Sunday, 15th December 2024

ಕೃಷ್ಣನ ಲೆಕ್ಕದಂತಾದ ಕುದುರೆಗಳ ಲೆಕ್ಕ

ಸುಧಕ್ಕನ ಕಥೆಗಳು

ಸುಧಾಮೂರ್ತಿ

ಇಂದು ಮಕ್ಕಳ ಸಂತಸಕ್ಕೆ ಪಾರವೇ ಇಲ್ಲ. ನಿನ್ನೆ ರಾತ್ರಿ ರವಿ, ರಜನಿ ಬಂದಿದ್ದಾರೆ. ಈ ಮಕ್ಕಳು ಎಳುವ ಹೊತ್ತಿಗೆ ಅವರಿಬ್ಬರೂ ಹಾಜರ್. ಪಕ್ಕದ ಮನೆಯವರಾದರೂ ಇವರ ಸಂಬಂಧಿಗಳಂತೆ ಹೊಂದಾಣಿಕೆ ಇದೆ. ಅವರನ್ನು ಕಂಡರೆ ಅಜ್ಜಿ-ಅಜ್ಜನಿಗೂ ತುಂಬಾ ಪ್ರೀತಿ.

ಅಜ್ಜಿ ಬೆಳಗಿನಿಂದಲೇ ಹಪ್ಪಳದ ತಯಾರಿಯನ್ನು ನಡೆಸಿದ್ದಳು. ಎಲ್ಲ ಮಕ್ಕಳಿಗೂ ಬೇರೆ ಬೇರೆ ಕೆಲಸ ಹೇಳಿದ್ದಳು. ಇಂದು ರಾಮು ಸಹಿತ ಬಂದಿದ್ದ. ಒಲೆಯ ಮೇಲೆ ಸಬ್ಬಕ್ಕಿ ಕುದಿಯುತ್ತಿತ್ತು. ಇನ್ನೊಂದು ಒಲೆಯ ಮೇಲೆ ಅಕ್ಕಿಹಿಟ್ಟು ತೊಳಿಸುತ್ತಿದ್ದರು.
ಮಹಡಿಯ ಮೇಲೆ ತಿಳಿದಾದ ಬಿಳಿಯ ಬಟ್ಟೆ ಹಾಸಿ ಅದರ ಅಂಚಿಗೆ ಹಾರದಂತೆ ಕಲ್ಲಿರಿಸಿದ್ದರು. ಅಜ್ಜಿ ಹಪ್ಪಳದ ಹಿಟ್ಟು ತಂದು ಚಿಕ್ಕ ಬಿಲ್ಲಿಯ ಆಕಾರದ ಹಪ್ಪಳ ಹಾಕುತ್ತಿದ್ದಳು. ಅಜ್ಜಿಯ ಕಣ್ಣು ತಪ್ಪಿಸಿ ಅನುಷ್ಕಾ ಮತ್ತು ರಜನಿ ಒಂದೆರಡು ಹಸಿ ಹಪ್ಪಳ ತಿಂದುಬಿಟ್ಟರು. ಅಜ್ಜಿ ನೋಡಿಯೂ ನೋಡದವರಂತೆ ನಕ್ಕಳು. ಅಜ್ಜಿ ಮಕ್ಕಳನ್ನು ದಂಡಿಸುವುದಾಗಲೀ ಒಯ್ಯುವುದಾಗಲೀ
ಮಾಡುವುದೇ ಇಲ್ಲ. ಏನನ್ನಾದರೂ ಹೇಳಬೇಕಾದರೆ ಪ್ರೀತಿಯಿಂದ ಹೇಳುತ್ತಾಳೆ.

