Friday, 22nd November 2024

‘ಹಾತ್ ಸೆ ಹಾತ್ ಜೋಡೋ ಅಭಿಯಾನ’ ದ ಲಾಂಛನ ಬಿಡುಗಡೆ

ನವದೆಹಲಿ: ‘ಹಾತ್ ಸೆ ಹಾತ್ ಜೋಡೋ ಅಭಿಯಾನ’ ದ ಲಾಂಛನವನ್ನು ಕಾಂಗ್ರೆಸ್ ಪಕ್ಷ ಶನಿವಾರ ಬಿಡುಗಡೆ ಮಾಡಿದೆ.

ಅಲ್ಲದೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಆರೋಪ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೈ ನಾಯಕರು ಇದೇ 26ರಿಂದ 2 ತಿಂಗಳು ಹಾತ್ ಸೆ ಹಾತ್ ಜೋಡೋ ಅಭಿಯಾನ ನಡೆಯಲಿದೆ ಎಂದಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣು ಗೋಪಾಲ್, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಬಗ್ಗೆ ಮನೆಮನೆಗೆ ಸಂದೇಶ ಸಾರಲು ಈ ಅಭಿಯಾನ ನಡೆಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಮೋದಿ ಸರ್ಕಾರ ವಿರುದ್ಧ ಆರೋಪಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ನಾಯಕರು, ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಆಯಾ ರಾಜ್ಯಗಳ ವಿರುದ್ಧವೂ ಅಗತ್ಯವಿದ್ದರೆ ಚಾರ್ಜ್ ಶೀಟ್ ತಯಾರಿಸುತ್ತದೆ ಎಂದರು.

ಮೋದಿ ಸರ್ಕಾರದ ದುರಾಡಳಿತದಿಂದ ದೇಶದ ಜನರು ತೊಂದರೆ, ಸಮಸ್ಯೆ ಅನುಭವಿಸುತ್ತಿದ್ದು ಅವರ ಸಮಸ್ಯೆಗಳಿಗೆ ದನಿಯಾಗುತ್ತೇವೆ ಎಂದರು.

ಇಂದು ಜಮ್ಮು-ಕಾಶ್ಮೀರದ ಕತುವಾದಲ್ಲಿ ಮಾತನಾಡಿದ ಜೈರಾಂ ರಮೇಶ್, ಮನೆಮನೆಗೆ ಕಾಂಗ್ರೆಸ್ ನ ಪ್ರಚಾರ 6 ಲಕ್ಷ ಹಳ್ಳಿಗಳ ಮತ್ತು 2.5 ಲಕ್ಷ ಗ್ರಾಮ ಪಂಚಾಯತ್ ಗಳ 10 ಲಕ್ಷ ಮತಗಟ್ಟೆಗಳಿಗೆ ಮನೆ ಮನೆಗೆ ತಲುಪುತ್ತೇವೆ ಎಂದರು.

ಹಾತ್ ಸೆ ಹಾತ್ ಜೋಡೋ ಅಭಿಯಾನವನ್ನು ಕಾಂಗ್ರೆಸ್ ಜನವರಿ 26ರಿಂದ ಮಾರ್ಚ್ 26ರವರೆಗೆ ಹಮ್ಮಿಕೊಂಡಿದೆ. ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಪ್ರಚಾರ ನಡೆಸಲಿದ್ದಾರೆ.