Thursday, 12th December 2024

ಮೊದಲಿಗೆ ಹೊನ್ನ ಶೂಲದ ತಿವಿತ, ಕಡೆಗೆ ಬಗಣಿ ಗೂಟ!

ಶ್ರೀನಿಸುತ

ಬನ್ನಂಜೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅನಗತ್ಯ ವಿಷಯ ಸ್ಮರಣೆ ಸತ್ತವರ ಬಗ್ಗೆ ಕೆಟ್ಟ ಮಾತು ಆಡಬಾರದು ಎನ್ನು ತ್ತಾರೆ. ಆದರೆ ಉಡುಪಿ ಪರ್ಯಾಯ ಅದಮಾರು ಮಠ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಏರ್ಪಡಿಸಿದ್ದ ವಿದ್ಯಾವಾಚ ಸ್ಪತಿ ಬನ್ನಂಜೆ  ಗೋವಿಂದಾಚಾರ್ಯರ ‘ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಅದಮಾರು ಹಿರಿಯ ಮಠಾಧೀಶ ಶ್ರೀ ವಿಶ್ವ ಪ್ರಿಯ ತೀರ್ಥರು ಬನ್ನಂಜೆ ಯವರ ಕುರಿತು ಆಡಿದ ಮಾತುಗಳು ಇದಕ್ಕೆ ಅಪವಾದ ಎಂಬಂತಿತ್ತು. ಪ್ರಾರಂಭದಲ್ಲಿ ಗೋವಿಂದಾಚಾರ್ಯರ ಗುಣಗಾನ ಮಾಡುವ ಅವರು, ಕೊನೆಯಲ್ಲಿ ‘ಬನ್ನಂಜೆಯವರು ಅಮೆರಿಕಕ್ಕೆ ಹೋಗಿದ್ದು ತಮ್ಮ ಮಠದ, ತಮ್ಮ ಗುರುಗಳ ದುಡ್ಡಿನಿಂದ’.. ಇತ್ಯಾದಿಯಾಗಿ ವಿಷಯಾಂತರ ಮಾಡುತ್ತಾರೆ. ಈ ಉಸಾಬರಿ ಬೇಕಿತ್ತಾ?

ಸಮಾಜದಲ್ಲಿ ಯಕಶ್ಚಿತ್ ಮನುಷ್ಯ ಸತ್ತರೂ ಅವನ ಪರ-ವಿರೋಧಿಗಳು ಸಾರ್ವಜನಿಕ ಅಭಿಪ್ರಾಯ ವ್ಯಕ್ತಪಡಿಸುವಾಗ ಅಯ್ಯೋ ಪಾಪ (ಅನುಕಂಪ ಎನ್ನುವ ಅರ್ಥದಲ್ಲಿ) ಎನ್ನುತ್ತಾರೆ. ತಮಗೆ ಗೊತ್ತಿರುವ ಅವನ ಗುಣಗಳನ್ನು ಸ್ಮರಿಸುತ್ತಾರೆ.

ಸತ್ತವನ ಅವಗುಣಗಳನ್ನು ತಿಳಿವಳಿಕೆ ಇರುವವರು ಎಂದೂ ಎತ್ತಿಆಡುವುದಿಲ್ಲ. ಇದು ಕಾಮನ್ ಸೆನ್ಸ್. ‘ಸರ್ವಭೂತಗಳಲ್ಲಿ (ಜೀವರಲ್ಲಿ) ದಯಾ, ಕ್ಷಮೆ ಹೊಂದಿರುತ್ತೇನೆ’ ಎನ್ನುವ ಶಪಥ ಮಾಡಿ ಸನ್ಯಾಸ ತೆಗೆದುಕೊಳ್ಳುವ ಕಾವಿ ಹೊದೆಯುವ ಸ್ವಾಮಿಗಳು ಮೇಲಿನ ಅನುಭವಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಏನು ಗತಿ? ಗುರುಗಳೇ ಹೀಗೆ ನಡೆದುಕೊಂಡರೆ ಶಿಷ್ಯರಿಗೆ ಬುದ್ಧಿ ಹೇಳು ವವರು ಯಾರು? ನಾನೀಗ ಹೇಳ ಹೊರಟಿರುವ ವಿಷಯ ಉಡುಪಿ ಅಷ್ಟಮಠಗಳಲ್ಲಿ ಒಂದಾದ ಪರ್ಯಾಯ ಅದಮಾರು ಮಠ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಇಹಲೋಕ ತ್ಯಜಿಸಿದ ಸಂದರ್ಭ ಅಂದು ಸಂಜೆ ‘ಸಂಸ್ಮರಣೆ’ ಕಾರ್ಯಕ್ರಮ ಏರ್ಪಡಿಸಿತ್ತು.

