Thursday, 12th December 2024

ಕಾಂಗ್ರೆಸ್ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಕಸರತ್ತು !

ಕದನ ಕುತೂಹಲ

ಶಂಕರ್‌ ಅಯ್ಯರ್‌

ಮಹಾಯುದ್ಧಗಳ ಫಲಿತಾಂಶಗಳನ್ನು ಆ ಯುದ್ಧಗಳ ಪ್ರಮಾಣ ಮತ್ತು ಆವೇಗಗಳೇ ವಿಶದೀಕರಿಸುತ್ತವೆ ಹಾಗೂ ನಿರ್ಣಯಿಸುತ್ತವೆ ಎಂಬುದನ್ನು ಇತಿಹಾಸವು ನಮಗೆ ಸಾಕಷ್ಟು ಬಾರಿ ಮನವರಿಕೆ ಮಾಡಿಕೊಟ್ಟಿದೆ. ಪ್ರಸ್ತುತ ಎದುರಾಗಿರುವ ಲೋಕಸಭಾ ಚುನಾವಣೆಯೂ ಯಾವ ಮಹಾಯುದ್ಧಕ್ಕೂ ಕಡಿಮೆಯೇನಿಲ್ಲ ಬಿಡಿ!

ಈ ಸಮರ ನಡೆಯುತ್ತಿರುವುದು ‘ಸರ್ವವ್ಯಾಪಿ-ಸರ್ವಶಕ್ತ’ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ‘ಇಂಡಿಯ’ ಎಂಬ ಹಣೆಪಟ್ಟಿ ಹೊತ್ತಿರುವ ವಿಪಕ್ಷಗಳ ಮೈತ್ರಿಕೂಟದ ನಡುವೆ. ಈ ಪೈಕಿ ‘ಇಂಡಿಯ’ ಮೈತ್ರಿಕೂಟವು ಈಗಾಗಲೇ ಹಂತಹಂತ ವಾಗಿ ಛಿದ್ರವಾಗುತ್ತಿದೆ ಹಾಗೂ ರಾಜಕೀಯವಾಗಿ
ನಿಷ್ಕ್ರಿಯವಾಗುತ್ತಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಹಾಗೆಂದ ಮಾತ್ರಕ್ಕೆ ಪ್ರಜಾಪ್ರಭುತ್ವದಲ್ಲಿ ಏಕತಾನತೆಯಿರುತ್ತದೆ, ಬದಲಾವಣೆಗಳೇ ಆಗುವುದಿಲ್ಲ ಎನ್ನಲಾ ಗದು; ಇಲ್ಲಿ ಕೂಡ ಅಚ್ಚರಿಗಳು ಅಥವಾ ಪವಾಡ ಸದೃಶ ಬೆಳವಣಿಗೆಗಳಾಗುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು. ಬೈಬಲ್‌ನಲ್ಲಿ ಉಲ್ಲೇಖಿಸಲ್ಪಟ್ಟಿರುವ ‘ಡೇವಿಡ್ ವರ್ಸಸ್ ಗೊಲಿಯಾತ್’ನಂಥ
ಪರಿಸ್ಥಿತಿಯೂ ಇಲ್ಲಿ ಉದ್ಭವಿಸಲು ಸಾಧ್ಯವಿದೆ; ಅಂದರೆ, ದುರ್ಬಲರೆನಿಸಿಕೊಂಡವರು ಕೂಡ ಇಲ್ಲಿ ಪರಸ್ಪರ ಹೆಗಲಿಗೆ ಹೆಗಲು ಕೊಟ್ಟು, ‘ಕವಣೆ-
ಕಲ್ಲುಗಳನ್ನು’ ಭರ್ಜರಿಯಾಗಿ ಪೇರಿಸಿಟ್ಟುಕೊಂಡು ಪ್ರಬಲ ಎದುರಾಳಿಯನ್ನು ಗೆಲ್ಲಲು ಸಾಧ್ಯವಿದೆ ಎಂಬುದು ಇದರರ್ಥ.

