Thursday, 12th December 2024

ಸರಕಾರಿ ನೌಕರರ ಹಿತ ಕಾಪಾಡುವುದೇ ಸಂಘಟನೆ ಉದ್ದೇಶ: ಷಡಾಕ್ಷರಿ

ತುಮಕೂರು: ರಾಜ್ಯ ಸರಕಾರಿ ನೌಕರರ ಸಂಘಟನೆ ನೌಕರರ ಅಖಂಡ ಸಂಘಟನೆಯಾಗಿದೆ. ಎಲ್ಲ ನೌಕರರ ಹಿತ ಕಾಪಾಡುವುದೇ ಸಂಘಟನೆಯ ಉದ್ದೇಶ ಮತ್ತು ಗುರಿಯಾಗಿದೆ. ಅಧಿಕಾರ ಸಿಕ್ಕ ಸಂದರ್ಭದಲ್ಲಿ ನೌಕರರ ಧ್ವನಿಯಾಗಿ ಬೆಳಕಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.

ನಗರಕ್ಕೆ ಸಮೀಪ ಹೆಗ್ಗೆರೆಯ ಹೆಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ಅಧಿಕಾರಿಗಳ ಮತ್ತು ನೌಕರರ ಸಂಘ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ತುಮ ಕೂರು ಜಿಲ್ಲೆ ಇವರ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ನಮಗೆ ಸಮಸ್ಯೆಗಳು ಇದ್ದಾಗ, ನಮ್ಮ ಬೇಡಿಕೆಗಳು ಈಡೇರದೇ ಇದ್ದಾಗ ನಾವು ಸಂಘಟಿತರಾಗುವುದನ್ನು ನೋಡಿದ್ದೇವೆ. ಆದರೆ ತುಮಕೂರು ವಿಭಿನ್ನವಾಗಿರುವ ಜಿಲ್ಲೆ, ಇಡೀ ರಾಜ್ಯದಲ್ಲಿ ನೌಕರರು ಎಲ್ಲಾ ಇಲಾಖೆಗಳಲ್ಲೂ ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಂಡರೆ ತುಮಕೂರು ಜಿಲ್ಲೆಯಲ್ಲಿ ಮಾತ್ರ ನೌಕರರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಕಳೆದ ಐದಾರು ವರ್ಷಗಳಿಂದ ತನಗೆ ಸರ್ಕಾರದ ಇಲಾಖೆಯಿಂದ ನಿಗಧಿಪಡಿಸಿರುವ ಸೌಲಭ್ಯಗಳನ್ನು ಪಡೆಯಲು ಮೇಲಧಿ ಕಾರಿಗಳು ಬಿಡುತ್ತಿಲ್ಲ ಎಂಬ ಬಗ್ಗೆ ತುಮಕೂರು ಜಿಲ್ಲೆಯ ಓರ್ವ ಪಿಡಿಒ ನನ್ನ ಹತ್ತಿರ ಬಂದು ತಮ್ಮ ಅಳಲನ್ನು ತೋಡಿ ಕೊಂಡಾಗ ನನಗೆ ನೋವುಂಟಾಯಿತು ಎಂದರು.

