Wednesday, 11th December 2024

ಪೂಜನೀಯ ಸ್ವಾಮೀಜಿಗಳೇ, ಘರ್‌ವಾಪಸಿ ಚಾಲೆಂಜ್ ಸ್ವೀಕರಿಸುವಿರಾ?!

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

hampiexpress1336_1509@gmail.com

ಕಳೆದ ವಾರ ಕೇಂದ್ರ ಸರಕಾರ ಸಂಸತ್ತಿನಲ್ಲಿ ಒಂದು ಮಹತ್ವದ ವಿಚಾರಕ್ಕೆ ಸ್ಪಷ್ಟನೆ ನೀಡಿದೆ. ಅದೇನೆಂದರೆ `ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಅನ್ಯಧರ್ಮವನ್ನು
ಪ್ರತಿಪಾದಿಸುವ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ’ ಎಂದು ಹೇಳಿದೆ.

ಜತೆಗೆ ಪರಿಶಿಷ್ಟ ಜಾತಿಗಳ ಕಲ್ಯಾಣ ಮತ್ತು ಅಭಿವೃದ್ಧಿಗೆ ಉದ್ದೇಶಿಸಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳ (ಸಿಎಸ್‌ಎಸ್) ಪ್ರಯೋಜನ ಗಳನ್ನು ಪರಿಶಿಷ್ಟ ಜಾತಿಯ ಮತಾಂತರಗೊಂಡ  ಕ್ರಿಶ್ಚಿಯನ್ನರಿಗೆ ವಿಸ್ತರಿಸಲು ಸಾಧ್ಯವಿಲ್ಲ’. ಎಂದು ಹೇಳಿದೆ. ಅಂದರೆ `ದಲಿತರಿಗಾಗಿ ನೀಡುವ ಸೌಲಭ್ಯಗಳು, ಯೋಜನೆಗಳು ಮತ್ತು ಅನುದಾನಗಳ ಲಾಭವನ್ನು ಮತಾಂತರಗೊಂಡ (ಮತಾಂತರಗೊಂಡರೂ ದಲಿತ ಕ್ರಿಶ್ಚಿಯನ್ !?) ಕ್ರಿಶ್ಚಿಯನ್ನರಿಗೆ ನೀಡಲು ಸಾಧ್ಯವಿಲ್ಲ’. ಈ ನಿಯಮದಿಂದಾಗಿ ಸರಕಾರ ದಲಿತರಿಗೆ ನೀಡಲಾಗುತ್ತಿರುವ ಮತ್ತು ಕಲ್ಪಿಸ ಲಾಗುತ್ತಿರುವ ಸರಕಾರಿ ಅಥವಾ ಅನುದಾನಗಳ ಲಾಭಗಳು ಮೂಲ ದಲಿತರಿಗೇ ದಕ್ಕುವಂತಾಗುತ್ತದೆ. ನಿಜಕ್ಕೂ ಇದು ದಲಿತರ ರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ.

ಮತಾಂತರಗೊಂಡರೂ ಮೀಸಲಾತಿ ಕೋಟಾದ ಮೇಲೆ ಸರಕಾರಿ ಸೌಲಭ್ಯ ಪಡೆಯುವ ದಂಧೆಗೆ ಸರಕಾರ ಕಡಿವಾಣ ಹಾಕಿದೆ. ಇಂಥ ಆದೇಶಕ್ಕೆ ಮೂಲ ಕಾರಣವಾಗಿರುವುದು ನಮ್ಮ ದೇಶದಲ್ಲಿ ಆಗುತ್ತಿರುವ ನಿರಂತರ ಕುತಂತ್ರ ಮತ್ತು ಅವೈಜ್ಞಾನಿಕ ಆಮಿಷಗಳ ಮತಾಂತರ ಗಳು. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ದಿನವೊಂದಕ್ಕೆ ಸಾವಿರಾರು ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸ ಲಾಗುತ್ತಿದೆ ಎನ್ನಲಾಗುತ್ತಿದೆ. ಸುಪ್ರೀಂಕೋರ್ಟ್ನ ಆದೇಶದಂತೆ `ಯಾವುದೇ ವ್ಯಕ್ತಿ ಸ್ವಯಂ ಪ್ರೇರಣೆಯಿಂದ ಅನ್ಯ ಧರ್ಮಕ್ಕೆ ಮತಾಂತರವಾಗ ಬಹುದು. ಆದರೆ ಮತಾಂತರಕ್ಕೆ ಒಳಪಡಿಸುವುದಕ್ಕೆ ಅವಕಾಶವಿಲ್ಲ ಮತ್ತು ಅದು ಅಪರಾಧ’. ಆದರೆ ಪ್ರತಿನಿತ್ಯ ಕುತಂತ್ರದ ಮತಾಂತರಕ್ಕೆ ಒಳಗಾಗುತ್ತಿರುವ ಯಾವ ಹಿಂದೂಗಳೂ ಯಾವ `ಯೇಸುವೃಕ್ಷ’ದ ಕೆಳಗೆ ಕೂತು ಬೈಬಲ್ ಓದಿ ಅದರಿಂದ ಪ್ರಭಾವಗೊಂಡು ಮತಾಂತರ ವಾಗುತ್ತಿಲ್ಲ.