ಇದು ನೆರವೇರುತ್ತದೆಯೇ ಎಂದು ಲೆಕ್ಕಿಸಲಿಕ್ಕೆ ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿಗತಿಯನ್ನೂ ಅವಲೋಕಿಸುವುದು ಮುಖ್ಯವಾಗುತ್ತದೆ. ಈಗಾಗಲೇ ಜಗಜ್ಜಾ ಹೀರಾಗಿರುವಂತೆ, ಕಾಂಗ್ರೆಸ್ ಪಕ್ಷವು ತನ್ನ ಅಸ್ತಿತ್ವವನ್ನು ಅಥವಾ ‘ರಾಜಕೀಯ ಪ್ರಸ್ತುತತೆ’ಯನ್ನು ಉಳಿಸಿಕೊಳ್ಳಬೇಕೆಂದರೆ ಪವಾಡವನ್ನೂ ಮೀರಿಸಿದ ಪರಮೋತ್ಕೃಷ್ಟ ಬೆಳವಣಿಗೆಯೇ ಘಟಿಸಬೇಕು! ಅಂಥದೊಂದು ಕಸರತ್ತಿಗೆ ಅದು ಒಡ್ಡಿಕೊಳ್ಳಲೇಬೇಕಿದೆ ಎಂಬುದು ಹಸಿಮಣ್ಣಿನ ಮೇಲೆ ಗಾಜಿನ ಚೂರಿನಿಂದ ಬರೆದ ಅಕ್ಷರದಷ್ಟೇ ಸತ್ಯ, ನಿಚ್ಚಳ. ‘ಮಾಡು ಇಲ್ಲವೇ ಮಡಿ’ ಎಂಬಂತಿರುವ ಈ ರಾಜಕೀಯ ಹಣಾಹಣಿಯಲ್ಲಿ ಕಾಂಗ್ರೆಸ್ ಪಕ್ಷವು
ತನ್ನೆಲ್ಲಾ ಜಾಣ್ಮೆ, ಉಪಾಯ, ಕಾರ್ಯತಂತ್ರಗಳನ್ನು ದುಡಿಸಿಕೊಳ್ಳಬೇಕಾಗಿ ಬಂದಿದೆ.

ಅಂಥದೊಂದು ಕಸರತ್ತಿನಲ್ಲಿ ಅದು ತೊಡಗಿಸಿಕೊಂಡಿದೆ ಕೂಡ. ಈ ನಿಟ್ಟಿನಲ್ಲಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಪಕ್ಷದ ಒಂದು ಸಾಧನ-ಸಲಕರಣೆಯಾಗಿ ಹೊಮ್ಮಿದೆ ಎನ್ನಲಡ್ಡಿಯಿಲ್ಲ. ಅಂದರೆ ಇದು ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರಲ್ಲೊಬ್ಬರಾದ ರಾಹುಲ್ ಗಾಂಧಿಯವರ ಪಾಲಿಗೆ ಒಂದು ‘ಚರ್ಚಾ- ಚೌಕಟ್ಟನ್ನು’ ರೂಪಿಸಿಕೊಟ್ಟಿದೆ. ಇದರ ನೆರವಿನಿಂದಾಗಿ ಪಕ್ಷವು ನೊಂದವರನ್ನು ಹಾಗೂ ಅವರ ಕುಂದು ಕೊರತೆಗಳನ್ನು ಗುರುತಿಸು ವಂತಾಗಿದೆ ಮತ್ತು ಅದನ್ನು ಆಧಾರವಾಗಿಟ್ಟುಕೊಂಡು ಚುನಾವಣಾ ಕಣದಲ್ಲೂ, ಸಾಮಾಜಿಕ ಮಾಧ್ಯಮಗಳಲ್ಲೂ ಬಿಜೆಪಿಯೊಂದಿಗೆ ತನ್ನದೇ ಆದ ರೀತಿಯಲ್ಲಿ ಅದು ಸೆಣಸುತ್ತಿದೆ.

ರಾಜಕೀಯದ ಚದುರಂಗದಾಟದಲ್ಲಿ ಇತ್ತೀಚೆಗೆ ಒಂದು ತೆರನಾದ ಕಚ್ಚಾ ಹುರುಪನ್ನು ದಕ್ಕಿಸಿಕೊಂಡಿರುವ ಕಾಂಗ್ರೆಸ್, ಯುವಪೀಳಿಗೆಗಾಗಿ ಹೊಸ ತೊಂದು ‘ಡೀಲ್’ ಅನ್ನೇ ಘೋಷಿಸಿಬಿಟ್ಟಿದೆ- ಅಂದರೆ, ಬರೋ ಬ್ಬರಿ ೩೦ ಲಕ್ಷದಷ್ಟು ಸರಕಾರಿ ನೌಕರಿಗಳು, ಪದವೀಧರರಿಗೆ ಮತ್ತು ಡಿಪ್ಲೊಮಾ ಹೊಂದಿ ರುವವರಿಗೆ ೧ ಲಕ್ಷ ರುಪಾಯಿಗಳ ಅಪ್ರೆಂಟಿಸ್ ಯೋಜನೆ, ಕಾರ್ಮಿಕರು ಮತ್ತು ಶ್ರಮಜೀವಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವಿಕೆ ಹೀಗೆ ಸಾಗುತ್ತದೆ ಸದರಿ ಘೋಷಣೆ ಯಲ್ಲಿನ ಭರವಸೆಗಳು. ಇದು ಚರ್ಚೆಗೆ ಗ್ರಾಸವಾಗ ಬೇಕಾದ ವಿಚಾರ. ಏಕೆಂದರೆ, ಈ ಘೋಷಣೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ತನ್ನ ಬದ್ಧತೆ ಮತ್ತು ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಬೇಕಿದೆ.

