Friday, 22nd November 2024

ಮಾಲ್‍ನಲ್ಲಿ ನಮಾಜ್ ವಿರೋಧಿಸಿ ಹನುಮಾನ್ ಚಾಲೀಸಾ ಪಠಣ

ಭೋಪಾಲ್: ಮಾಲ್‍ನಲ್ಲಿ ಕೆಲವು ಸಿಬ್ಬಂದಿಗಳು ನಮಾಜ್ ಮಾಡುವುದನ್ನು ವಿರೋಧಿಸಿ ಭಜರಂಗದಳದ ಗುಂಪೊಂದು ಹನುಮಾನ್ ಚಾಲೀಸಾವನ್ನು ಪಠಿಸಿ ಪ್ರತಿಭಟನೆ ನಡೆಸಿರುವ ಘಟನೆ ಭೋಪಾಲ್‍ನಲ್ಲಿ ನಡೆದಿದೆ.

ಭೋಪಾಲ್‍ನ ಡಿಬಿ ಮಾಲ್‌ನಲ್ಲಿ ಘಟನೆ ನಡೆದಿದ್ದು, ಹನುಮಾನ್‌ ಚಾಲೀಸಾ ಪಠಣ ಹಾಗೂ ನಮಾಜ್‌ ಮಾಡುತ್ತಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಭಜರಂಗದಳದ ಕಾರ್ಯಕರ್ತರು ಮೊದಲು ಮುಸ್ಲಿಂ ಸಿಬ್ಬಂದಿ ಪ್ರಾರ್ಥನೆ ಸಲ್ಲಿಸುತ್ತಿರುವ ಜಾಗಕ್ಕೆ ಹೋಗು ತ್ತಾರೆ. ಅಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮಾಲ್‍ನಲ್ಲಿ ನಮಾಜ್‍ನ್ನು ಗುಪ್ತವಾಗಿ ಮಾಡುತ್ತಿದ್ದಾರೆ ಎಂದು ಭಜರಂಗದಳ ಕಾರ್ಯಕರ್ತರು ಆರೋಪಿಸಿದರು.

ಬಳಿಕ ಭಜರಂಗದಳ ಕಾರ್ಯಕರ್ತರು ಎಸ್ಕಲೇಟರ್ ಬಳಿ ನೆಲದ ಮೇಲೆ ಕುಳಿತು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾಲ್‌ನ ಆಡಳಿತ ಮಂಡಳಿ ಹಾಗೂ ಭಜರಂಗದಳ ಕಾರ್ಯಕರ್ತರ ನಡುವೆ ವಾಗ್ವಾದಗಳು ನಡೆದವು. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಮಾಲ್‍ಗೆ ತೆರಳಿ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿದರು.