Thursday, 12th December 2024

ಅಭಿಪ್ರಾಯವೆಲ್ಲ ವಿವಾದವಲ್ಲ, ವರ್ಗಾವಣೆಗೆ ಹೆದರಲ್ಲ: ರೂಪಾ ಮೌದ್ಗಲ್‌

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – ೬

ನಾನು ಯಾವ ಇಲಾಖೆಯಲ್ಲಾದರೂ ಕೆಲಸ ಮಾಡಲಿ, ಅಲ್ಲಿ ಹೊಸತನ್ನು ಕಲಿಯುತ್ತೇನೆ 

ಯಾರು ಏನು ಮಾಡಿದರೂ ಕಣ್ಣುಮುಚ್ಚಿ ಕುಳಿತುಕೊಳ್ಳಬೇಕೆ?

ಬೆಂಗಳೂರು: ಸಾರ್ವಜನಿಕ ಜೀವನದಲ್ಲಿ ನನ್ನ ಅಭಿಪ್ರಾಯ ತಿಳಿಸಲು ಯಾವತ್ತೂ ಹಿಂಜರಿಯಲ್ಲ. ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವ ಪ್ರತಿಯೊಂದು ವ್ಯವಸ್ಥೆ
ಕುರಿತು ಜನಸಾಮಾನ್ಯರ ಮುಂದಿಡಲು ಬಯಸುತ್ತೇನೆ. ಅಭಿಪ್ರಾಯ ತಿಳಿಸುವುದು ನನ್ನ ಸ್ವಾತಂತ್ರ್ಯ ಎಂದು ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್
ಅಭಿಪ್ರಾಯಪಟ್ಟಿದ್ದಾರೆ.

ವಿಶ್ವವಾಣಿ ಕ್ಲಬ್ ಹೌಸ್ ಸಂವಾದದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಅವರು, ನಾನು ಸಮಾಜಕ್ಕೆ ಏನು ಹೇಳಬೇಕು ಅದನ್ನು ಸಾಮಾಜಿಕ ಜಾಲ
ತಾಣದ ಮೂಲಕ ಹೇಳಲು ಬಯಸುತ್ತೇನೆ. ಇರುವ ವಿಷಯವನ್ನು ನೇರವಾಗಿ ಹೇಳಿದರೆ ಅದನ್ನು ವಿವಾದ ಎಂದು ಮಾಧ್ಯಮಗಳು ಬಿಂಬಿಸುತ್ತವೆ. ನಿಜ ಸಂಗತಿಯನ್ನು ಸಮಾಜದ ಮುಂದಿಟ್ಟರೆ ವರ್ಗಾವಣೆ ಮಾಡುತ್ತವೆ ಆಳುವ ಸರಕಾರಗಳು. ನಾನು ಎಲ್ಲಿ ಹೋದರೂ ಉತ್ತಮ ಆಡಳಿತ ಬಯಸುವ ಮೂಲಕ ಜನಪರ ಕೆಲಸ ಮಾಡಲು ಬಯಸುತ್ತೇನೆ. ನಾನು ಯಾವ ಇಲಾಖೆಯಲ್ಲಾದರೂ ಕೆಲಸ ಮಾಡಲಿ, ಅಲ್ಲಿ ಹೊಸತನ ಕಲಿಯುತ್ತೇನೆ. ಸರಕಾರ ಸಂಬಳ
ಕೊಡುತ್ತದೆ. ಇದರಿಂದ ನನಗೇನೂ ಬೇಜಾರಿಲ್ಲ. ಯಾರು ಏನು ಮಾಡಿದರೂ ಕಣ್ಣುಮುಚ್ಚಿ ಕುಳಿತುಕೊಳ್ಳಬೇಕೆ? ಎಂದು ಹೇಳಿದರು.

ನಾನು ಹಾಕಿಕೊಂಡಿರುವ ಖಾಕಿ ಸಾಮಾನ್ಯವಾಗಿ ಕೆಲಸ ಮಾಡುತ್ತದೆ. ಅದರ ಜತೆಗೆ ಹುಟ್ಟಿನಿಂದ ಬಂದಂತಹ ನಿಷ್ಠುರತೆ ಎಂದಿಗೂ ಕುಗ್ಗುವುದಿಲ್ಲ. ಕಾನೂನಿನ ಪ್ರಕಾರ ಎಲ್ಲವನ್ನೂ ಪಾಲನೆ ಮಾಡುತ್ತೇನೆ. ನಾನು ಇರುವ ಸತ್ಯವನ್ನು ಹೇಳಿದ ಕೂಡಲೇ ಅದನ್ನು ಅಲ್ಲಿಗೆ ನಿಲ್ಲಿಸಲು ನಾನೇನು ಪಲಾಯನ ವಾದಿಯಲ್ಲ. ನಾನು ಮಾಡುವ ಪ್ರತಿ ಯೊಂದು ಕೆಲಸವೂ ಚಾಲೆಂಜಿಂಗ್ ಆಗಿ ಇರುತ್ತದೆ ಎಂದು ತಮ್ಮ ವ್ಯಕ್ತಿತ್ವದ ಬಗ್ಗೆ ಮಾಹಿತಿ ಹಂಚಿಕೊಂಡರು.

