Sunday, 15th December 2024

74ನೇ ಗಣರಾಜ್ಯೋತ್ಸವಕ್ಕೆ ಗೂಗಲ್’ನಿಂದ ಡೂಡಲ್ ಗೌರವ

ನವದೆಹಲಿ: ದೇಶಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ವಿಶೇಷ ಸಂದರ್ಭದಲ್ಲಿ ಸರ್ಚ್ ಇಂಜಿನ್ ಗೂಗಲ್ ವಿಶೇಷ ಡೂಡಲ್ ರಚಿಸಿ ಭಾರತೀಯರಿಗೆ ಶುಭಾ ಶಯಗಳನ್ನು ಕೋರಿದೆ.
ಗುಜರಾತ್​ನ ಅಹಮದಾಬಾದ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ಅವರು, ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಚಿಸಿದ ಕಾಗದದ ಕಲಾಕೃತಿಯ ವಿಡಿಯೋವನ್ನು ಗೂಗಲ್ ಹಂಚಿಕೊಂಡಿದೆ. 1950 ಜನವರಿ 26 ರಂದು ಭಾರತವು ಸಂವಿಧಾನದ ಅಂಗೀಕಾರದೊಂದಿಗೆ ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿಕೊಂಡಿತು. ಈ ಶುಭ ದಿನವನ್ನು ಗೂಗಲ್​ ಡೂಡಲ್ ಕೂಡ ನೆನಪಿಸಿ ಕೊಂಡು ದೇಶದ ಜನತೆಗೆ ಶುಭಕೋರಿದೆ. ಗೂಗಲ್​ ತನ್ನ ಮುಖಪುಟದಲ್ಲಿ ಹಂಚಿಕೊಂಡ ಕಲಾಕೃತಿಯನ್ನು ಕೈಗಳಿಂದ ಕತ್ತರಿಸಿದ ಕಾಗದ ದಿಂದ ರಚಿಸಲಾಗಿದೆ.

ಇದರಲ್ಲಿ ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಸಿಆರ್ಎಫ್ಪಿ ಕವಾಯತು ತಂಡ ಮತ್ತು ಮೋಟಾ ರ್ಸೈಕಲ್ ಸವಾರರು ಸೇರಿದಂತೆ ಗಣರಾಜ್ಯೋ ತ್ಸವದ ಪರೇಡ್ನ ಹಲವು ಅಂಶಗಳನ್ನು ಕಾಣಬಹುದಾಗಿದೆ.

ಈ ನಡುವೆ ದೇಶದಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕರ್ತವ್ಯ ಪಥದಲ್ಲಿ ಆಕರ್ಷಕ ಮಿಲಿಟರಿ ಮತ್ತು ಸಾಂಸ್ಕೃತಿಕ ವೈಭವ ಪ್ರದರ್ಶನ ನಡೆಯಲಿದೆ. ವಿವಿಧ ರಾಜ್ಯಗಳ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಪ್ರತಿನಿಧಿಸುವ ಟ್ಯಾಬ್ಲೋಗಳ ಮೆರವಣಿಗೆ ನಡೆಯಲಿದೆ.