Thursday, 12th December 2024

ವಿವಾಹ ಮಂಟಪ ನೋಟ ಆಘಾತವೇ ? ಆಸ್ವಾದವೇ ?

ಅಭಿವ್ಯಕ್ತಿ

ನಾಗಶ್ರೀ ತ್ಯಾಗರಾಜ್ ಎನ್.

ನೂರೊಂದು ಭಾವದಲೆ ತೇಲುವುದು
ಮನದೊಳಗೆ
ಆಘಾತ ಅದರಿಂದ ಆಗಾಗ ನಮಗೆ.
ಬೇಡದುದ ಹೊರಹಾಕಿ ಸುಂದರತೆಗಣಿಮಾಡು
ಕಸದ ಬುಟ್ಟಿಯೆ ಮನಸು – ಮುದ್ದುರಾಮ.

ಮನಸೊಂದು ಸಾಗರದಂತೆ. ಆ ಸಾಗರದಿಂದ ಏಳುವ ಭಾವದಲೆಗಳು ವೈವಿಧ್ಯಮಯ. ಕೆಲವೊಮ್ಮೆ ಶಾಂತ, ಕೆಲವೊಮ್ಮೆ ಉದ್ರೇಕ. ಕೆಲವೊಮ್ಮೆ ಉತ್ಸಾಹ, ಕೆಲವೊಮ್ಮೆ ನಿಸ್ತೇಜ. ಕೆಲವೊಮ್ಮೆ ಗಂಭೀರ, ಕೆಲವೊಮ್ಮೆ ಕ್ರೋಧಿಷ್ಟ.

ಕೆಲವೊಮ್ಮೆ ದೋಷರಹಿತ, ಕೆಲವೊಮ್ಮೆ ಪೋಷಾಕುಸಹಿತ. ಕೆಲವೊಮ್ಮೆ ವಾಲುವಿಕೆ, ಕೆಲವೊಮ್ಮೆ ನೇರನಡೆ. ಕೆಲವೊಮ್ಮೆ ವಿನಯತೆ, ಕೆಲವೊಮ್ಮೆ ತಲೆಭಾರ. ಹೀಗೆ ಭಿನ್ನ ವಿಭಿನ್ನ ಅಲೆಗಳ ಅಪ್ಪಳಿಸುವಿಕೆಯ ಸಪ್ಪಳದಲ್ಲಿ ಶಾಂತ ಸುಪ್ರಸನ್ನತೆ ಭಾವ ಕ್ಕಿಂತಲೂ ಆಘಾತತೆಯ ಪಾತಕವೇ ಹೆಚ್ಚು ಲಭಿಸುತ್ತದೆ. ಆಗೇನು ಮಾಡಬೇಕು? ‘ಬೇಕಾದರಾಲಿಪುದು! ಬೇಡವಾಗೆ ಪರಾಕು ಮಾಡುವುದು!’ ಎಂಬ ಕವಿಯ ಮಾತಿನಂತೆ ಬೇಡವಾದುದ ತ್ಯಜಿಸಿ, ಅಗತ್ಯವಿರುವುದನ್ನು ಭುಜಿಸಿ, ಬದುಕನ್ನು ಸುಂದರ
ಗೊಳಿಸು ಎಂದು ಕವಿ ಕೆ.ಸಿ.ಶಿವಪ್ಪನವರು ಈ ಮುದ್ದು ರಾಮನ ಪದ್ಯದಲ್ಲಿ ಹೇಳಿದ್ದಾರೆ.