ಕೃಷ್ಣ ಯಾವುದೋ ಚಿಂತೆಯಲ್ಲಿ ಕುಳಿತು ಪೇಪರ್ ಮತ್ತು ಪೆನ್‌ನಿಂದ ಲೆಕ್ಕ ಬರೆಯುತ್ತಿದ್ದಳು. ಅಜ್ಜಿ ಅದನ್ನು ನೋಡಿ ‘ಮಗು ಅದೇನು ಲೆಕ್ಕ ಬರೆಯುತ್ತಿ?’ ಎಂದಳು. ‘ಅಜ್ಜಿ ಅದು ಹಪ್ಪಳದ ಲೆಕ್ಕ’ ‘ಹಾಗೆಂದರೇನು?’ ಅಜ್ಜಿ ತಾನು ಮಾಡುವ ಕೆಲಸ ನಿಲ್ಲಿಸಿ ದಳು. ‘ಅಜ್ಜಿ ಲೆಕ್ಕ ಹಾಕ್ತಾ ಇದ್ದೀನಿ. ಪ್ರತಿ ದಿನ ಒಬ್ಬರು ನಾಲ್ಕು ಹಪ್ಪಳವನ್ನಾದರೂ ತಿನ್‌ತ್ತಾರೆ. ಈಗ ನಮ್ಮ ಮನೇಲಿ ಆರು ಜನ ಇದ್ದಾರೆ. ಅಂದರೆ 6*4*30 ಹಪ್ಪಳ ಒಂದು ತಿಂಗಳಿಗೆ ಬೇಕು. ರವಿ ಮತ್ತೂ ರಜನಿ ಮನೇಲಿ ನಾಲ್ಕು ಜನ ಇದ್ದಾರೆ. ಅವರಿಗೆ 4*4*30 ಹಪ್ಪಳ ಒಂದು ತಿಂಗಳಿಗೆ ಬೇಕು. ಅಂದರೆ ಒಂದು ವರ್ಷಕ್ಕೆ ಎಷ್ಟು ಬೇಕು? ಅದಲ್ಲದೆ ನೀನು ಊರಿಗೂ ಹಪ್ಪಳ ಕಳಿಸ್ತೀಯಾ. ಹೀಗಾಗಿ ನೀನು ಎಷ್ಟು ಹಪ್ಪಳ ಮಾಡ್ತೀಯಾ?’ ಅಷ್ಟರಲ್ಲಿ ಅಜ್ಜ ಅಲ್ಲಿಗೆ ಬಂದರು.

ಕೃಷ್ಣನ ಮಾತು ಕೇಳಿ ನಕ್ಕುಬಿಟ್ಟರು. ‘ನೀನು ತಿಳಿದಂತೆ ಲೆಕ್ಕ ಇರೋದಿಲ್ಲ. ದಿನಾ ಹಪ್ಪಳ ತಿಂದೂ ತಿಂದೂ ಬೇಜರಾಗಿ ಒಂದು ತಿಂಗಳು ತಿನ್ನದೆ ಇರಬಹುದು. ಮನೆಗೆ ಅತಿಥಿಗಳು ಬಂದ್ರೆ ಇನ್ನೂ ಹೆಚ್ಚು ಬೇಕಾಗ್‌ಬಹುದು….’ ಅಜ್ಜನ ಮಾತು ಕೇಳಿ ಕೃಷ್ಣ ಕಕ್ಕಾಬಿಕ್ಕಿಯಾದಳು. ಅವಳ ಮುಖ ನೋಡಿ ಅಜ್ಜಿ ನಕ್ಕು ‘ಗಾಬರಿಯಾಗಬೇಡ ಕೃಷ್ಣ, ನಿನ್ನ ಲೆಕ್ಕ ಕುದುರೆಯ ಲೆಕ್ಕದಂತೆ ಆಯ್ತು’
ಎಂದಳು. ‘ಅಜ್ಜಿ ಅದೇನು ಕುದುರೆ ಲೆಕ್ಕ ? ಅದು ಕಥೆ ಇರ್ ಬೇಕು. ಪ್ಲೀಸ್ ಹೇಳು ಅಜ್ಜಿ’ ಎಂದು ರವಿ ಅಜ್ಜಿಯ ಸೆರಗು ಹಿಡಿದ.
‘ಹೌದು ನಾವು ಕತೆ ಕೇಳೋದರಲ್ಲಿ ಹಿಂದೆ ಬಿದ್ವಿ. ಈಗ ಹೇಳಲೇ ಬೇಕು’ ಎಂದು ರಜನಿ ಪಟ್ಟು ಹಿಡಿದಳು. ಅಜ್ಜಿ ಖಾಲಿಯಾದ ಪಾತ್ರೆಯನ್ನು ಹಿಡಿದುಕೊಂಡು ಬಿಸಿಲಿಗೆ ಬಂದ ಬೆವರನ್ನು ಒರೆಸಿಕೊಳ್ಳುತ್ತಾ ನೆರಳಿಗೆ ಬಂದಳು.