ಪಕ್ಷದ ಪಾಲಿಗೆ ಇದೊಂದು ಸವಾಲು ಕೂಡ ಆಗಿದೆಯೆನ್ನಿ. ಏಕೆಂದರೆ ೨೦೧೯ರ ಚುನಾವಣೆಯ ಸಂದರ್ಭದಲ್ಲೂ ಕಾಂಗ್ರೆಸ್‌ನಿಂದ ಇಂಥದೇ ಘೋಷಣೆ ಯೊಂದು ಹೊಮ್ಮಿತ್ತು- ಅದು ಸರಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಭರವಸೆ ಯಾಗಿತ್ತು; ಆದರೆ, ಕಾಂಗ್ರೆಸ್‌ನ ಆಳ್ವಿಕೆಯಿದ್ದ ರಾಜ್ಯಗಳಲ್ಲೇ ಈ ಪರಿಕಲ್ಪನೆಗೆ ತೆರೆದ ತೋಳುಗಳ ಸ್ವಾಗತ ಸಿಗಲಿಲ್ಲ. ಇದಕ್ಕೆ ತದ್ವಿರುದ್ಧವಾಗಿ, ಬಿಜೆಪಿ ಆಡಳಿತ ವಿರುವ ಮಧ್ಯಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಅದಕ್ಕೆ ಒತ್ತಾಸೆ ದಕ್ಕಿತು!

ರಾಜಕೀಯ ಅಖಾಡವೇ ಹಾಗೆ. ಇಲ್ಲಿ ‘ಐಕಾನ್ ಗಳು’ ಎನಿಸಿಕೊಂಡವರು ಬೆಳಗಿಸಿದ ಪರಿಕಲ್ಪನೆಗಳ ಹೆಜ್ಜೆಗುರುತುಗಳಿಂದಾಗಿ ವಿಜಯಶಾಲಿಗಳು ಪರಾಜಿ
ತರಿಂದ ಪ್ರತ್ಯೇಕಿಸಲ್ಪಡುತ್ತಾರೆ. ಈ ವಿಷಯದಲ್ಲಿ ಜವಾಹರಲಾಲ್ ನೆಹರು ಅವರನ್ನು ಉಲ್ಲೇಖಿಸಬೇಕು. ಕಾಂಗ್ರೆಸ್‌ನ ಆಡಳಿತ ಶೈಲಿಗೊಂದು ರೂಪ
ಕೊಟ್ಟವರೇ ನೆಹರು. ಅವರು ಭಾರತಕ್ಕಿದ್ದ ಭೌಗೋಳಿಕ ಮತ್ತು ಆರ್ಥಿಕ ಛಾಪಿಗಿಂತ ದೊಡ್ಡದಾಗಿರುವ ರೀತಿ ಯಲ್ಲಿ ಭಾರತದ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿ ದರು. ತರುವಾಯದಲ್ಲಿ ಬಂದ ಇಂದಿರಾ ಗಾಂಧಿಯವರು, ರಾಷ್ಟ್ರೀಯತೆ ಹಾಗೂ ಜನಕಲ್ಯಾಣದ ಪರಿಕಲ್ಪನೆಯ ಮೇಲೆ ತಮ್ಮ ಆಡಳಿತ ಸೂತ್ರವನ್ನು ಹೆಣೆದರು. ನಂತರ ಬಂದ ರಾಜೀವ್ ಗಾಂಧಿಯವರು ತಾಂತ್ರಿಕವಾಗಿ ಆಧುನಿಕತೆಯ ಮಗ್ಗುಲಿಗೆ ಹೊರಳಬೇಕಿರುವ ಭಾರತದ ದೃಷ್ಟಿಕೋನ ವನ್ನು ಹೊಮ್ಮಿಸಿದರು.

ಹೀಗೆ ಕಾಂಗ್ರೆಸ್‌ನಲ್ಲಿ ಆಯಾ ಕಾಲಘಟ್ಟದಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ‘ಐಕಾನ್’ಗಳು ತಮ್ಮದೇ ಆದ ಪರಿಕಲ್ಪನೆಗಳ ಹೆಜ್ಜೆಗುರುತುಗಳನ್ನು ಮೂಡಿಸಿ
ದ್ದಿದೆ. ಆದರೆ, ಇಂಥದೇ ಛಾತಿ, ವಿಷಯಸ್ಪಷ್ಟತೆ, ದೃಷ್ಟಿಕೋನಗಳನ್ನು ಈಗಿನ ಕಾಂಗ್ರೆಸ್‌ನಲ್ಲಿ ಮತ್ತು ಕಾಂಗ್ರೆಸಿಗರಲ್ಲಿ ಕಾಣಲಾದೀತೇ? ಕಾಂಗ್ರೆಸ್‌ನ ಈ ಪರಿಸ್ಥಿತಿಯನ್ನು ಸಮರ್ಥವಾಗೇ ಬಳಸಿಕೊಂಡವರು ಬಿಜೆಪಿಯ ಅಧ್ವರ್ಯು ನರೇಂದ್ರ ಮೋದಿ. ಕಾರಣ, ಕಳೆದ ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ ಮೋದಿಯವರು ಸಾರ್ವಜನಿಕರ ಹೃದಯಗಳಲ್ಲಿ ನೆಲೆ ಕಂಡುಕೊಂಡ ಪರಿ ನಿಜಕ್ಕೂ ಅನನ್ಯ. ನಾಯಕನಾದವನು ಹೇಗಿರಬೇಕು ಎಂಬ ವಿಷಯದಲ್ಲಿ ಜನರಲ್ಲಿ ಕೆನೆಗಟ್ಟಿದ್ದ ಕಲ್ಪನೆಯ ಸಾಕಾರ ರೂಪವಾಗಿ ಹೊಮ್ಮಿದ ಮೋದಿ ಜನರನ್ನು ಗೆದ್ದರು ಹಾಗೂ ಈ ಜನಕಲ್ಪನೆಯ ಮೇಲೆಯೇ ಸವಾರಿ ಮಾಡಿ ಕೊಂಡು ಸಾಧಕರೆನಿಸಿಕೊಂಡರು.