ಸುಂದರತೆಗಣಿ ಮಾಡು ಎಂಬ ಶಬ್ದವನ್ನೂ ಕೂಡ ಎರಡು ರೀತಿಯಲ್ಲಿ ನಾವು ಅರ್ಥೈಸಬಹುದು. ಸುಂದರತೆಗೆ- ಅಣಿಮಾಡು ಎಂದರೆ ಸುಂದರ ಬದುಕಿಗೆ ಸಿದ್ಧಗೊಳ್ಳು ಅಥವಾ ಸುಂದರ ಬದುಕನ್ನು ರೂಪಿಸಿಕೋ ಎಂಬುದಾದರೆ ಮತ್ತೊಂದು ರೀತಿಯಲ್ಲಿ ಸುಂದರತೆ-ಗಣಿಮಾಡು ಎಂದರೆ ಸುಂದರತೆಯೆಂಬ ಗಣಿಯನ್ನು ನಿರ್ಮಿಸಿಕೋ ಎಂಬ ಅರ್ಥದಲ್ಲಿಯೂ ಕೂಡ ನಾವು
ಕಾಣಬಹುದು. ಹೀಗೆ ಎರಡೂ ಭಾವದಲ್ಲಿ ಕಂಡರೂ ಮನಸ್ಸಿಗೆ ಆಘಾತ ಮಾಡದೇ, ಸಕಾರಾತ್ಮಕ ಭಾವ ಮೂಡಿಸುವಂತಹ ಪದ ಬಳಕೆಯೇ ಕವಿ ಚಮತ್ಕಾರ, ಕವಿತೆಯ ಸತ್ಕಾರ. ಹಾಗಾಗಿ ಮನಸ್ಸನ್ನು ಕಸದ ಬುಟ್ಟಿಯಾಗಿಸದೇ ರಸದ ತೊಟ್ಟಿಯಾಗಿಸಿಕೊಂಡು ಜಟ್ಟಿಯಾಗೋಣ ಎಂಬ ಮಾತನ್ನು ಕವಿ ಉಲ್ಲೇಖಿಸಿದ್ದಾರೆ.

ಇಂತಹ ಒಂದು ಅಪರೂಪದ ಮುದ್ದುರಾಮನ ಪದ್ಯ ನೆನಪಾದದ್ದೂ ಕೂಡ, ಇತ್ತೀಚೆಗಷ್ಟೇ ಕಂಡ ಒಂದು ಸಾಮಾಜಿಕ ಚಿತ್ರಣದಿಂದಾಗಿ. ಯಾವುದದು? ಮುಂದೆ ಓದಿ. ಪ್ರೀತಿಯೇ ಸಾರವಾಗಿ ಬೆರೆತ ಒಂದು ಜೋಡಿ. ಒಬ್ಬರಿಗೊಬ್ಬರ ಮನಸ್ಸೂ ಬೆರೆತು,
ಜತೆಗೆ ಪೋಷಕರು ಒಪ್ಪಿ, ಈರ್ವರ ವಿವಾಹ ಇದೀಗ ನಿಶ್ಚಯಗೊಂಡಿತ್ತು. ಪೋಷಕರು, ಹತ್ತಿರದ ಬಂಧುಗಳೆಲ್ಲರೂ ಮದುವೆ ಜವಳಿ ಖರೀದಿಸಲು, ವಿವಾಹ ಆಮಂತ್ರಣ ಸಿದ್ಧಪಡಿಸಲು, ಮದುವೆ ಊಟ ನಿರ್ಧರಿಸಲು, ಕಲ್ಯಾಣ ಮಂಟಪ ಗುರುತು ಮಾಡಲು, ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ತೊಡಗಿರುತ್ತಾರೆ. ಹುಡುಗ-ಹುಡುಗಿ ಮಾತ್ರ ಅದೇ ನೋ ಪ್ರೀ-ವೆಡ್ಡಿಂಗ್ ಶೂಟ್ ಅಂತಾ ಪ್ರಪಂಚ ವನ್ನೇ ಮರೆತಿರುತ್ತಾರೆ.