ಅದಮಾರು ಹಿರಿಯ ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥರು, ಪರ್ಯಾಯ ಪೀಠಸ್ಥ ಶ್ರೀ ಈಶಪ್ರಿಯ ತೀರ್ಥರು ಪಾಲ್ಗೊಂಡಿದ್ದರು. ಈ ಸಮಾರಂಭ youtube ನಲ್ಲಿ ನೋಡಲು ಲಭ್ಯವಿದೆ. link https ://you .tu.be/BCSOaMOPOAU (adamaru matha &youtube ). ಮಾತನ್ನು ಮೊದಲಿಗೆ ಪ್ರಾರಂಭಿಸುವ ಶ್ರೀ ವಿಶ್ವಪ್ರಿಯ ತೀರ್ಥರು ಶ್ರೀಮದ್ ಭಗವದ್ಗೀತೆಯ ಶ್ರೀಕೃಷ್ಣನ ವ್ಯಾಕ್ಯ ವನ್ನು ಉದಾಹರಿಸುತ್ತ ‘ಯತ್ ಯತ್ ವಿಭೂತಿಮತ್ ಸತ್ವಂ…’ ಹೇಳಿ ಶ್ರೀ ಬನ್ನಂಜೆಯವರಲ್ಲಿ ಭಗವಂತನ ವಿಶೇಷ ಸನ್ನಿಧಾನ ಉಂಟು; ಅವರು’ ತಿಳಿಯಾದ ತಿಳುವಳಿಕೆ’ ಹೊಂದಿದವರು; ತಿಳಿಯಾದ ಭಾಷೆಯಲ್ಲಿ ಎಲ್ಲರಿಗೂ ಅರ್ಥ  ಮಾಡಿಸುತ್ತಿದ್ದರು’ ಎಂದೆಲ್ಲಾ ಗುಣಗಾನ ಮಾಡುತ್ತಾರೆ.

ನಮ್ಮ ಗುರುಗಳು ಬನ್ನಂಜೆಯವರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು’ (ಈ ವಾಕ್ಯದ ಅರ್ಥವನ್ನು ಓದುಗರಿಗೆ ಬಿಟ್ಟಿ ದ್ದೇನೆ). ಹೀಗೆಲ್ಲಾ ಸಾಗುವ ಶ್ರೀಗಳ ವಾಕ್ ಸರಣಿ ಉತ್ತರಾರ್ಧದಲ್ಲಿ ಹಳಿ ಬದಲಿಸುತ್ತದೆ. ಈ ಸಂದರ್ಭದಲ್ಲಿ ಭರ್ತೃಹರಿಯ ಸುಭಾಷಿತವೊಂದು ನನಗೆ ಜ್ಞಾಪಕಕ್ಕೆ ಬರುತ್ತದೆ. ಪರಗುಣ ಪರಮಾಣುನ್ ಪರ್ವತೀ ಕೃತ್ಯ ನಿತ್ಯಮ್ ನಿಜ ಹೃದಿ ವಿಕಸಂತಃ ಸಂತಿ ಸಂತಃ ಕಿಯಂತಃ ಬೇರೆಯವರ ಅಣುವಿನಷ್ಟೇ ಚಿಕ್ಕದಾದ ಗುಣವನ್ನು ಪರ್ವತದಂತೆ ಹಿಗ್ಗಿಸಿ ನೋಡಿ, ಹೃದಯದಲ್ಲಿ ಸಂತೋಷಿ ಸುವ ಸಜ್ಜನರು ಎಷ್ಟು ಮಂದಿ ಸಿಗುತ್ತಾರೆ? ಈ ಮನೋಭಾವದವರು ದುರ್ಲಭ ಎಂಬುದು ಇದರ ಅರ್ಥ.