ಸುತ್ತ ಮುತ್ತಲೂ ಹಪ್ಪಳದ ಹಿಂಗಿನ ಸುವಾಸನೆ ಉಳಿದ ರುಚಿಯಾದ ಹಿಟ್ಟನ್ನು ಎಲ್ಲರ ಕೈಗೆ ಉಂಡೆ ಮಾಡಿ ಕೊಡುತ್ತ, ಅಜ್ಜಿ ಕತೆ ಶುರು ಮಾಡಿದಳು. ಬನ್ನಿ ನಾವೆಲ್ಲರೂ ಅದನ್ನು ಕೇಳೋಣ. ಅನೇಕ ವರ್ಷಗಳ ಹಿಂದೆ ಇಂಗ್ಲೆಂಡ್ ದೇಶದಲ್ಲಿ ಜಾರ್ಜ್ ಸ್ಮಿತ್ ಎನ್ನುವ ಬುದ್ಧಿವಾದಿ ಇದ್ದ. ಆತ ಲೆಕ್ಕ, ಗಂಭೀರ ಚಿಂತನೆಯಲ್ಲಿ ಬಲು ಜಾಣ. ಆಗ ಆ ದೇಶದ ಪ್ರಧಾನಮಂತ್ರಿ ಕೂಡ ಆತನ ಸಲಹೆ ಕೇಳುತ್ತಿದ್ದರು. ಜಾರ್ಜ್ ಮುಂಬರುವ ದಿನಗಳಲ್ಲಿ ಜನಸಂಖ್ಯೆ ಬೆಳೆದು ಹೆಚ್ಚಾದಾಗ ಜನರಿಗೆ ಏನುಬೇಕು ಏನುಬೇಡ ಇದರ
ಬಗ್ಗೆ ವಿವರಣೆ ಕೊಡುತ್ತಿದ್ದ. ಉದಾಹರಣೆಗೆ ಜನಸಂಖ್ಯೆ ಹೆಚ್ಚಾದರೆ ಸ್ಕೂಲ್, ಕಾಲೇಜ್ ಮತ್ತು ಆಸ್ಪತ್ರೆ, ಮನೆ ಬೇಕು. ಹೆಚ್ಚು ಉದ್ಯೋಗಬೇಕು. ಹೆಚ್ಚು ದಾರಿಗಳನ್ನು ಮಾಡಬೇಕು. ಬಟ್ಟೆಯ ಕಾರ್ಖಾನೆಯನ್ನು ಕಟ್ಟಬೇಕು.

ಹೀಗೆ ಹಲವಾರು ರೀತಿ ಲೆಕ್ಕಹಾಕಿ ಪ್ರಧಾನಮಂತ್ರಿಗೆ ತಿಳಿಸುತ್ತಿದ್ದ. ರಾಜ್ಯವನ್ನು ಆಳುತ್ತಿದ್ದ ಪ್ರಧಾನಿಗೆ ಈ ಸಲಹೆ ತುಂಬಾ ಉಪಯುಕ್ತವಾಗುತ್ತಿತ್ತು. ಒಂದು ದಿನ ಜಾರ್ಜ್‌ಗೆ ಪ್ರಧಾನಿಯವರ ಆಫೀಸಿಗೆ ಕೂಡಲೇ ಬರಬೇಕೆಂಬ ಸಮಾಚಾರ ಬಂದಿತು. ಆಗಿನ ಕಾಲದಲ್ಲಿ ಕುದುರೆಗಳ ಸಾರೋಟೇ ಪ್ರಧಾನ ವಾಹನಗಳಾಗಿದ್ದವು. ಜಾರ್ಜ್ ಕೂಡಲೇ ಹೊರಟ. ಅರ್ಧ ದಾರಿ ಯಲ್ಲಿ ಸಾರೋಟು ನಿಂತಿತು. ಯೋಚನೆಯಲ್ಲಿ ಮುಳುಗಿದ ಜಾರ್ಜ್ ತನ್ನ ಸಾರಥಿ ಯನ್ನು ಕುರಿತು ‘ ಜಾನ್ ಏನಾಯ್ತು, ನಾನು ಸರಿಯಾದ ಸಮಯಕ್ಕೆ ಪ್ರಧಾನ ಮಂತ್ರಿ ಕಚೇರಿ ತಲುಪಬೇಕಲ್ಲ?’ ಎಂದು ಆತಂಕದಿಂದ ಕೇಳಿದ.