ಇತ್ತೀಚಿನ ಮದುವೆಗಳಲ್ಲಿ ಅತ್ಯಂತ ಪ್ರಮುಖ ಶಾಸದಂತೆ ಭಾಸವಾಗಿದೆ ಅದು. ಒಟ್ಟಾರೆಯಾಗಿ ಇಂದಿನ ಮದುವೆಯ ಚಿತ್ರಣವೇ
ಬದಲಾಗಿದ್ದರೂ, ಈ ಪ್ರೀ ವೆಡ್ಡಿಂಗ್ ಶೂಟ್ ಎನ್ನುವುದು ಸಂಸ್ಕೃತಿಯನ್ನೇ ಶೂಟೌಟ್ ಮಾಡಿದಂತಾಗಿದೆ. ಮದುವೆಯ ಹಿಂದಿನ ದಿನ ನಡೆಸುವ ಅರಿಶಿನ ಶಾಕ್ಕೆ ಬ್ರೇಕ್, ಏಕೆಂದರೆ ಹುಡುಗಿ ತಿಂಗಳುಗಟ್ಟಲೆಯಿಂದ ಫೇಶಿಯಲ್ ಮಾಡಿಸಿಕೊಂಡಿದ್ದು ಅಲರ್ಜಿ
ಯಾಗುತ್ತದೆ. ಬಾಸಿಂಗ ಕಟ್ಟಬೇಕು ಎಂದರೆ ಗಂಡು- ಹೆಣ್ಣು ಧರಿಸಿರುವ ಔಟ್‌ಫಿಟ್‌ಗೆ ಸೂಟ್ ಆಗೋಲ್ಲ.

ಕಂಕಣವನ್ನು ಒಬ್ಬರಿಗೊಬ್ಬರು ಕಟ್ಟಿ, ಹಿರಿಯರಿಂದ ಹಾಲು-ತುಪ್ಪದ ಧಾರೆಯೆರೆಸಿಕೊಳ್ಳಬೇಕು, ಎಂದರೆ ಛೇ! ಛೇ! ಸೀರೆ ತುಂಬಾ ಕಾಸ್ಟ್ಲಿ, ಎಲ್ಲಾ ಹಾಳಾಗಿ ಬಿಡುತ್ತದೆ. ಬಿಂದಿಗೆಯೊಳಗೆ ಉಂಗುರ ಹುಡುಕಬೇಕು, ಅರುಂಧತಿ ನಕ್ಷತ್ರ ತೋರಿಸೋ ಶಾಸ್ತ್ರ ನಡೆಸ
ಬೇಕು! ಇಲ್ಲ ಇಲ್ಲ ರಿಸೆಪ್ಷನ್ ಆರತಕ್ಷತೆಗೆ ತಡವಾಗುತ್ತದೆ. ಹೀಗೆ ಪರಂಪರೆಯಿಂದ ಬಂದ ಶಾಸ್ತ್ರಗಳಿಗೆಲ್ಲ ಗೇಟ್‌ಪಾಸ್ ಕೊಟ್ಟು ತರವಲ್ಲದ ನಡೆಗಳನ್ನು ಆಚರಿಸುವ ಇಂದಿನ ವಿವಾಹ ಕ್ರಮಗಳು ಆ ದೇವರಿಗೇ ಪ್ರೀತಿ. ಅರಿಶಿನ ಆಯುರ್ವೇದದ ಪ್ರಕಾರ ಒಂದು ಅತ್ಯುತ್ತಮ ಸೌಂದರ್ಯವರ್ಧಕ.

ಹಾಲು-ತುಪ್ಪದಂತೆ ನಿಮ್ಮ ಸಂಸಾರ ಬೆರೆತಿರಲಿ ಎಂಬ ಶುಭಾಶೀರ್ವಾದ ಹಿರಿಯರಿಂದ, ಇನ್ನು ಅರುಂಧತಿ- ವಸಿಷ್ಠ ನಕ್ಷತ್ರಗಳು ಒಂದಕ್ಕೊಂದು ಜತೆಯಾಗಿ ತಮ್ಮ ತಮ್ಮನ್ನೇ ಸುತ್ತುವ ನಕ್ಷತ್ರಗಳು. ಗಂಡು-ಹೆಣ್ಣು ಕೂಡಾ ಹೀಗೆ ಇರಬೇಕೆಂಬುದನ್ನು ತೋರಿ ಸುವ ಕ್ರಮವೇ ಒಂದು ಶಾಸ್ತ್ರ. ಮದುವೆಯ ಪ್ರತಿಯೊಂದು ಶಾಸ್ತ್ರಗಳಲ್ಲೂ ವೈಜ್ಞಾನಿಕ, ಸಾಂಸ್ಕೃತಿಕ ಹಾಗೂ ಕಲಾತ್ಮಕ ಸಕಾರಣಗಳಿವೆ. ಹೀಗಿದ್ದರೂ ಪ್ರತಿಯೊಂದು ಶಾಸ್ತ್ರದಲ್ಲೂ ಕೊಂಕನ್ನು ತೆಗೆದು, ಬಿಂಕ ತೋರುತ್ತಾ ಎಲ್ಲವ ಮರೆಯುತ್ತಿವೆ ಇಂದಿನ ಹಲವು ವಿವಾಹಗಳು.

