Friday, 22nd November 2024

ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಭೂಕುಸಿತ

ಡೆಹೆರಾಡೂನ್: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಗೌರಿಕುಂಡ್ ಬಳಿ ದೊಡ್ಡ ಭೂಕುಸಿತ ಸಂಭವಿಸಿದೆ.

ಭೂಕುಸಿತದ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ (ಎಸ್ಡಿಆರ್‍ಎಫ್) ತಂಡವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

ರುದ್ರಪ್ರಯಾಗ ವಿಪತ್ತು ನಿರ್ವಹಣೆಯ ಅಧಿಕಾರಿಯ ಪ್ರಕಾರ, ಭೂಕುಸಿತದಲ್ಲಿ 10 ರಿಂದ 12 ಜನರು ಸಿಲುಕಿ ರುವ ಅಥವಾ ಕೊಚ್ಚಿಹೋಗಿರುವ ಭೀತಿಯಿದೆ ಎಂದಿದ್ದಾರೆ. ಗೌರಿಕುಂಡ್ ಪೋಸ್ಟ್ ಸೇತುವೆ ಬಳಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಭೂಕುಸಿತದಿಂದ ಮೂರು ಅಂಗಡಿಗಳು ಹಾನಿಗೀಡಾಗಿವೆ ಎಂದು ವರದಿ ಯಾಗಿದೆ. ರುದ್ರಪ್ರಯಾಗದ ಎಸ್ಪಿ ಡಾ.ವಿಶಾಖಾ ಅವರು, ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದಿದ್ದಾರೆ.

ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು 3 ಅಂಗಡಿಗಳು ಹಾನಿಗೊಳಗಾಗಿವೆ. ತಕ್ಷಣ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಸುಮಾರು 10-12 ಜನರು ಅಲ್ಲಿದ್ದರು ಎಂದು ಹೇಳಲಾಗಿದೆ. ಆದರೆ ಇದುವರೆಗೆ ಅವರು ಪತ್ತೆಯಾಗಿಲ್ಲ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ದಲೀಪ್ ಸಿಂಗ್ ರಾಜ್ವರ್ ತಿಳಿಸಿದ್ದಾರೆ.

ಪಾರ್ವತಿ ದೇವಿಯ ಹೆಸರನ್ನು ಇಡಲಾಗಿರುವ ಗೌರಿಕುಂಡ್ ಪ್ರಮುಖ ಯಾತ್ರಾ ಸ್ಥಳವಾಗಿದೆ. ಇದು ಕೇದಾರನಾಥ ದೇವಾಲಯ ಚಾರಣಕ್ಕಾಗಿ ಹೋಗುವವರಿಗೆ ಮೂಲ ಶಿಬಿರವಾಗಿಯೂ ಕಾರ್ಯನಿರ್ವಹಿಸುತ್ತದೆ. ಮಳೆಗಾಲದ ನಡುವೆ ಕೇದಾರನಾಥ ದೇಗುಲಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಳೆ ಸಂಬಂಧಿತ ಘಟನೆಗಳಿಂದ ಕೆಲವೊಮ್ಮೆ ಯಾತ್ರೆಯನ್ನು ಸ್ಥಗಿತ ಮಾಡಲಾಗುತ್ತಿದೆ.