Friday, 20th September 2024

ಜಾಗತಿಕ ಸಂಸ್ಥೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆಯೇ?

ಅವಲೋಕನ

ಗಣೇಶ್ ಭಟ್, ವಾರಣಾಸಿ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ 70ನೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿ ಭಾರತವನ್ನು ವಿಶ್ವಸಂಸ್ಥೆಯ ನಿರ್ಣಾಯಕ ಸ್ಥಾನದಿಂದ ಎಷ್ಟು ಕಾಲ ಹೊರಗಿಡಲಾಗುವುದು ಎಂದು ಪ್ರಶ್ನಿಸಿದ್ದಾರೆ.

ಭಾರತಕ್ಕಿನ್ನೂ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವವನ್ನು ಕೊಡದೇ ಇರುವುದರ ವಿರುದ್ಧ ದನಿ ಎತ್ತಿzರೆ. ಕೋವಿಡ್ ಮಹಾಮಾರಿಯ ನಿಯಂತ್ರಣದ ವಿಚಾರದಲ್ಲಿ ವಿಶ್ವಸಂಸ್ಥೆಯ ನಿಷ್ಕ್ರಿಯತೆ ಯನ್ನೂ ಮೋದಿ ಪ್ರಶ್ನಿಸಿದ್ದರು. ಜತೆಗೆ ವಿಶ್ವ ಸಂಸ್ಥೆಯ ಸುಧಾರಣೆಯ ಕಾಲ ಬಂದಿದೆ ಎಂದೂ ಭಾಷಣದಲ್ಲಿ ಹೇಳಿದ್ದರು. ವಿಶ್ವ ಸಂಸ್ಥೆಯಿಂದ 5 ಕಾಯಂ ಸದಸ್ಯ
ರಾಷ್ಟ್ರಗಳ ಕೈವಶವಿರುವ ಸಂಸ್ಥೆಯಾಗಿ ಪರಿವರ್ತನೆಯಾಗಿದೆ.

ವಿಶ್ವಸಂಸ್ಥೆಗೆ 70 ವರ್ಷಗಳು ಕಳೆದರೂ ಅದರಲ್ಲಿ ಯಾವುದೇ ರಚನಾತ್ಮಕ ಬದಲಾವಣೆಗಳಾಗಿಲ್ಲ. ಯುಎನ್‌ನ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವದಲ್ಲಿ ಅಮೆರಿಕ, ರಷ್ಯಾ, ಚೀನಾ, ಇಂಗ್ಲೆಂಡ್ ಹಾಗೂ ಫ್ರಾನ್ಸ್ ದೇಶಗಳ ಹೊರತಾಗಿ ಇತರ ಯಾವುದೇ ದೇಶಗಳಿಗೆ ಪ್ರತಿನಿಧಿಸುವ ಅವಕಾಶವೇ ಇಲ್ಲ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ವಿಶ್ವಸಂಸ್ಥೆಯ ಕಾಯಂ ಭದ್ರತಾ ಮಂಡಳಿಯಲ್ಲಿ ಸದಸ್ಯತ್ವವಿಲ್ಲ ಎಂದರೆ ಇದು ನಿಜವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನವೇ ಸರಿ.

