Saturday, 23rd November 2024

ಗುಜರಾತ್ ಚುನಾವಣೆ: ಇಸುದಾನ್ ಗಡ್ವಿ ಆಪ್‌ ಸಿಎಂ ಅಭ್ಯರ್ಥಿ

ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಪತ್ರಕರ್ತ ಹಾಗೂ ಎಎಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಸುದಾನ್ ಗಡ್ವಿ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಪಕ್ಷದ ನಾಯಕ ಅರವಿಂದ್‌ ಕೇಜ್ರಿವಾಲ್ ಘೋಷಿಸಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಶುಕ್ರ ವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯ ಕಾರ್ಯಕ್ರಮದಲ್ಲಿ ಇಸುದಾನ್ ಗಡ್ವಿ ಅವರ ಹೆಸರನ್ನು ಪ್ರಕಟಿಸಿದರು.

ಗುಜರಾತ್‌ನಲ್ಲಿನ ಎಎಪಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹೊಣೆಯನ್ನು ಅರವಿಂದ್ ಕೇಜ್ರಿವಾಲ್ ಅವರು ಜನತೆಯ ತೀರ್ಮಾನಕ್ಕೆ ಬಿಟ್ಟಿದ್ದರು. ಜನರು ತಮ್ಮ ಆಯ್ಕೆಯನ್ನು ತಿಳಿಸಲು ವಾಟ್ಸಾಪ್, ದೂರವಾಣಿ ಹಾಗೂ ಇ- ಮೇಲ್ ವಿಳಾಸಗಳನ್ನು ನೀಡಿದ್ದರು.

ಮಾಜಿ ಟಿವಿ ಪತ್ರಕರ್ತ ಇಸುದಾನ್ ಗಡ್ವಿ ಅವರನ್ನು ಜನರು ಹೆಚ್ಚಿನ ಮತಗಳೊಂದಿಗೆ ಆಯ್ಕೆ ಮಾಡಿದ್ದಾರೆ ಎಂದು ಕೇಜ್ರಿವಾಲ್ ಪ್ರಕಟಿಸಿದರು. ಸುಮಾರು 16.18 ಲಕ್ಷಕ್ಕೂ ಅಧಿಕ ಜನರು ತಮ್ಮ ಆಯ್ಕೆಯ ಅಭ್ಯರ್ಥಿ ಹೆಸರನ್ನು ಸೂಚಿಸಿದ್ದರು. ಅದರಲ್ಲಿ ಶೇ 73ರಷ್ಟು ಜನರು ಇಸುದಾನ್ ಗಡ್ವಿ ಅವರ ಹೆಸರನ್ನು ಸೂಚಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಗುಜರಾತ್‌ನಲ್ಲಿ ಕೇಜ್ರಿವಾಲ್ ಆಂದೋಲನ ಗಡ್ವಿ ಅವರು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಅದರ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರೂ ಆಗಿದ್ದಾರೆ.

ಗುಜರಾತ್ ಎಎಪಿ ಘಟಕದ ಅಧ್ಯಕ್ಷ ಗೋಪಾಲ್ ಇಟಲಿಯಾ ಅವರ ಹೆಸರು ಕೂಡ ಸಿಎಂ ಅಭ್ಯರ್ಥಿ ಸ್ಥಾನದಲ್ಲಿ ಚಾಲ್ತಿಯಲ್ಲಿತ್ತು. ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದೆ. ಡಿಸೆಂಬರ್ 1 ಮತ್ತು 5ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ಪ್ರಕಟಿಸಿತ್ತು. ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.