾರ್ಯಗಳನ್ನು ನಿರೂಪಿಸುವ ಬುದ್ಧಿವಂತಿಕೆಯೂ ಸಹ ಸುಖ ದುಃಖಗಳ ಉಗಮದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೃಷ್ಟಿಕರ್ತ ಮನಸ್ಸನ್ನು ಚಂಚಲಶೀಲವನ್ನಾಗಿಸಿದ ಹಿಂದಿನ ಉದ್ದೇಶ ನಿಗೂಢ. ಸಾಮಾನ್ಯರ ಮನಸ್ಸು ಸದಾಕಾಲ ಭಾವಗಳು ಮತ್ತು ಆಲೋಚನೆಗಳಿಂದ ತುಂಬಿತುಳುಕುತ್ತಿರುತ್ತದೆ. ಯಾವಾಗಲೂ ಸ್ಥಿರವಾಗಿ ಇರುವುದೇ ಇಲ್ಲ. ನಿದ್ರೆಯಲ್ಲಿಯೂ ಸಹ ಮನಸ್ಸು ಕನಸುಗಳ ಮೂಲಕ ಕ್ರಿಯಾಶೀಲವಾಗಿರುತ್ತದೆ.
ನಿದ್ರೆಯೂ ಸಹ ಮನಸ್ಸಿನ ಶಾಂತಸ್ಥಿತಿಯಲ್ಲ ! ಮನಸ್ಸು ಸದಾಕಾಲ ಸಕಾರಾತ್ಮಕ ಭಾವಗಳು (ಪ್ರೀತಿ, ಸಂತೋಷ, ಧೈರ್ಯ, ಆತ್ಮವಿಶ್ವಾಸ, ನಂಬಿಕೆ ಇತ್ಯಾದಿ)ಮತ್ತು ನಕಾರಾತ್ಮಕ ಭಾವಗಳ (ದ್ವೇಷ, ಅಸಂತೋಷ, ಭಯ, ಅವಿಶ್ವಾಸ, ಅಪನಂಬಿಕೆ ಇತ್ಯಾದಿ) ನಡುವೆ ತೊಳಲಾಡುವ ಚಂಚಲಶೀಲತೆಯನ್ನು ಹೊಂದಿದೆ. ಮನಸ್ಸು ಸದಾಕಾಲ ದೇಹದ ಒಳಗಿದ್ದರೂ ಅದು ಬಹು
ಪಾಲು ಸಮಯ ಹೊರಜಗತ್ತಿನ ಆಗುಹೋಗುಗಳ ಬಗ್ಗೆಯೇ ಹೆಚ್ಚು ಆಸಕ್ತಿ ವಹಿಸುತ್ತದೆ.
ಬಾಹ್ಯ ಜಗತ್ತು ವೈವಿಧ್ಯಮಯ ವಿಚಾರ ಮತ್ತು ಘಟನೆಗಳಿಂದ ಕೂಡಿದ್ದು, ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವಗಳ ಉಗಮಕ್ಕೆ ಇದು ಪ್ರಮುಖ ಪ್ರೇರಣೆಯಾಗಿದೆ. ಬಾಹ್ಯಸಂಚಾರದ ಮನಸ್ಸಿಗೆ ತಾನಿರುವ ದೇಹ ಮತ್ತು ತಾನು ಆವರಿಸಿರುವ ಆತ್ಮ ಮತ್ತು ಅದಕ್ಕೆ ಅತೀತಶಕ್ತಿಯೊಡನಿರುವ ಸಂಬಂಧ ಇವುಗಳ ಬಗ್ಗೆ ಸಾಮಾನ್ಯವಾಗಿ ಅದು ಚಿಂತಿಸುವುದೇ ಇಲ್ಲ.
ಬಹಿರ್ಮುಖಿ ಮನಸ್ಸನ್ನು ಬಾಹ್ಯ ವಿಚಾರಗಳಿಂದ ಬಿಡಿಸಿ/ ಕಡಿಮೆಗೊಳಿಸಿ ಅದನ್ನು ಅಂತರ್ಮುಖಿ ಮಾಡಿ ದೇಹ ಮತ್ತು ಆತ್ಮಗಳನ್ನು ಸ್ಪರ್ಶಿಸಿದಲ್ಲಿ ಬದುಕಿನ ಮೂಲ ಉದ್ದೇಶ ಅದಕ್ಕೆ ಅರ್ಥವಾಗಿ ಬಾಹ್ಯವಿಚಾರಗಳಿಗೆ ಹೆಚ್ಚು ಅಂಟಿಕೊಳ್ಳದೇ ಶಾಂತಿ
ಬದುಕಿಗೆ ನಾಂದಿಯಾಗುತ್ತದೆ.