ಶ್ರೀ ಬನ್ನಂಜೆಯವರು ಬಾಲ್ಯದಿಂದ ಬದುಕಿನ ಕಡೆಯವರೆಗೂ ಅಧ್ಯಾತ್ಮದ ಹುಡುಕಾಟದಲ್ಲಿ (ಸತ್ಯಾನ್ವೇಷಣೆ ತೊಡಗಿಸಿಕೊಂಡಿ ದ್ದವರು. ಬಾಲ್ಯದಲ್ಲೂ ಎಂದೂ ಹುಡುಗಾಟದಲ್ಲಿ ತೊಡಗಿಸಿಕೊಂಡಿರಲಿಲ್ಲ .(ಈ ಮಾತನ್ನು ಅವರೇ ಹೇಳಿಕೊಂಡಿದ್ದಾರೆ).
ಕನ್ನಡವನ್ನಾಗಲೀ, ಸಂಸ್ಕೃತವನ್ನಾಗಲೀ ಶುದ್ಧವಾಗಿ ಮಾತನಾಡದಿದ್ದಾಗ ಸಿಟ್ಟುಗೊಳ್ಳುತ್ತಿದ್ದರು. ಭಾಷಾ ಶುದ್ಧತೆ, ಶುದ್ಧ ಪದಸಂಸ್ಕೃತಿ ಅವರಲ್ಲಿ ರಕ್ತಗತವಾಗಿತ್ತು. ಅವರ ಅಭಿಮಾನಿಗಳು ಸ್ವದೇಶ ವಿದೇಶಗಳಲ್ಲಿ ಸಾವಿರಾರು ಜನ ಇದ್ದರೂ ಎಂದೂ ರಾಜಕೀಯದಂತೆ ಗುಂಪು ಕಟ್ಟಲಿಲ್ಲ. ದೇಶ ವಿದೇಶಗಳಲ್ಲಿ ತಮ್ಮ ಪ್ರವಚನಗಳಿಂದ, ಮಾಧ್ವತತ್ತ್ವವನ್ನು ಪ್ರಸಾರ ಮಾಡಿದರು.

ಜೀವನದ ಉದ್ದಕ್ಕೂ ಪ್ರಾಚೀನ ಹಸ್ತಪ್ರತಿಗಳೊಂದಿಗೆ ಒಡನಾಟ. ಶ್ರೀಮಧ್ವಾಚಾರ್ಯರ ಪ್ರಥಮ ಶಿಷ್ಯರು, ಫಲಿಮಾರು ಮಠದ ಮೂಲ ಯತಿಗಳಾದ ಶ್ರೀ ಹೃಷೀಕೇಶತೀರ್ಥರು 700 ವರ್ಷಗಳ ಹಿಂದೆ ತಾಳೆ ಗರಿಯಲ್ಲಿ ಬರೆದಿಟ್ಟ ’ಸರ್ವಮೂಲ’ ಪ್ರತಿಯನ್ನು ಸಂಶೋಧಿಸಿ ಶುದ್ಧಪಾಠ (ಇದನ್ನು ಒಪ್ಪದವರೂ ಇದ್ದಾರೆ ) ಕೊಟ್ಟ ಹೆಗ್ಗಳಿಕೆ ಶ್ರೀ ಬನ್ನಂಜೆ ಯವರದು.

