Sunday, 15th December 2024

ಕಸದ ಹೊಳೆಯಲ್ಲಿ ಮುಳುಗಿದ ನಗರಸಭೆ ಮಾಸಿಕ ಸಭೆ : ಸದಸ್ಯರ ಆರೋಪಗಳ ಸುರಿಮಳೆ

ತಿಪಟೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಡಿ ಸ್ವಚ್ಛ ಭಾರತ್ ಅಭಿಯಾನದ ನಗರದ ನೈರ್ಮಲೀಕರಣ ರೋಗಮುಕ್ತ ಸ್ವಚ್ಛ ವಾತಾವರಣ ನಿರ್ಮಿಸಲು ಲಕ್ಷಾಂತರ ರೂಗಳನ್ನು ವ್ಯಯ ಮಾಡಿ ಪ್ರತಿ ನಗರದ ಮನೆ ಮನೆಗಳಿಗೆ ಕಸದ ವಾಹನ ವ್ಯವಸ್ಥೆ ಮಾಡಿದ್ದರು ತ್ಯಾಜ್ಯ ಕಸವನ್ನು ರಸ್ತೆ ಬದಿಯಲ್ಲಿ ಬುದ್ಧಿವಂತ ನಾಗರಿಕರು ಹಾಕುವುದು ಅಸಹ್ಯಕರವೆಂದು ನಗರಸಭೆ ಅಧ್ಯಕ್ಷ ಪಿ.ಜೆ. ರಾಮಮೋಹನ್ ಬೇಸರ ವ್ಯಕ್ತಪಡಿಸಿದರು.

ನಗರಸಭೆ ಆವರಣದಲ್ಲಿ ಏರ್ಪಡಿಸಿದ್ದ ಮಾಸಿಕ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿ ಸುತ್ತಾ ಬುದ್ಧಿವಂತ ನಗರವಾಸಿಗಳಲ್ಲಿ ಕಸ ವಿಲೇವಾರಿಯಲ್ಲಿ ಸ್ವಚ್ಛತೆ ಅರಿವು ಮೂಡದಿ ರುವುದು ಬೇಸರವೆನಿಸಿದೆ ನೀವು ಕಸ ಹಾಕುವ ಸಮಯಕ್ಕೆ ವಾಹನ ಬರದಿದ್ದರೆ ಮತ್ತೊಂದು ದಿನ ವಿಲೇವಾರಿಗೆ ಪ್ರಯತ್ನಿಸಿ ಕಸ ಪಡೆಯುವ ಸಿಬ್ಬಂದಿಗೆ ಕಸದ ಬುಟ್ಟಿಯಿರುವ ಜಾಗ ತಿಳಿಸಿ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಬೇಡಿ ಎಂದು ಮನವಿ ಮಾಡಿದರು.

ನಗರದ ೧೨ನೇ ವಾರ್ಡಿನ ಮಲ್ಲೇಶ ನಾಯಕ ಮಾತನಾಡಿ ಯುಜಿಡಿ ಅಸಮರ್ಪಕ ಜೋಡಣೆಯಲ್ಲಿ ಹಳೆಪಾಳ್ಯದ ಮಹಾಲಕ್ಷ್ಮಿ ದೇವಸ್ಥಾನದ ಬಳಿ ಕಲುಷಿತ ನೀರು ಉಕ್ಕಿ ಹರಿಯುತ್ತಿದೆ ದೇವಸ್ಥಾನಕ್ಕೆ ಬರುವ ಭಕ್ತರು ನಗರಸಭೆಗೆ ಮತ್ತು ಮತ ಹಾಕಿದ ತಪ್ಪಿಗೆ ಇಡೀ ಶಾಪ ಹಾಕುತ್ತಾರೆ, ನಗರಸಭೆ ಸಿಬ್ಬಂದಿಗಳು ಒಬ್ಬರು ಸಹ ಸ್ಥಳ ಪರಿಶೀಲನೆ ಮಾಡಿಲ್ಲ ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು

೭ನೇ ವಾರ್ಡಿನ ಎಂ ಎಸ್ ಯೋಗೀಶ್ ಮಾತನಾಡಿ ಸೀತಾರಾಮಯ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಛತ್ರದವರು ಕಸ ಬಿಸಾಡುತ್ತಾರೆ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಏನಾದರೂ ಮಾಮೂಲು ಪಡೆಯುತ್ತಿದ್ದೀರಾ ಎಂದು ಪ್ರಶ್ನಿಸಿದರು. ಉತ್ತರಿಸಿದ ಪೌರಾಯುಕ್ತ ಉಮಾಕಾಂತ್ ಖಂಡಿತವಾಗಿಯೂ ತಿಪಟೂರು ನಗರಸಭೆಯಲ್ಲಿ ಅಂತಹ ವಾತಾವರಣವಿಲ್ಲ ಅವರನ್ನೇ ಕರೆಯಿಸಿ ಕೇಳಿ ಮುಂದಿನ ದಿನಗಳಲ್ಲಿ ದಂಡ ವಿಧಿಸುವ ಪ್ರಕ್ರಿಯೆ ಮಾಡುತ್ತಿದ್ದೇವೆ ಎಂದರು.

