Tuesday, 22nd October 2024

ನಾಯಕತ್ವ ರೂಪಿಸಲಾಗದು; ನಾವೇ ಬೆಳೆಸಿಕೊಳ್ಳಬೇಕು

ಬೈಎಲೆಕ್ಷನ್ ಪರಿಣಾಮ ಏನಾದರೂ ಆಗಿರಬಹುದು ಆದರೆ ನಾಯಕತ್ವದ ಮೌಲ್ಯವನ್ನು ಅಳೆದು ತೂಗಲು ನಾಂದಿ ಹಾಡಿದೆ. ದೇಶದ ರಾಷ್ಟ್ರೀಯ ಪಕ್ಷಗಳಲ್ಲಿ ಅಧಿಕಾರ ಬಂದಾಗ ಅದ್ಭುತವಾಗಿ ಕೆಲಸ ಮಾಡುವ ದಕ್ಷ, ಚಾಣಾಕ್ಷ ಮತ್ತು ಜಾಣ ಮಂತ್ರಿಗಳು ಸಿಗುತ್ತಾರೆ. ಆದರೆ ಪಕ್ಷವನ್ನು ಅಧಿಕಾರಕ್ಕೆ ತರುವ ನಾಯಕರ ಕೊರತೆ ಈಗ ರಾಜ್ಯದಲ್ಲಿ ಎದ್ದು ಕಾಣುತ್ತದೆ.

ಹಿರಿಯ ತಲೆಮಾರಿನ ದೇವೇಗೌಡರು, ಯಡಿಯೂರಪ್ಪ ನವರು ಮತ್ತು ಸಿದ್ದರಾಮಯ್ಯ ನವರ ನಂತರದ ತಲೆಮಾರಿನ ನಾಯಕರು, ಇಡೀ ರಾಜ್ಯದ ಜನತೆಗೆ ಹತ್ತಿರವಾಗುವ ನಾಯಕತ್ವ ರೂಪಿಸಿಕೊಳ್ಳುವಲ್ಲಿ ಸಫಲರಾಗುತ್ತಿಲ್ಲ ಎಂಬ ಸಣ್ಣ ಕೊರಗು ಎಲ್ಲ ರಾಜ ಕೀಯ ಪಕ್ಷಗಳ ಕಾರ್ಯಕರ್ತರಿಗೆ ಕಾಡುತ್ತಿದೆ.

ದೇವೇಗೌಡರಿಗೆ ವಯಸ್ಸಾಗಿದೆ, ಆದರೆ ತಮ್ಮ ಪಕ್ಷದ ನಾಯಕತ್ವ ತಮ್ಮ ಕುಟುಂಬದವರ ಜತೆಗೆ ಉಳಿಯಲಿ ಎಂಬ ವಿಚಿತ್ರ ನಿರ್ಧಾರ ಇಡೀ ಜನತಾ ಪರಿವಾರವನ್ನು ಛಿದ್ರಗೊಳಿ ಸಿತು. ಇತರ ಎಲ್ಲ ಪಕ್ಷಗಳಿಗೆ ವಲಸೆ ಹೋದ ಜನತಾ ಪರಿವಾರದ ನಾಯಕರು, ತಮ್ಮ ಶಕ್ತಿಗನುಸಾರ ಸ್ಥಾನ ಗಿಟ್ಟಿಸಿಕೊಂಡು ಅಧಿಕಾರದಲ್ಲಿ ಇದ್ದಾರೆ. ಆದರೆ ಪಕ್ಷಗಳ ಮಾತು ಧಿಕ್ಕರಿಸಿ ಸ್ವತಂತ್ರ ಅಭಿಪ್ರಾಯ ವ್ಯಕ್ತಪಡಿಸುವ ದಿಟ್ಟ ನಾಯಕತ್ವ ರೂಪಿಸಿಕೊಳ್ಳಲು ಅವರಿಗೆಲ್ಲ ಸಾಧ್ಯವಾಗುತ್ತಿಲ್ಲ.