ಆದರೆ ಒಂದೇ ಒಂದು ಪದ್ಧತಿಯನ್ನು ಮಾತ್ರ, ನಮ್ಮ ಸಂಸ್ಕೃತಿಯು ಜೀರ್ಣಿಸಿಕೊಳ್ಳದೇ ಒದ್ದಾಡುತ್ತಿದೆ. ಅದೇ ಈ ಪ್ರೀ ವೆಡ್ಡಿಂಗ್ ಶೂಟ್. ಈ ಪ್ರೀ-ವೆಡ್ಡಿಂಗ್ ಶೂಟ್ (ಪೂರ್ವ ವಿವಾಹ ಚಿತ್ರೀಕರಣ) ಇಲ್ಲಿ ಪಡೆದ ಭಾವಚಿತ್ರಗಳು ಹೇಗಿರುತ್ತದೆ? ಇದನ್ನು ಏನು ಮಾಡುತ್ತಾರೆ? ಕೊಂಚ ಸಮಯ ಹಾಗೂ ವಿವೇಚನೆ ಕೊಟ್ಟು ನೀವು ಹೋಗಿ ಬಂದ ವಿವಾಹ ಸಂದರ್ಭಗಳ ಬಗ್ಗೆ ನೆನೆಯಿರಿ.
ಸಾಮಾನ್ಯವಾಗಿ ಈ ಪ್ರೀ ವೆಡ್ಡಿಂಗ್ ಶೂಟ್‌ಗಳ ಭಾವಚಿತ್ರದಲ್ಲಿ ಹುಡುಗ ಬರ್ಮುಡಾ-ಟೀಶರ್ಟ್ ಹಾಕಿಕೊಂಡು ಅಥವಾ ಪಾಶ್ಚಿಮಾತ್ಯ ಉಡುಪಿನ ಜೀನ್ಸ್-ಜಾಕೆಟ್ ತೊಟ್ಟು ಇಲ್ಲವೇ ಚಿಕ್ಕ ಚಡ್ಡಿ ತೊಟ್ಟಿರುತ್ತಾರೆ.

ಇನ್ನು ಹುಡುಗಿ ವಿಷಯಕ್ಕೆ ಬಂದರೆ ಪುಟ ತುಂಬುತ್ತದೆಯೇ ವಿನಃ ಅವರ ದೇಹದ ಮೇಲೆ ಬಟ್ಟೆ ತುಂಬುವುದಿಲ್ಲ. ಎಲ್ಲ ಬಟ್ಟೆ ಗಳೂ ಗಿಡ್ಡ- ಗಿಡ್ಡವೇ! ತುಂಡು-ತುಂಡಾದ ಪ್ಯಾಂಟ್, ಸ್ಲೀವ್‌ಲೆಸ್ ಮೇಲಂಗಿ, ಹೊಕ್ಕಳು ತೋರುವ ಗೌನ್, ಯಥೇಚ್ಛ ಕಿಟಕಿ ಗಳಿರುವ ಉಡುಪುಗಳು ಇನ್ನೂ ಏನೇನೋ!!! ಹೀಗೆ ವಿಧವಿಧ ಬಟ್ಟೆಗಳು. ಈ ಬಟ್ಟೆಗಳೇ ವಿಕಾರ, ಜತೆಗೆ ಅವರ ಭಾವಚಿತ್ರಗಳ ಭಂಗಿಗಳೋ, ಭಂಗಿ ಹೊಡೆದಂತೆ ಮತ್ತೂ ವಿಕಾರ. ಮದುವೆಯ ದಿನ ಗಂಡು-ಹೆಣ್ಣು ಲಕ್ಷಣವಾಗಿ ವಿಷ್ಣು-ಲಕ್ಷ್ಮೀಯ ಸ್ವರೂಪ ವಾಗಿ ಅಲಂಕಾರ ಗೊಂಡಿರುತ್ತಾರೆ.