ಅಸಲಿಗೆ ಮತಾಂತರಕ್ಕೆ ಒಳಗಾಗುತ್ತಿರುವ ದಲಿತ ಅಥವಾ ದಲಿತಯೇತರ ಹಿಂದೂಗಳು ಅನಕ್ಷರಸ್ಥರು ಅಥವಾ ಕುತಂತ್ರಗಳ ತಿಳುವಳಿಕೆ ಇಲ್ಲದವರೇ ಆಗಿರುತ್ತಾರೆ. ಇಸ್ಕಾನ್ ಸಂಸ್ಥೆಯೂ ಜಗತ್ತಿನಾದ್ಯಂತ ಭಗವದ್ಗೀತೆಯ ಸಾರವನ್ನು ಸಾರುತ್ತಿದೆ. ಆದರೆ ರಷ್ಯಾದಂಥ ದೇಶದಲ್ಲಿ ಆಮಿಷಕ್ಕೆ ಒಳಗಾಗುವುದು ಅಥವಾ ಅಕ್ಷರ ಜ್ಞಾನ ವಿಲ್ಲದವರಲ್ಲ. ಶ್ರೀ ಕೃಷ್ಣನ ಅನುಯಾಯಿಗಳಾದ
ಪ್ರತಿಯೊಬ್ಬರೂ ಭಗವದ್ಗೀತೆ ಶ್ಲೋಕವನ್ನು ಪಠಿಸಿ ಅದರ ಮೌಲ್ಯವನ್ನು ಕೊಂಡಾಡುತ್ತಾರೆ. ಆದರೆ ಬೆಂಗಳೂರಿನ ವಿವೇಕನಗರದಲ್ಲಿನ ಮತಾಂತರಗೊಂಡ ಒಬ್ಬ ದಲಿತ ಕ್ರಿಶ್ಚಿಯನ್ನರನ್ನು `ಯೇಸು ಹುಟ್ಟಿದ್ದು ಎಲ್ಲಿ†’ ಎಂದು ಕೇಳಿನೋಡಿ. ಅವರು `ಯೇಸು ನಮ್ಮ ರಕ್ತದಲ್ಲಿ’ ಎಂದು  ಸ್ಟಿಕ್ಕರ್ ತೋರಿಸುತ್ತಾರೆ. ಹೀಗೆ ವಿದೇಶಿ ಮಿಷನರಿಗಳು ಮತ್ತು ಇಲ್ಲಿನ ವೋಟ್‌ಬ್ಯಾಂಕ್‌ಗಾಗಿ ಎಂಥ ಹೊಲಸನ್ನೂ ತಿನ್ನಲು ಎಸದ ರಾಜಕಾರಣಿಗಳು, ಡೋಂಗಿ ವಿಚಾರ ವ್ಯಾಧಿಗಳ ಕುಮ್ಮಕ್ಕಿನಿಂದ ಮತಾಂತರವು ಅತೀ ಸುಲಭ ಸುಸೂತ್ರದಿಂದ ನಡೆಯುತ್ತಲೇ ಇದೆ.