‘ಸರ್ ಕುದುರೆಯೊಂದು ಕಾಲು ಜಾರಿದೆ. ಬಂಡಿ ಪಕ್ಕಕ್ಕೆ ಸರಿದಿದೆ. ಹೀಗಾಗಿ ಎಲ್ಲ ಸಾರೋಟು ನಿಂತಿವೆ’ಎಂದು ಹತಾಶನಾಗಿ ಹೇಳಿದ. ಅಷ್ಟರಲ್ಲಿ ಗಬ್ಬು ದುರ್ವಾಸನೆ ಜಾರ್ಜ್‌ಗೆ ಬಂದಿತು. ಸಹಿಸಲು ಅಸಾಧ್ಯವಾದ ಕೆಟ್ಟ ವಾಸನೆ. ಜಾರ್ಜ್ ‘ಜಾನ್ ಏನಿದು? ಇಂಥ ವಾಸನೆ?’ ‘ಸರ್ ಇವು ಕುದುರೆಯ ಲದ್ದಿಯ ವಾಸನೆ. ಹೆದರಿಕೆಯಿಂದ ಕುದುರೆಗಳು ಲದ್ದಿ ಹಾಕುತ್ತಿವೆ’. ಜಾರ್ಜ್‌ನ ಮನಸ್ಸು ಕುದುರೆಯ ಮೇಲೆ ಹೋಯಿತು. ಅದರ ವಿಚಾರದಲ್ಲಿ ಆತ ಮುಳುಗಿಹೋದ. ವೇಳೆ ಹೋದದ್ದು ಗೊತ್ತಾಗಲಿಲ್ಲ. ಅಷ್ಟರಲ್ಲಿ
ಪ್ರಧಾನಿಯ ಕಚೇರಿಯೂ ಬಂದಿತು. ಜಾರ್ಜ್ ಸರಿಯಾದ ಸಮಯಕ್ಕೆ ಬಂದಿದ್ದ. ಆದರೆ ಪ್ರಧಾನಿಯವರಿಗೆ ದೇಹಲಾಸ್ಯವಾದು ದರಿಂದ ಅವರ ಭೇಟಿ ಇನ್ನೂ ಅರ್ಧ ಗಂಟೆಗೆ ಮುಂದೂಡಿತ್ತು. ಜಾರ್ಜ್ ಪ್ರಧಾನಿಯ ಹಾದಿ ಕಾಯುತ್ತಾ, ಬೇರೆ ವಿಚಾರದಲ್ಲಿ ತಲ್ಲೀನನಾಗಿ ಕುರ್ಚಿಯ ಮೇಲೆ ಕುಳಿತ. ಪ್ರಧಾನಿಯ ಆಪ್ತ ಕಾರ್ಯದರ್ಶಿ ಆಡಂ ಹೊರಗೆ ಬಂದು ಜಾರ್ಜ್‌ನನ್ನು ವಿಚಾರಿಸಿ ಟೀ ಕಳಿಸಿದ. ಟೀ ಬಂದು ತಣ್ಣಗಾದರೂ ಜಾರ್ಜ್ ತನ್ನ ವಿಚಾರದಲ್ಲಿ ಇನ್ನೂ ಮುಳುಗಿದ್ದ.

ಅವನ ಸ್ವಾಭಾವ ಪರಿಚಯವಿದ್ದ ಆಡಂ ‘ಸರ್ ಏನು ಅಂಥ ಯೋಚನೆಯಲ್ಲಿ ಮುಳುಗಿದ್ದೀರಿ? ಟೀ ಸಹಿತ ಕುಡಿದಿಲ್ಲ’ ಎಂದ.
ಆಂಡ್ ಜಾರ್ಜ್‌ನಷ್ಟು ಮೇಧಾವಿ, ವಿಚಾರವಂತನಲ್ಲ. ಆದರೆ ವ್ಯವಹಾರ ಜ್ಞಾನವುಳ್ಳ ಜಾಣ. ಅಂತೆಯೇ ಆತನನ್ನು ಪ್ರಧಾನಿ ಯವರು ಆಪ್ತ ಕಾರ್ಯದರ್ಶಿ ಯಾಗಿ ಮಾಡಿಕೊಂಡಿದ್ದರು. ಜಾರ್ಜ್ ಹೇಳಿದ. ‘ನಮ್ಮ ಈ ಇಂಗ್ಲೆಂಡಿನ, ಈ ಲಂಡನ್ನಿನಲ್ಲಿ ಎಷ್ಟು ಸಿರಿವಂತರಿರಬಹುದು?’ ‘ಸುಮಾರು 500’ ಎಂದ ಆಡಂ.

