ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಮಲೆನಾಡಿನಲ್ಲಿ ಭೂ-ಕುಸಿತದಿಂದ ವ್ಯಾಪಕವಾಗಿ ಹಾನಿ ಉಂಟಾಗಿರುವ ಹಿನ್ನೆಲೆ ಯಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ನೇಮಕ ಮಾಡಿದ್ದ ತಜ್ಞರ ಸಮಿತಿ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತನ್ನ ಅಂತಿಮ ವರದಿ ಸಲ್ಲಿಸಿತು.
ವರದಿ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯ ಮಂತ್ರಿಗಳು ಸಮಿತಿ ಇಂದು ತನ್ನ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಿದೆ.
ವರದಿಯಲ್ಲಿ ಕರಾವಳಿಯ ನೈಸರ್ಗಿಕ ಸಂಪತ್ತು, ಮಲೆನಾಡಿನ ನದಿ-ಕಣಿವೆಗಳ ಉಳಿವಿಗೆ ಪೂರಕವಾದ ಮತ್ತು ಭೂ-ಕುಸಿತವನ್ನು ತಡೆಗಟ್ಟಲು ಹಲವು ವೈಜ್ಞಾನಿಕ ಸಲಹೆಗಳನ್ನು, ಮಹತ್ವದ ಪರಿಹಾರೋಪಾಯಗಳನ್ನು ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ತಿಳಿಸಲಾಗಿದೆ ಎಂದರು.
ಭಾರಿ ಭೂ-ಕುಸಿತ ಪ್ರಕರಣಗಳನ್ನು ನೈಸರ್ಗಿಕ ವಿಪತ್ತು ವ್ಯಾಖ್ಯೆ ಅಡಿ ತರಬೇಕು.ಭೂ-ಕುಸಿತ ನಿಯಂತ್ರಣ ಮಾರ್ಗೋಪಾಯಗಳ ಬಗ್ಗೆ ಕ್ರಿಯಾಯೋಜನೆ ರೂಪಿಸಿ, ಭೂ-ಕುಸಿತ ಸಾಧ್ಯತೆ ಇರುವ ಪ್ರದೇಶಗಳ ನಕ್ಷೆ ರಚಿಸಬೇಕು ಎಂಬ ಸಲಹೆಗಳ ಜೊತೆಗೆ ಭೂ-ಕುಸಿತದಿಂದ ಉಂಟಾಗಿರುವ ಆಸ್ತಿ ಹಾನಿ ಮತ್ತು ಪ್ರಾಣ ಹಾನಿಗೆ ಪರಿಹಾರ ಮತ್ತು ಪುನರ್ವಸತಿ ಬಗ್ಗೆ ಸೂಕ್ತ ಸಲಹೆಗಳು ಸಹ ವರದಿಯಲ್ಲಿ ಮೂಡಿಬಂದಿವೆ ಎಂದು ಮುಖ್ಯ ಮಂತ್ರಿಗಳು ಹೇಳಿದರು.
ಕೇಂದ್ರ ಸರ್ಕಾರದ ಜಿ.ಎಸ್.ಐ ಲ್ಯಾಂಡ್ ಸ್ಲಿಪ್ ಯೋಜನೆಯಲ್ಲಿ ರಾಜ್ಯವನ್ನು ಸೇರ್ಪಡೆಗೊಳಿಸಲು ಮನವಿಯನ್ನು ಮಾಡಲಾಗು ವುದು.
ಕೇಂದ್ರ ಸರ್ಕಾರ ನೀಡುವ ಮಿಟಿಗೇಷನ್ ಫಂಡ್ ಮೂಲಕ ಭೂ ಕುಸಿತ ಪ್ರದೇಶದ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನ ಮೀಸಲಿಡುವ ಬಗ್ಗೆ ಸರ್ಕಾರ ಪರಿಶೀಲಿಸುವುದು ಹಾಗೂ ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಅನುಷ್ಠಾನ ಕ್ಕೆ ಸರ್ಕಾರ ಪರಿಶೀಲಿಸಿ ಕ್ರಮಕೈಗೊಳ್ಳಲಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷರಾದ ಶ್ರೀ ಅನಂತ ಹೆಗಡೆ ಅಶೀಸರ ಹಾಗೂ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