ಹೀಗಾಗಿ ‘ಭಾರತ ಎಂದರೆ ಮೋದಿ’ ಎಂಬಷ್ಟರ ಮಟ್ಟಿಗೆ ‘ಮೋದಿ ಬ್ರ್ಯಾಂಡ್’ ರೂಪುಗೊಂಡಿದೆ; ಪ್ರವರ್ಧಮಾನಕ್ಕೆ ಬರುತ್ತಿರುವ ಒಂದು ಶಕ್ತಿಯಾಗಿ ಭಾರತ ವನ್ನು ಬಿಂಬಿಸಿದ ಮತ್ತು ಪ್ರತಿನಿಽಸಿದ ಹೆಗ್ಗಳಿಕೆ ಅವರದ್ದು. ಮಾತ್ರವಲ್ಲ, ಸದೃಢವಾದ ರಾಷ್ಟ್ರೀಯತೆಯ ಪರಿಕಲ್ಪನೆ, ಬಡವರ ಕಲ್ಯಾಣ ಕಾರ್ಯಕ್ರಮಗಳ ಬಲವರ್ಧನೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮೊದಲಾದ ಕಾರಣ ಗಳಿಂದಾಗಿ ಮೋದಿಯವರು ಆಧುನಿಕ ಮತ್ತು ಪ್ರಗತಿಶೀಲ ಭಾರತದ ಪ್ರತಿನಿಽಯೇ ಆಗಿಬಿಟ್ಟಿದ್ದಾರೆ.

ಮೋದಿಯವರ ಕುರಿತಾಗಿ ಇಷ್ಟೆಲ್ಲಾ ವಿವರಿಸಿದ್ದು, ಕಾಂಗ್ರೆಸ್ ಪಕ್ಷವು ಇನ್ನಾದರೂ ತನ್ನ ಚಿಂತನೆ, ಗುರಿ ಮತ್ತು ಉದ್ದೇಶಗಳಲ್ಲಿ ಸ್ಪಷ್ಟತೆಯನ್ನು ರೂಢಿಸಿ
ಕೊಂಡು ದೇಶದ ರಾಜಕೀಯ ಅಖಾಡದಲ್ಲಿ ಹೊಸ ತೊಂದು ಜಾಗವನ್ನು ರೂಪಿಸಿಕೊಳ್ಳಲಿ ಎಂಬ ಕಾರಣಕ್ಕೆ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳ ಬೇಕೆಂದರೆ ಇಂಥದೊಂದು ತಪಸ್ಸು ಕಾಂಗ್ರೆಸ್‌ಗೆ ಅನಿವಾರ್ಯ ವಾಗಿದೆ. ಹಾಗೆ ನೋಡಿದರೆ, ದೇಶದ ವಿಭಿನ್ನ ಸಾಮಾಜಿಕ ಸ್ತರಗಳ ಜನರಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ಪ್ರತಿನಿಧಿಸುವಂಥ ಅಥವಾ ಅವುಗಳೆಡೆಗೆಗಮನಕೊಡುವಂಥ ಪ್ರತಿಸ್ಪಂದನಾತ್ಮಕ ಚಟುವಟಿಕೆ ಗಳನ್ನು ಕಾಂಗ್ರೆಸ್ ಸಾಂಪ್ರ ದಾಯಿಕವಾಗಿ ಅಥವಾ ಕಾಲಾನುಕಾಲಕ್ಕೆ ರೂಪಿಸುತ್ತಲೇ ಬಂದಿದೆ.

