ಬೆಂಗಳೂರು : ಹವಾಮಾನ ಬದಲಾದಂತೆ ಬಗೆಬಗೆಯ ರೋಗಗಳು ನಮ್ಮನ್ನು ಕಾಡುತ್ತವೆ. ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಹೆಚ್ಚಾಗುತ್ತದೆ. ಇದರಿಂದ ಶೀತ, ಜ್ವರ (High Fever), ಕಫ, ಕೆಮ್ಮು, ವಾಂತಿ, ಭೇದಿ ಮುಂತಾದ ಸಮಸ್ಯೆಗಳಿಂದ ಅನೇಕರು ಬಳಲುತ್ತಾರೆ. ಹಾಗಾಗಿ ಈ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು. ಅದಕ್ಕಾಗಿ ನೀವು ಸರಿಯಾದ ಆಹಾರ ಕ್ರಮ ಅನುಸರಿಸಬೇಕು. ಈ ಸಮಯದಲ್ಲಿ ಹೆಚ್ಚಿನ ಜನರಲ್ಲಿ ಕಂಡುಬರುವಂತಹ ಸಮಸ್ಯೆ ಎಂದರೆ ಅದು ಜ್ವರ. ಜ್ವರಕ್ಕೆ ವೈದ್ಯರು ಅಗತ್ಯವಾದ ಔಷಧಿಗಳನ್ನು ನೀಡುತ್ತಾರೆ. ಅದರ ಜೊತೆಗೆ ನೀವು ಸರಿಯಾದ ಆಹಾರವನ್ನು ಸೇವಿಸಬೇಕು. ಇದರಿಂದ ಜ್ವರದಿಂದ ಬೇಗ ಗುಣಮುಖರಾಗಬಹುದು. ಹಾಗಾದ್ರೆ ಜ್ವರದ ಸಮಯದಲ್ಲಿ ಯಾವೆಲ್ಲಾ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ತಿಳಿಯಿರಿ.
ಎಳನೀರು: ಗ್ಲೂಕೋಸ್ ಮತ್ತು ಎಲೆಕ್ಟ್ರೋಲೈಟ್ ಗಳಿಂದ ತುಂಬಿರುವ ಎಳನೀರು ದೇಹದ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸಾಮಾನ್ಯವಾಗಿ ಜ್ವರದಿಂದ ಉಂಟಾಗುವ ನಿರ್ಜಲೀಕರಣ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮಗೆ ಸುಸ್ತು, ಆಯಾಸ ಕಡಿಮೆಯಾಗುತ್ತದೆ.
ಖಿಚ್ಡಿ: ಭಾರತದ ಆಹಾರಗಳಲ್ಲಿ ಒಂದಾದ ಖಿಚಡಿಯನ್ನು ಮಸಾಲೆಗಳನ್ನು ಸೇರಿಸಿ ತಯಾರಿಸುತ್ತಾರೆ. ಇದು ರುಚಿಕರವಾಗಿದ್ದು ಸುಲಭವಾಗಿ ಜೀರ್ಣವಾಗುವ ಖಾದ್ಯವಾಗಿದೆ. ಅಕ್ಕಿ, ಬೇಳೆಕಾಳುಗಳು ಮತ್ತು ತರಕಾರಿಗಳ ಸಂಯೋಜನೆಯು ಕಾರ್ಬೋಹೈಡ್ರೇಟ್‍ಗಳು, ಪ್ರೋಟೀನ್‍ಗಳು ಮತ್ತು ಅಗತ್ಯ ಜೀವಸತ್ವಗಳನ್ನು ಒಳಗೊಂಡ ಒಂದು ಆರೋಗ್ಯಕರವಾದ ಆಹಾರ ಇದಾಗಿದೆ.
ಬೇಯಿಸಿದ ಮೊಟ್ಟೆಗಳು: ಪ್ರೋಟೀನ್ ಸಮೃದ್ಧವಾಗಿರುವ ಮೊಟ್ಟೆಗಳನ್ನು ಜ್ವರದ ಸಮಯದಲ್ಲಿ ಬೇಯಿಸಿ ತಿಂದರೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಬಿ 6 ಮತ್ತು ಬಿ 12 ಇದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿ ಜ್ವರದಿಂದ ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಸೂಪ್: ತರಕಾರಿಗಳು ಅಥವಾ ಚಿಕನ್‍ನಿಂದ ತಯಾರಿಸಿದ ಸೂಪ್ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳು ಸೇವಿಸಿದರೆ ಒಳ್ಳೆಯದು. ನೋಯುತ್ತಿರುವ ಗಂಟಲು ಮತ್ತು ಶೀತದ ಪ್ರಭಾವವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.
ಉಪ್ಪಿಟ್ಟು : ಸೂಜಿ, ತರಕಾರಿಗಳು ಮತ್ತು ಮಸಾಲೆಗಳಿಂದ ತಯಾರಿಸಿದ ಉಪಿಟ್ಟು ಜ್ವರಕ್ಕೆ ಉತ್ತಮವಾದ ಆರೋಗ್ಯಕರ ಆಹಾರವಾಗಿದೆ. ಇದು ಬಹಳ ಮೆತ್ತಗೆ ಇರುವುದರಿಂದ ಬೇಗನೆ ಜೀರ್ಣವಾಗುತ್ತದೆ. ಮತ್ತು ಜ್ವರದಿಂದ ಮುಕ್ತಿ ನೀಡುತ್ತದೆ.
ಓಟ್‍ಮೀಲ್: ಓಟ್‍ಮೀಲ್ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಪೌಷ್ಟಿಕ ಆಯ್ಕೆಯಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಪೋಷಕಾಂಶಗಳನ್ನು ನೀಡುತ್ತದೆ.
ಬೇಸನ್ ಶೀರಾ: ಶೀತ, ಜ್ವರ ಮತ್ತು ಕೆಮ್ಮಿನಿಂದ ಪರಿಹಾರಕ್ಕೆ ಹೆಸರುವಾಸಿಯಾದ ಹಳೆಯ ಪಾಕವಿಧಾನ ಬೇಸನ್ ಶೀರಾ ಗಂಟಲಿನ ಕಿರಿಕಿರಿಯನ್ನು ಶಮನಗೊಳಿಸುವಲ್ಲಿ, ಮೂಗಿನ ದಟ್ಟಣೆಯನ್ನು ನಿವಾರಿಸುವಲ್ಲಿ ಮತ್ತು ಜ್ವರದ ಸಮಯದಲ್ಲಿ ಆರಾಮವನ್ನು ನೀಡುವಲ್ಲಿ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಪ್ರಸಾರವಾಗುತ್ತಿರುವ ಟಿವಿ ಶೋ ಯಾವುದು ನೋಡಿ!
ಈ ಆಹಾರಗಳನ್ನು ಜ್ವರದ ಸಮಯದಲ್ಲಿ ಸೇವಿಸುವುದರಿಂದ ನೀವು ಬೇಗನೆ ಜ್ವರದಿಂದ ಮುಕ್ತಿ ಪಡೆಯಬಹುದು. ಹಾಗೇ ಜ್ವರದಿಂದ ಉಂಟಾಗುವ ಸುಸ್ತು, ಆಯಾಸ ಸಹ ಕಡಿಮೆಯಾಗುತ್ತದೆ.