ಇದರ ವಿಚಾರದಲ್ಲಿಯೇ ಮಾಧ್ವ ಸಮುದಾಯದಲ್ಲೇ ಘಟ್ಟದ ಮೇಲಿನ /ಕೆಳಗಿನ ವಿದ್ವಾಂಸರ ವಿಚಾರ ವಿರೋಧ ಕಟ್ಟಿಗೊಳ್ಳ ಬೇಕಾಯಿತು. ಶ್ರೀಗಳವರ ಭಾಷಣದ ಧಾಟಿಯನ್ನು ಗಮನಿಸಿದರೆ, ಹೃಷಿಕೇಶ ತೀರ್ಥರ ಪಾಠದ ಬಗ್ಗೆ ಒಲವು ಇದ್ದಂತೆ ಕಾಣು ವುದಿಲ್ಲ. ನನ್ನ ಅಭಿಪ್ರಾಯ ತಪ್ಪಿದ್ದರೂ ಇರಬಹುದು. ಇಂತಹ ವಿಚಾರಗಳಲ್ಲಿ ಅಭಿಪ್ರಾಯಭೇದ ಬರುವುದು ಸಹಜ. ಎಷ್ಟೋ ಬಾರಿ ಕೆಲವರು ಬನ್ನಂಜೆಯವರ ಎದುರಿಗೆ ಸರ್ವಮೂಲದ ಬಗ್ಗೆೆ ಕೆಣಕಿದಾಗ ವಿರೋಧಿಗಳ ಬಗ್ಗೆ ’ಸಂಸ್ಕೃತ ಬಾರದವರು’ ಎಂದು ಹೇಳಿದ್ದೂ ಉಂಟು.

‘ಇದ್ದದ್ದು ಇದ್ದಾಂಗೆ ಹೇಳಿದ್ರೆ ನೀವೆಲ್ಲ ……’ ಎನ್ನುವ ಹಾಡಿನ ಸಾಲು ಜ್ಞಾಪಕಕ್ಕೆ ಬರುತ್ತದೆ. ಅವರು ಯಾರ ಮುಲಾಜಿಗೂ
ಒಳಗಾಗದೆ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಅಪಪಾಠ ಬಂದಾಗ ಸರಿಪಾಠವನ್ನು ತಿಳಿಸುತ್ತಿದ್ದರು. ಅವರ ತಪ್ಪು
ಮನವರಿಕೆಯಾದ ಸಂದರ್ಭದಲ್ಲಿ ವಿಷಾದವನ್ನೂ ವ್ಯಕ್ತಪಡಿಸುತ್ತಿದ್ದರು. ಬನ್ನಂಜೆಯವರೊಂದಿಗೆ ಅಭಿಪ್ರಾಯಭೇದ
ಹೊಂದಿದ ಶುದ್ಧ ವೈದಿಕರೂ ಕೂಡ ಅಧ್ಯಾತ್ಮದಲ್ಲಿ ಅವರು ಹೊಂದಿದ್ದ ಅಗಾಧ ಪಾಂಡಿತ್ಯಕ್ಕೆ ತಲೆಮಣಿಸುತ್ತಿದ್ದರು.
ಸಾಮಾನ್ಯರು ಕಾಣಲಾಗದಂತಹ ಗುಣಗಳನ್ನು ಶ್ರೀ ವಿಶ್ವಪ್ರಿಯರು ಹೆಕ್ಕಿ ತೆಗೆಯಬಹುದು ಎಂದು ಕಾದು ಕುಳಿತಿದ್ದ ನನಗೆ ಒಮ್ಮೆಲೇ ಆಶ್ಚರ್ಯವಾಯಿತು. ಮಾತಿನಸರಣಿ ಅಮೇರಿಕಾ ಫ್ಲೈಟ್ ಹತ್ತಿತ್ತು !