ಚರ್ಚೆಗೆ ಗ್ರಾಸವಾದ ಕತ್ತೆ ಕಾಯುವ ವಿಚಾರ, ನಗರಸಭೆಯ ಎರಡನೇ ವಾರ್ಡಿನ ಸದಸ್ಯರಾದ ಡಾ, ಒಹಿಲಾ ಗಂಗಾಧರ್ ಸಭೆಯ ಆವರಣದಲ್ಲಿ ನಗರಸಭೆಯಲ್ಲಿಯೇ ಮೊದಲ ಬಾರಿಗೆ ಪ್ರೊಜೆಕ್ಟರ್ ವಾರ್ಡಿನ ಸಮಸ್ಯೆಯಾದ ಶೌಚಾಲಯ ನಿರ್ಮಿಸಿ ಎನ್ನುತ್ತಾ ಸರ್ಕಾರಿ ಬೋರ್‌ವೆಲ್ ಪಕ್ಕದಲ್ಲಿಯೇ ಮೂತ್ರ ವಿಸರ್ಜಿಸುತ್ತಿದ್ದ ವಿಡಿಯೋ ಪ್ಲೇ ಮಾಡಿ ಅಧಿಕಾರಿಗಳು ಮತ್ತು ಸದಸ್ಯರ ಗಮನ ಸೆಳೆದರು, ಮತ ನೀಡಿದ ಪ್ರಭುಗಳು ನಮ್ಮನ್ನು ಪ್ರೀತಿಸುತ್ತಾರೆ.

ನಾವು ಕತ್ತೆ ಕಾಯಲು ಇಲ್ಲಿಗೆ ಬರಬೇಕೇ ಎಂದಾಗ ಸರಿಯಾಗಿ ಅರ್ಥಮಾಡಿಕೊಳ್ಳದೆ ಪೌರಾಯುಕ್ತ ಉಮಾ ಕಾಂತ್ ಹಾಗೂ ಎ ಡಬ್ಲ್ಯೂ ಈ ನಾಗೇಶ್, ತಮ್ಮ ಮಾತಿನ ಮೇಲೆ ಹಿಡಿತವಿರಲಿ ಅಧಿಕಾರಿಗಳ ಮೇಲೆ ಮನಸೂ ಇಚ್ಛೆ ಮಾತನಾಡಬೇಡಿ ನಗರದ ಸ್ವಚ್ಛತೆ ಮತ್ತು ಸೇವೆಗಾಗಿ ಹಗಲಿರುಳು ಶ್ರಮಿಸುತಿದ್ದೇವೆ ಎಂದು ರೇಗಿದರು, ನಗರದಲ್ಲಿ ೬ ಕಡೆ ಸುಲಭ್ ಶೌಚಾಲಯ ನಿರ್ಮಿಸಿದ್ದೇವೆ. ಯಾರು ಸಹ ಸರಿಯಾಗಿ ಉಪಯೋಗಿಸುತ್ತಿಲ್ಲ ಸ್ವಚ್ಛ ಭಾರತ್ ಅಭಿಯಾನದಡಿ ಯಾವುದೇ ಟೆಂಡರ್ ಆಗಿಲ್ಲ ಮುಂದಿನ ದಿನಗಳಲ್ಲಿ ಟೆಂಡರ್ ಕರೆದಾಗ ನಿರ್ಮಿಸಲು ಪ್ರಯತ್ನಿಸುತ್ತೇವೆ ಎಂದರು.

ಉಪಾಧ್ಯಕ್ಷ ಸೊಪ್ಪು ಗಣೇಶ್ ಕೆಲವು ಕಡೆ ಕಸದ ವಾಹನದ ಸಿಬ್ಬಂದಿ ಕಸ ಪಡೆಯಲು ತಾರತಮ್ಯ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಎಲ್ಲಾ ವಾರ್ಡುಗಳಿಗೂ ನಿಗದಿತ ಸಮಯಕ್ಕೆ ಕಸದ ವಾಹನ ಹೋಗಬೇಕು ಎಂದು ಎಚ್ಚರಿಸಿದರು.