ಕಾಂಗ್ರೆಸ್‌ನ ಅಸ್ತಿತ್ವವನ್ನು ಮತ್ತು ತಮ್ಮ ಅಧಿಕಾರವನ್ನು ಉಳಿಸಿ ಕೊಳ್ಳಲು ಇಂದಿರಾ ಗಾಂದಿಯವರು ಎಡಪಂಥೀಯರನ್ನು ಬಳಸಿಕೊಂಡಿದ್ದಿದೆ. ಇನ್ನು,
ರಾಜೀವ್ ಗಾಂಽಯವರು ಶಾ ಬಾನೋ ಪ್ರಕರಣ ಹಾಗೂ ಶಿಲಾನ್ಯಾಸ ಪ್ರಸಂಗದ ಸಂದರ್ಭಗಳಲ್ಲಿ ಸಾಂಸ್ಕೃತಿಕ ಮತ್ತು ಸೈದ್ಧಾಂತಿಕ ಸಂದಿಗ್ಧತೆಗಳನ್ನು
ನಿರ್ವಹಿಸಿದ್ದುಂಟು. ಬೇಕಿದ್ದರೆ ನೀವು ಇದನ್ನು ‘ನೈಜ ರಾಜಕೀಯ’ ಎಂದು ಕರೆಯಬಹುದು ಅಥವಾ ರಾಜಕೀಯ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದಕ್ಕೆ ಇವು ಅನಿವಾರ್ಯ ಎಂದು ವ್ಯಾಖ್ಯಾನಿಸಬಹುದು.

ಆದರೆ, ಈಗಿನ ಕಾಂಗ್ರೆಸ್ ಹೀಗೆಯೇ ನಡೆದು ಕೊಳ್ಳುತ್ತಿದೆಯೇ, ದೇಶದ ವಿವಿಧ ಸಾಮಾಜಿಕ ಸ್ತರಗಳೊಂದಿಗೆ ಇಂಥದೇ ‘ಕರುಳು-ಬಳ್ಳಿ’ ಸಂಬಂಧ
ವನ್ನು ಉಳಿಸಿಕೊಂಡಿದ್ದಿದೆಯೇ? ಇಲ್ಲ, ಕಾಂಗ್ರೆಸ್ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ ಎಂದೇ ಹೇಳಬೇಕು. ಕಾರಣ, ಕಳೆದ ದಶಕದಲ್ಲಿ ಸಾಮಾಜಿಕ
ವಾಗಿಯೂ ರಾಜಕೀಯವಾಗಿಯೂ ಕಾಂಗ್ರೆಸ್ ಜನರೊಂದಿಗಿನ ತನ್ನ ನಂಟನ್ನು ಕಡಿದುಕೊಂಡಿದೆ. ಒಂದು ಕಾಲಕ್ಕೆ ಉದಾರೀಕರಣ ನೀತಿಯನ್ನು ಅನಾ
ವರಣಗೊಳಿಸಿದ ಪಕ್ಷವೇ ಈಗ ಆರ್ಥಿಕ ಸುಧಾರಣೆಗಳ ವಿಷಯದಲ್ಲಿ ತನಗಿದ್ದ ಭೂಮಿಕೆ ಯನ್ನು ಬಿಟ್ಟುಕೊಟ್ಟಿದೆ.

ರಾಜಕೀಯ ಸಂಬಂಧಗಳ ಬಲವರ್ಧನೆಯಾಗುವುದು ಹೇಗೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ; ಇಲ್ಲಿ ಸಮಾನ ಮನಸ್ಕರಲ್ಲಿ ನಡೆಯುವ ರಾಜಿ-ಸಂಧಾನಗಳು, ಪರಸ್ಪರ ಕೊಡು-ಕೊಳ್ಳುವಿಕೆ ಹಾಗೂ ಹೊಮ್ಮುವ ನಿಲುವುಗಳೇ ರಾಜಕೀಯ ಮೈತ್ರಿಗಳಿಗೆ ಬಲ ತುಂಬುತ್ತವೆ, ಬಾಂಧವ್ಯದ ಮುಂದು ವರಿಕೆಗೆ ಉತ್ತೇಜಿಸುತ್ತವೆ. ೨೦೦೪ರಲ್ಲಿ ನಡೆದ ಘಟನೆ ಯೊಂದನ್ನು ಇಲ್ಲಿ ಉಲ್ಲೇಖಿಸಬೇಕು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ರಚಿಸುವ ಸಂದರ್ಭ ಅದಾಗಿತ್ತು. ಆಗ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿಯವರು ತಮ್ಮ ಅಧಿಕೃತ ನಿವಾಸದ ನೆರೆಹೊರೆಯವರಾಗಿದ್ದ ಲೋಕಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಹೊಸ ವರ್ಷದ ಶುಭಾಶಯ ಕೋರಲೆಂದು ಮತ್ತು ಅವರೊಂದಿಗೆ ರಾಜಕೀಯ ಮೈತ್ರಿ ಮಾಡಿ ಕೊಳ್ಳಲೆಂದು ಅವರ ಭೇಟಿಗೆ ತೆರಳಿದ್ದುಂಟು (ತರುವಾಯದಲ್ಲಿ ಪಾಸ್ವಾನ್ ಅವರು ‘ಮೈತ್ರಿನಿಷ್ಠೆ’ಯನ್ನು ಬದಲಿಸಿ, ಯುಪಿಎ ಒಕ್ಕೂಟದಿಂದ ದೂರ ವಾದರು, ಆ ಮಾತು ಬೇರೆ) ಮತ್ತು ತರುವಾಯದಲ್ಲಿ, ಕಾಂಗ್ರೆಸ್ ಅನ್ನು ವಿರೋಽಸುತ್ತಿದ್ದ ಸಣ್ಣ-ಪುಟ್ಟ ಪಕ್ಷ ಗಳೊಂದಿಗೂ ಮಾತುಕತೆ ನಡೆಸಿದ್ದುಂಟು. ಆದರೆ, ಇಂಥ ರಾಜಿ-ಸಂಧಾನ, ಪರಸ್ಪರ ಕೊಡು- ಕೊಳ್ಳುವಿಕೆಯ ನಿಲುವುಗಳು ೨೦೨೪ರ ಈ ಕಾಲಘಟ್ಟದಲ್ಲಿ ಕಾಂಗ್ರೆಸ್‌ನಲ್ಲಿ ಕಾಣುತ್ತಿವೆಯೇ? ಇಲ್ಲ.