ಬನ್ನಂಜೆಯವರು ಅಮೆರಿಕಾಕ್ಕೆ ಹೋಗಿದ್ದು ತಮ್ಮ ಮಠದ, ತಮ್ಮ ಗುರುಗಳ ದುಡ್ಡಿನಿಂದ …. ಇತ್ಯಾದಿ ಬನ್ನಂಜೆಯವರ
ಭಾಗವತ, ಭಾರತ, ಉಪನಿಷದ್, ಪುರಾಣಗಳ ವಿಚಾರಧಾರೆ ಕಿವಿಯಲ್ಲಿ ತಲೆಯಲ್ಲಿ ತುಂಬಿಸಿಕೊಂಡವರಿಗೆ ಅವರ ಅಮೆರಿಕಾ
ಯಾತ್ರೆ ದುಡ್ಡಿನ ಉಸಾಬರಿ ಯಾಕೆ ಬೇಕು? ಭಾಷಣದ ಕಡೆಗೂ ಮಂತ್ರಾಕ್ಷತೆ ಕೊಡುವಂತೆ ಕೊಂಕು ಮಾತು. ಇದನ್ನು ಕೇಳಿದ ಯಾರೂ ಒಪ್ಪುವುದಿಲ್ಲ .

’ಬನ್ನಂಜೆ ಮತ್ತೆ ಹುಟ್ಟಿ ಬನ್ನಿ ’ಆದರೆ ಹುಟ್ಟು ಬರುವ ಮುನ್ನ ಅಹಂಕಾರ ತೊಲಗಿಸಿಕೊಂಡು ವಿನಯ ಮೈಗೂಡಿಸಿಕೊಂಡಿರಲಿ ’ ಇದು ಕೇಳುವವನ ನಖಶಿಖಾ ನಿಜಕ್ಕೂ ಉರಿದುಹೋಗತ್ತೆ. ಕಡೆಯದಾಗಿ ಒಂದು ಮಾತು.. ಪುರಾಣಗಳನ್ನು  ಅರ್ಥೈಸಿಕೊಳ್ಳ ಬೇಕಾದವರಿಗೆ ಮೂರು ತರಹದ ಭಾಷೆ ಗೊತ್ತಿರಬೇಕಂತೆ – ಸಮಾಧಿ ಭಾಷೆ, ದರ್ಶನ ಭಾಷೆ ಮತ್ತು ಗುಹ್ಯಭಾಷೆ. ಶ್ರೀಗಳವರ ಉಪನ್ಯಾಸ ವೈಖರಿ ಕೆಲವು ಕಡೆ ಗುಹ್ಯಭಾಷೆ ಅಂತ ಅನ್ನಿಸದೇ ಇರುವುದಿಲ್ಲ.

ಕೇಳುಗರ ದುರ್ದೈವ. ಜೋಡನ್ನು ಶಾಲಲ್ಲಿ ಸುತ್ತಿ ಪ್ರಯೋಗಿಸಿದ್ದು ರಥಿಯಾದವನ್ನು ಬಿಡುವ ಯಾವ ಅಸ್ತ್ರಕ್ಕೂ ಕಡಿಮೆಯಿಲ್ಲ. ಅರ್ಜುನನ ವಿಷಾದ ಯೋಗವನ್ನು ಪರಿಹರಿಸಿದ ಕಾಳಿಂಗ ಮರ್ದನ ಶ್ರೀಕೃಷ್ಣ ಈ ಮಾತುಗಳನ್ನು ಕೇಳಿ ಸಂಕಟಕ್ಕೆ ಒಳಗಾದ ಅಭಿಮಾನಿಗಳ ದುಃಖವನ್ನು ಪರಿಹರಿಸಲಿ. ವಿಶ್ವಪ್ರಿಯರ ಈ ರೀತಿಯ ಮಾತುಗಳು ಬನ್ನಂಜೆಯವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.