ಪತ್ರಕರ್ತರೊಬ್ಬರು ಮಾತನಾಡಿ ನಗರಸಭೆ ವಾರ್ಷಿಕ ಬಜೆಟ್ ಮಂಡಿಸುವಾಗ ಖಾಲಿ ನಿವೇಶನದಲ್ಲಿ ಗಿಡ ಗಂಟೆ ಬೆಳೆದರೆ ಮಾಲೀಕರ ಗಮನಕ್ಕೆ ತಂದು ಸ್ವಚ್ಚತಗೊಳಿಸಿ ಕಂದಾಯದ ರೂಪದಲ್ಲಿ ಹಣವಸೂಲಿ ಮಾಡುವುದಾಗಿ ಹೇಳಿದ್ದೀರಿ ಆದರೆ ನಗರಸಭೆ ಅಧ್ಯಕ್ಷರು ವಾಸಿಸುವ ಮನೆ ಪಕ್ಕದಲ್ಲಿ ಅರ್ಧ ಮನೆ ಎತ್ತರಕ್ಕೆ ಬೆಳೆದಿವೆ ಅವರ ಮನೆಯಲ್ಲಿ ಚಿಕ್ಕ ಮಕ್ಕಳು ವೃದ್ದರು ವಾಸಿಸುತ್ತಿದ್ದಾರೆ ಸ್ವಚ್ಚತೆ ಗೊಳಿಸಿ ಎಂದು ಮನವಿ ಮಾಡಿದ ಪ್ರಸಂಗ ಸಭೆಯಲ್ಲಿ ನಡೆಯಿತು. ಕೆಲಕಾಲ ಎಲ್ಲರು ನಗೆಗಡಲಲ್ಲಿ ತೇಲಿದ ಪ್ರಸಂಗ ನಡೆಯಿತು.

೨೯ ನೇ ವಾರ್ಡಿನ ಲತಾ ಲೋಕೇಶ್ ಮಾತನಾಡಿ ನಮ್ಮ ವಾರ್ಡಿನಲ್ಲಿ ನಾಲ್ಕು ಪಂಪ್‌ಸೆಟ್‌ನ ಕೇಬಲ್‌ಗಳನ್ನು ರಿಪೇರಿಗಾಗಿ ತೆಗೆದಿದ್ದಾರೆ ಇನ್ನೂ ಸಹ ಸರಿಪಡಿಸಿಲ್ಲ, ರಸ್ತೆ ಮತ್ತು ಚರಂಡಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ. ಕುಡಿಯುವ ನೀರಿಗೆ ಮತ್ತು ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಗರಸಭೆ ಅಧ್ಯಕ್ಷ ರಾಮ್ ಮೋಹನ್ ನಗರೋತ್ಪನ್ನ ಯೋಜನೆಯ ೪ನೇ ಹಂತದ ಹಣ ೧೬ ಲಕ್ಷ ಬಿಡುಗಡೆಯಾಗಿದ್ದು, ಕುಡಿಯುವ ನೀರು ಸಾರ್ವಜನಿಕ ಶೌಚಾಲಯ ನಗರ ನೈರ್ಮಲೀಕರಣಕ್ಕೆ ಹೆಚ್ಚಿನ ಆದ್ಯತೆ ಮಾಡುತ್ತೇವೆ, ಹಾಗೂ ಎಲ್ಲಾ ವಾರ್ಡಗಳಿಗೆ ಎಲ್ ಇ ಡಿ ದೀಪದ ವ್ಯವಸ್ಥೆಯಾಗಲಿದೆ. ಎಲ್ಲಿಂದರಲ್ಲಿ ಕಸ ಚೆಲ್ಲುವ ಅನಾಗರಿಕರಿಗೆ ನಗರಸಭೆಯ ಸಿಬ್ಬಂದಿಗಳು ಮಫ್ತಿ ಡ್ರೆಸ್ ಧರಿಸಿ ಓಡಾಡುತ್ತಾರೆ ಕಸ ಹಾಕುವವರ ಮೇಲೆ ದಂಡವಿಧಿಸಲಿದ್ದು ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಸದಸ್ಯರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಿರಣ್, ಉಪಾಧ್ಯಕ್ಷ ಸೊಪ್ಪು ಗಣೇಶ್, ಪೌರಾಯುಕ್ತ ಉಮಾಕಾಂತ್, ಎಇಇ ನಾಗೇಶ್, ನಗರಸಭಾ ಸದಸ್ಯರು, ನಗರಸಭೆಯ ಎಲ್ಲ ಅಧಿಕಾರಿಗಳು ಇದ್ದರು.