ಆಫ್ರಿಕಾದ ದೇಶಗಳು, ದಕ್ಷಿಣ ಅಮೆರಿಕದ ದೇಶಗಳು, ಅರಬ್ ದೇಶಗಳು ಹಾಗೂ ಆಸ್ಟ್ರೇಲಿಯಾ ಖಂಡದ ದೇಶಗಳಿಗೂ ವಿಶ್ವ ಸಂಸ್ಥೆಯ ಕಾಯಂ ಭದ್ರತಾ ಮಂಡಳಿಯ ಸದಸ್ಯತ್ವವನ್ನು ನಿರಾಕರಿಸಲಾಗಿದೆ. ವಿಶ್ವಸಂಸ್ಥೆಯಿಂದು ಜಾಗತಿಕ ಸಂಸ್ಥೆ ಅನ್ನುವ
ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಹಾಗೆ ನೋಡಿದರೆ ಭಾರತಕ್ಕೆ ವಿಶ್ವ ಸಂಸ್ಥೆಯ ಕಾಯಂ ಸದಸ್ಯ ರಾಷ್ಟ್ರವಾಗುವ ಅವಕಾಶ ಎರಡು ಬಾರಿ ಒದಗಿತ್ತು. 1950ನೇ ಇಸವಿಯಲ್ಲಿ ಅಮೆರಿಕವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ
ರಾಷ್ಟ್ರದ ಸ್ಥಾನವನ್ನು ಕೊಡಲು ಸಹಕಾರ ನೀಡುವ ಭರವಸೆಯನ್ನು ನೀಡಿತ್ತು. ಚೀನಾವನ್ನು ಕಾಯಂ ಸದಸ್ಯ ರಾಷ್ಟ್ರದ ಪಟ್ಟಿಯಿಂದ ಹೊರಗಿಡುವುದು ಅಮೆರಿಕಾದ ಉದ್ದೇಶವಾಗಿತ್ತು. ಆದರೆ ಅಮೆರಿಕದ ಈ ನೆರವನ್ನು ಒಪ್ಪಿಕೊಂಡರೆ ಜಾಗತಿಕ ಶೀತಲ ಸಮರದಲ್ಲಿ ಭಾರತವು ಅಮೆರಿಕದ ಪರ ನಿಂತಂತಾಗುತ್ತದೆ ಎಂದು ಭಾವಿಸಿದ ಅಂದಿನ ಪ್ರಧಾನಿ ಪಂಡಿತ್ ಜವಾಹರ್
ಲಾಲ್ ನೆಹರೂ ಅವರು ಚೀನಾವೇ ವಿಶ್ವ ಸಂಸ್ಥೆಯ ಕಾಯಂ ಸದಸ್ಯತ್ವಕ್ಕೆ ನ್ಯಾಯಯುತವಾದ ಅರ್ಹ ರಾಷ್ಟ್ರ ಎಂದು ಹೇಳಿ ಅಮೆರಿಕಾದ ನೆರವನ್ನು ನಿರಾಕರಿಸಿದರು!

ಇದರ ಪರಿಣಾಮವಾಗಿ ಭಾರತಕ್ಕೆ ಕಾಯಂ ಸದಸ್ಯತ್ವ ತಪ್ಪಿ ಹೋಯಿತು. ಭಾರತವು ನಿರಾಕರಿಸಿದ ಕಾರಣದಿಂದ ಸದಸ್ಯತ್ವ ಚೀನಾಗೆ ಒಲಿಯಿತು. 1955ರಲ್ಲಿ ಸೋವಿಯತ್ ರಷ್ಯಾವು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ 6ನೆಯ ಸದಸ್ಯ ರಾಷ್ಟ್ರವಾಗಿ
ಭಾರತವನ್ನು ಸೇರಿಸುವ ಪ್ರಸ್ತಾಪವನ್ನು ಮಾಡಿತ್ತು. ಆಗಲೂ ನೆಹರೂ ಅವರು ಚೀನಾ ಜೊತೆಗಿನ ಬಾಂಧವ್ಯಕ್ಕೆ ತೊಂದರೆ ಆಗುವುದೆಂದು ಹೆದರಿ ರಷ್ಯಾದ ಪ್ರಸ್ತಾವನೆಯನ್ನು ತಿರಸ್ಕರಿಸಿದರು.

ಜಾಗತಿಕ ಸಂಸ್ಥೆಯಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಿಗೆ ವೀಟೋ ಪವರ್ ಅನ್ನುವ ಅಧಿಕಾರ ಇದೆ. ವಿಶ್ವಸಂಸ್ಥೆಯಲ್ಲಿ ತಮ್ಮ ಹಾಗೂ ತಮ್ಮ ಮಿತ್ರ ರಾಷ್ಟ್ರಗಳ ಹಿತಾಸಕ್ತಿಗೆ ಅನುಕೂಲಕರವಲ್ಲದ ಯಾವುದೋ ಗಣನೀಯ
ನಿರ್ಣಯವು ಜಾರಿಯಾಗುವುದನ್ನು ತಡೆಗಟ್ಟಲು ಪ್ರತೀ ಕಾಯಂ ಸದಸ್ಯ ರಾಷ್ಟ್ರಕ್ಕೆ ವೀಟೋ ಹಕ್ಕು ಇದೆ. ಇದುವರೆಗೆ ಕಾಯಂ ಸದಸ್ಯ ರಾಷ್ಟ್ರಗಳು 287 ಬಾರಿ ವೀಟೋ ಪವರ್ ಅನ್ನು ಬಳಸಿ ಭದ್ರತಾ ಮಂಡಳಿಯ ನಿರ್ಣಯಗಳನ್ನು ತಡೆಹಿಡಿದಿವೆ.