ಮತಾಂತರದ ಹೆಡ್ ಆಫೀಸಾಗಿರುವ ಪಕ್ಕದ ಆಂಧ್ರದಲ್ಲೇ ನೋಡಿ, ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಸರಕಾರದಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ನೀಡಲಾದ ಉಚಿತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 2011ರ ಜನಗಣತಿಯ ಪ್ರಕಾರ, ಆಂಧ್ರಪ್ರದೇಶದ ಕ್ರಿಶ್ಚಿಯನ್ ಸಮುದಾಯವು ಒಟ್ಟು ಜನಸಂಖ್ಯೆಯ ಸುಮಾರು ಶೇ.೧.೪ರಷ್ಟಿತ್ತು, ಆದರೆ ಸರಕಾರದ ಕುಮ್ಮಕ್ಕಿನಲ್ಲೇ ಮತಾಂತರದ ಮಹಾಮೇಳವು ಹೆಚ್ಚುತ್ತಿದ್ದು ಅದರ ಪರಿಣಾಮವಾಗಿ ಕಳೆದ ವರ್ಷ ಆಂಧ್ರದ ಅನೇಕ ದೇವಾಲಯಗಳ ಮೇಲೆ ದಾಳಿ ಯಾದದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಅಲ್ಲಿನ ರಾಜಕಾರಣ ಎಷ್ಟು ದರಿದ್ರವಾಗಿದೆಯೆಂದರೆ ಪ್ರತಿಪಕ್ಷಗಳೂ ಮತಾಂತರವನ್ನು ವಿರೋಽಸದೆ ಅದೂ ತಮ್ಮದೇ ವೋಟ್‌ಬ್ಯಾಂಕ್
ಆಗುತ್ತದೆ ಎಂಬ `ಮಹಾತ್ವಾಕಾಂಕ್ಷೆಯಲ್ಲಿದೆ’.

ಹೀಗಾಗಿ ಅಲ್ಲಿ ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡುವ ಎನ್ ಜಿಒಗಳು ಧಾರ್ಮಿಕ ಸೇವೆಗಳಿಗೆ ಗೌರವಧನ ನೀಡಲು ರಾಜ್ಯ ಸರಕಾರದ ಯೋಜನೆಯಲ್ಲಿ ನಡೆಯುತ್ತಿರುವ ಹಗರಣವನ್ನು ಎತ್ತಿ ತೋರಿಸಿತ್ತು. ಎನ್‌ಜಿಒ ಸಲ್ಲಿಸಿದ ಆರ್‌ಟಿಐ ಮೂಲಕ ಪಡೆದ ಮಾಹಿತಿಯ ಪ್ರಕಾರ, ಶೇ.58.14 ರಷ್ಟು ಕ್ರಿಶ್ಚಿಯನ್ನರು ಹಿಂದು ಎಸ್‌ಸಿ ಸಮುದಾಯ ಪ್ರಮಾಣಪತ್ರಗಳನ್ನು ಹೊಂದಿದ್ದಾರೆ (ಪ್ರಸ್ತುತ ಮತಾಂತರಗೊಂಡಿರದ ಹಳೇ ಕ್ರಿಶ್ಚಿಯನ್ನರಿಗೆ ಜಾತಿ ಪ್ರಮಾಣಪತ್ರ ೩ಬಿ ನೀಡಲಾಗುತ್ತದೆ) ಮತ್ತು 13.37 ಪ್ರತಿಶತ ಕ್ರಿಶ್ಚಿಯನ್ನರು ಹಿಂದೂ ಒಬಿಸಿ ಸಮುದಾಯ ಪ್ರಮಾಣ ಪತ್ರಗಳನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಸರಕಾರೇತರ ಯೋಜನೆಗಳ ಅಡಿಯಲ್ಲಿ ಎಸ್‌ಸಿಗಳು ಅಥವಾ ಒಬಿಸಿಗಳಿಗೆ ನೀಡಲಾಗುವ ಅನುಕೂಲಗಳಿಗೂ ಕ್ರಿಶ್ಚಿಯನ್ನರು ತಮ್ಮ ಹಿಂದೂ ಗುರುತುಗಳನ್ನು ಬಳಸಿದ್ದಾರೆ ಮತ್ತು ಕ್ರಿಶ್ಚಿಯನ್‌ರಿಗೆ ಉದ್ದೇಶಿಸಿರುವ ಸರಕಾರಿ ಯೋಜನೆಗಳ ಲಾಭವನ್ನು ಪಡೆಯಲು ತಮ್ಮ ಕ್ರಿಶ್ಚಿಯನ್ ಗುರುತನ್ನು ಬಳಸಿಕೊಂಡಿದ್ದಾರೆ ಎಂಬುದು ಈ ಮಾಹಿತಿಯಲ್ಲಿ ಬಹಿರಂಗಗೊಂಡಿದೆ. ಇದರಿಂದಾಗಿಯೇ ನಿಜವಾದ ಎಸ್‌ಸಿ/ಒಬಿಸಿ -ಫಲಾನುಭವಿಗಳು ವಂಚಿತರಾಗಿದ್ದಾರೆ.

