Thursday, 12th December 2024

ನನ್ನನ್ನು ಸಿಎಂ ಮಾಡಿ ಎಂದು ಯಾವತ್ತೂ ವರಿಷ್ಠರಿಗೆ ಕೇಳಿಲ್ಲ: ಕೆ.ಎಸ್.ಈಶ್ವರಪ್ಪ

ಬೆಂಗಳೂರು: ಯಾರು ಯಾವಾಗ ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತೆ. ನಾನು ಈವರೆಗೆ ಏನನ್ನೂ ಕೇಳಿ ಪಡೆದಿಲ್ಲ ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪರೋಕ್ಷವಾಗಿ ತಾವೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂಬುದನ್ನು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಿಎಂ ಯಡಿಯೂರಪ್ಪನವರು ಸಿಎಂ ಸ್ಥಾನದಲ್ಲಿ ಮುಂದುವರೆಯಬೇಕೆ ಬೇಡವೇ ಎಂಬ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ. ಪಕ್ಷದಲ್ಲಿ ಯಾರಿಗೆ ಯಾವಾಗ ಯಾವ ಹುದ್ದೆ ನೀಡಬೇಕು ಎಂಬುದನ್ನೂ ವರಿಷ್ಠರೇ ತೀರ್ಮಾನಿಸುತ್ತಾರೆ.

ಹಲವು ಇಲಾಖೆಗಳಿಗೆ ಮಂತ್ರಿಯಾಗಿದ್ದೇನೆ. ಒಮ್ಮೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ಬಿಜೆಪಿ ಅಧ್ಯಕ್ಷನೂ ಆಗಿದ್ದೇನೆ. ವಿಪಕ್ಷ ನಾಯಕನಾಗೂ ಕಾರ್ಯ ನಿರ್ವಹಿಸಿದ್ದೇನೆ. ನನ್ನನ್ನು ಸಿಎಂ ಮಾಡಿ ಎಂದು ನಾನು ಯಾವತ್ತೂ ವರಿಷ್ಠರಿಗೆ ಕೇಳಿಲ್ಲ. ಅವರೇ ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ ಎಂದರು.