ಅಮೆರಿಕಾವು ಇಸ್ರೇಲ್ ದೇಶದ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ 40ಕ್ಕಿಂತಲೂ ಹೆಚ್ಚು ಬಾರಿ ತನ್ನ ವೀಟೋ ಪವರ್ ಅನ್ನು ಉಪಯೋಗಿಸಿದೆ. ಸಿರಿಯಾದ ಆಂತರಿಕ ಯುದ್ಧದ ಸಂದರ್ಭದಲ್ಲಿ ತನ್ನ ದೇಶದ ಪ್ರಜೆಗಳ ಮೇಲೆಯೇ ರಾಸಾಯನಿಕ ಅಸದ ಪ್ರಯೋಗಿಸಿ ಸಾವಿರಾರು ಸಿರಿಯನ್ ಅಮಾಯಕರ ಸಾವಿಗೆ ಕಾರಣವಾದ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್
ಆಡಳಿತದ ವಿರುದ್ಧ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಆರ್ಥಿಕ ದಿಗ್ಬಂಧನ ಹೇರುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳನ್ನು ರಷ್ಯಾ 10 ಬಾರಿ ತನ್ನ ವೀಟೋ ಪವರ್ ಅನ್ನು ಬಳಸಿ ತಡೆಹಿಡಿದಿದೆ.

ಚೀನಾವು ತನ್ನ ಸಾರ್ವಕಾಲಿಕ ಮಿತ್ರ ರಾಷ್ಟ್ರವಾದ ಪಾಕಿಸ್ತಾನದ ಹಿತಾಸಕ್ತಿಯನ್ನು ಕಾಪಾಡುವುದಕ್ಕೋಸ್ಕರ ತನ್ನ ವೀಟೋ ಪವರ್ ಅನ್ನು ಬಳಸಿದೆ. ಭಾರತದ ಮೇಲೆ ವಿವಿಧ ಭಯೋತ್ಪಾದನಾ ದಾಳಿ ನಡೆಸಿದ್ದ ಪಾಕಿಸ್ತಾನದ ಉಗ್ರ ಸಂಘಟನೆಯಾದ ಜೈಷ್ ಎ ಮೊಹಮ್ಮದ್‌ನ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಎ ಪ್ರಯತ್ನಗಳನ್ನು ಚೀನಾ ನಿರರ್ಥಕಗೊಳಿಸಿದೆ. ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕಾ, ಫ್ರಾನ್ಸ್, ಬ್ರಿಟನ್‌ಗಳು ನಾಲ್ಕು ಬಾರಿ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ನಿರ್ಣಯಗಳನ್ನು ತೆಗೆದುಕೊಂಡ ಸಂದರ್ಭಗಳಲ್ಲೂ ಚೀನಾ ತನ್ನ ವೀಟೋ ಪವರ್ ಅನ್ನು ಬಳಸಿ ಆ ನಿರ್ಣಯವನ್ನು ತಡೆಹಿಡಿದಿದೆ.