ಬಿಜೆಪಿಯೇತರ ಪಕ್ಷಗಳ ‘ಇಂಡಿಯ’ ಮೈತ್ರಿಕೂಟದ ಸಂಸ್ಥಾಪಕ ಪಕ್ಷಗಳಲ್ಲೊಂದು ಈ ಕೂಡಿಕೆಯನ್ನು ತೊರೆದಿದ್ದಕ್ಕೆ ಕಾಂಗ್ರೆಸ್ ಅವಮಾನಕ್ಕೆ ಒಳಗಾಗು ವಂತಾಯಿತು; ಮತ್ತೊಂದೆಡೆ, ತೆಲುಗುದೇಶಂನಂಥ ಸಂಭಾವ್ಯ ಮಿತ್ರ ಪಕ್ಷಗಳು ತಮ್ಮ ಮೈತ್ರಿನಿಷ್ಠೆಯನ್ನು ಬದಲಿಸುತ್ತಿರುವುದು ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷವು ‘ಜತೆಯಾಟ’ ಮುಂದುವರಿಸಲು ನಿರಾಕರಿಸಿರುವುದು ಕೂಡ ಒಂದರ್ಥದಲ್ಲಿ ಕಾಂಗ್ರೆಸ್‌ನ ವೈಫಲ್ಯವೇ, ಅದರ ವಿಶ್ವಾಸಾರ್ಹತೆಗೆ ಒದಗಿದ ಅವಮಾನವೇ.

ಆದರೆ, ಇಂಥದೇ ಸನ್ನಿವೇಶವನ್ನು ಬಿಜೆಪಿಯೊಂದಿಗೆ ಹೋಲಿಕೆ ಮಾಡಿನೋಡಿ. ಮೋದಿ ನೇತೃತ್ವದ ಬಿಜೆಪಿಯು ರಾಜಕೀಯವನ್ನು ‘ಒಂದು ವ್ಯವಸ್ಥಿತ ಹೂಡಿಕೆಯ ಯೋಜನೆ’ಯಾಗಿ ಪರಿಗಣಿಸುತ್ತದೆ ಮತ್ತು ಅದರ ಪ್ರತಿಯೊಂದು ಹೆಜ್ಜೆಯೂ ಲಾಭ ಅಥವಾ ಪ್ರತಿಫಲಗಳನ್ನು ಸುಧಾರಿಸುವುದರ
ಕಡೆಗೇ ಇರುತ್ತದೆ! ಬಿಜೆಪಿಯ ಇತ್ತೀಚಿನ ಒಂದಷ್ಟು ‘ಚಾಲ್’ಗಳನ್ನು ನೋಡಿದರೆ ನಿಮಗಿದು ಚೆನ್ನಾಗಿ ಅರ್ಥವಾಗುತ್ತದೆ. ಮಹತ್ವದ ರಾಷ್ಟ್ರೀಯ ಪುರಸ್ಕಾರಗಳನ್ನು ಸಮಾಜದ ವಿವಿಧ ವರ್ಗಗಳ ಮತ್ತು ಸಮುದಾಯಗಳ ಖ್ಯಾತನಾಮರಿಗೆ/ಸಾಧಕರಿಗೆ ನೀಡುವ ಮೂಲಕ ಆ ಎಲ್ಲ ವರ್ಗಗಳ ಜನರನ್ನೂ ಬಿಜೆಪಿ ಒಲಿಸಿಕೊಂಡಿದೆ ಮತ್ತು ಸಂತುಷ್ಟಿಗೊಳಿಸಿದೆ.