ಇನ್ನು ಕೆಲವು ನಾಯಕರು ತಮ್ಮ ಪಕ್ಷವನ್ನು ಓಲೈಸುವ ಭರದಲ್ಲಿ ಬಾಯಿಗೆ ಬಂದಂತೆ ಮಾತಾಡಿ ನಗೆಪಾಟಲಿಗೀಡಾಗಿದ್ದಾರೆ. ತಾವು ನೀಡುವ ಹೇಳಿಕೆಗಳು ವೈಯಕ್ತಿಕ ಸಿದ್ಧಾಂತ ಮತ್ತು ವರ್ಚಸ್ಸನ್ನು ಹಾಳು ಮಾಡಬಹುದು ಎಂಬ ಪ್ರಜ್ಞೆಯನ್ನು ಮರೆತು ಬಿಡುತ್ತಾರೆ. ವೈಯಕ್ತಿಕ ಅಭಿಪ್ರಾಯಗಳನ್ನು ಹೈಕ ಮಾಂಡ್ ಮುಂದೆ ಹೇಳಿಕೊಳ್ಳುವ ಕನಿಷ್ಠ ಧೈರ್ಯ ಮಾಯವಾದರೆ ‘ಜನನಾಯಕ’ರಾಗುವುದು ಖಂಡಿತ ಅಸಾಧ್ಯ. ನಾವು ವಿದ್ಯಾರ್ಥಿಗಳಾಗಿದ್ದಾಗ ಎಲ್ಲಾ ಪಕ್ಷಗಳಲ್ಲಿ ಪ್ರತಿಭಾವಂತರು, ಅಧ್ಯಯನ ಶೀಲರು ಹೇರಳವಾಗಿದ್ದರು. ಈಗ ದಿನಪತ್ರಿಕೆಗಳನ್ನೂ ಓದದ ರಾಜಕಾರಣಿಗಳಿದ್ದಾರೆ, ಇವರನ್ನು ಯಾವುದೇ ಕಾರಣಗಳಿಂದ ‘ನಾಯಕರು’ ಎಂದು ಕರೆಯಲು ಮನಸಾಗುತ್ತಿಲ್ಲ.

ಕನ್ನಡದ ಮಣ್ಣು, ಮಾತು ಮತ್ತು ನೀರಿಗಾಗಿ ಮಿಡಿಯುವ ನಾಯಕರು ಮಾಯವಾಗಿ ಹೋಗಿದ್ದಾರೆ. ರಾಜ್ಯೋತ್ಸವ ಸಂದರ್ಭ ದಲ್ಲಿ ಸ್ವತಃ ಈ ನಾಡಿನ ನೆಲ(ಮಣ್ಣು), ಜಲ(ನೀರು), ಭಾಷೆಯನ್ನು(ಮಾತು) ಅರ್ಥ ಮಾಡಿಕೊಂಡು ಒಬ್ಬರೂ ಮಾತನಾಡಲಿಲ್ಲ ಎಂಬ ನೋವು ಪ್ರಜ್ಞಾವಂತ ನಾಗರಿಕರನ್ನು ಕಾಡಿದ್ದು ಸಹಜ. ಈಗ ಪಕ್ಷವನ್ನು ಅಧಿಕಾರಕ್ಕೆ ತರಲು ಮೇಲೆ ವಿವರಿಸಿದ ಮೂವರು ಮಾಸ್ ಲೀಡರುಗಳನ್ನು ಹೊರತುಪಡಿಸಿ ಎರಡನೇ ತಲೆಮಾರಿನ ನಾಯಕರನ್ನು ಹುಡುಕುವ ‘ಟ್ರಯಲ್ ಅಂಡ್ ಎರರ್’ ಪ್ರಯತ್ನ ಎಲ್ಲ ಪಕ್ಷಗಳಲ್ಲಿ ನಡೆದಿದೆ. ಆದರೆ ಈ ತರಹ ದ ನಾಯಕರು ಕೊಟ್ಟ ಕುದುರೆಯನು ಏರಲು ಸಫಲರಾಗುತ್ತಿಲ್ಲ.

ಅದಕ್ಕೆ ಕಾರಣ ಅಸಲಿ ನಾಯಕತ್ವದ ಹೋರಾಟದ ಹಿನ್ನೆಲೆ ಮತ್ತು ಆಳವಾದ ಅಧ್ಯಯನ ಕೊರತೆ, ಜತೆಗೆ ವೈಯಕ್ತಿಕ ಅಧಿಕಾರ ದಾಹ. ಅಧಿಕಾರ ಹಿಡಿಯದೇ ವೈಯಕ್ತಿಕ ವರ್ಚಸ್ಸು , ತಾಕತ್ತಿನ ಮೇಲೆ ನಾಯಕರಾಗಬೇಕೆಂಬುದು ಕಾಣುತ್ತಿಲ್ಲ. ಪಕ್ಕದ ತಮಿಳು ನಾಡು, ಆಂಧ್ರ, ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಭಾಷೆ, ಸಂಸ್ಕೃತಿ ಮತ್ತು ಸಿದ್ಧಾಂತದ ಆಧಾರದ ಮೇಲೆ ನಾಯಕತ್ವ ರೂಪಿಸಿಕೊಳ್ಳಲು ಯುವಕರು ಯಶಸ್ವಿಯಾಗಿದ್ದಾರೆ. ಆದರೆ ನೆಲ, ಜಲ, ಭಾಷೆಯ ಆಧಾರದ ಮೇಲೆ ಅಧಿಕಾರ ಹಿಡಿಯುವ ಸಮೂಹ ಪ್ರಜ್ಞೆಗಿಂತ ರಾಷ್ಟ್ರೀಯ ಪಕ್ಷಗಳ ಗುಲಾಮಿತನದ ರೋಚಕ ಆನಂದದಲ್ಲಿ ನಮ್ಮ ರಾಜ್ಯದ ರಾಜಕಾರಣಿಗಳು ಕಳೆದು ಹೋಗಿದ್ದಾರೆ.