ಕಾಯಂ ಸದಸ್ಯ ರಾಷ್ಟ್ರಗಳ ವೀಟೋ ಪವರ್ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಯುದ್ಧಾಪರಾಧ ಹಾಗೂ ಮಾನವತೆ ಯ ವಿರುದ್ಧದ ಅಪರಾಧಗಳ ವಿರುದ್ಧ ವಿಶ್ವ ಸಂಸ್ಥೆಯು ತೆಗೆದುಕೊಂಡ ನಿರ್ಣಯಗಳನ್ನು ವೀಟೋ ಪವರ್‌ಗಳ ಮೂಲಕ ತಡೆ ಹಿಡಿಯಲಾಗಿದೆ. ವಿಶ್ವಸಂಸ್ಥೆ ಕೆಲವು ನಿರ್ಣಾಯಕ ವಿಷಯಗಳಲ್ಲಿ ವಿಫಲವಾಗಿದೆ. ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಭಯೋತ್ಪಾದನಾ ದಾಳಿ ನಡೆದು ಸಾವಿರಾರು ಅಮಾಯಕರು ಸಾವಿಗೀಡಾಗಿದ್ದರೂ, ಭಾರತದಲ್ಲಿ ಮುಂಬೈ ಸೇರಿದಂತೆ ಹತ್ತು ಹಲವು ಕಡೆ ಉಗ್ರವಾದಿಗಳ ದಾಳಿ ನಡೆದಿದ್ದರೂ, ರಷ್ಯಾ, ಈಜಿ-, ಸೌದಿ ಅರೇಬಿಯಾ, ಇಂಗ್ಲೆಂಡ್, ಇಂಡೋ ನೇಷ್ಯಾ, ನೈಜೀರಿಯಾ, ಅಫ್ಘಾನಿಸ್ತಾನ ಮೊದಲಾದ ದೇಶಗಳಲ್ಲಿ ಭಯೋತ್ಪಾದನಾ ದಾಳಿಗಳು ನಡೆದು ಸಾವಿರಾರು ಅಮಾಯಕರ ಜೀವ ಹರಣವಾಗಿದ್ದರೂ ಇದುವರೆಗೂ ವಿಶ್ವ ಸಂಸ್ಥೆಯು ಭಯೋತ್ಪಾದನೆಗೆ ಸ್ಪಷ್ಟ ವ್ಯಾಖ್ಯಾನವನ್ನು ಕೊಟ್ಟಿಲ್ಲ.

ಅಮೆರಿಕಾ ವಿಯೆಟ್ನಾಂ ಮೇಲೆ ಏಕಪಕ್ಷೀಯವಾಗಿ ಯುದ್ಧ ಮಾಡಿದಾಗ ವಿಶ್ವಸಂಸ್ಥೆ ಸುಮ್ಮನೆ ಕುಳಿತಿತ್ತು. ಕೆಲವು ವರ್ಷಗಳ ಹಿಂದೆ ಇರಾಕ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ(ಐಎಸ್‌ಐಎಸ್) ಉಗ್ರಗಾಮಿ ಸಂಘಟನೆಯು ಅಲ್ಪ  ಸಂಖ್ಯಾತರಾದ ಯೆಝ್ದಿ ಜನಾಂಗದ ಮೇಲೆ ದಾಳಿ ಮಾಡಿ ಸಾವಿರಾರು ಯೆಝ್ದಿ ಹೆಣ್ಣುಮಕ್ಕಳನ್ನು ಬಲವಂತವಾಗಿ ಕೊಂಡೊಯ್ದು ಅವರನ್ನು ಲೈಂಗಿಕ ಜೀತದಾಳುಗಳನ್ನಾಗಿಸಿ ಬಹಳ ಕ್ರೂರವಾಗಿ ನಡೆಯಿಸಿಕೊಳ್ಳುತ್ತಿದ್ದಾಗ ವಿಶ್ವಸಂಸ್ಥೆ ಕೈಕಟ್ಟಿ ಕುಳಿತಿತ್ತು.

ಶ್ರೀಲಂಕಾ ಸರಕಾರವು ತನ್ನ ದೇಶದಲ್ಲಿದ್ದ ಸಾವಿರಾರು ತಮಿಳರನ್ನು ಅಮಾನುಷವಾಗಿ ಹತ್ಯೆ ಮಾಡಿದಾಗಲೂ ವಿಶ್ವಸಂಸ್ಥೆ ನಿಷ್ಕ್ರಿಯವಾಗಿ ಕುಳಿತಿತ್ತು. ಚೀನಾವು ಟಿಬೆಟ್ ಅನ್ನು ಆಕ್ರಮಿಸಿ ಟಿಬೆಟ್ ನಿವಾಸಿಗಳನ್ನು ಹೊರದಬ್ಬಿದಾಗ ವಿಶ್ವಸಂಸ್ಥೆ ಏನು ಮಾಡಿದೆ? ಇಂದಿಗೂ ಬೌದ್ಧರ ಪರಮೋಚ್ಛ ಗುರು ದಲೈ ಲಾಮಾ ಸೇರಿದಂತೆ ಮೂಲ ಟಿಬೆಟಿಯನ್ನರು ದೇಶಭ್ರಷ್ಟರಾಗಿ ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಆಶ್ರಯ ಪಡೆದು ಜೀವಿಸುತ್ತಿದ್ದಾರೆ.

