Saturday, 14th December 2024

ಬೇಸಿಗೆ ಕಿಡ್ನಿ ಸ್ಟೋನ್‌ಗೆ ಸಕಾಲ, ಇರಲಿ ಎಚ್ಚರ

ಡಾ. ರಂಗೇಗೌಡ.ಬಿ.ಸಿ 
ಎಂಎಸ್, ಡಿಎನ್ಬಿ(ಯೂರಾಲಜಿ), ಯೂರಾಲಜಿಸ್ಟ್ ಹಾಗೂ ಟ್ರಾನ್ಸ್‌ಪ್ಲಾಂಟ್ ಸರ್ಜನ್

ಬೇಸಿಗೆ ಕಾಲದಲ್ಲಿ ಬಿಸಿಲಿನ ತೀಕ್ಷ್ಣತೆಯ ಜತೆಗೆ ಎಲ್ಲಿಯೂಸಿಗಾಳಿ, ನೀರಿನ ಕೊರತೆ ತೀವ್ರವಾಗಿ ಬೆವರುವುದನ್ನು ನೀವು ನೋಡುತ್ತಿದ್ದೀರಿ. ಇಡೀ ಪ್ರಕೃತಿ ವರುಣನ ಆಗಮನಕ್ಕೆ ಒಂದಡೆ ಕಾದು ಕುಳಿತಿದ್ದರೆ, ಮತ್ತೊಂದಡೆ ಜಾಗತಿಕ ತಾಪಮಾನ ದಲ್ಲಿ ಬದಲಾವಣೆಯಾದಂತೆ ಋತುಗಳ ವ್ಯತ್ಯಾಸವೂ ಆಗುತ್ತಲೇ ಇದೆ.

ಮನುಷ್ಯ ಪ್ರಕೃತಿಯ ಭಾಗವಾದ್ದರಿಂದ ಪರಿಸರದಲ್ಲಿ ಏನೇ ಬದಲಾವಣೆಯಾದರೂ ಅದು ಮನುಷ್ಯನ ದೇಹದ ಮೇಲೆ ಕೂಡ ಉಂಟಾಗುತ್ತಿದೆ. ಬೇಸಿಗೆಯೂ ಕೂಡ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಪ್ರಮುಖವಾಗಿ ಕಿಡ್ನಿ ಸಮಸ್ಯೆ ಹೊಂದಿದವರಿಗೆ ಇದೊಂದು ಸವಾಲಿನ ಸಮಯ ಎನ್ನಬಹುದು. ಬೇಸಿಗೆಯಲ್ಲಿ ಕಿಡ್ನಿಯ ಮೇಲೆ ಉಂಟಾಗಬಹು ದಾದ ಪರಿಣಾಮಗಳ ಬಗ್ಗೆ ನಮಗೆ ಅರಿವಿದ್ದರೆ ನಾವು ಕಿಡ್ನಿ ಸಮಸ್ಯೆಗಳಿಂದ ದೂರ ಇರಬಹುದು.

ಸಮ್ಮರ್ ಅಂದ್ರೆ ಕಿಡ್ನಿ ಸ್ಟೋನ್ ಸೀಸನ್
ಬೇಸಿಗೆಕಾಲವನ್ನು ನಾವು ಸ್ಟೋನ್ ಸೀಸನ್ ಎಂತಲೇ ಕರೆಯುತ್ತೇವೆ. ಸಾಕಷ್ಟು ನೀರಿನ ಕೊರತೆಯ ಕಾರಣದಿಂದ ಬಹಳ ಬೇಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುತ್ತವೆ. ಇದಕ್ಕೆ ಪ್ರಮುಖ ಕಾರಣ ಅತಿಯಾಗಿ ಬೆವರುವುದು ಕೂಡ ಆಗಿರುತ್ತದೆ. ದೇಹದ ನೀರಿನಂಶ ಬೆವರಿನ ಮೂಲಕ ಹೊರಹೋಗುವುದರಿಂದ ಮೂತ್ರದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿ ವಿವಿಧ ತ್ಯಾಜ್ಯಗಳು ಕಿಡ್ನಿಯಲ್ಲಿ ಶೇಖರ ಗೊಂಡು ಕಲ್ಲುಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ನೀರು ಸೇವನೆಯಲ್ಲೂ ಇರಲಿ ಸ್ಪಷ್ಟತೆ
ದಿನಂಪ್ರತಿ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕು ಎಂಬುದನ್ನು ಸಾಕಷ್ಟು ಓದಿರುತ್ತೀರಿ. ಆದರೆ ನಮಗೆ ನೀರು ಸೇವನೆಯಲ್ಲಿಯೂ ಕೂಡ ಸರಿಯಾದ ಸ್ಪಷ್ಟತೆ ಇರಬೇಕು. ಪ್ರತಿ ಗಂಟೆಗೆ ಅಥವಾ ನೀವು ನಿರ್ವಹಿಸುವ ಕೆಲಸ ಹಾಗೂ ದಣಿವಿನ ಸರಾಸರಿಯನ್ನು ಲೆಕ್ಕ ಹಾಕಿಕೊಂಡು ಆಗಾಗ್ಗೆ ನೀರು ಸೇವನೆ ಮಾಡುವುದು ಉತ್ತಮ.

