Thursday, 12th December 2024

ಇದು ಕರ್ನಾಟಕದ ಹಾಗೂ ಕನ್ನಡಿಗರ ಹಿತ ಕಾಯುವ ಚಳವಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಮಾಡಿರುವ ಅನ್ಯಾಯದ ವಿರುದ್ಧ ನವದೆಹಲಿಯಲ್ಲಿ ಪ್ರತಿಭಟನೆ

ನವದೆಹಲಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯದ ವಿರುದ್ಧ ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿರುವ ಹೋರಾಟ ಕರ್ನಾಟಕದ, ಕನ್ನಡಿಗರ ಹಿತ ಕಾಪಾಡುವ ಚಳವಳಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ಇದು ರಾಜಕೀಯ ಚಳವಳಿ ಅಲ್ಲ: ಕಳೆದ ಐದಾರು ವರ್ಷಗಳಲ್ಲಿ 1,87,000 ಕೋಟಿ ರೂ.ಗಳಷ್ಟು ನ್ಯಾಯಯುತವಾಗಿ ಬರಬೇಕಾಗಿದ್ದ ಅನುದಾನ ವನ್ನು ರಾಜ್ಯಕ್ಕೆ ನೀಡಲಾಗಿಲ್ಲ. ಈ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗುತ್ತಿದೆ.ಜಂತರ್ ಮಂತರ್ ಐತಿಹಾಸಿಕ ಸ್ಥಳವಾಗಿದ್ದು, ಅನೇಕ ಚಳವಳಿಗೆ ಸಾಕ್ಷಿಯಾದ ಸ್ಥಳ. ಇಂತಹ ಜಾಗದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು, ಶಾಸಕರು ಈ ಹೋರಾಟದಲ್ಲಿ ಭಾಗವಹಿಸಿ ದ್ದಾರೆ. ಇದು ರಾಜಕೀಯ ಚಳವಳಿ ಅಲ್ಲ. ಕೇಂದ್ರ ಸರ್ಕಾರದ ವಿರುದ್ಧದ ಈ ಹೋರಾಟವನ್ನು ಪಕ್ಷಾತೀತವಾಗಿ ಮಾಡಬೇಕೆಂಬ ಮನವಿಯನ್ನು ರಾಜ್ಯ ಬಿಜೆಪಿಯ ನಾಯಕರಿಗೂ ಮಾಡಲಾಗಿದೆ ಎಂದರು.

100 ರೂ. ಗಳಲ್ಲಿ ರಾಜ್ಯಕ್ಕೆ ಕೇವಲ 12 ರಿಂದ 13 ರೂ.

ಇದು ಐತಿಹಾಸಿಕವಾದ ಪ್ರತಿಭಟನೆ. 14 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು 4.71 % ಬಂದಿತ್ತು. 15 ನೇ ಹಣಕಾಸು ಆಯೋಗದಲ್ಲಿ 3.64 % ಕ್ಕೆ ಇಳಿಯಿತು. ಇದರಿಂದ ರಾಜ್ಯಕ್ಕೆ ಬರುವ ತೆರಿಗೆಯಲ್ಲಿ ಶೇ. 40 ರಿಂದ 45 ರವರೆಗೆ ಕಡಿತವಾಗಿದೆ. ಒಟ್ಟಾರೆಯಾಗಿ 14 ನೇ ಹಣಕಾಸು ಆಯೋಗದ ಶಿಫಾರಸ್ಸನ್ನೇ 15 ನೇ ಹಣಕಾಸು ಆಯೋಗದಲ್ಲಿ ಅನುಸರಿಸಿದ್ದರೆ, ರಾಜ್ಯಕ್ಕೆ 62,098 ಕೋಟಿ ರೂ. ರಾಜ್ಯಕ್ಕೆ ಬರುತ್ತಿತ್ತು. ರಾಜ್ಯದಿಂದ ಒಟ್ಟು 4,30,000 ಕೋಟಿ ತೆರಿಗೆ ಮೊತ್ತವನ್ನು ಕೇಂದ್ರಕ್ಕೆ ನೀಡಲಾಗುತ್ತದೆ. ಅಂದರೆ 100 ರೂ. ತೆರಿಗೆಯಲ್ಲಿ ರಾಜ್ಯಕ್ಕೆ ಕೇವಲ 12 ರಿಂದ 13 ರೂ. ದೊರೆಯುತ್ತಿದೆ. ಇದು ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ. ಕರ್ನಾಟಕದಿಂದ 25 ಸಂಸದರು ಆಯ್ಕೆಯಾಗಿದ್ದು, ಒಬ್ಬರೂ ಈ ಬಗ್ಗೆ ಕೇಂದ್ರ ಮುಂದೆ ಮಾತನಾಡಿಲ್ಲ. ಅಲ್ಲದೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿಯವರು ಈ ಅನ್ಯಾಯವನ್ನು ಸರಿಪಡಿಸುವ ಮನವಿ ಮಾಡಿರುವುದಿಲ್ಲ. ಈ ಎಲ್ಲ ಕಾರಣಗಳಿಗಾಗಿ ಇಂದು ನವದೆಹಲಿಯಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಉತ್ತರಪ್ರದೇಶ ರಾಜ್ಯಕ್ಕೆ 2,80,000 ಕೋಟಿ ರೂ. ಕೇಂದ್ರ ನೀಡುತ್ತಿದೆ. ಅಂತೆಯೇ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನಗಳಿಗೂ ನೀಡಲಾಗುತ್ತಿದೆ. ಈ ಯಾವ ರಾಜ್ಯಗಳೂ ಜನಸಂಖ್ಯಾ ನಿಯಂತ್ರಣದ ಬಗ್ಗೆ ಕ್ರಮ ಕೈಗೊಂಡಿಲ್ಲ. ಜನಸಂಖ್ಯೆ, ತಲಾ ಆದಾಯ, ಸಮುದಾಯಗಳ ಅಭಿವೃದ್ಧಿ ಸೇರಿದಂತೆ ಹಲವು ಮಾನದಂಡಗಳಿಂದ ಅನುದಾನ ಹಂಚಿಕೆಯನ್ನು ನಿರ್ಧರಿಸಲಾಗುತ್ತದೆ. 15 ನೇ ಹಣಕಾಸು ಆಯೋಗದಲ್ಲಿ 2011ರ ಜನಗಣತಿಯನ್ನು ಪರಿಗಣಿ ಸುತ್ತಿದ್ದಾರೆ ಎಂದು ತಿಳಿಸಿದರು.