ತೈವಾನ್ ದೇಶವು ಪೀಪಲ್ಸ ರಿಪಬ್ಲಿಕ್ ಆಫ್ ಚೀನಾದಿಂದ(ಮೈನ್ ಲ್ಯಾಂಡ್ ಚೀನಾ) ಪ್ರತ್ಯೇಕವಾಗಿ ಹಲವು ದಶಕಗಳೇ ಕಳೆದಿ ದ್ದರೂ ತೈವಾನ್‌ಗೆ ಪ್ರತ್ಯೇಕ ದೇಶದ ಸ್ಥಾನಮಾನವನ್ನು ಘೋಷಿಸಲು ಯುಎನ್‌ಗೆ ಸಾಧ್ಯವಾಗಿಲ್ಲ. ವಿಶ್ವ ಸಂಸ್ಥೆ ತೈವಾನ್ ಅನ್ನು ಇನ್ನೂ ಚೈನೀಸ್ ತೈಪೆ ಅಂತಲೇ ಕರೆಯುವುದು. ಇತ್ತೀಚೆಗಿನ ದಿನಗಳಲ್ಲಿ ಸ್ವಾಯತ್ತ ಹಾಂಕಾಂಗ್‌ನ ಮೇಲೂ ಚೀನಾದ ಹಸ್ತ ಕ್ಷೇಪ ಹಾಗೂ ದಬ್ಬಾಳಿಕೆ ಹೆಚ್ಚಾಗುತ್ತಿದ್ದು ಇದರವಿರುದ್ಧವೂ ವಿಶ್ವ ಸಂಸ್ಥೆ ತುಟಿ ಬಿಚ್ಚಿಲ್ಲ. ಚೀನಾದಲ್ಲಿ ಅಲ್ಪಸಂಖ್ಯಾತರಾಗಿ ರುವ ವುಯಿರ್ಗ ಮುಸಲ್ಮಾನರಿಗೆ ಅವರ ಧಾರ್ಮಿಕ ಆಚರಣೆಗಳನ್ನೂ ಮಾಡಲು ಬಿಡದೆ ಲಕ್ಷಾಂತರ ವುಯಿಗರ್‌ಗಳನ್ನು ಜೈಲಿಗೆ ಅಕ್ರಮವಾಗಿ ದೂಡಿ ಸತಾಯಿಸುತ್ತಿರುವ ಚೀನಾದ ಕ್ರಮವನ್ನು ವಿಶ್ವಸಂಸ್ಥೆ ಆಕ್ಷೇಪಿಸಿಯೇ ಇಲ್ಲ. ಹೀಗಿರುವಾಗ ವಿಶ್ವ ಸಂಸ್ಥೆ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ಎಂದು ಹೇಗೆ ಹೇಳಲು ಸಾಧ್ಯ? ಕೋವಿಡ್-19ರ ವಿಚಾರದಲ್ಲಿ ಹೆಸರು ಹಾಳು ಮಾಡಿಕೊಂಡ ಇನ್ನೊಂದು ಜಾಗತಿಕ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆ.

ಇದಕ್ಕೆ ಕಾರಣ ವಿಶ್ವ ಆರೋಗ್ಯ  ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ.ಟೆಡ್ರೋಸ್ ಅಧನೋಮ್ ಘೆಬ್ರೆಯೆಸುಸ್. ಇಥಿಯೋಪಿಯಾ
ದೇಶದ ಆರೋಗ್ಯ ಸಚಿವರೂ ನಂತರ ವಿದೇಶಾಂಗ ಸಚಿವರೂ ಆಗಿದ್ದ ಟೆಡ್ರೋಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರನ್ನಾಗಿ ಮಾಡುವುದರಲ್ಲಿ ಚೀನಾವು ಪ್ರಧಾನ ಭೂಮಿಕೆ ವಹಿಸಿತ್ತು ಎನ್ನಲಾಗುತ್ತಿದೆ.