ಇಬ್ಬರನ್ನು ಧಾರೆಯೆರೆದು, ಅಕ್ಷತೆಯ ಹಾಕಿ ಆಶೀರ್ವದಿಸಬೇಕೆಂದು ಹಿರಿಯರೂ ಅಲ್ಲಿ ಬಂದಿರುತ್ತಾರೆ. ಆದರೆ ಅದೇ ವೇದಿಕೆಯ ಪಕ್ಕ ದೊಡ್ಡ ದೊಂದು ಪರದೆ, ಸಿನಿಮಾ ಪರದೆಯಷ್ಟೇ ದೊಡ್ಡದಿರುತ್ತದೆ. ಆ ಪರದೆಯಲ್ಲಿ ಇದುವರೆಗೂ ಪ್ರೀ ವೆಡ್ಡಿಂಗ್ ಶೂಟ್‌ ನಲ್ಲಿ ಅಲ್ಪ ಬುದ್ಧಿಯಿಂದ ಪಡೆದ ತುಂಡು ಲಂಗದ-ತುಂಡು ಚಡ್ಡಿಯ, ಬಾಟಲ್ ಹಿಡಿದಿರುವ, ಒಬ್ಬರಿಗೊಬ್ಬರು ಮುತ್ತಿಕ್ಕು ತ್ತಿರುವ, ಮತ್ತೇರಿಸುತ್ತಿರುವ ದೃಶ್ಯಗಳು. ಶಯ್ಯಾಗೃಹದಲ್ಲಿ ಖಾಸಗಿಯಾಗಿರ ಬೇಕಿದ್ದ ದೃಶ್ಯಗಳನ್ನು ಹೀಗೆ ವಿವಾಹ ಮಂಟಪದಲ್ಲಿ ಪ್ರದರ್ಶನಕ್ಕಿರಿಸಿದಾಗ, ‘ಇವುಗಳನ್ನೆಲ್ಲಾ ನೋಡುವ ಕರ್ಮ ನಮಗೆ ಯಾಕ್ರೀ?’ ಎಂದು ತಲೆ ತಗ್ಗಿಸಿ ಕೊಂಡು ಸಾಗಿದ ಹಿರಿಯ ರಿದ್ದಾರೆ.

ಸಂಸ್ಕೃತಿಯೆಂಬುದು ಹೀಗೆ ಬಟಾಬಯಲಿನಲ್ಲಿ ಶೂಟೌಟ್ ಆಗುತ್ತಿರುವುದು ಖೇದನೀಯ ಸಂಗತಿ. ಸಂಸ್ಕೃತಿಯ ಬೆಳೆಸಲಾ
ಗದಿದ್ದರೂ, ಇರುವುದನ್ನು ಹಾಗೆ ಉಳಿಸಿಕೊಳ್ಳುವುದು ನಮ್ಮ ಮುಂದಿನ ಕರ್ತವ್ಯ. ಹೀಗೆ ಪ್ರೀವೆಡ್ಡಿಂಗ್ ಶೂಟ್ ಮಾಡಿ ಅದನ್ನು ಪ್ರದರ್ಶಿಸಲೇಬೇಕೆಂದರೆ ಕೆಲವು ರೀತಿ-ನೀತಿಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಧಾರವಾಡದಲ್ಲೊಂದು ಜೋಡಿ ಉತ್ತರ
ಕರ್ನಾಟಕದ ಶೈಲಿಯ ಉಡುಪನ್ನೇ ಧರಿಸಿ ತುಳಸಿಗೆ ಕೈಮುಗಿಯುವ ಹಾಗೆ, ದೇವಾಲಯಕ್ಕೆ ಹೋಗುವ ಹಾಗೆ, ಹಿರಿಯರಿಗೆ ವಂದಿಸಿ, ಜತೆಜತೆಯಾಗಿ ಹೆಜ್ಜೆ ಯಿರಿಸಿದ ಹಾಗೆ ಭಾವಚಿತ್ರಗಳ ಚಿತ್ರೀಕರಿಸಿದ್ದರು.

ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಕೂಡಾ. ಹೀಗೆ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ  ಫೋಟೋ ಶೂಟ್‌ಗಳು ನಡೆದರೆ ನೋಡುವ ಕಣ್ಣಿಗೂ ಕ್ಷೇಮ, ನೋಡಿಸುವ ಮನಸ್ಸಿಗೂ ಕ್ಷೇಮ. ಚಿತ್ರಗಳು ಸದಾ ಪ್ರೇರೇಪಿಸುವಂತಿರಬೇಕೇ ಹೊರತು ಪ್ರೇ ಎಂಬ ಅಕ್ಷರ ವರ್ಜಿಸಿ ಉಳಿವ ಶಬ್ದದಂತಿರಬಾರದು. ಈ ಪ್ರೀ ವೆಡ್ಡಿಂಗ್ ಶೂಟ್‌ನಿಂದ ಸಂಸ್ಕೃತಿಯ ಮೇಲಿನ ಆಟಾಟೋಪ ಮಾತ್ರವಲ್ಲ, ಮದುವೆ ಹುಡುಗ-ಹುಡುಗಿಯ ಜೀವದ ಪ್ರಶ್ನೆಗೂ ಪ್ರಶ್ನಾರ್ಥಕ ಚಿಹ್ನೆ ಇಟ್ಟಂತಾಗಿದೆ.

ಕೆಲವು ತಿಂಗಳುಗಳ ಹಿಂದೆ ನದಿಯ ಭಾಗದ ಮಧ್ಯೆ ತೆಪ್ಪವೊಂದರಲ್ಲಿ ಹುಡುಗ-ಹುಡುಗಿಯ ನಿಲ್ಲಿಸಿ, ಟೈಟಾನಿಕ್ ನಾಯಕ-ನಾಯಕಿಯರ ರೀತಿ ನಿಲ್ಲಲು ಹೇಳುತ್ತಾರೆ ಛಾಯಾಗ್ರಾಹಕರು. ತೆಪ್ಪದಲ್ಲಿ ಸಮತೋಲನ ಸಿಗದೇ ಇದ್ದರೆ ತೆಪ್ಪವು ತೆಪ್ಪಗಿರದೇ ಉಲ್ಟಾಡಿ ಪಲ್ಟಿಯಾಗಿ ಬಿಡುತ್ತದೆ. ಹಾಗೆಯೇ ಇಲ್ಲಿ ಇವರಿಬ್ಬರ ಅಸಮತೋಲನಕ್ಕೆ ತೆಪ್ಪ ಪಲ್ಟಿಯಾಯಿತು. ಹುಡುಗ- ಹುಡುಗಿ ಇಬ್ಬರೂ ನೀರಿನೊಳಗೆ ಬಿದ್ದರು. ಇಬ್ಬರಿಗೂ ಈಜು ಬರುತ್ತಿಲ್ಲ. ಛಾಯಾಗ್ರಾಹಕರಿಗೂ ಈಜು ಗೊತ್ತಿಲ್ಲ. ಅಲ್ಲಿದ್ದ ಯಾರಿಗೂ ಈಜು ಬರುವುದಿಲ್ಲ.