ಲೌಕಿಕ ಜಗತ್ತು ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯ ಇತ್ಯಾದಿಗಳಿಂದ ಕೂಡಿದ್ದು, ಇವೆಲ್ಲವುಗಳನ್ನು ಮನುಷ್ಯ ಶಾಂತಚಿತ್ತದಿಂದ ಎದುರಿಸಿ ನೆಮ್ಮದಿಯಿಂದ ಬದುಕುವ ವಿಧಿ ವಿಧಾನಗಳ ಅರಿವು ಮನಸ್ಸಿಗೆ ಅತ್ಯವಶ್ಯಕ. ಕಷ್ಟಗಳು
ಬಂದಾಗ ಕುಗ್ಗದೆ, ನಿರಾಸೆಯಾದಾಗ ದುಃಖಿಸದೇ, ಸಂತೋಷ ಬಂದಾಗ ಹಿಗ್ಗದೆ, ವೈರಿಗಳು ಮತ್ತು ಸಮಾಜಘಾತುಕ ಶಕ್ತಿಗಳನ್ನು ಪರಿವರ್ತಿಸುತ್ತ ಅಥವಾ ಸದೆಬಡಿಯುತ್ತ ಸಮಚಿತ್ತದಿಂದ ಬದುಕುವ ಮನಸ್ಥಿತಿ ಅತ್ಯವಶ್ಯಕ. ಈ ದಿಕ್ಕಿನಲ್ಲಿ
ಮನಸ್ಸನ್ನು ತರಬೇತಿಗೊಳಿಸಿದರೆ ಮಾತ್ರ ಸಂದರ್ಭಕ್ಕನುಗುಣವಾಗಿ ಅದು ವರ್ತಿಸುತ್ತದೆ.
ಇಲ್ಲದಿದ್ದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡು ನಲುಗುತ್ತದೆ. ಭಗವದ್ಗೀತೆಯಲ್ಲಿ ಮನಸ್ಸಿಗೆ ಸಂಬಂಧಿಸಿದಂತೆ ಮತ್ತು ಅದನ್ನು ಸಕಾರಾತ್ಮಕವಾಗಿ ನಿಯಂತ್ರಿಸುವ ಬಗ್ಗೆ ವೈಜ್ಞಾನಿಕವಾಗಿ ಹಲವಾರು ಶ್ಲೋಕಗಳಲ್ಲಿ ವಿವರಿಸಲಾಗಿದೆ. ಯುದ್ಧರಂಗದಲ್ಲಿ ವೈರಾಗ್ಯ ತಳೆದ ಅರ್ಜುನನ ಮನಸ್ಥಿತಿಯನ್ನು ಚೈತನ್ಯಶೀಲಗೊಳಿಸಿ ಕ್ರಿಯಾಶೀಲಗೊಳಿಸಲು ಮನಸ್ಸು, ಲೌಕಿಕ ಬದುಕು,
ಆಧ್ಯಾತ್ಮ, ಕರ್ತವ್ಯ, ಸುಖಶಾಂತಿ ಇವುಗಳ ಬಗ್ಗೆ ಶ್ರಿಕೃಷ್ಣ ಭಗವದ್ಗೀತೆಯಲ್ಲಿ ಮನಸ್ಸಿನ ಬಗ್ಗೆ ವಿವರಿಸಿರುವ ವಿಚಾರಗಳು ವೈಜ್ಞಾನಿಕವಾಗಿದ್ದು, ಆಧುನಿಕ ಮನಶಾಸಜ್ಞರಾದ ಸಿಗ್ಮಾಯ್ಡ್ ಫಾಯ್ಡ್, ಯಂಗ್, ಮತ್ತಿತರರ ವೈಜ್ಞಾನಿಕ ಮನೋಸಿದ್ಧಾಂತ ಗಳಿಗೂ ಸಾಮ್ಯತೆಯಿದ್ದು, ಭಗವದ್ಗೀತೆಯ ವಿಚಾರಗಳು ವೈಜ್ಞಾನಿಕ ಎಂಬ ದೃಷ್ಟಿಕೋನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಭಗವದ್ಗೀತೆಯಲ್ಲಿನ ಮನಸ್ಸಿಗೆ ಸಂಬಂಧಿಸಿದ ಕೆಲವು ಶ್ಲೋಕಗಳನ್ನು ವೈಜ್ಞಾನಿಕವಾಗಿ ವಿವರಿಸಲಾಗಿದೆ.