ಚೀನಾದ ಋಣ ಸಂದಾಯ ಮಾಡಲು ಕರೋನಾ ವಿಚಾರದಲ್ಲಿ ಟೆಡ್ರೋಸ್ ಚೀನಾದ ಕೈಗೊಂಬೆಯಂತೆ ವರ್ತಿಸಿದರು. ಟೆಡ್ರೋಸ್ ಆರಂಭದಿಂದಲೂ ಕೋವಿಡ್ -19ರ ವಿಚಾರದಲ್ಲಿ ಚೀನಾವನ್ನು ಸಮರ್ಥಿಸುತ್ತಲೇ ಬಂದರು. ಚೀನಾ ದೊಂದಿಗೆ ಅತೀ ನಿಕಟ ಸಂಬಂಧವನ್ನು ಕಾಯ್ದುಕೊಂಡ ಟೆಡ್ರೋಸ್ ಈ ವರ್ಷದ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಬೀಜಿಂಗ್‌ಗೆ ಭೇಟಿ ನೀಡಿ
ಚೀನಾ ಕೋವಿಡ್- 19ಅನ್ನು ಸಮರ್ಥವಾಗಿ ನಿಭಾಯಿಸುತ್ತಿದೆ, ಹಾಗಾಗಿ ಯಾವುದೇ ದೇಶಗಳು ಚೀನಾದೊಡನೆ ಪ್ರಯಾಣ ಹಾಗೂ ವ್ಯಾಪಾರ ನಿರ್ಬಂಧವನ್ನು ಹೇರಬಾರದು ಎಂದು ತಾಕೀತು ಮಾಡಿದರು. ಆದರೆ ಆ ಸಂದರ್ಭದಲ್ಲಿ ಚೀನಾದಲ್ಲಿ ಕರೋನಾ ಮಿತಿಮೀರಿ ಹರಡುತ್ತಿತ್ತು. ಆ ಸಂದರ್ಭದಲ್ಲಿ ಜವಬ್ದಾರಿಯುತ ಸ್ಥಾನದಲ್ಲಿರುವ ಡಾ.ಟೆಡ್ರೋಸ್ ನಿರ್ದಿಷ್ಟ ಕಾಲದ ವರೆಗೆ ಇತರ ದೇಶೀಯರು ಚೀನಾಗೆ ಹೋಗುವುದನ್ನು ಹಾಗೂ ಚೀನಾದ ಪ್ರಜೆಗಳು ಇತರ ದೇಶಗಳಿಗೆ ಹೋಗುವುದನ್ನು ನಿರ್ಬಂಧಿಸಲು ಸಲಹೆ ಯನ್ನು ಕೊಡಬೇಕಿತ್ತು. ಆದರೆ ಇದರಿಂದಾಗಿ ಚೀನಾ ಏಕಾಂಗಿ ಯಾಗಿ ಅದಕ್ಕೆ ಆರ್ಥಿಕ ಹೊಡೆತ ಬೀಳುವುದನ್ನು ತಪ್ಪಿಸಲು ಕಟಿಬದ್ಧರಾದ ಟೆಡ್ರೋಸ್ ಇತರ ದೇಶಗಳಿಗೆ ಚೀನಾದೊಡನೆ ವ್ಯಾಪಾರ ಸಂಬಂಧವನ್ನು ಕಡಿದುಕೊಳ್ಳಬಾರದು ಎಂದು ಹೇಳಿ ದರು. ಡಾ.ಟೆಡ್ರೋಸ್ ಮಾತನ್ನು ನಂಬಿದ ಬಹುತೇಕ ದೇಶಗಳು ಚೀನಾದೊಡನೆ ಪ್ರಯಾಣ ಹಾಗೂ ವ್ಯಾಪಾರ ಸಂಬಂಧ ಗಳನ್ನು ಮುಂದುವರಿಸಿದವು.