ಅಶಾಶ್ವತತೆಯ ಪರಿಕಲ್ಪನೆಯನ್ನು ರಾಜಕೀಯದಲ್ಲಿ ಸ್ಥಿರವಾಗಿ ನಿಯೋಜಿಸಿ, ಬಿಹಾರದ ನಿತೀಶ್ ಕುಮಾರರಂಥ ಘಟಾನುಘಟಿಯನ್ನು ಅದು ಮರಳಿ ಓಲೈಸಿದೆ ಮತ್ತು ತೆಲುಗುದೇಶಂ ಪಕ್ಷವನ್ನೂ ತೆಕ್ಕೆಗೆ ಸೆಳೆದು ಕೊಳ್ಳುತ್ತಿದೆ. ಮಾತ್ರವಲ್ಲ, ಶಿವಸೇನೆ ಮತ್ತು ಎನ್ ಸಿಪಿಯನ್ನು ಬಿಜೆಪಿಯು ವ್ಯವಸ್ಥಿತವಾಗಿ ವಿಭಜಿಸಿದೆ. ಈ ಹಿಂದೆಯೂ ಕೆಲವೊಂದು ಕಾಂಗ್ರೆಸಿಗರು ಪಕ್ಷಕ್ಕೆ ‘ಶುಭವಿದಾಯ’ ಹೇಳಿದ್ದಿದೆ; ಹೀಗೆ ನಿರ್ಗಮಿಸಿದವರಿಗೆ ಚಾಲಕಶಕ್ತಿಯಾಗಿದ್ದುದು ತಮ್ಮದೇ ಆದ ಪಕ್ಷವನ್ನು ಹುಟ್ಟುಹಾಕುವ ಮಹತ್ವಾಕಾಂಕ್ಷೆ. ಆದರೆ ಇನ್ನು ಮುಂದೆ ಇಂಥ ಕಾರಣಗಳು ಅಥವಾ ನೆಪಗಳನ್ನು ನೀವು ಕಾಣಲಾರಿರಿ. ಕಳೆದ ದಶಕದಲ್ಲಿ ಕೆಲ ಕಾಂಗ್ರೆಸ್ ನಾಯಕರು ಪಕ್ಷಾಂತರ ಮಾಡಿದ್ದು, ತಾವು ‘ಗೆಲ್ಲುವ ಪಾಳಯ’ದಲ್ಲಿ ಇರಬೇಕು ಎಂಬ ಕಾರಣಕ್ಕೆ. ಜನರ ಮತಗಳಿಂದ ಎಂದೂ ಚುನಾಯಿಸಲ್ಪಡದವರು ಕೂಡ ಬಿಜೆಪಿಯನ್ನು ಸೇರಿಕೊಳ್ಳಲು ಸಾಲುಗಟ್ಟಿ ನಿಂತಿದ್ದಕ್ಕೆ ಕಳೆದ ವಾರ ಸಾಕ್ಷಿಯಾಯಿತು.

ಈ ಎಲ್ಲದರ ಪರಿಣಾಮವಾಗಿ, ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ ತನ್ನ ಹೆಸರಲ್ಲಿನ ‘ರಾಷ್ಟ್ರೀಯ’ ಎಂಬ ಪರಿಭಾಷೆಗೆ ಹೆಚ್ಚೆಚ್ಚು ಸಂಚಕಾರ ತಂದು ಕೊಂಡು ‘ಪ್ರಾದೇಶಿಕ’ ಎಂಬ ಹಣೆಪಟ್ಟಿಯನ್ನು ಏರಿಸಿಕೊಳ್ಳುವಂತಾಗಿದೆ. ಕಳೆದ ದಶಕದಲ್ಲಿನ ಕಾಂಗ್ರೆಸ್‌ನ ಸ್ಥಿತಿಗತಿಯನ್ನೇ ನೋಡಿ, ಎರಡು ಲೋಕಸಭೆ ಅವಽಯಲ್ಲಿನ ಇದರ ಸಂಯೋಜಿತ ಗಳಿಕೆ ೧೦೦ಕ್ಕಿಂತ ಕಮ್ಮಿಯಿತ್ತು. ಮತ್ತೊಂದೆಡೆ, ಸ್ವಂತಬಲದ ಮೇಲೋ, ಮಿತ್ರಪಕ್ಷಗಳ ಬಲದೊಂದಿಗೋ ೧೮ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ೨೯೦ ಸ್ಥಾನಗಳಲ್ಲಿ ರಾರಾಜಿಸುತ್ತಿದೆ.

ಇದಕ್ಕೆ ಹೋಲಿಸಿದಾಗ, ಕೇವಲ ೪೫ ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಕೆಲ ರಾಜ್ಯಗಳಲ್ಲಷ್ಟೇ ಅಧಿಕಾರದಲ್ಲಿದೆ. ಹಾಗಂತ ಸದ್ಯೋಭವಿಷ್ಯದಲ್ಲಿ ಈ ಸ್ಥಿತಿ ಬದಲಾಗಿ ಉಜ್ವಲಗೊಳ್ಳುವ ಸಾಧ್ಯತೆಯೇನೂ ಇಲ್ಲ; ಕಾರಣ, ಕಾಂಗ್ರೆಸ್‌ನ ಸಹವರ್ತಿ ಪ್ರತಿಪಕ್ಷಗಳು ಒಗ್ಗೂಡುವ ವಿಷಯದಲ್ಲೇ ಸಾಕಷ್ಟು ಗೊಂದಲ
ಗಳಿವೆ. ಕಳೆದ ಚುನಾವಣೆಗಳಲ್ಲಿ ಹೊಮ್ಮಿರುವ ಲೆಕ್ಕಾಚಾರದ ಕಡೆಗೊಮ್ಮೆ ಕಣ್ಣು ಹಾಯಿಸಿದರೆ ಈ ಕಹಿಸತ್ಯ ಮನವರಿಕೆಯಾಗುತ್ತದೆ. ೨೦೧೪ರ
ಲೋಕಸಭಾ ಚುನಾವಣೆಯಲ್ಲಿ ಶೇ.೫೦ಕ್ಕಿಂತ ಹೆಚ್ಚು ಮತಗಳಿಕೆಯೊಂದಿಗೆ ೧೩೬ ಸ್ಥಾನಗಳನ್ನು ದಕ್ಕಿಸಿಕೊಂಡ ಬಿಜೆಪಿ, ೨೦೧೯ರ ಚುನಾವಣೆಯಲ್ಲಿ ಶೇ.೫೦ ಕ್ಕಿಂತ ಹೆಚ್ಚು ಮತಗಳಿಕೆಯೊಂದಿಗೆ ೨೨೪ ಸ್ಥಾನಗಳನ್ನು ತನ್ನದಾಗಿಸಿಕೊಂಡಿತು.