ಸಿರಿವಂತರೆಲ್ಲಾ ಕುದುರೆಯ ಸಾರೋಟು ಇಟ್ಟೇ ಇರುತ್ತಾರೆ. ಮನೆಗೆ ಎರಡು ಸಾರೋಟು ಎಂದರೆ ಸಾವಿರ ಸಾರೊಟು ಬೇಕಾಗ ಬಹುದು. ಒಂದು ಸಾರೋಟಿಗೆ ನಾಲ್ಕು ಕುದುರೆಬೇಕು. ಅಂದರೆ 1000*4=4000 ಕುದುರೆ ! ಆಡಂಗೆ ಅವನ ಮಾತಿನ ಅರ್ಥ ಆಗಲಿಲ್ಲ. ಆಡಂ ಈಗ ಕುದುರೆಯ ಲದ್ದಿಯನ್ನು ಜನ ಎಲ್ಲಿ ಹಾಕುತ್ತಾರೆ. ‘ಅವರವರ ಹೊಲದಲ್ಲಿ ಗುಂಡಿತೋಡಿ ಹಾಕುತ್ತಾರೆ.’ ಹೊಲ ಇಲ್ಲದವರು ಬಹುಶಃ ನಗರದ ಕಸದಲ್ಲಿ ಸೇರಿಸುತ್ತಾರೆ.’ ‘ಆ ಕಸ ಏನಾಗುತ್ತದೆ?’ ‘ಊರಾಚೆಯ ಗುಂಡಿಗೆ ಹೋಗುತ್ತದೆ’ ‘ಇನ್ನು ೨೦ ವರ್ಷದಲ್ಲಿ ಜನಸಂಖ್ಯೆ ಹೆಚ್ಚಾಗುತ್ತದೆ. ನಮ್ಮ ದೇಶದ ಹಣಕಾಸಿನ ವ್ಯವಸ್ಥೆಯೂ ಚೆನ್ನಾಗಿ ಇದೆ. ಇದರಿಂದ ಸಿರಿವಂತರ ಸಂಖ್ಯೆ ಲಂಡನ್ನಿನಲ್ಲಿ ಏರುತ್ತದೆ. ಅದರಂತೆ ಹಳ್ಳಿಗಳಲ್ಲಿಯೂ ಜನ ಸಿರಿವಂತರಾಗುತ್ತಾರೆ. ಕುದುರೆಯ ಲದ್ದಿಯೂ ಏರುತ್ತದೆ. ಆ ಲದ್ದಿ ಬಹು ದೊಡ್ಡ ತೂಕವಾಗಿ ಅನೇಕ ಗುಂಡಿಗಳನ್ನು ತೋಡಬೇಕಾಗುತ್ತದೆ’ ಆಡಂಗೆ ಇನ್ನು ಅವನ ಮಾತಿನ ಅರ್ಥವಾಗಲಿಲ್ಲ.

ಜಾರ್ಜ್ ಮಾತ್ರ ಮಾತು ಮುಂದುವರಿಸಿದ. ‘ಇನ್ನು 50 ವರ್ಷದಲ್ಲಿ ಕುದುರೆಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಆಗ ಲದ್ದಿಯ ಪ್ರಮಾಣ ಇನ್ನೂ ಏರುತ್ತದೆ. ನಮ್ಮದು ಒಂದು ದ್ವೀಪ ರಾಷ್ಟ್ರ. ಭೂಮಿ ಹಿಗ್ಗುವುದಿಲ್ಲ. ಈ ಲದ್ದಿ ನಮ್ಮ ದ್ವೀಪದ ತುಂಬಾ ಅಗಿ, ವಾತವರಣವೇ ಕೆಡಬಹುದು. ಅದರಿಂದ ಕಾಯಿಲೆ ಬರಬಹುದು. ಅದನ್ನು ನಿಯಂತ್ರಣದಲ್ಲಿ ಇರಿಸಲು ಯಾವ ಉಪಾಯ ಮಾಡಬೇಕೆಂದು ವಿಚಾರ ಮಡುತ್ತಿದ್ದೇನೆ’ ಎಂದು ಚಿಂತೆಯಿಂದ ಜಾರ್ಜ್ ನುಡಿದ.