ವರದಿಗಳ ಪ್ರಕಾರ, ಅಂದಾಜು 80 ಪ್ರತಿಶತ ಕ್ರಿಶ್ಚಿಯನ್ ಮತಾಂತರಕ್ಕೆ ಒಳಗಾದವರು ಅಲ್ಲಿನ ಎಸ್‌ಸಿ ವರ್ಗದಿಂದ ಬಂದವರು ಮತ್ತು ಅವರು 1977 ರ ಆದೇಶದ ಮೂಲಕ ದಲಿತರ ಕೋಟಾದಲ್ಲಿನ ಭೂಮಿ/ಮನೆ ಹಂಚಿಕೆ, ಉಚಿತ ವಿದ್ಯುತ್ ಮತ್ತು ದಲಿತರಿಗೆ ಅನುಕೂಲಕ್ಕಿರುವ ಸಾಲಗಳು ಸೇರಿವೆ. 1950ರ ಆದೇಶದಲ್ಲಿ ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮಗಳನ್ನು ಪ್ರತಿಪಾದಿಸುವವರನ್ನು ಮಾತ್ರ ಹಿಂದೂ ಎಂದು ಪರಿಗಣಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ಎಸ್‌ಸಿ ವ್ಯಕ್ತಿಯು ಮೇಲಿನ ಧರ್ಮಗಳನ್ನು ಅಭ್ಯಾಸ ಮಾಡುವುದನ್ನು ಮತ್ತು ಪ್ರತಿಪಾದಿಸುವುದನ್ನು ನಿಲ್ಲಿಸಿದ ತಕ್ಷಣ, ಅವನು ಎಸ್‌ಸಿ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ ಮತ್ತು ಯಾವುದೇ ಎಸ್‌ಸಿಗಳ ಸೌಲಭ್ಯದಿಂದ ಮುಕ್ತಗೊಳ್ಳುತ್ತಾನೆ.

ಅಂತೆಯೇ, ಎಸ್‌ಸಿ ವ್ಯಕ್ತಿಯು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ, ಅವನು/ಅವಳು ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ. ಇದನ್ನೆಲ್ಲಾ ಆಧರಿಸಿ ನವೆಂಬರ್ 2020ರಲ್ಲಿ, ಕೇಂದ್ರ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹಿಂದು ಎಸ್‌ಸಿ/ಒಬಿಸಿ ಜಾತಿ ಪ್ರಮಾಣಪತ್ರಗಳನ್ನು ಬಳಸಿಕೊಂಡು ವಿಪತ್ತು ಪರಿಹಾರ ನಿಧಿಯ ಅಡಿಯಲ್ಲಿ ಗೌರವಧನ ಪಡೆದ ಕ್ರಿಶ್ಚಿಯನ್ನರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಂಧ್ರಪ್ರದೇಶದ ಸಮಾಜ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿತು. ಆದರೆ ಇದರಿಂದೆಲ್ಲಾ ಪ್ರಯೋಜನವಿಲ್ಲವೆಂದು ಮನಗಂಡ ಕೇಂದ್ರ ಸರಕಾರ ಮೊನ್ನೆ ಮೇಲಿನಂತೆ ಆದೇಶ ನೀಡಿದೆ.