ಮನಸ್ಸು ಮತ್ತು ಪಂಚೇಂದ್ರಿಯಗಳು
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ
ಮನೋಗತಾನ್|
ಆತ್ಮನ್ಯೇವಾತ್ಮ ನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ|
|(ಅಧ್ಯಾಯ-೨, ಶ್ಲೋಕ ೫೫)
ಮನಸ್ಸಿನ ಮೇಲೆ ಪಂಚೇಂದ್ರಿಯಗಳು ಪರಿಣಾಮ ಬೀರಿ ಸುಖ ದುಃಖಗಳಿಗೆ ಕಾರಣವಾಗುತ್ತವೆ ಎಂಬುದು ವೈಜ್ಞಾನಿಕ. ಈ ಶ್ಲೋಕದ ಅರ್ಥ ಪಂಚೇಂದ್ರಿಯಗಳಾದ ಕಣ್ಣು(ದೃಶ್ಯ), ಕಿವಿ(ಶ್ರವಣ), ಮೂಗು(ವಾಸನೆ), ನಾಲಿಗೆ(ರುಚಿ) ಮತ್ತು ಚರ್ಮ(ಸ್ಪರ್ಶ)ಗಳಿಂದ ಮನಸ್ಸಿಗೆ ಹೋಗುವ ಸಂವೇದನೆಗಳನ್ನು ನಿಯಂತ್ರಿಸಿ, ಮನಸ್ಸನ್ನು ಇಂದ್ರಿಯ ಸುಖಗಳಿಂದ ತ್ಯಜಿಸಿದಲ್ಲಿ ಮನಸ್ಸು ಪರಿಶುದ್ಧವಾಗಿ ಆತ್ಮಸ್ಪರ್ಶವಾಗಿ ದಿವ್ಯಪ್ರಜ್ಞೆ ಉಂಟಾಗಿ ನಿರಂತರ ಸಂತೋಷ ಸ್ಥಿತಿ ಉಂಟಾಗುತ್ತದೆ ಎಂಬುದಾಗಿದೆ.
ಮನಸ್ಸನ್ನು ಬಾಹ್ಯ ಆಸೆಗಳಿಂದ ನಿಯಂತ್ರಿತಗೊಳಿಸದ ಹೊರತು ನೆಮ್ಮದಿ ಸಾಧ್ಯವಿಲ್ಲ ಎಂಬುದು ವೈಜ್ಞಾನಿಕ. ಮನಸ್ಸನ್ನು ಸ್ಥಿರಗೊಳಿಸಿ, ತನ್ನೊಳಗೆ ಇರುವ ಆತ್ಮವನ್ನು ಮೇಲುಸ್ತರಕ್ಕೆ ತಂದು ನಿರಂತರ ಸುಖಾನುಭವ ಪಡೆಯುವ ವೈಜ್ಞಾನಿಕ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ನಕಾರಾತ್ಮಕ ಭಾವಗಳು
ದುಃಖೇಷ್ಟನುದ್ವಿಗ್ನಮನಾಃ ಸುಖೇಷು ವಿಗತಸ್ಪಹಃ|
ವೀತರಾಗಭಯಕ್ರೋಧಃ
ಸ್ಥಿತಽರ್ಮುನಿರುಚ್ಯತೇ||
(ಅಧ್ಯಾಯ-೨, ಶ್ಲೋಕ ೫೬)
ಮನಸ್ಸನ್ನು ರಾಗ, ದ್ವೇಷ, ಭಯ, ಕ್ರೋಧ, ಉದ್ವಿಗ್ನತೆಗಳಿಂದ ಮುಕ್ತಗೊಳಿಸಿದವನು ಮುನಿ, ಎಂದರೆ ನಿರ್ಲಿಪ್ತ ಮನಸ್ಸಿನವ ನಾಗುತ್ತಾನೆ. ಮನಸ್ಸನ್ನು ನಕಾರಾತ್ಮಕ ಭಾವಗಳಿಂದ ವಿಮುಕ್ತಗೊಳಿಸಿದರೆ ಮಾತ್ರ ಮಾನಸಿಕ ಆರೋಗ್ಯಸ್ಥಿತಿ ಸಾಧ್ಯ ಎಂಬ ವೈಜ್ಞಾನಿಕ ಅಂಶವನ್ನು ಈ ಶ್ಲೋಕ ವಿವರಿಸುತ್ತದೆ.