ಪರಪ್ಪನ ಅಗ್ರಹಾರ ಹಾಗೂ ನಿರ್ಭಯಾ ಹಣ ದುರುಪಯೋಗ ಪ್ರಕರಣ ಕುರಿತು ಬಯಲಿಗೆಳೆದಿದ್ದೆ. ಆದರೆ, ನನ್ನನ್ನು ಸರಕಾರ ವರ್ಗಾವಣೆ ಮಾಡಿತು. ನಾನು ಯಾವತ್ತೂ ಬೇಸರಪಟ್ಟಿಲ್ಲ. ಎಲ್ಲಿ ಹೋದರೂ ಕೆಲಸ ಮಾಡುವ ಉತ್ಸಾಹ ನನ್ನಲ್ಲಿದೆ. ನಾನು ತುಂಬಾ ರಿಸ್ಕ್ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.

ಡಿಜಿಟಲ್ ವ್ಯವಸ್ಥೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ: ಎಲ್ಲಾ ಇಲಾಖೆಗಳಲ್ಲೂ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದಾಗಿದೆ. ತಂತ್ರಜ್ಞಾನಗಳನ್ನು ಬಳಸಿಕೊಂಡು ಅದನ್ನು ಅಭಿವೃದ್ಧಿಪಡಿಸುವ ಮೂಲಕ ಸುಗಮ ಆಡಳಿತಕ್ಕೆ ದಾರಿಮಾಡಿ ಕೊಡಬೇಕು. ಜನರಿಗೆ ಉತ್ತಮ ಸ್ಪಂದನೆ ಹಾಗೂ
ಜನಸ್ನೇಹಿಯಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಪೊಲೀಸರು ರಸ್ತೆ ಬದಿ, ಮಳಿಗೆಗಳ ಬಳಿ ಹಣ ವಸೂಲಿಗೆ ಕಡಿವಾಣ ಹಾಕಬೇಕಾದರೆ
ಮೇಲಧಿಕಾರಿಗಳು ಖಡಕ್ ಆಗಿ ಇರಬೇಕು.

ಮೇಲಾಽಕಾರಿಗಳು ಯಾವಾಗ ಕೊಟ್ಟು, ತೆಗೆದುಕೊಳ್ಳುವ ನೀತಿ ಅನುಸರಿಸಿ, ಅಧಿಕಾರ ಚಲಾಯಿಸುತ್ತಾರೋ ಇಂತಹ ಕೆಲಸಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು. ಸಂವಾದ ಕಾರ್ಯಕ್ರಮದಲ್ಲಿ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ‘ಜನನಿ ಜನ್ಮ ಭಾರತಿ ಧಾತ್ರಿ’ ಗೀತೆ ಹಾಡಿದ್ದು ವಿಶೇಷವಾಗಿತ್ತು. ಹಾಗೆಯೇ ಅವರು ಬೆಳದುಬಂದ ಹಾದಿ ಹಾಗೂ ಐಪಿಎಸ್ ಅಧಿಕಾರಿಯಾದ ಬಗ್ಗೆ ಮಾಹಿತಿ ಹಂಚಿಕೊಂಡರು.

ಇವರಂತೆ ಎಲ್ಲ ಎಸ್ಪಿ, ಡಿಸಿಗಳು ಈಜುಕೊಳ ಕಟ್ಟಿದರೆ ಹೇಗೆ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೊಂದು ನ್ಯಾಯ, ಅಧಿಕಾರಿಗೊಂದು ನ್ಯಾಯವಿಲ್ಲ. ನಿಮ್ಮನ್ನು ನೋಡಿ(ರೋಹಿಣಿ ಸಿಂಧೂರಿ) ಅದೇ ರೀತಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಈಜುಕೊಳ ನಿರ್ಮಿಸಿದರೆ ಹೇಗೆ? ಕರೋನಾ ಸಂಕಷ್ಟದಿಂದ ಜನಸಾಮಾನ್ಯರು ಬಡಪಾಯಿಗಳಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಈಜುಕೊಳ ನಿರ್ಮಿಸುವುದು ಅನಿವಾರ್ಯವಿತ್ತೆ? ಉತ್ತಮ ಕಾರ್ಯಗಳಲ್ಲಿ ಪ್ರಚಾರದಲ್ಲಿರುವಾಗ, ಸಮಸ್ಯೆಗಳ ಕಡೆ ಬೆರಳು ತೋರಿಸುವ ಪ್ರವೃತ್ತಿಯಲ್ಲಿ ಇಂತಹ ಕೆಲಸ ಮಾಡುವುದು ಸರಿಯಲ್ಲ ಎಂದು ಅನಿಸಿಲ್ಲವೆ? ಕರೋನಾಗೂ ಮುಂಚೆ ಈಜುಕೊಳ ನಿರ್ಮಾಣ ಮಾಡಲಾಗಿದೆ ಎಂದು ಹೇಳುತ್ತಾರೆ. ಸರಕಾರವೇ ನಾದರೂ ಕರೋನಾ ಇಲ್ಲ ಎಂದು ಘೋಷಣೆ ಮಾಡಿದೆಯೇ ಎಂದು ಐಪಿಎಸ್ ಅಽಕಾರಿ ರೂಪಾ ಮೌದ್ಗಿಲ್ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.