ಈ ಚುನಾವಣೆಯಲ್ಲಿ, ಸರಿ ಸುಮಾರು ೨೦೦ ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಾಮುಖಿಯಾಗಿ ಸೆಣೆಸಿದ್ದು, ಈ ಪೈಕಿ ಬಿಜೆಪಿಯು ಶೇ.೯೧ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತು ಎಂಬುದಿಲ್ಲಿ ಗಮನಾರ್ಹ. ‘೨೦೨೪ರಲ್ಲಿನ ಮೋದಿಯವರ ಸ್ಥಿತಿಗತಿ ಅಥವಾ ಸಾಧನೆ, ೨೦೧೯ರಲ್ಲಿ ಇದ್ದುದಕ್ಕಿಂತ ಉತ್ತಮ ವಾಗಿರುತ್ತದೆಯೇ?’ ಎಂಬುದು ಚರ್ಚೆಗೆ ಗ್ರಾಸವಾಗಿರುವ ವಿಷಯ. ೨೦೧೪ರಲ್ಲಿ, ಲೋಕಸಭೆಯಲ್ಲಿ ಬಿಜೆಪಿಯು ಬಹುಮತವನ್ನು ಪಡೆದ ಕೆಲ ಸಮಯದ ನಂತರ, ಉತ್ತರ ಮುಂಬೈ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸಿಗ ಸಂಜಯ್ ನಿರುಪಮ್, ‘ಒಂದೊಮ್ಮೆ ಮೋದಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿದ್ದಿದ್ದರೆ, ಅವರೂ ಸೋಲುತ್ತಿದ್ದರು’ ಎಂದು ವ್ಯಂಗ್ಯವಾಡಿದ್ದರು.

ಕಾಂಗ್ರೆಸ್‌ನ ಸ್ಥಿತಿ, ಸೋಲಿನ ಪ್ರಮಾಣಕ್ಕೆ ಹಿಡಿದ ಕೈಗನ್ನಡಿಯಾಗಿತ್ತು ಈ ವ್ಯಂಗ್ಯದ ಮಾತು. ಆ ಸ್ಥಿತಿ ಈಗಲೂ ಮುಂದುವರಿದಿದೆ. ಪೂರ್ವಭಾವಿ
ಜನಾಭಿಪ್ರಾಯ ಸಂಗ್ರಹಣೆಗಳನ್ನು ಆಧರಿಸಿ ಹೇಳುವುದಾದರೆ, ಕಾಂಗ್ರೆಸ್‌ನ ಸ್ಥಿತಿಗತಿ ಇನ್ನೂ ಸುಧಾರಿಸಿಲ್ಲ; ಅಂದರೆ ೨೦೧೪ರಲ್ಲಿ ಸಂಜಯ್ ನಿರುಪಮ್
ಅವ ರಿಂದ ವ್ಯಕ್ತವಾಗಿದ್ದ ಭಾವನೆಯೇ ೨೦೨೪ರಲ್ಲೂ ಮುಂದುವರಿಯುವಂತೆ ತೋರುತ್ತಿದೆ. ಇದರ ಅರ್ಥ, ದೇಶದ ಐತಿಹಾಸಿಕ ಪಕ್ಷ ಎಂಬ ಹೆಗ್ಗಳಿಕೆ ಹೊಂದಿರುವ ಕಾಂಗ್ರೆಸ್, ಮುಂಬರುವ ಕೆಲ ವಾರಗಳಲ್ಲಿ ಶುರುವಾಗಲಿರುವ ಯುದ್ಧದಲ್ಲಿ ‘ಮಾಡು ಇಲ್ಲವೇ ಮಡಿ’ ಎಂಬ ಅನಿವಾರ್ಯ ಕಸರತ್ತಿಗೆ ಒಡ್ಡಿಕೊಳ್ಳಬೇಕಿದೆ.

(ಸೌಜನ್ಯ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)
(ಲೇಖಕರು ಹಿರಿಯ ಪತ್ರಕರ್ತರು
ಮತ್ತು ರಾಜಕೀಯ ವಿಶ್ಲೇಷಕರು)