ಇದರ ಪರಿಣಾಮವಾಗಿ ಅಮೆರಿಕ ಹಾಗೂ ಯುರೋಪ್ ದೇಶಗಳಲ್ಲಿ ಕರೋನಾ ಭೀಕರವಾಗಿ ಹಬ್ಬಿತು. ಕರೋನಾವು ಮಹಾ ಸಂಕ್ರಾಮಿಕ ರೋಗವಾಗಿದೆ ಎಂದು ಘೋಷಣೆ ಮಾಡುವಲ್ಲಿಯೂ ವಿಶ್ವ ಆರೋಗ್ಯ ಸಂಸ್ಥೆ ಬಹಳ ನಿಧಾನಿಸಿತು. ಈ ಎ ಕಾರಣ ಗಳಿಂದ ಕರೋನಾ ವೈರಸ್ ಚೀನಾದಿಂದ ವಿಶ್ವದೆಡೆಗೆ ಹರಡಿತು. ಅಮೆರಿಕಾ, ಭಾರತ, ಬ್ರೆಜಿಲ್‌, ಇಂಗ್ಲೆಂಡ್, ಇಟೆಲಿ ಮೊದಲಾದ ದೇಶಗಳಿಂದು ಕರೋನಾದ ಹಾವಳಿಗೆ ನಲುಗಿವೆ.

ಕೋವಿಡ್ ವೈರಸ್‌ನ ಮೂಲ ಚೀನಾ ಎನ್ನುವುದು ಜಗತ್ತಿಗೇ ಗೊತ್ತಿದೆ. ವುಹಾನ್‌ನಲ್ಲಿ ಕರೋನಾದ ಆರಂಭಿಕ ದಿನಗಳಲ್ಲಿ ಹೊಸ ರೀತಿಯ ನ್ಯುಮೋನಿಯಾ (ಕರೋನಾದಿಂದ) ಹರಡುತ್ತಿರುವುದನ್ನು ಅಧ್ಯಯನ ಮಾಡಲು ಚೀನಾ  ರಕಾರದಿಂದ ನಿಯುಕ್ತ ರಾಗಿದ್ದ ವೈರಾಲಜಿಸ್ಟ್ ಡಾ ಲಿ ಮೆಂಗ್ ಯಾನ್, ನಂತರ ಚೀನಾದಿಂದ ತಪ್ಪಿಸಿಕೊಂಡು ಇಂಗ್ಲೆಂಡ್‌ಗೆ ಬಂದು ಕೋವಿಡ್ ವೈರಸ್ ಚೀನಾದ ವುಹಾನ್‌ನ ಲ್ಯಾಬೋರೇಟರಿ ಯಲ್ಲಿ ಸೃಷ್ಟಿಯಾಗಿದ್ದು ಅಂತ ಹೇಳಿದ್ದಾರೆ. ಇದು ಚೀನಾವೇ ಕರೋನಾದ ಜನಕ ಎನ್ನುವ ವಾದವನ್ನು ಪುಷ್ಟೀಕರಿಸುತ್ತದೆ. ಆದರೆ ಇತ್ತೀಚೆಗೆ ಪತ್ರಿಕಾ ಹೇಳಿಕೆ ಕೊಟ್ಟಿದ್ದ ಟೆಡ್ರೋಸ್ ಚೀನಾದ ಪ್ರಯೋಗಶಾಲೆ ಯಲ್ಲಿ ಕರೋನಾ ವೈರಸ್ ಹುಟ್ಟಿದೆ ಎನ್ನುವ ವಾದವನ್ನು ಅಲ್ಲಗಳೆದು ಕರೋನಾ ವೈರಸ್ ನೈಸರ್ಗಿಕವಾಗಿ ತನ್ನಿಂತಾನೇ ಹುಟ್ಟಿದೆ ಎಂದು ಹೇಳಿಕೆ ನೀಡಿ ಮತ್ತೊಮ್ಮೆ ಚೀನಾವನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ.