ಯತತೋ ಹ್ಯಪಿ ಕೌನ್ತೇಯ ಪುರುಷಸ್ಯ
ವಿಪಶ್ಚಿತಃ
ಇಂದ್ರಿಯಾಣಿ ಪ್ರಮಾಥೀನಿ ಹರನ್ತಿ ಪ್ರಸಭಂ
ಮನಃ||
(ಅಧ್ಯಾಯ-೨, ಶ್ಲೋಕ ೬೦)
ಇಂದ್ರಿಯಗಳ ಪ್ರಭಾವ ಮನಸ್ಸಿನ ಮೇಲೆ ಬಹು ಪ್ರಬಲವಾಗಿದ್ದು, ಅತೀತಶಕ್ತಿಯ ಧ್ಯಾನದಲ್ಲಿ ಮಗ್ನರಾಗಿ ಸ್ಥಿರಮನಸ್ಸುಳ್ಳವ ರಾಗದಿದ್ದಲ್ಲಿ ಇಂದ್ರಿಯಗಳನ್ನು ನಿಗ್ರಹಿಸುವುದು ಬಹುಕಷ್ಟ ಎಂಬ ವೈಜ್ಞಾನಿಕ ಸತ್ಯವನ್ನು ಈ ಶ್ಲೋಕದಲ್ಲಿ ಸೆರೆಹಿಡಿಯಲಾಗಿದೆ. ಮನುಷ್ಯನ ಬದುಕಿನಲ್ಲಿ ಪರಿಸರದಿಂದ ಇಂದ್ರಿಯಗಳ ಮೇಲಾಗುವ ಪ್ರಭಾವಕ್ಕನುಗುಣವಾಗಿ ಮನಸ್ಸು ಚಂಚಲವಾಗುತ್ತದೆ.
ಬೇಕು ಬೇಡಗಳ ಜಿಜ್ಞಾಸೆ ಉಂಟಾಗಿ ಬದುಕು ತಲ್ಲಣ ವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬೇಕು ಬೇಡಗಳನ್ನು ನಿರ್ಧರಿಸಲು ವಿವೇಚನಾಪೂರಿತವಾದ ಜ್ಞಾನ ಅತ್ಯವಶ್ಯಕ. ಯಾರು ಇಂದ್ರಿಯಗಳನ್ನು ಹತೋಟಿಯಲ್ಲಿಡುತ್ತಾರೋ ಅವರು ಮಾತ್ರ
ನೆಮ್ಮದಿಯಿಂದಿರುತ್ತಾರೆ. ಇಂದ್ರಿಯಗಳನ್ನು ಹತೋಟಿಯಲ್ಲಿಡಲು ಆಧ್ಯಾತ್ಮಿಕ ಸಾಧನೆಯಿಂದ ಮಾತ್ರ ಸಾಧ್ಯ.