ಇನ್ನು ನಮ್ಮ ನಾಡಿನ ವಿಚಾರಕ್ಕೆ ಬಂದರೂ ಇಲ್ಲಿಯವರೆಗೂ ನಡೆದಿರುವುದು ಇದೇ ಕಥೆಯೇ ಆಗಿದೆ. ಏನೋ, ಹಿಂದುತ್ವ ಪ್ರತಿಪಾದಿಸುವ ಬಿಜೆಪಿ ಸರಕಾರವಿರುವುದರಿಂದ ಮತಾಂತರಗಳು ಕೊಂಚ ಎಚ್ಚರಿಕೆಯಿಂದ ಹೆಜ್ಜೆ ಇಡಬಹುದು. ಮುಂದೊಮ್ಮೆ ಬಿಜೆಪಿಯೇತರ ಸರಕಾರಗಳು ಬಂದರಂತೂ ಕನಕಪುರದ ಯೇಸಪ್ಪನ ಬೆಟ್ಟಗಳಂತೆ ನಾಡಿನಾದ್ಯಂತ ಸ್ಥಾಪಿತವಾಗುವುದರಲ್ಲಿ ಯಾವ ಅನುಮಾನಗಳೂ ಇಲ್ಲ. ಹೀಗಾಗುವುದು ಬೇಡವೆಂದೇ ಮೊನ್ನೆ ಶಾಸಕ ಬಸನ ಗೌಡ ಯತ್ನಾಳ್ ಪಾಟೀಲ್ ಅವರು `ಸ್ವಾಮೀಜಿಗಳು ಸ್ವಜಾತಿ ಮೋಹಗಳನ್ನು ಬಿಟ್ಟು ಮತಾಂತರ, ಲವ್ ಜಿಹಾದ್‌ನಂಥ ಕೃತ್ಯಗಳನ್ನು ತಡೆಯಲು ಬೀದಿಗೆ ಬರಬೇಕು’ ಎಂದು ಆಗ್ರಹಿಸಿದ್ದಾರೆ.

ಇಷ್ಟಕ್ಕೂ ಯತ್ನಾಳರು ಹೇಳಿರುವುದರಲ್ಲಿ ತಪ್ಪೇನಿದೆ?. ರಾಜಕಾರಣಗಳಂತೂ ಈ ಅನಿಷ್ಠ ಕೃತ್ಯಗಳನ್ನು ತಡೆಯುವುದಿಲ್ಲ. ಇನ್ನು ಧರ್ಮವನ್ನು ರಕ್ಷಿಸಬೇಕಾದವರು ಕೇಸರಿತೊಟ್ಟ ಧರ್ಮ ಪುರುಷರಾದ ಮಠಾಧೀಶರುಗಳು ತಾನೇ?. ಯತ್ನಾಳ್ ಅವರ ಈ ಚಾಲೆಂಜಿಗೆ ಕೂಡಲೇ ಸ್ವಾಮೀಜಿಯೊಬ್ಬರು ಎದಿರೇಟು ನೀಡಿದ್ದಾರೆ. ಬಳ್ಳಾರಿಯ ಹೂವಿನಹಡಗಲಿಯ ಮಠಾಧೀಶರು
ಹಾಗೂ ಧರ್ಮ ಪರಿಷತ್‌ನ ಕಾರ್ಯದರ್ಶಿಗಳೂ ಆದ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಸ್ವಾಮೀಜಿಯವರು `ಮತಾಂತರ, ಲವ್ ಜಿಹಾದ್ ಕುರಿತು ಮಠಗಳು ತಮ್ಮದೇ ಆದ ನೆಲೆಯಲ್ಲಿ ನಿಯಂತ್ರಿಸುತ್ತಿವೆ. ಇದಕ್ಕೆ ಹಿರೇಹಡಗಲಿ ಮಠದ ಪ್ರಯತ್ನದಿಂದಾಗಿ 4731 ಮತಾಂತರಿಗಳನ್ನು ಘರ್ ವಾಪಸಿ ಮಾಡಲಾಗಿದೆ.

ಹಾಗಂತ ನಾವು ಯತ್ನಾಳರಂತೆ ಹಿಂದೂ ಹುಲಿಯೆಂದು ಬಿಂಬಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಒಬ್ಬ ಸ್ವಾಮೀಜಿಯವರು ಮಾಡಿರುವ ದೊಡ್ಡ ಸಾಧನೆ. ಹಿಂದೆ ಒಕ್ಕಲಿಗ ಮಠದ ಹಿಂದಿನ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಶ್ರೀಗಳು ಸುಮಾರು ಐದು ಸಾವಿರ ಮಂದಿಯನ್ನು ಘರ್‌ವಾಪಸಿ ಮಾಡಿ ಮೇಲ್ಪಂಕ್ತಿಯಾಗಿದ್ದರು. ಪೇಜಾವರ ಮಠದ
ಶ್ರೀವಿಶ್ವೇಶ ತೀರ್ಥರೂ ಸಾಕಷ್ಟು ದಲಿತ ಕೇರಿಗಳಲ್ಲಿ ಸಂಚರಿಸಿ ವಿಶ್ವಾಸ ಮೂಡಿಸಿದ್ದರು. ಇನ್ನು ಹಂಪಿಯ ವಿದ್ಯಾರಣ್ಯ ಮಠದ ಇಂದಿನ ಶ್ರೀ ವಿದ್ಯಾರಣ್ಯಭಾರತಿ ಶ್ರೀಗಳೂ ತಮ್ಮ ಚಾತು ರ್ಮಾಸದ ನಂತರದ ದಿನಗಳಲ್ಲಿ ದಲಿತರ ಮನೆಗಳಿಗೆ ತೆರಳಿ ದೀಪ ಬೆಳಗುವುದರ ಮೂಲಕ ಧರ್ಮಜ್ಯೋತಿ ಆಚರಣೆಯನ್ನು ನಡೆಸುತ್ತಾರೆ.

