Sunday, 15th December 2024

KSRTC Special Bus: ಗಣೇಶ ಚೌತಿಗೆ ಕೆಎಸ್‌ಆರ್‌ಟಿಸಿ ಗಿಫ್ಟ್‌, 1500 ಹೆಚ್ಚುವರಿ ಬಸ್‌

ksrtc special bus

ಬೆಂಗಳೂರು: ಗೌರಿ-ಗಣೇಶ ಹಬ್ಬದ (Ganesh Chaturthi) ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (KSRTC) ಸೆ.5 ರಿಂದ 7 ರವರೆಗೆ 3 ದಿನ ಬೆಂಗಳೂರಿನಿಂದ (bangalore) ವಿವಿಧ ಜಿಲ್ಲೆಗಳಿಗೆ 1500 ಹೆಚ್ಚುವರಿ ವಿಶೇಷ ಬಸ್‌ ಸೌಲಭ್ಯ (KSRTC Special bus) ಕಲ್ಪಿಸಲಾಗಿದೆ. ಜತೆಗೆ ಸೆ. 8 ರಂದು ಬೆಂಗಳೂರಿಗೆ ಬರಲು ವಿವಿಧ ರಾಜ್ಯ ಹಾಗೂ ಅಂತಾರಾಜ್ಯ ಕೇಂದ್ರಗಳಿಂದಲೂ ವಿಶೇಷ ಸಾರಿಗೆ ವ್ಯವಸ್ಥೆ ಇರಲಿದೆ.

ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ ಹಾಗೂ ವಾರಾಂತ್ಯ ಭಾನುವಾರ ರಜೆ ಹಿನ್ನೆಲೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್‌ಗಳು ಸೆ. 5ರಂದು ಕೆಂಪೇಗೌಡ ಬಸ್‌ ನಿಲ್ದಾಣದಿಂದ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌, ತಿರುಪತಿ, ವಿಜಯವಾಡ, ಹೈದರಾಬಾದ್‌ ಮುಂತಾದ ಸ್ಥಳಗಳಿಗೆ ಸಂಚರಿಸಲಿವೆ.

ಮೈಸೂರು ರಸ್ತೆ ಬಸ್‌ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವೀರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಕಾರ್ಯಾಚರಣೆ ನಡೆಸಲಿವೆ. ಶಾಂತಿನಗರದ ಬಿಎಂಟಿಸಿ ನಿಲ್ದಾಣದಿಂದ ತಮಿಳುನಾಡು ಮತ್ತು ಕೇರಳ ಕಡೆಗೆ ಮದುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿನಾಪಳ್ಳಿ, ಪಾಲಕ್ಕಾಡ್‌, ತ್ರಿಚೂರು, ಎರ್ನಾಕುಲಂ, ಕೋಯಿಕೋಡ್‌, ಕ್ಯಾಲಿಕಟ್‌ ಮುಂತಾದ ಸ್ಥಳಗಳಿಗೆ ತೆರಳಲಿವೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೆರಿಯಲ್ಲಿರುವ ನಿಗಮದ ಕೌಂಟರ್‌ಗಳ ಮೂಲಕ ಇಲ್ಲಿನ ಸಾರಿಗೆಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದು.

ಹೆಚ್ಚುವರಿ ಬಸ್‌ಗಳು, ಹೊರಡುವ ಸ್ಥಳ ಹಾಗೂ ವೇಳಾಪಟ್ಟಿ ವಿವರವನ್ನು ಮುಂಗಡ ಆಸನಗಳ ಕಾಯ್ದಿರಿಸುವ ಅಂತರ್ಜಾಲ ಹಾಗೂ ಕರಾರಸಾ ನಿಗಮದ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ. ನಿಗಮದ ಜಿಲ್ಲಾ ಹಾಗೂ ತಾಲೂಕು ವ್ಯಾಪ್ತಿಯಲ್ಲಿಯೂ ಜನಸಂಚಾರಕ್ಕೆ ಅನುಗುಣವಾಗಿ ವಿಶೇಷ ಸಾರಿಗೆ ಇರಲಿದೆ ಎಂದು ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

4 ಟಿಕೆಟ್‌ ಖರೀದಿಸಿದರೆ ಶೇ.5 ರಿಯಾಯಿತಿ

4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇ. 5ರಷ್ಟು ರಿಯಾಯಿತಿ, ಹೋಗುವ, ಬರುವ ಪ್ರಯಾಣದ ಟಿಕೆಟ್‌ ಒಟ್ಟಿಗೆ ಕಾಯ್ದಿರಿಸಿದಲ್ಲಿ ಬರುವ ಪ್ರಯಾಣ ದರದಲ್ಲಿ ಶೇ 10 ರಷ್ಟು ರಿಯಾಯಿತಿ ಇರಲಿದೆ. ರಾಜ್ಯ ಮತ್ತು ಅಂತಾರಾಜ್ಯದ ಬುಕ್ಕಿಂಗ್‌ ಕೌಂಟರ್‌ ಮೂಲಕ ಪ್ರಯಾಣಿಕರು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ವೆಬ್‌ಸೈಟ್‌ www.ksrtc.karnataka.gov.in ಮೂಲಕವೂ ಇ-ಟಿಕೆಟ್‌ ಬುಕ್ಕಿಂಗ್‌ ಸೌಲಭ್ಯವಿದೆ.