ಸಮಸ್ಯೆ ಬಗೆಹರಿಸದ ಮೇಲಧಿಕಾರಿಗಳು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆರ್‌ಡಿಪಿಆರ್ ಇಲಾಖೆ ನೌಕರರು ತಮ್ಮ ಸಮಸ್ಯೆ ಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಂಡರೆ ತುಮಕೂರು ಜಿಲ್ಲೆ ಮಾತ್ರ ಇದಕ್ಕೆ ವಿಭಿನ್ನವಾಗಿದೆ. ಸರ್ಕಾರದ ಇಲಾಖೆಯು ತನ್ನ ಆಡಳಿತದ ಇತಿಮಿತಿಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಬಹುದಾದಂತಹ ಸಮಸ್ಯೆಗಳನ್ನು ಇಲ್ಲಿನ ಮೇಲಧಿ ಕಾರಿಗಳು ಬಗೆಹರಿಸುತ್ತಿಲ್ಲವೆಂದರೆ ಇದು ಅವರೇ ಸರ್ಕಾರವೋ, ಇಲ್ಲ ಅವರು ಹೇಳಿದ್ದೇ ಕಾನೂನೋ ಎಂಬುದೇ ಗೊತ್ತಿಲ್ಲ. ನೌಕರರ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ ಎಂದು ಜಿಲ್ಲೆಯ ಆಡಳಿತದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಮೇಲಧಿಕಾರಿಯಿಂದ ಶೋಷಣೆ: ತುಮಕೂರಿನ ಆರ್‌ಡಿಪಿಆರ್ ಇಲಾಖೆಯ ನೌಕರರು ಪದೋನ್ನತಿಗಾಗಿ ಕಪ್ಪುಪಟ್ಟಿ ಧರಿಸಿ ಇಲಾಖೆ ಮುಂದೆ ಧರಣಿ ನಡೆಸಿದರೂ ಜಿಲ್ಲೆಯ ಅಧಿಕಾರಿ ಇದಾವುದಕ್ಕೂ ತಲೆಕೆಡಿಸಕೊಂಡಿಲ್ಲ, ಇಲಾಖೆಯ ನೌಕರರನ್ನು ರಕ್ಷಿಸ ಬೇಕಾದಂತ ಜಿಲ್ಲೆಯ ಅಧಿಕಾರಿ ನೌಕರರಿಗೆ ರಕ್ಷಣೆ ಕೊಡಲಿಲ್ಲ, ಶೋಷಣೆ ಮಾಡಲಿಕ್ಕೆ ಶುರುಮಾಡಿದರು.

ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದೆವು, ನಂತರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆವು, ಆದರೂ ಜಿಲ್ಲೆಯ ಅಧಿಕಾರಿ ಅದಕ್ಕೆ ಸೊಪ್ಪೇ ಹಾಕಲಿಲ್ಲ, ಯಾವ ಮಟ್ಟಕ್ಕೆ ಈ ಜಿಲ್ಲೆಯಲ್ಲಿ ಆಡಳಿತ ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ. ಕೊನೆಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಸಮಸ್ಯೆ ಬಗೆಹರಿಯಿತು ಎಂದು ತಿಳಿಸಿದರು.

ನಿಮ್ಮ ಜೊತೆ ಹೋರಾಟಕ್ಕೆ ನಾನು ಸಿದ್ಧ
ಪದೋನ್ನತಿ, ವೇತನ ವಿಳಂಬ, ಜೇಷ್ಠತಾ ಪಟ್ಟಿ ನವೀಕರಿಸಿಲ್ಲ, ಇಲಾಖೆ ವಿಚಾರಗಳು, ಕಾಲಕಾಲಕ್ಕೆ ತರಬೇತಿ, ವೈದ್ಯಕೀಯ ವೆಚ್ಚ ಮತ್ತಿತರೆ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂಬ ಆರೋಪಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ. ಆದರೆ ಮೇಲಧಿಕಾರಿಗಳು ಮಾತ್ರ ಈ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ, ನಿಮ್ಮ ಜೊತೆ ನಾನಿದ್ದೇನೆ, ನಿಮ್ಮ ಜೊತೆ ಹೋರಾಟಕ್ಕಿಳಿಯುತ್ತೇನೆ ಸಮಸ್ಯೆ ಬಗೆಹರಿಯು ವವರೆಗೂ ಬಿಡಲ್ಲ ಎಂದು ಆತ್ಮವಿಶ್ವಾಸ ತುಂಬಿದರು.

ಸಂಘಟನೆ ಒಂದು ಉದ್ಯೋಗವಲ್ಲ, ಅದು ಸಾಮಾಜಿಕ ಜವಾಬ್ದಾರಿ, ಈ ರೀತಿಯ ಸಾಮಾಜಿಕ ಜವಾಬ್ದಾರಿಯನ್ನು ನೀವೆಲ್ಲರೂ ಕೊಟ್ಟಂತಹ ಸಂದರ್ಭದಲ್ಲಿ ನಾವು ನೌಕರರ ಪರವಾಗಿ, ನೌಕರರ ಧ್ವನಿಯಾಗಿ ನೌಕರರ ಬೆಳಕಾಗಿ, ನೌಕರರ ಕ್ಷೇಮಾಭಿವೃದ್ಧಿ ಗಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು.

ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವೆಂದರೆ 78 ಇಲಾಖೆಯ ಸುಮಾರು 6 ಲಕ್ಷ ಸರ್ಕಾರಿ ನೌಕರರ ಜೊತೆಗೆ ಅವರನ್ನವಲಂಬಿಸಿರುವ 22 ಲಕ್ಷ ಕುಟುಂಬಗಳ ಜವಾಬ್ದಾರಿಯನ್ನು ನಿರ್ವಹಿಸುವಂತಹ ಸಂದರ್ಭದಲ್ಲಿ ನಾವು ನಿಮ್ಮೆಲ್ಲರ ಸಮಸ್ಯೆಗೆ ಕೆಲಸವನ್ನು ಮಾಡಬೇಕಾಗುತ್ತದೆ. ಇಂದು ಸಣ್ಣ ಸಣ್ಣ ಇಲಾಖೆಗಳು ಈ ರೀತಿಯ ಸಮಸ್ಯೆಗಳನ್ನು ನೀಡುವಂತಹ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅತ್ಯಂತ ದೊಡ್ಡ ಇಲಾಖೆ, ಶಿಕ್ಷಣ, ಆರೋಗ್ಯ ಮತ್ತು ಕಂದಾಯ ಇಲಾಖೆ ಹೊರತುಪಡಿಸಿದರೆ ಅತಿ ಹೆಚ್ಚಿನ ಸಂಖ್ಯೆಯನ್ನು ಹೊಂದಿರುವ ಯಾವುದಾದರೂ ಇಲಾಖೆಯಿದ್ದರೆ ಅದು ಗ್ರಾಮೀಣಾಭಿವೃದ್ಧಿ ಇಲಾಖೆ ಎಂದು ಹೇಳಬಹುದು.

ಬಿಲ್ ಕಲೆಕ್ಟರ್, ಕಾರ್ಯದರ್ಶಿ, ಡಾಟಾ ಎಂಟ್ರಿ ಆಪರೇಟರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ನಿರ್ದೇಶ ಕರು, ಎಲ್ಲರೂ ಕೂಡ ಮಹಾತ್ಮಗಾಂಧಿಜಿಯವರ ಗ್ರಾಮರಾಜ್ಯದ ಕನಸನ್ನು ನನಸು ಮಾಡುವ ಅತ್ಯಂತ ಗುರುತರವಾದ ಜವಾ ಬ್ದಾರಿಯನ್ನು ಹೊಂದಿರುವAತಹವರು, ಇಂತಹ ಆರ್‌ಡಿಪಿಆರ್ ಇಲಾಖೆಯ ನೌಕರರ ಸಮಸ್ಯೆಗಳನ್ನು ಬಗೆಹರಿಸ ಬೇಕಾದದ್ದು, ಆಯಾ ಜಿಲ್ಲೆಗಳ ಮೇಲಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ, ಖಜಾಂಚಿ ಆರ್.ಶ್ರೀನಿವಾಸ್, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಜೆ.ಸಿ.ಐ. ಸಂಸ್ಥೆಯ ಮಾಜಿ ರಾಜ್ಯಾಧ್ಯಕ್ಷ ಟಿ.ವಿ.ಎನ್.ಮೂರ್ತಿ ಅವರು ವೃತ್ತಿಪರ ಶ್ರೇಷ್ಠತೆ ಕುರಿತು ವಿಶೇಷ ಕಾರ್ಯಾಗಾರ ನಡೆಸಿಕೊಟ್ಟರು. ಸಂಘದ ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜು ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ಮೈಸೂರು ವಿವಿಯ ಆರ್.ಶಿವಪ್ಪ, ದಾವಣಗೆರೆ ವಿವಿಯ ಶರಣಪ್ಪ ವಿ.ಹಲಸಿ, ನಿವೃತ್ತ ಐಎಎಸ್ ಅಧಿಕಾರಿ ಶ್ರೀರಂಗಯ್ಯ, ಹನುಮನರಸಯ್ಯ, ಕೃಷ್ಣಪ್ಪ, ಡಿ.ಕೆ.ರಮೇಶ್, ಬೋರೇಗೌಡ, ರಾಘವೇಂದ್ರ ಕಾರ‍್ಲ, ಉತ್ತಮ್, ನಾಗಭೂಷಣ್, ಶಮ್ಷೀರ್, ಮಂಜುನಾಥ್, ರಾಜೇಶ್, ನಾಗರಾಜು, ಗುರುಮೂರ್ತಿ, ಪ್ರಭಣ್ಣ, ಸುರೇಶ್, ಪದ್ಮನಾಭ್ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ಅಧಿಕಾರಿಗಳ ಮತ್ತು ನೌಕರರ ಸಂಘ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಪದಾಧಿಕಾರಿಗಳು, ನೌಕರರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.