ಕರೋನಾ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನಿಷ್ಕ್ರಿಯತೆ ಹಾಗೂ ಚೀನಾ ಪಕ್ಷಪಾತತನದಿಂದ ಕುಪಿತರಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕಾವು ನೀಡುತ್ತಿದ್ದ ಎ ರೀತಿಯ ಆರ್ಥಿಕ ನೆರವುಗಳನ್ನು ನಿಲ್ಲಿಸಿzರೆ. ಇಂಗ್ಲೆಂಡ್ ಸೇರಿದಂತೆ ಇತರ ಕೆಲವು ದೇಶಗಳೂ ಕರೋನಾ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿವೆ. ವಿಶ್ವ ವ್ಯಾಪಾರ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ವಿಶ್ವ ಬ್ಯಾಂಕ್ ಮೊದಲಾದ ಜಾಗತಿಕ ಸಂಸ್ಥೆಗಳು ಮೊದಲಿನಿಂದಲೂ ಅಮೆರಿಕ ಸೇರಿದಂತೆ ಶ್ರೀಮಂತ ರಾಷ್ಟ್ರಗಳ ಅಣತಿಯಂತೆಯೇ ನಡೆದುಕೊಳ್ಳುವ ಸಂಸ್ಥೆಗಳು.

ಇತ್ತೀಚೆಗಿನ ದಿವಸಗಳಲ್ಲಿ ಚೀನಾವೂ ಈ ಸಂಸ್ಥೆಗಳ ಮೇಲೆ ಹತೋಟಿಯನ್ನು ಸಾಧಿಸಿದೆ. ವಿಶ್ವಸಂಸ್ಥೆಯು ತನ್ನ ಇಮೇಜನ್ನು ಉಳಿಸಿಕೊಳ್ಳಲು ಬಹಳಷ್ಟು ಸುಧಾರಣೆಗೆ ಒಳಗಾಗಬೇಕಿದೆ. ಕಾಯಂ ಭದ್ರತಾ ಮಂಡಳಿಯ ಸದಸ್ಯತ್ವವನ್ನು ವಿಸ್ತರಿಸಬೇಕಾದ
ಅವಶ್ಯಕತೆ ಇದೆ. ಭಾರತಕ್ಕೆ ಅರ್ಹವಾಗಿಯೇ ವಿಶ್ವಸಂಸ್ಥೆಯ ಕಾಯಂ ಭದ್ರತಾ ಮಂಡಳಿಯ ಸದಸ್ಯತ್ವ ದೊರಕಬೇಕಾಗಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಿರುವ ವಿಶೇಷ ವೀಟೋ ಅಧಿಕಾರವನ್ನು ತೆಗೆಯಬೇಕು. ನಿರ್ಣಯ ಗಳನ್ನು ತೆಗೆದುಕೊಳ್ಳುವಾಗ ಎಲ್ಲ 193 ರಾಷ್ಟ್ರಗಳ ಅಭಿಪ್ರಾಯಗಳಿಗೆ ಗೌರವವನ್ನು ಕೊಡಬೇಕು. ನಿಜದ ಪ್ರಜಾಪ್ರಭುತ್ವ
ಮಾದರಿಯ ವಿಶ್ವ ಸಂಸ್ಥೆಯ ನಿರ್ಣಯಗಳು ರೂಪೀಕರಿಸಲ್ಪಡಬೇಕು. ಇನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾದ ಮೇಲೆ ಇರುವ ಕುರುಡು ಪ್ರೀತಿ ನಿವಾರಣೆ ಆಗಬೇಕಾದರೆ ಆ ಸಂಸ್ಥೆಯ ಮಹಾನಿರ್ದೇಶಕನಾಗಿರುವ ಟೆಡ್ರೋಸ್ ಅವರ ಪದಚ್ಯುತಿ ಆಗಬೇಕು. ಆದರೆ ದುಡ್ಡಿದ್ದವನೇ ದೊಡ್ಡಪ್ಪ ಅನ್ನುವ ಈ ಕಾಲದಲ್ಲಿ ಜಾಗತಿಕ ಸಂಸ್ಥೆಗಳಲ್ಲಿ ಬದಲಾವಣೆ ಆಗಲು ಸಾಧ್ಯವೇ?