ಅನಿಸಿಕೆ
ನಾಗರಾಜ್ ಬಿ.ಚಿಂಚರಕಿ
ಹಿಂದಿನ ಕಲ್ಯಾಣ ಕರ್ನಾಟಕವು ಹೈದರಾಬಾದ್ ಸಂಸ್ಥಾನಕ್ಕೆ ಒಳಪಟ್ಟಿದ್ದು ರಾಜ್ಯದ ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿತ್ತು. 1947ರ ಆಗಸ್‌ಟ್ 15ರಂದು ಸ್ವತಂತ್ರವಾದಾಗ ನಿಜಾಮನು ಭಾರತ ಒಕ್ಕೂಟಕ್ಕೆ ಸೇರದೆ ಪಾಕಿಸ್ತಾನದ ಬೆಂಬಲದಿಂದ ಸ್ವತಂತ್ರನಾಗಿರುತ್ತೇನೆ ಎಂದು ಹಠ ಹಿಡಿದಿದ್ದರ ಪರಿಣಾಮ 1947ರಿಂದ 1948
ಸೆಪ್ಟೆೆಂಬರ್‌ವರೆಗೆ ಅನೇಕ ದುರಂತಗಳಿಗೆ ಈ ಭಾಗ ಸಾಕ್ಷಿಯಾಯಿತು.
ಪ್ರತಿಯೊಂದು ಆರಂಭಕ್ಕೂ ಅಂತ್ಯವಿರುತ್ತದೆ ಎನ್ನುವಂತೆ ನಿಜಾಮನ ಹಾವಳಿ ಎಲ್ಲೆ ಮೀರಿದಾಗ 1948ರ ಸೆಪ್ಟೆೆಂಬರ್ 13ರಂದು
ಅಂದಿನ ಗೃಹಮಂತ್ರಿಗಳಾಗಿದ್ದ ಉಕ್ಕಿನ ಮನುಷ್ಯ ಸರದಾರ ವಲ್ಲಭ ಬಾಯಿ ಪಟೇಲರು ಆಪರೇಷನ್ ಪೋಲೊ ಹೆಸರಿನಲ್ಲಿ ಮಿಂಚಿನ ಪೊಲೀಸ್ ಕಾರ್ಯಾಚರಣೆಗೊಂಡು ಕೇವಲ ಐದು ದಿನಗಳಲ್ಲಿ ಅಂದರೆ ಸೆಪ್ಟೆೆಂಬರ್ 17,1948ರಂದು ಹೈದರಾಬಾದ್ ಸಂಸ್ಥಾನವನ್ನು ಭಾರತದೊಳಕ್ಕೆ ಲೀನಗೊಳಿಸುವಲ್ಲಿ ಸಫಲರಾದರು.
ಕರ್ನಾಟಕ ಏಕೀಕರಣವಾದಾಗ ಕನ್ನಡ ಭಾಷಿಕರ ಈ ಐದು ಜಿಲ್ಲೆೆಗಳನ್ನು ಮೈಸೂರು ರಾಜ್ಯಕ್ಕೆ (ಕರ್ನಾಟಕ) ಸೇರಿಸಲಾಯಿತು. ಇನ್ನು ಮುಂದಾದರೂ ನಾವು ಅಭಿವೃದ್ಧಿ ಹೊಂದಬಹುದೆಂದು ಕಂಡಿದ್ದ ಕನಸು ಈಗ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಿದ ಕಾಲದಲ್ಲಿಯೂ ಕನಸಾಗಿಯೇ ಉಳಿದಿರುವುದು ವಿಪರ್ಯಾಸ. ಅಭಿವೃದ್ಧಿ ಎಂದರೆ ಕೇವಲ ರಾಜಧಾನಿ
ಮತ್ತದರ ಸುತ್ತಲ ಪ್ರದೇಶಗಳನ್ನು ಮಾತ್ರ ಕೇಂದ್ರೀಕರಿಸಿಕೊಂಡಿರುವ ನಮ್ಮ ನಾಯಕರಿಗೆ ಬೆಂಗಳೂರಿನಿಂದ ನೂರಾರು ಕಿ.ಮೀ ದೂರದಲ್ಲಿರುವ ಕಲ್ಯಾಣ ಕರ್ನಾಟಕ ಏನಿದ್ದರು ಕಟ್ಟಕಡೆಯ ಆಯ್ಕೆ !