ಕ್ರೋಧದ ವ್ಯಾಪ್ತಿ:
ಕ್ರೋಧಾದ್ ಭವತಿ ಸಮ್ಮೋಹಃ
ಸಮ್ಮೋಹಾತ್ಸ್ಮತಿವಿಭ್ರಮಃ|
ಸ್ಮತಿಭ್ರಂಶಾದ್ ಬುದ್ಧಿನಾಶೋ
ಬುದ್ಧಿನಾಶಾತ್ಪ್ರನಶ್ಯತಿ||
( ಅಧ್ಯಾಯ-೨, ಶ್ಲೋಕ ೬೩)
ಈ ಶ್ಲೋಕದಲ್ಲಿ ಕ್ರೋಧದಿಂದ ಮನಸ್ಸಿನ ಮೇಲಾಗುವ ಪರಿಣಾಮಗಳನ್ನು ವಿವರಿಸಲಾಗಿದೆ. ಕ್ರೋಧದಿಂದ ಪರಿಪೂರ್ಣ ಭ್ರಾಂತಿಯುಂಟಾಗುತ್ತದೆ. ಭ್ರಾಂತಿಯಿಂದ ನೆನಪು ನಾಶವಾಗುತ್ತದೆ, ನೆನಪಿನ ನಾಶದಿಂದ ಬುದ್ಧಿ ನಾಶವಾಗುತ್ತದೆ. ಬುದ್ಧಿ
ನಾಶದಿಂದ ಮನುಷ್ಯ ಪತನ ಹೊಂದುತ್ತಾನೆ ಎಂಬ ಅಂಶಗಳು ವಾಸ್ತವಿಕ. ಕೋಪ ನಿಗ್ರಹ ಎಷ್ಟು ಅವಶ್ಯಕ ಎಂಬುದನ್ನು ಈ ಶ್ಲೋಕ ಮನದಟ್ಟು ಮಾಡಿಕೊಡುತ್ತದೆ. ಕೋಪ ನಿಗ್ರಹಕ್ಕೆ ಅತೀತ ಶಕ್ತಿಯ ಅರಿವು ಮತ್ತು ಆಧ್ಯಾತ್ಮಗಳೇ ಪ್ರಮುಖ ವಿಧಾನಗಳು ಎಂಬುದನ್ನು ಹಲವಾರು ಶ್ಲೋಕಗಳಲ್ಲಿ ವಿವರಿಸಲಾಗಿದೆ.
ಮನಶಾಂತಿ
ಆಪೂರ್ಯಮಾಣಮಚಲಪ್ರತಿಷ್ಠಮ್
ಸಮುದ್ರಮಾಪಃ ಪ್ರವಿಶನ್ತಿ ಯದ್ವತ್|
ತದ್ವತ್ ಕಾಮಾ ಯಂ ಪ್ರವಿಶನ್ತಿ ಸರ್ವೇ
ಸ ಶಾನ್ತಿಮಾಪ್ರೋತಿ ನ ಕಾಮಕಾಮೀ||
ಅಧ್ಯಾಯ-೨ ಶ್ಲೋಕ ೭೦)
ಈ ಶ್ಲೋಕದಲ್ಲಿ ಮನಸ್ಸನ್ನು ಸದಾಕಾಲ ಶಾಂತಸ್ಥಿತಿಯಲ್ಲಿಡುವ ವಿಧಾನಗಳನ್ನು ವಿವರಿಸಲಾಗಿದೆ. ಸದಾ ನದಿಗಳು ಪ್ರವೇಶಿಸಿ ನೀರು ತುಂಬುತ್ತಿದ್ದರೂ ಸಾಗರ ಪ್ರಶಾಂತವಾಗಿರುವಂತೆ ಮನಸ್ಸಿಗೆ ನಿರಂತರವಾಗಿ ಹರಿದುಬರುವ ಆಸೆಗಳಿಂದ ಮನಸ್ಸು ಕದಡದಂತೆ ಮನಸ್ಸನ್ನು ಸ್ಥಿರ ಸ್ಥಿತಿಯಲ್ಲಿಟ್ಟುಕೊಂಡಾಗ ಮಾತ್ರ ಮನಸ್ಸು ಶಾಂತವಾಗಿರುತ್ತದೆ. ಶಾಂತ ಮನಸ್ಸು ಮಾತ್ರ ಏನೆಲ್ಲ ಸಾಧಿಸಬಲ್ಲದು.
ಮನಸ್ಸಿಗೆ ಬಂದ ಎಲ್ಲ ಆಸೆಗಳನ್ನು ತೃಪ್ತಿಪಡಿಸಲು ಹೊರಟವನಿಗೆ ಶಾಂತಿ ಲಭಿಸುವುದಿಲ್ಲ ಎಂಬುದು ವೈಜ್ಞಾನಿಕವಲ್ಲವೇ?
ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ
ಪರಂ ಮನಃ|
ಮನಸಸ್ತು ಪರಾ ಬುದ್ಧಿರ್ಯೋ ಬುದ್ಧೇಃ
ಪರತಸ್ತು ಸಃ||
( ಅಧ್ಯಾಯ-೩, ಶ್ಲೋಕ ೪೨)
ಈ ಶ್ಲೋಕದಲ್ಲಿ ಇಂದ್ರಿಯಗಳು, ಮನಸ್ಸು, ಬುದ್ಧಿ ಮತ್ತು ಆತ್ಮಗಳಿಗಿರುವ ಅವಿನಾಭಾವ ಸಂಬಂಧವನ್ನು ವಿವರಿಸಲಾಗಿದೆ. ಮನಸ್ಸು ಇಂದ್ರಿಯಗಳಿಗಿಂತ ಶ್ರೇಷ್ಠವೆಂದು, ಬುದ್ಧಿ ಮನಸ್ಸಿಗಿಂತ ಬಹು ಶ್ರೇಷ್ಠವೆಂದು, ಆತ್ಮ ಬುದ್ಧಿಗಿಂತ ಬಹು ಶ್ರೇಷ್ಠ. ಏನೆಲ್ಲಾ ಸಾಽಸಬೇಕಾದರೂ ಎಲ್ಲವೂ ಮನಸ್ಸಿನ ಮೂಲಕವೇ ಆಗಬೇಕಾಗಿರುವುದರಿಂದ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳುವುದು ಅತ್ಯವಶ್ಯಕ.
ಆಧುನಿಕ ವೈದ್ಯ ವಿಜ್ಞಾನ ಪ್ರಾರಂಭದಲ್ಲಿ ದೇಹವನ್ನು ಮಾತ್ರ ಗುರುತಿಸಿತ್ತು. ಮನಸ್ಸಿನ ಬಗ್ಗೆ ಅದಕ್ಕೆ ಅರಿವೇ ಇರಲಿಲ್ಲ. ಹಲವಾರು ವರ್ಷಗಳ ನಂತರ ಮನಸ್ಸಿನ ಇರುವಿಕೆಯನ್ನು ಆಧುನಿಕ ವೈದ್ಯ ವಿಜ್ಞಾನ ಮನಗಂಡಿತು. ಆದರೆ ಭಾರತೀಯ
ಪ್ರಾಚೀನ ಆರೋಗ್ಯ ವಿಜ್ಞಾನ ವೇದ, ಉಪನಿಷತ್ ಮತ್ತು ಭಗವದ್ಗೀತೆಗಳಲ್ಲಿಯೇ ಮನಸ್ಸನ್ನು ಗುರುತಿಸಿರುವುದಲ್ಲದೇ ಮನುಷ್ಯನಲ್ಲಿ ಮನಸ್ಸು ಪ್ರಧಾನ ಎಂಬ ಅಂಶವನ್ನು ಬಹಳ ಹಿಂದೆಯೇ ಅರಿತಿದೆ.
ಇದು ನಮ್ಮ ಪುರಾತನರಿಗಿದ್ದ ವೈಜ್ಞಾನಿಕ ದೃಷ್ಟಿಕೋನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮನಸ್ಸು ಮೆದುಳು ಮತ್ತು ನರಮಂಡಲದ ಮೂಲಕ ಎಲ್ಲ ಜೀವಕೋಶಗಳನ್ನು ನಿಯಂತ್ರಿಸುತ್ತದೆ ಎಂದು ಇಂದು ಆಧುನಿಕ ವೈದ್ಯ ವಿಜ್ಞಾನ ಕಂಡುಕೊಂಡಿರುವ ವೈಜ್ಞಾನಿಕ ಅಂಶವನ್ನು ಬಹಳ ಹಿಂದೆಯೇ ನಮ್ಮ ಪುರಾತನರು ಕಂಡುಕೊಂಡು ಭಗವದ್ಗೀತೆ
ಮತ್ತಿತರ ಗ್ರಂಥಗಳಲ್ಲಿ ದಾಖಲಿಸಿದ್ದಾರೆ.
ಮಾನಸಿಕ ಆರೋಗ್ಯವನ್ನು ಔಷಧಗಳಿಂದ ಪಡೆಯಲು ಸಾಧ್ಯವಿಲ್ಲ. ಹುಚ್ಚು ಮನಸ್ಸಿನ ಸಕಾರಾತ್ಮಕ ನಿಯಂತ್ರಣ ಭಗವದ್ಗೀತೆಯಂತಹ ಆಧ್ಯಾತ್ಮಿಕ ಚಿಂತನೆಗಳುಳ್ಳ ಗ್ರಂಥಗಳ ವಿಚಾರಗಳ ಪಾಲನೆಯಿಂದ ಮಾತ್ರ ಸಾಧ್ಯ.
(ಮುಂದುವರಿಯುವುದು)