ಹೀಗೆ ನೀರಿನ ಮೇಲೆ ಸಂಭ್ರಮಿಸುತ್ತಿದ್ದ ಜೋಡಿ, ಈಜು ಬಾರದೇ ನೀರಿನೊಳಗೆ ಜಲಸಮಾಧಿಯಾಗಿ ಬಿಟ್ಟರು. ಯಾವುದೇ ಮುತುವರ್ಜಿ ಇಲ್ಲದೇ, ಸುರಕ್ಷಿತ ಕ್ರಮಗಳನ್ನೂ ಬಳಸದೇ ನಡೆಸಿದ ವಿವೇಚನಾರಹಿತ ಶೂಟಿಂಗ್, ಹೊಸ ಜೀವನಕ್ಕೆ  ಕಾಲಿಡ ಬೇಕಿದ್ದ ಎರಡು ಜೀವಗಳನ್ನೇ ಬಲಿಪಡೆಯಿತು. ವಿವಾಹ ಸಂಭ್ರಮದಲ್ಲಿ ತೊಡಗಬೇಕಿದ್ದ ಎರಡು ಕುಟುಂಬಗಳು, ಶೋಕಾ ಚರಣೆಯ ಕಣ್ಣೀರಧಾರೆಯ ದುಃಖವನ್ನು ಪಡೆಯಿತು. ಅಕ್ಷತೆಯನ್ನು ಶಿರಕ್ಕೆ ಹಾಕಬೇಕಾದವರು, ಈಗ ಬಾಯಿಗೆ ಹಾಕಬೇಕಾ ಯಿತು. ಇಂತಹ ದುರ್ಘಟನೆಗಳು ದೊಡ್ಡ ಮಟ್ಟದಲ್ಲಿ ಹಾಗೂ ಸಣ್ಣ ಮಟ್ಟದಲ್ಲಿ ಅಲ್ಲಲ್ಲಿ ನಡೆಯುತ್ತಲೇ ಇವೆ. ಕೆಲವು ಬೆಳಕಿಗೆ ಬಂದರೆ, ಇನ್ನು ಕೆಲವು ಕತ್ತಲಲ್ಲೇ ಮಣ್ಣಾಗಿವೆ.

ಇದು ಒಂದು ಅಂಶವಾದರೆ, ಇನ್ನೊಂದು ಸಂದರ್ಭದಲ್ಲಿ ಮದುವೆಯ ದಿನ ಒಂದು ಕೋಣೆ ಲಾಕ್ ಆಗಿತ್ತು. ಒಳಗಿನಿಂದ ಎರಡು ಮಕ್ಕಳ ಚೀರಾಟದ ಶಬ್ದ. ಮಕ್ಕಳು ಒಳಗಿನಿಂದ ಲಾಕ್ ಮಾಡಿಕೊಂಡಿದ್ದು, ಈಗ ತೆಗೆಯಲಾಗದೇ ಆತಂಕ-ಭಯದಿಂದ ಜೋರಾಗಿ ಅಳಲು ಪ್ರಾರಂಭಿಸಿದ್ದಾರೆ. ಅಂತೂ ಬಾಗಿಲು ಒಡೆದು ಮಕ್ಕಳನ್ನು ಸುರಕ್ಷೆ ಮಾಡಲಾಯಿತು. ಏನಾಯಿತು? ಎಂದು ಕೇಳಿದಾಗ, ಮಕ್ಕಳು ನೀಡಿದ ಉತ್ತರ ದಿಗ್ರ್ಭಮೆ ಮೂಡಿಸಿತು. ಅಂದು ಮದುವೆಯ ದಿನ ಮಂಟಪದ ಪಕ್ಕದ ಸ್ಕ್ರೀನ್‌ನಲ್ಲಿ ಹುಡುಗ-ಹುಡುಗಿಯ ಫೋಟೋ ಶೂಟ್‌ನಲ್ಲಿ ಇಬ್ಬರೂ ವಿವಿಧ ರೀತಿ ತಬ್ಬಿರುವ, ಹುಡುಗ- ಹುಡುಗಿಯನ್ನು ಎತ್ತಿಕೊಂಡು ತಿರುಗಿಸುತ್ತಿರುವ ದೃಶ್ಯಗಳ ನೋಡಿದ ಈ ಪುಟ್ಟ ಬಾಲಕ ತನ್ನ ಚಿಕ್ಕಪ್ಪ ಮಾಡಿದಂತೆಯೇ ತಾನು ಮಾಡಲು ಅನುಕರಿಸುತ್ತೇನೆಂದು ಗೆಳತಿಯನ್ನು ಕರೆದು ಕೊಂಡು ಕೋಣೆಗೆ ಹೋಗಿದ್ದಾನೆ. ಅಲ್ಲಿ ಈ ಅವಾಂತರ ನಡೆದಿದೆ.