ಸರಾಸರಿ ದಿನಕ್ಕೆ ಕನಿಷ್ಟ ಎರಡೂವರೆ ಲೀಟರ್ ಮೂತ್ರ ಉತ್ಪತ್ತಿಯಾಗುವಷ್ಟು ನೀರು ತೆಗೆದುಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ನೀರು ಕುಡಿಯುವುದು ಕೂಡ ಒಂದು ಕಲೆ. ನೀರಿನ ಜತೆಗೆ ನೈಸರ್ಗಿಕವಾಗಿ ಕಾಲಕಾಲಕ್ಕೆ ದೊರೆಯುವ ಹಣ್ಣುಗಳ ಪಾನೀಯವನ್ನೂ ಕೂಡ ಸೇವಿಸುವುದು ಉತ್ತಮ.

ಉಪ್ಪು ಕಡಿಮೆ ಮಾಡಿ
ಕಿಡ್ನಿ ಸಮಸ್ಯೆ ಹೊಂದಿರುವವರು, ಕಿಡ್ನಿ ಸಮಸ್ಯೆ ಬಾರದಿರುವಂತೆ ಹಾಗೂ ಕಿಡ್ನಿ ಕಲ್ಲು ತಡೆಗಟ್ಟಲು ಉಪ್ಪು ಕಡಿಮೆ ಮಾಡಿ. ಉಪ್ಪಿನಂಶ ಜಾಸ್ತಿಯಾದಾಗ ಅದು ಕಿಡ್ನಿಯಲ್ಲಿ ಕಲ್ಲು ಉಂಟಾಗಲು ಕಾರಣವಾಗುತ್ತದೆ. ಸಂಸ್ಕರಿಸಿದ ಪದಾರ್ಥಗಳಿಂದ ದೂರವಿರಬೇಕು. ಅತಿ ಸಕ್ಕರೆ ಬಳಸಿ ತಯಾರಿಸಲಾದ ಕೇಕ್, ಕೂಲ್ ಡ್ರಿಂಕ್ಸ್, ಸಿಹಿ ತಿಂಡಗಳು ಜತೆಗೆ ಅತಿ ಮಸಾಲೆಯುಕ್ತ ಆಹಾರಗಳಿಂದಲೂ ದೂರವಿದ್ದರೆ ಒಳ್ಳೆಯದು.

ಅತಿಯಾದ ಕಾಫಿ ಸೇವನೆ ಕೂಡ ಒಳ್ಳೆಯದಲ್ಲ. ಜತೆಗೆ ಧೂಮಪಾನ ಕೂಡ ಕಿಡ್ನಿಯ ಆರೋಗ್ಯಕ್ಕೆ ಕಂಟಕವಾಗಿರುತ್ತದೆ.

ಈಗಾಗಲೇ ಕಿಡ್ನಿ ವೈಫಲ್ಯ ಹೊಂದಿದ್ದೀರಾ?
ಕಿಡ್ನಿ ವೈಫಲ್ಯ, ಡಯಾಲಿಸಿಸ್ ಮಾಡಿಸಿಕೊಳ್ಳುವವರು ನೀರನ್ನು ಸೇವಿಸುವ ಪ್ರಮಾಣದಲ್ಲಿ ಎಚ್ಚರಿಕೆ ವಹಿಸಬೇಕು. ನಿಮ್ಮ ದಿನನಿತ್ಯದ ಮೂತ್ರದ
ಪ್ರಮಾಣ ಲೆಕ್ಕ ಹಾಕಿ ಅದರ ಮೇಲೆ ೫೦೦ ಎಂ.ಎಲ್. ದ್ರವವನ್ನು ತೆಗೆದುಕೊಳ್ಳಬಹುದು. ಇದಕ್ಕೆ ಖಂಡಿತ ವೈದ್ಯರ ಸಲಹೆಯನ್ನು ಪಡೆದು ಕೊಳ್ಳುವುದು ಉತ್ತಮ. ಪೊಟಾಶಿಯಂ ಹೆಚ್ಚಿರುವ ಆಹಾರ ಪದಾರ್ಥಗಳನ್ನು ನಿಯಂತ್ರಿಸಬೇಕು. ಮಾಂಸಾಹರ ಮಿತವಾಗಿರಲಿ ಅದರಲ್ಲಿಯೂ ರೆಡ್ ಮೀಟ್‌ನಿಂದ ದೂರವಿರಿ.

(ಲೇಖಕರು, ಕಳೆದ ೧೦ ವರ್ಷಗಳಿಂದ ರಾಜ್ಯದ ಹೆಸರಾಂತ ಮೂತ್ರರೋಗ ತಜ್ಞರಲ್ಲಿ ಒಬ್ಬರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ತುಮಕೂರು ಜಿಯಲ್ಲಿಯೇ ಮೊದಲ ಬಾರಿಗೆ ಯಶಸ್ವಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ನಡೆಸಿ ಹೆಸರುವಾಸಿಯಾಗಿದ್ದಾರೆ. ದಿನಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬರಹಗಳನ್ನು ಬರೆಯುವ ಮೂಲಕ ಸಕ್ರಿಯರು.)