‘ಸರ್ ಅಷ್ಟ್ಯಾಕೆ ಯೋಚನೆ ಮಾಡುತ್ತಿರಿ? ಆವಿಷ್ಕಾರ ಮಾನವನ ಮೂಲ ಗುಣ. ಹಿಂದೆ ಜನ ನಡೆದೇ ಬೇರೆ ಊರಿಗೆ ಹೋಗು ತ್ತಿದ್ದರು. ಕುದುರೆಯನ್ನು ಪಳಗಿಸಿ ಸಾರೋಟು ಮಾಡಲಿಲ್ಲವೇ. ಚಕ್ರದ ಗಾಲಿಯನ್ನು ಕಂಡುಹಿಡಿದು ಕೂಡಿಸಲಿಲ್ಲವೇ? ಮಾನವ ನಿರಂತರವಾಗಿ ಒಂದಲ್ಲ ಒಂದು ಕಂಡುಹಿಡಿಯುತ್ತಾನೆ. ಈ ಸಾರೋಟಿನ ಬದಲಾಗಿ ಮತ್ತೇನೋ ಬರಬಹುದು. ನಿಜಜೀವನದಲ್ಲಿ ಲೆಕ್ಕದಂತೆ ನಡೆಯುವುದೇ ಇಲ್ಲ. ಅಸಾಧ್ಯವಾದ ಲದ್ದಿಯ ಪ್ರಮಾಣವೂ ಆಗಲಿಕ್ಕಿಲ್ಲ. ಅದರ ದುರ್ವಾಸನೆ ದೇಶದ ತುಂಬ ಹಬ್ಬ ಲಿಕ್ಕಿಲ್ಲ’ಎಂದ. ಅಷ್ಟರಲ್ಲಿ ಪ್ರಧಾನಮಂತ್ರಿಗಳು ಬಂದರು.

ಅಂದಿನ ಮಾತುಕತೆ ಮುಗಿಯಿತು. ಆಡಂ ಹೇಳಿದ್ದು ಎಷ್ಟು ನಿಜವಾಯಿತು? ಮುಂದೆ ಕೆಲವು ದಶಕಗಳ ನಂತರ ಉಗಿಯಬಂಡಿ
ಬಂದವು. ಅದಕ್ಕೂ ಆಚೆ ಕಲ್ಲಿದ್ದಲಿನ ಟ್ರೇನ್ ಬಂದು, ನಂತರ ವಿದ್ಯುತ್‌ಶಕ್ತಿಯ ಗಾಡಿಗಳೂ ಬಂದವು. ರಸ್ತೆಗೆ ಪೆಟ್ರೋಲ್, ಡಿಸೆಲ್, ಎಲೆಕ್ಟ್ರಿಕ್ ಕಾರು, ವಾಹನಗಳು ವಿವಿಧ ರೀತಿ , ವಿವಿಧ ಗಾತ್ರದಲ್ಲಿ ಬಂದವು. ಮುಂದೆ ಆಕಾಶದಲ್ಲಿ ಉಕ್ಕಿನ ಪಕ್ಷಿಯಾಗಿ ವಿಮಾನ ಬಂದು ಜಗತ್ತನೆ ಕುಗ್ಗಿಸಿತು. ಈಗ ಕೇವಲ ಮನರಂಜನೆಗಾಗಿ ಸಾರೋಟು ಅಲ್ಲಿ ಇಲ್ಲಿ ಕಾಣುತ್ತೇವೆ. ಮಕ್ಕಳೇ ಆದ್ದರಿಂದ ನಿಮ ಗೆಲ್ಲಾ ನಾನು ಹೇಳುವುದು ಏನೆಂದರೆ ನಾವು ತಿಳಿದಂತೆ, ಲೆಕ್ಕಹಾಕಿದಂತೆ ಜೀವನ ಇರುವುದಿಲ್ಲ. ಏನೋ ಒಂದು ಅಂದಾಜಿ ನಂತೆ ನಾನು ಅಪ್ಪಳ ಮಾಡುತ್ತೇನೆ ಅಷ್ಟೇ’ ಎಂದಳು ಅಜ್ಜಿ. ಎಲ್ಲರೂ ಕೃಷ್ಣನಿಗೆ ‘ನೀನು ನಮ್ಮೂರಿನ ಜಾರ್ಜ್’ ಎಂದು ಚುಡಾ ಯಿಸಿದರು.