ಹಾಗಾಗಿ ಸಾಮಾಜಿಕವಾಗಿ, ಮಾನಸಿಕವಾಗಿ ಶೈಕ್ಷಣಿಕ ವಾಗಿ ಈ ಪೋಟೋಶೂಟ್‌ಗಳು ಹೇಗಿರಬೇಕೆಂದು ಸಭ್ಯರಾದವರು ಯೋಚಿಸಿ ನಿರ್ವಹಿಸಬೇಕಿದೆ. ತಾಳಿಯೇ ಕಟ್ಟದೇ, ಹಿಂದಿನ ದಿನವೇ ಆರತಾಕ್ಷತೆ (ರಿಸೆಪ್ಷನ್) ನಡೆಸುವ ಅನಾಚಾರವನ್ನು ನಮ್ಮ
ಅನುಕೂಲವೆಂದು ಈಗಾಗಲೇ ಚಾಲ್ತಿಗೆ ತಂದು ಒಪ್ಪಿದ್ದೇವೆ. ಆದರೆ ಅಪ್ಪುಗೆಯ ವಿಧ-ವಿಧ ಭಂಗಿಗಳನ್ನು ಕಾಣಲು ನಾವಿಂದು ಮದುವೆಗೆ ಹೋಗುತ್ತಿದ್ದೇವೆಯೋ ಎಂದೆನಿಸಿದೆ.

ಗುರು-ಹಿರಿಯರ ಆಶೀರ್ವಾದದ ಶ್ರೇಯಸ್ಸಿಗಿಂತ ಅಲ್ಲಿಯ ವಿಜೃಂಭಿತ ಆಡಂಬರಗಳೇ ಅಲ್ಲಿ ಮೇಲಾಗಿದೆ. ಎಲ್ಲರೂ ತೃಪ್ತಿಯಾಗಿ ಊಟ ಮಾಡಿದರೇ? ಎನ್ನುವುದಕ್ಕಿಂತ ಎಷ್ಟು ರೀತಿಯ ಖಾದ್ಯ ಮಾಡಿಸಿದ್ದೇವೆ ಎಂಬ ಒಣಜಂಭವೇ ಮೆರೆಯುತ್ತಿರುತ್ತದೆ. ಹಾಗಾಗಿ ಮದುವೆ ಎನ್ನುವುದು ಜೀವನ ಪೂರ್ತಿ ಗಳಿಸಿ ಕೂಡಿಟ್ಟ ಸಂಪಾದನೆಯನ್ನು ಎರಡೇ ಎರಡು ದಿನಗಳಲ್ಲಿ ಖರ್ಚು ಮಾಡುವ
ಒಂದು ಕಾರ್ಯ ಎನ್ನುವ ವ್ಯಾಖ್ಯಾನಕ್ಕಿಂತ ಎರಡು ದಿನದಿಂದ ದೊರೆತ ಗುರು-ಹಿರಿಯರ ಶುಭಾಶೀರ್ವಾದಗಳಿಂದ ಜೀವನ ಪೂರ್ತಿ ಸುಖ-ಸಂತೋಷದಿಂದ ಬಾಳುವ ಒಂದು ಮಹತ್ಕಾರ್ಯ ಎನ್ನುವಂತಹ ವ್ಯಾಖ್ಯಾನಕ್ಕೆ ಬದಲಾಗಲಿ.

ಮದುವೆಯೆಂಬುದು ಆಘಾತವಾಗದೇ ಆಸ್ವಾದಿಸುವಂತಿರಲಿ, ಅತ್ತ ಕಡೆ ನಮ್ಮ ಆಲೋಚನೆಯಿರಲಿ. ಅಂತಹುದೊಂದು
ಮನಸ್ಸು ನಮ್ಮ ಸಮಾಜದಲ್ಲಿ ನಿರ್ಮಾಣವಾಗಲಿ ಎಂಬುದೇ ಈ ಲೇಖಕಿಯ ಸದಾಶಯ. ನಿಮದೂ ಇದೇ ತಾನೇ? ಹೌದಲ್ಲವೇ? ಮುಂದಿನ ವಾರ ಮುಂದಿನ ಮುದ್ದುರಾಮನ ನುಡಿಯೊಂದಿಗೆ ಮುದ್ದಿನ ಹೆಜ್ಜೆ ಇರಿಸೋಣ.