ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 46ನೇ ಪಂದ್ಯ ದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿದೆ.
ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 129 ರನ್ ಪೇರಿಸಿತ್ತು. ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ನಷ್ಟಕ್ಕೆ 132 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಮುಂಬೈ ಪರ ರೋಹಿತ್ ಶರ್ಮಾ 7, ಡಿಕಾಕ್ 19, ಸೂರ್ಯಕುಮಾರ್ ಯಾದವ್ 33, ಪಾಂಡ್ಯ 17 ರನ್ ಬಾರಿಸಿದರು.
ಡೆಲ್ಲಿ ಪರ ರಿಷಬ್ ಪಂತ್ 26 ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅಜೇಯ 33 ನೆರವಿನಿಂದ ತಂಡ 4 ವಿಕೆಟ್ ಗಳ ಜಯ ಗಳಿಸುವಲ್ಲಿ ಸಾಧ್ಯವಾಯಿತು. ಗೆಲುವಿಗಾಗಿ ಕಡೇ ಹಂತದವರೆಗೂ ಹೋರಾಡಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-14ರ ಎರಡನೇ ಭಾಗದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 4 ವಿಕೆಟ್‌ಗಳಿಂದ ಶರಣಾಯಿತು.
ಪ್ಲೇಆಫ್ ಹಂತಕ್ಕೇರಲು ಪ್ರಮುಖವಾಗಿದ್ದ ಹಣಾಹಣಿಯಲ್ಲಿ ನಿರಾಸೆ ಅನುಭವಿಸಿದ ಮುಂಬೈ ಇಂಡಿಯನ್ಸ್ ಮುಂದಿನ ಹಾದಿ ಮತ್ತಷ್ಟು ಕಠಿಣಗೊಂಡಿತು. ಲೀಗ್‌ನಲ್ಲಿ 7ನೇ ಸೋಲು ಕಂಡ ಮುಂಬೈ ತಂಡದ ಪ್ಲೇಆಫ್ ಹಾದಿ ಅನಿಶ್ಚಿತತೆಯಲ್ಲಿದೆ. ಎರಡನೇ ತಂಡವಾಗಿ ಪ್ಲೇಆಫ್ ಖಾತ್ರಿಯೊಂದಿಗೆ ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಹಳಿಗೇರುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿತು.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗಿಳಿದ ಮುಂಬೈ ತಂಡ, ವೇಗಿ ಆವೇಶ್ ಖಾನ್ (15ಕ್ಕೆ 3) ಹಾಗೂ ಸ್ಪಿನ್ನರ್ ಅಕ್ಷರ್ ಪಟೇಲ್ (21ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿ 8 ವಿಕೆಟ್‌ಗೆ 129 ರನ್ ಪೇರಿಸಲಷ್ಟೇ ಶಕ್ತವಾಯಿತು.
ಮುಂಬೈ ಇಂಡಿಯನ್ಸ್: 8 ವಿಕೆಟ್‌ಗೆ 129
ಡೆಲ್ಲಿ ಕ್ಯಾಪಿಟಲ್ಸ್ : 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 132