ಭಾರತದಲ್ಲಿನ ಸಂತರಿಗೆ ಇದಕ್ಕಿಂತ ಮಿಗಿಲಾದ ಧರ್ಮಕಾರ್ಯ ಬೇರೇನಿದೆ ಹೇಳಿ?. ಭಾರತದಲ್ಲಿ ಮುಸಲ್ಮಾರನ್ನು ಮತ್ತು ಕ್ರಿಶ್ಚಿಯನ್ನರನ್ನು ಅಲ್ಪಸಂಖ್ಯಾತರೆಂದು ಕರೆದು ತಾವು ಹಿಂದೂಗಳು
ಬಹುಸಂಖ್ಯಾತರಿದ್ದೇವೆ ಎಂದು ಹಗಲು ಕನಸನ್ನು ಕಾಣುತ್ತಿದ್ದಾರೆ. ಇನ್ನೊಂದಷ್ಟು ಜನ ಮೋದಿಯವರ ನಂತರ ಅಮಿತ್ ಶಾ, ಯೋಗಿ ಆದಿತ್ಯನಾಥರು ಪ್ರಧಾನ ಮಂತ್ರಿಗಳಾಗುತ್ತಾರೆ ಹಿಂದೂ ಗಳನ್ನು ಉದ್ಧಾರ ಮಾಡುತ್ತಾರೆ ಎಂಬ ಆಶಾವಾದದಲ್ಲಿದ್ದಾರೆ. ಮತ್ತೊಂದಷ್ಟು ಜನ ಲೋಕಸಭೆಯಲ್ಲಿ ನಾನ್ನೂರು ಸಂಖ್ಯೆಯ ಬಹುಮತ ಸಿಕ್ಕರೆ ದೇಶ ಬದಲಾಗುತ್ತದೆ ಎಂದು ಅವೈಜ್ಞಾನಿಕ ನಂಬಿಕೆಯಲ್ಲಿದ್ದಾರೆ. ಇಂಥವರು ಅರ್ಥಮಾಡಿಕೊಳ್ಳದ ವಿಚಾರವೆಂದರೆ ಮುನ್ನೂರು ನಾನ್ನೂರು ಕ್ಷೇತ್ರಗಳನ್ನು ಗೆಲ್ಲಲು ಅಷ್ಟು ಮತಗಳನ್ನು ಹಾಕಲು ಅಷ್ಟೊಂದು ಹಿಂದೂಗಳು ಇದ್ದರೇ ತಾನೇ?!.