ಪಕ್ಷಗಳ ಸಿದ್ಧಾಂತವನ್ನು ಹೊಗಳುವ ಭರದಲ್ಲಿ ಮೈ ಮೇಲಿನ ಪ್ರಜ್ಞೆ ಕಳೆದುಕೊಂಡು, ಯಾರದೋ ಬಂದೂಕಿಗೆ ಹೆಗಲು ಕೊಟ್ಟು ಬಲಿಪಶುಗಳಾಗುತ್ತಾರೆ. ನಮ್ಮ ಯುವಕರಿಗೆ ಮಣ್ಣು, ನೀರು ಮತ್ತು ಮಾತಿನ ಮಹತ್ವ ಅರ್ಥವಾಗಬೇಕು. ಆದರೆ ಅದನ್ನು ಅರ್ಥ
ಮಾಡಿಸುವ ‘ಥಿಂಕ್ ಟ್ಯಾಂಕಿನಲ್ಲಿ’ ಬೌದ್ಧಿಕ ದಾರಿದ್ರ್ಯ ಆವರಿಸಿ ಮಂಕು ಕವಿದಿದೆ. ನಾಲ್ಕನೇ ಅಂಗದಂತೆ ಕಾರ್ಯ ನಿರ್ವಹಿಸ ಬೇಕಾದ ಬರಹಗಾರರು ಮತ್ತು ಬರಹದ ಮುಖವಾಣಿಯಂತಿರುವ ಮಾಧ್ಯಮಗಳು ಕೂಡ ಕೆಲವರ ಮುಲಾಜು, ಮರ್ಜಿಯಲ್ಲಿ ಸಿಕ್ಕಿ ಬಿದ್ದಂತೆ ಭಾಸವಾಗುತ್ತದೆ.

ಸಮರ್ಥ ನಾಯಕತ್ವವನ್ನು ಯಾವುದೇ ರಾಜಕೀಯ ಪಕ್ಷಗಳು ರೂಪಿಸಿ, ಮಾರುಕಟ್ಟೆಯಲ್ಲಿ ಖರೀದಿಸಲಾಗುವುದಿಲ್ಲ, ಹಾಗೆ ಎರಡನೇ ಸಾಲಿನ ನಾಯಕರನ್ನು ಸೃಷ್ಟಿ ಮಾಡಬಹುದು ಎಂಬುದೊಂದು ಭ್ರಮೆ. ಆ ಭ್ರಮೆಯಿಂದ ಹೊರ ಬಂದು, ದೇಸಿಯ ಸಂಸ್ಕೃತಿ ಆಧಾರದ ಮೇಲೆ ನಾಯಕತ್ವ ರೂಪಿಸಿಕೊ ಳ್ಳುವ ಮುಕ್ತ ವಾತಾವರಣವನ್ನು ರಾಷ್ಟ್ರೀಯ ಪಕ್ಷಗಳು ಕಲ್ಪಿಸಿಕೊಡ ಬೇಕು. ಆಂತರಿಕ ಪ್ರಜಾಪ್ರಭುತ್ವ ಇಲ್ಲದೆ, ಕೇವಲ ಡಿಕ್ಟೇಟರ್ ಮಾದರಿಯ ಪಕ್ಷ ಸಂಘಟನೆ ಕೇವಲ ತಾತ್ಕಾಲಿಕ ಗೆಲುವು.

ಅದೊಂದು ಸಮೂಹ ಸನ್ನಿಯ ಭ್ರಾಂತು. ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬಂದ ಕೂಡಲೇ, ಪಕ್ಷ ಅಧಿಕಾರ ಹಿಡಿಯಲು ತಮ್ಮ ಪಾತ್ರ ಏನು ಎಂಬುದನ್ನು ಮರೆತು, ಸರಕಾರಿ ನೌಕರರ ಉದ್ಯೋಗದ ರೀತಿಯಲ್ಲಿ ‘ಸೇವಾ ಹಿರಿತನ’ ಗುರುತಿಸಿ ಎಂಬ ಬೇಡಿಕೆ ಇಡುವುದು ಹಾಸ್ಯಾಸ್ಪದ. ಈ ಮಧ್ಯೆ ಜಾತಿ, ಧರ್ಮ, ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಸ್ವಜನ ಪಕ್ಷಪಾತವೆಂಬ ಕಳಂಕ
ಬೇರೆ.

ಈ ಎಲ್ಲ ಮಿತಿಗಳನ್ನು ದಾಟಿ ಜನನಾಯಕರು ಬೆಳೆಯುವ ವಾತಾವರಣ ಕಾಣುತ್ತಿಲ್ಲವಾದರೂ, ಕನ್ನಡಿಗರು ಸಹನೆಯಿಂದ ಕಾಯಲೇಬೇಕು ಅಷ್ಟೇ! -ಪ್ರೊ.ಸಿದ್ದು ಯಾಪಲಪರವಿ ಕಾರಟಗಿ.