Friday, 22nd November 2024

ಸ್ವರ್ಣಮಂದಿರದ ಬಳಿ ಖಾಲಿಸ್ತಾನ್ ಪರ ಘೋಷಣೆ !

ಅಮೃತಸರ: ಪಂಜಾಬ್‌ನ ಅಮೃತಸರದ ಸ್ವರ್ಣಮಂದಿರದ ಬಳಿ ಜಮಾಯಿಸಿ ರುವ ಗುಂಪು ಸೋಮವಾರ ಖಾಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದ ಘಟನೆ ನಡೆದಿದೆ.

1984ರಲ್ಲಿ ಭಾರತೀಯ ಸೇನೆ ಕೈಗೊಂಡಿದ್ದ ‘ಆಪರೇಷನ್ ಬ್ಲೂಸ್ಟಾರ್‌’ ಕಾರ್ಯಾ ಚರಣೆಯ 38ನೇ ವಾರ್ಷಿಕೋತ್ಸವ ದಿನವಾದ ಸೋಮವಾರ ಘಟನೆ ನಡೆದಿದೆ.

ಸ್ವರ್ಣಮಂದಿರದ ಬಳಿ ಸೇರಿದ್ದ ಗುಂಪು ಖಾಲಿಸ್ತಾನಿ ಪ್ರತ್ಯೇಕತಾವಾದಿ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆ ಪರ ಫಲಕಗಳನ್ನೂ ಪ್ರದರ್ಶಿಸಿತು. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯ ಮಂತ್ರಿ ಭಗವಂತ್ ಮಾನ್ ಕಳೆದ ವಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಕುರಿತು ಸಭೆ ನಡೆಸಿ ಪರಾಮರ್ಶೆ ಮಾಡಿದ್ದರು. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಸ್ವರ್ಣಮಂದಿರಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರಕ್ಕಾಗಿ ವಿಧ್ವಂಸಕ ಮಾರ್ಗ ಹಿಡಿದಿದ್ದ ಬಂಡುಕೋರರ ನಾಯಕ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆ, ಸಿಖ್ಖರ ಪವಿತ್ರ ಕ್ಷೇತ್ರ ಅಮೃತಸರದ ಸ್ವರ್ಣಮಂದಿರವನ್ನೇ ಆಶ್ರಯ ತಾಣವಾಗಿಸಿಕೊಂಡಿದ್ದ. ಶಸ್ತ್ರಾಸ್ತ್ರಗಳೊಂದಿಗೆ ಅಡಗಿ ಕೊಂಡಿದ್ದ ಬಂಡುಕೋರರನ್ನು ಹೊರದಬ್ಬಲು ಭಾರತೀಯ ಸೇನೆಯು 1984ರ ಜೂನ್‌ 3ರಿಂದ 8ರವರೆಗೆ ‘ಆಪರೇಷನ್‌ ಬ್ಲೂಸ್ಟಾರ್‌’ ಎಂಬ ಹೆಸರಿನ ಕಾರ್ಯಾಚರಣೆ ನಡೆಸಿತ್ತು.

ಆಗಿನ ಪ್ರಧಾನಿ ಇಂದಿರಾಗಾಂಧಿ ಕಾರ್ಯಾಚರಣೆಗೆ ಆದೇಶ ನೀಡಿದ್ದರು. ಇದರಲ್ಲಿ ಭಿಂದ್ರನ್‌ವಾಲೆ ಹತನಾಗಿದ್ದ.