ಒಂದು ಕಡೆ ಪಿತೃಪಕ್ಷಗಳನ್ನು ಮತ್ತು ಅದರ ಗುಲಾಮರ ಅಧಿಕಾರ ದಾಹವನ್ನು ಗಮನಿಸಿದರೆ ಹೈಕಮಾಂಡ್ ಎಂಬ ಬೆಕ್ಕು, ಗೂಬೆಗಳ ಬಕೇಟುಗಾರಿಕೆಗಾಗಿ ಎಂಥ ನೀಚ ಕೆಲಸಕ್ಕೂ ತೊಡೆ ತಟ್ಟಿ ನಿಲ್ಲುತ್ತಾರೆಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈಗಾಗಲೇ ಆಂಧ್ರದಲ್ಲಿ ಮತಾಂತರದ ಓಟದ ವೇಗವನ್ನು ಗಮನಿಸಿದರೆ ಸಾಕ್ಷಾತ್ ತಿರುಪತಿ ತಿಮ್ಮಪ್ಪನಿಗೇ ಉಳಿಗಾಲವಿಲ್ಲವೆಂಬಂತ್ತೆ ಕಾಣುತ್ತಿದೆ. `ಒಬ್ಬ ಹಿಂದೂ ಅನ್ಯ ಧರ್ಮಕ್ಕೆ ಮತಾಂತರಗೊಂಡರೆ, ಒಬ್ಬ ಹಿಂದೂ ಮಾತ್ರ ಕಡಿಮೆಯಗುವುದಿಲ್ಲ. ಜತೆಗೆ ಒಬ್ಬ ಶತ್ರುವೂ ಹೆಚ್ಚಾಗುತ್ತಾನೆ’ ಸ್ವಾಮಿ ವಿವೇಕಾನಂದರ ಈ ಮಾತನ್ನು ಪ್ರತಿಯೊಬ್ಬ ಸ್ವಾಭಿಮಾನಿಯೂ ಹಾಗೂ ಎಲ್ಲಾ ಮಠಗಳ ಎಲ್ಲಾ ಜಾತಿಯ ಸ್ವಾಮೀಜಿಗಳೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕಾಲಮಾನ ಇದಾಗಿದೆ.

ನಿರಾಶವಾದಿ ಹಿಂದೂಗಳು ಮಾತೆತ್ತಿದ್ದರೆ ಇಸ್ಲಾಂ ಧರ್ಮಕ್ಕೆ ಇಷ್ಟು ರಾಷ್ಟ್ರಳಿವೆ, ಕ್ರಿಶ್ಚಿಯನ್ ಧರ್ಮಕ್ಕೆ ಅಷ್ಟು ದೇಶಗಳಿವೆ, ನಮ್ಮ ಹಿಂದೂ ಧರ್ಮಕ್ಕೆ ಇರುವುದು ಭಾರತ ದೇಶವೊಂದೇ ಎಂದು ಮರುಗುತ್ತಾರೆ. ಆದರೆ ಭಾರತದಲ್ಲಿ ಈಗಾಗಲೇ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿ ಹೋಗಿದ್ದಾರೆ. ಹೀಗಾಗಿ ಹಿಂದೂಗಳಿಗೆ ಭಾರತ ದೇಶ ಒಂದೇ
ಇರುವುದೆಂದು ಹೇಳಿಕೊಳ್ಳುವುದು ಅಸಂಬದ್ಧವಾಗುತ್ತದೆ. ನಮ್ಮ ಸಂವಿಧಾನದಲ್ಲಿ ವ್ಯಕ್ತಿಯೊಬ್ಬ ಯಾವುದೇ ಧರ್ಮಕ್ಕೆ ಸ್ವಯಂಪ್ರೇರಣೆಯಿಂದ ಮತಾಂತರಗೊಳ್ಳುವ ಹಕ್ಕಿದೆ. ಆದರೆ ಮತಾಂತರವನ್ನೇ ಕುತಂತ್ರವಾಗಿ ಬಳಸಿಕೊಂಡು ಅಮಾಯಕ ಮುಗ್ಧರಿಗೆ ಮಾತೃಧರ್ಮದ ಮೇಲೆ ತಿರಸ್ಕಾರ ಹುಟ್ಟುವಂತೆ ಮಾಡಿ, ದೇವರ ಬಗ್ಗೆ ಒಂದು ಭೀತಿಯನ್ನು ಸೃಷ್ಠಿಸಿ ಆಮಿಷವೊಡ್ಡಿ ಒಂದು ಧರ್ಮದ ಮೇಲೆ ಆಕ್ರಮಣ ಮಾಡುವುದು ಸಂವಿಧಾನ ಮತ್ತು ಸಮಾಜ ವಿರೋಧವಲ್ಲವೇ? ಬಿಡಿ, ಸಂವಿಧಾನ, ರಾಜಕಾರಣ, ಸರಕಾರ, ಆಡಳಿತ, ಇವುಗಳ ಪರಿಧಿಯಲ್ಲಿ ನಡೆಯ ಬೇಕಾದ್ದು ನಡೆಯಲಿ.

