ಮುಂಬಯಿ: ಪ್ಯಾರಿಸ್ ಒಲಿಂಪಿಕ್ಸ್(Paris Olympic) ಅವಳಿ ಪದಕ ವಿಜೇತೆ, ಶೂಟರ್ ಮನು ಭಾಕರ್(Manu Bhaker) ಅವರು ಭಾರತ ತಂಡದ ಮಾಜಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಅವರನ್ನು ಭೇಟಿ ಮಾಡಿದ್ದಾರೆ. ಈ ಮೂಲಕ ತಮ್ಮ ಬಹುದಿನದ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಪ್ಯಾರಿಸ್‌ನಲ್ಲಿ ಪದಕ ಗೆದ್ದ ವೇಳೆ ಮನು, ಸಚಿನ್ ಭೇಟಿಯಾಗುವುದು ನನ್ನ ಬಹುದೊಡ್ಡ ಕನಸು ಎಂದು ಹೇಳಿದ್ದರು. ಮುಂಬಯಿಯಲ್ಲಿರುವ ಸಚಿನ್ ನಿವಾಸಕ್ಕೆ ಮನು ತಮ್ಮ ತಂದೆ ರಾಮಕಿಶನ್ ಭಾಕರ್ ಮತ್ತು ತಾಯಿ ಸುಮೇಧಾ ಭಾಕರ್ ಜತೆಗೂಡಿ ಭೇಟಿ ಮಾಡಿದರು.
ಮನು ಅವರು ತಾವು ಗೆದ್ದ ಒಲಿಂಪಿಕ್ಸ್ ಪದಕವನ್ನು ಸಚಿನ್‌ಗೆ ತೋರಿಸಿ ಬಳಿಕ ಅವರ ಜತೆಗೆ ಫೋಟೊ ತೆಗೆಸಿಕೊಂಡರು. ಸಚಿನ್ ಅವರು ಗಣೇಶನ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಿದರು. ‘ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಭೇಟಿಯಾಗಿರುವುದು ನಿಜಕ್ಕೂ ವಿಶೇಷವಾಗಿತ್ತು ಮನು. ನಿಮ್ಮ ಯಶಸ್ಸಿನ ಕಥೆಯು ಈಗ ಎಲ್ಲೆಡೆ ಯುವತಿಯರಿಗೆ ದೊಡ್ಡ ಕನಸು ಕಾಣಲು ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಸ್ಫೂರ್ತಿಯ ಮೂಲವಾಗಿದೆ. ಮುಂದೆಯೂ ನೀವು ದೊಡ್ಡ ಸಾಧನೆ ಮಾಡುವಂತಾಗಿ” ಎಂದು ಸಚಿನ್ ಟ್ವೀಟ್ ಮೂಲಕ ಹಾರೈಸಿದ್ದಾರೆ. ಕೆಲ ದಿನಗಳ ಹಿಂದೆ ಮನು ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಭೇಟಿಯಾಗಿದ್ದರು.
https://x.com/sachin_rt/status/1829460891005342206
ಪ್ಯಾರಿಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್ ಶೂಟಿಂಗ್ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು. ಪದಕ ಗೆದ್ದ ಬಳಿಕ ಮನು ಅವರ ಬ್ರ್ಯಾಂಡ್ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್ ಕೇರ್, ನ್ಯೂಟ್ರೀಷಿಯನ್ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಮನು ಬಾಕರ್ ಥಂಬ್ಸಪ್ ಕಂಪನಿಯ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ಗೂ ಮುನ್ನ ಮನು ಬಾಕರ್ ಬ್ರ್ಯಾಂಡ್ ಮೌಲ್ಯ 25 ಲಕ್ಷ ರೂ. ಆಗಿತ್ತು.
2 ವಾರಗಳ ಹಿಂದೆ ಮನು ಅವರು ತಮಿಳುನಾಡಿನ ವೇಲಮ್ಮಾಳ್ ನೆಕ್ಸಸ್ ಗ್ರೂಪ್ನ ಶಾಲೆಯಲ್ಲಿ ನಡೆದ ಕ್ರೀಡಾ ಸ್ಕಾಲರ್‌ಷಿಪ್ ವಿತರಣಾ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಮನು ಭಾಕರ್ ವಿದ್ಯಾರ್ಥಿಗಳ ಜತೆಗೆ ಕತ್ರಿನಾ ಕೈಫ್ ಹೆಜ್ಜೆ ಹಾಕಿದ್ದ ಕಾಲಾ ಚಷ್ಮಾ(‘Kala Chashma’ Song) ಹಿಂದಿ ಹಾಡೊಂದಕ್ಕೆ ನೃತ್ಯ ಮಾಡಿದ್ದರು. ತಮಿಳುನಾಡಿನ ಶಿಕ್ಷಕರೊಬ್ಬರ ಸಹಾಯದಿಂದ ಆನ್ಲೈನ್ನಲ್ಲಿಯೇ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದ ಮನು ಭಾಕರ್ ಇದೀಗ ಶೂಟಿಂಗ್ನಿಂದ ಮೂರು ತಿಂಗಳ ವಿಶ್ರಾಂತಿ ಪಡೆದು ನೇರವಾಗಿ ತರಗತಿಗೆ ಹಾಜರಾಗಿ ನೃತ್ಯ ಕಲಿಯಲಿದ್ದಾರೆ. ಜತೆಗೆ ವಯೋಲಿನ್ ಕಲಿಕೆ ಕೂಡ ಮಾಡಲಿದ್ದಾರೆ. ಇದಾದ ಬಳಿಕ ಕುದುರೆ ಸವಾರಿ ಮಾರ್ಷಿಯಲ್ ಆರ್ಟ್ಸ್ ಮತ್ತು ಸ್ಕೇಟಿಂಗ್ ಅಭ್ಯಾಸ ಕೂಡ ಮಾಡಲಿದ್ದಾರೆ. ಈ ವಿಚಾರವನ್ನು ಸ್ವತಃ ಮನು ಅವರೇ ತಿಳಿಸಿದ್ದರು.