ಯಾವುದೇ ಒಂದು ಭಾಗವು ಅಭಿವೃದ್ಧಿ ಹೊಂದಬೇಕಾದರೆ ಮೊದಲು ಅಲ್ಲಿಯ ಶಿಕ್ಷಣ ವ್ಯವಸ್ಥೆಯನ್ನು ಗುಣಪಡಿಸಬೇಕು. ಸಾರಿಗೆಗೆ ಬಲ ತುಂಬಬೇಕು, ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು. ಆ ಮೂಲಕ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಕೆಲಸಗಳಾಗಬೇಕು. ಹೀಗೆ ಸೇವಾ ಮನೋಭಾವದಿಂದ ಹತ್ತು ಹಲವು ಸಮಾಜಮುಖಿ ಕಾರ್ಯಗಳು ಜರುಗಬೇಕು. ಅದನ್ನೆಲ್ಲ ಬಿಟ್ಟು ಬರಿ ಬಾಯಿ ಮಾತಿನಲ್ಲೆ ಬಡಾಯಿ ಕೊಚ್ಚಿಕೊಳ್ಳುವುದಾಗಿದೆ. ಪ್ರಾದೇಶಿಕ ಅಸಮತೋಲನದ ಬಗ್ಗೆ
ಅಧ್ಯಯನ ಮಾಡಲು ರಚಿಸಲಾಗಿದ್ದ ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ ಒಟ್ಟು 28 ಹಿಂದುಳಿದ ತಾಲೂಕುಗಳಿವೆ. ಹಾಗೆಯೇ ಇದೆ ಸಮಿತಿಯು ರಾಯಚೂರಿನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು (ಐಐಟಿ) ಸ್ಥಾಪಿಸುವಂತೆ ಶಿಫಾರಸ್ಸು ಮಾಡಿತ್ತು. ಆದರೆ ದೇವರು ವರ ಕೊಟ್ಟರೂ ಪೂಜಾರಿ ಕೊಡ ಎಂಬಂತೆ ಕೊನೆಘಳಿಗೆಯಲ್ಲಿ ಐಐಟಿ ರಾಯಚೂರಿನ ಕೈ ತಪ್ಪಿತು.
ಐಐಟಿಗೆ ಹೋಲಿಸಿದರೆ ಅಷ್ಟೇನು ಮಹತ್ವದ್ದಲ್ಲದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು (ಐಐಐಟಿ) ಮಂಜೂರು ಮಾಡಲಾಗಿದೆ. ಇನ್ನು ಇದೀಗ ರಾಜ್ಯಕ್ಕೆ ಮಂಜೂರಾಗಿರುವ ಭಾರತೀಯ ವೈದ್ಯಕೀಯ ಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನಾದರು ನಮ್ಮಲ್ಲಿ ಸ್ಥಾಪಿಸಬೇಕೆಂಬ ಕೂಗು ರಾಯಚೂರಿನಲ್ಲಿ ಜೋರಾಗಿ ಕೇಳಿ ಬರುತ್ತಿ ದೆ. ಈ ಭಾಗದ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ನೀಡುವ ಸಂವಿಧಾನದ 371 (ಜೆ) ಕಲಂನ ಉಪಯೋಗ ಇನ್ನು ಹೆಚ್ಚಿನ ರೀತಿಯಲ್ಲಿ ಆಗಬೇಕಿದೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟವಾದಾಗ ಕೊನೆಯಿಂದ ಟಾಪ್ ಹತ್ತರೊಳಗಿನ ಸ್ಥಾನಗಳು ಕಲ್ಯಾಣ ಕರ್ನಾಟಕಕ್ಕೆ ಮೀಸಲು ಎನ್ನುವಷ್ಟು ಸಾಮಾನ್ಯವಾಗಿದೆ.
ಜಿಲ್ಲಾ ಕೇಂದ್ರಗಳನ್ನು ಹೊರತುಪಡಿಸಿದರೆ ಹೆಚ್ಚಿನ ರೈಲು ಮಾರ್ಗಗಳಿಲ್ಲ, ಕಲಬುರ್ಗಿಯಲ್ಲಿ ರೈಲ್ವೆ ವಲಯ ಸ್ಥಾಪಿಸಬೇಕೆಂಬ ಕೂಗಿಗೆ ಧ್ವನಿ ಬಂದಿಲ್ಲ, ಈ ಭಾಗದ ಗ್ರಾಮೀಣ ಪ್ರದೇಶಗಳು ಪಕ್ಕಾ ರಸ್ತೆಗೆ ಪರದಾಡುವ ಸ್ಥಿತಿ ಇದೆ. ಬೃಹತ್ ಕೈಗಾರಿಕೆಗಳು ಬೆಂಗಳೂರಿಗೆ ಹೋಲಿಸಿದರೆ ಇಲ್ಲವೆನ್ನುವಷ್ಟು ಕಡಿಮೆ ಸಂಖ್ಯೆಯಲ್ಲಿವೆ. ಕೃಷಿ ಮಾಡೋಣವೆಂದರೆ ಎಲ್ಲರಿಗೂ ಭೂಮಿ ಇಲ್ಲ.