ಆದರೆ ನಮ್ಮ ಸ್ವಾಮೀಜಿಗಳೀಗೇನಾಗಿದೆ, ಮೊನ್ನೆ ನೋಡಿ ಸ್ವಾಮೀಜಿಗಳು ಒಂದಾಗಿ ಆಗ್ರಹಿಸಿದರ ಫಲವಾಗಿ ಯಡಿಯೂರಪ್ಪನವರ ಆಣತಿಯಂತೆ ಮುಖ್ಯಮಂತ್ರಿಗಳು ಆಯ್ಕೆಯಾದರು. ಇದು ಸ್ವಾಮೀಜಿಗಳಿಗಿರುವ ಮಹಾಶಕ್ತಿ. ಇದೇ ರೀತಿಯ ಒಗ್ಗಟ್ಟನ್ನು ತಮ್ಮದೇ ಕ್ಷೇತ್ರದ ಸಂತರಾಗದ ಪಾಲ್ಗರ್ ಪ್ರಕರಣದಲ್ಲಿ ಸಂತರಿಬ್ಬರು ಹತ್ಯೆಯಾದಾಗ, ನಾಥ ಪಂಥದವಾರದ ಯೋಗಿ ಆದಿತ್ಯನಾಥರಿಗೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಬಾಯಲ್ಲಿ ಚಪ್ಪಲಿ ಕಡಿಯುವನೊಬ್ಬ ಬೈದಾಗ, ಅಷ್ಟೇ ಏಕೆ ಮೊನ್ನೆ ಉತ್ತರ ಪ್ರದೇಶದಲ್ಲಿ ಡಾಸ್‌ನ ದೇವಾಲಯದ ಸ್ವಾಮಿ ನರೇಶಾನಂದ ಸರಸ್ವತಿಯವರ ಮೇಲೆ ಮಾರಣಾಂತಿಕ ಹಲ್ಲೆಯಾದಾಗ ಯಾವ ಸ್ವಾಮೀಜಿಗಳೂ ಸಂತರೂ ಒಗ್ಗೂಡಲಿಲ್ಲ, ಖಂಡಿಸಲೂ ಇಲ್ಲ, ಧರ್ಮದ ಮೇಲಿನ ಆಕ್ರಮಣದ ವಿರುದ್ಧ ದನಿಯೆತ್ತಲಿಲ್ಲ.

ಒಂದು ಕಡೆ ಮತಾಂತರದ ಪಿಡುಗಿನಿಂದಾಗಿ ಸ್ವಾಮೀಜಿಗಳ ಪಲ್ಲಕ್ಕಿ ಹೊರುವ ಭಕ್ತರು ಮರೆಯಾಗುತ್ತಿದ್ದರೆ, ಮತ್ತೊಂದು ಕಡೆ ಸಂತರುಗಳ ಮೇಲೆಯೇ ಹಲ್ಲೆಗಳಾಗುತ್ತಿದ್ದರೆ ನಮ್ಮ ಸ್ವಾಮೀಜಿ ಗಳ ಗತಿಯೇನು?. ಹೀಗಾಗಿ ಸಂತರು ಮಠಾಧೀಶರು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಜಾತಿ, ಸ್ವಜಾತಿ, ರಾಜಕಾರಣಗಳನ್ನು ತಿಪ್ಪೆಗೆಸೆದು ಮೊದಲು ಈ ಮತಾಂತರ ಪಿಡುಗನ್ನು ಹೋಗಲಾಡಿಸಬೇಕಿದೆ. ಅದರಲ್ಲೂ ಹೆಚ್ಚಾಗಿ ಮುಗ್ಧ ದಲಿತರನ್ನು ರಕ್ಷಿಸುವುದರ ಮೂಲಕ ಸಂವಿಧಾನಶಿಲ್ಪಿ ಭಾರತರತ್ನ ಅಂಬೇಡ್ಕರ್ ಅವರ ಆಶಯದಂತೆ ನೀಡಲಾಗುವ ದಲಿತರ ಹಕ್ಕುಗಳು ಸೌಲಭ್ಯಗಳು ದಲಿತರಿಗೇ ಸಲ್ಲುವಂತ್ತಾಗಲಿ.

ಸಂತರು ಇನ್ನೂ ಸುಮ್ಮನಿದ್ದರೆ ಸಮಾಜದಲ್ಲಿ ಅವರೂ ರಾಜಕಾರಣಿಗಳಂತೆ `ಕಂಗೊಳಿಸಿ’ ಧರ್ಮದ ಮೌಲ್ಯಗಳನ್ನು ಕಳೆದುಕೊಂಡು ಕಳಂಕಿರಾಗುವುದರಲ್ಲಿ ಅನುಮಾನಗಳಿಲ್ಲ