Sunday, 15th December 2024

Murder Case: ತ್ರಿಕೋನ ಪ್ರೇಮ ಪ್ರಕರಣ; ಪ್ರಿಯಕರನಿಗಾಗಿ ಇನ್ಸ್‌ಪೆಕ್ಟರ್‌ ಕೊಲೆಗೆ ಸ್ಕೆಚ್‌ ಹಾಕಿದ ಲೇಡಿ ಕಾನ್‌ಸ್ಟೇಬಲ್‌!

Murder Case

ಮಹಿಳಾ ಕಾನ್ಸ್ಟೇಬಲ್ ತನ್ನ ಗೆಳೆಯನೊಂದಿಗೆ ಸೇರಿ ಸಬ್ ಇನ್ಸ್ಪೆಕ್ಟರ್‌ನ್ನು ಅಪಘಾತ ಮಾಡಿ ಕೊಂದ ಘಟನೆ ಮಧ್ಯಪ್ರದೇಶದ ರಾಜ್‌ಗಢದಲ್ಲಿ ನಡೆದಿದೆ. ಈ ಕೊಲೆ(Murder case)ಯನ್ನು ಎಷ್ಟು ಕ್ರೂರವಾಗಿ ಮಾಡಲಾಗಿದೆಯೆಂದರೆ, ಎಸ್‍ಐಗೆ ಡಿಕ್ಕಿ ಹೊಡೆದ ನಂತರವೂ ಅವರ ದೇಹವನ್ನು ಅದೇ ಕಾರಿನ ಮೂಲಕ 30 ಮೀಟರ್‌ವರೆಗೆ ಎಳೆದೊಯ್ದು ಕ್ರೂರವಾಗಿ ಕೊಂದಿದ್ದಾರೆ. ನಂತರ ಅದನ್ನುಅಪಘಾತವೆಂದು ಬಿಂಬಿಸಿದ್ದಾರೆ. ಆದರೆ ಈ ಬಗ್ಗೆ ಮಹಿಳಾ ಕಾನ್ಸ್ಟೇಬಲ್ ಅನ್ನು ವಿಚಾರಣೆ ನಡೆಸಿದಾಗ ಸತ್ಯ ಹೊರಗೆ ಬಂದಿದೆ. ಆದರೆ ಕೊಲೆ ಪಿತೂರಿಯ ಹಿಂದೆ ಅಡಗಿರುವ ತ್ರಿಕೋನ ಪ್ರೇಮಕಥೆ ಮತ್ತು ಮೋಸದ ಬಗ್ಗೆ ತಿಳಿದು ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ.

ಕೊಲೆಯಾದ ಎಸ್‍ಐ ದೀಪಂಕರ್ ಗೌತಮ್ ಎಂಬುದಾಗಿ ಹಾಗೂ ಆರೋಪಿಗಳು ಮಹಿಳಾ ಕಾನ್ಸ್ಟೇಬಲ್ ಪಲ್ಲವಿ ಮತ್ತು ಅವರ ಗೆಳೆಯ ಕರಣ್ ಠಾಕೂರ್ ಎಂಬುದಾಗಿ ತಿಳಿದುಬಂದಿದೆ. ಕೊಲೆ ಮಾಡಿದ ಬಳಿಕ ಪಲ್ಲವಿ ಹಾಗೂ ಕರಣ್ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಕಟ್ಟು ಕಥೆಯನ್ನು ಹೇಳುತ್ತಾ ಅವರ ಕಾರು ಅಪಘಾತಕ್ಕೀಡಾಗಿದೆ ಎಂದು ಹೇಳಿದ್ದರು. ಆದರೆ ಅನುಮಾನಗೊಂಡ ಪೊಲೀಸರು ಮಹಿಳಾ ಕಾನ್ಸ್ಟೇಬಲ್ ಅನ್ನು ತಡರಾತ್ರಿಯವರೆಗೆ ವಿಚಾರಣೆ ನಡೆಸಿದಾಗ, ಇದು ಅಪಘಾತವಲ್ಲ, ಕೊಲೆ ಎಂಬುದಾಗಿ ತಿಳಿದುಬಂದಿದೆ.

ಈ ಘಟನೆ ಸೆಪ್ಟೆಂಬರ್ 10ರ ಮಂಗಳವಾರ ನಡೆದಿದೆ. ಮಹಿಳಾ ಕಾನ್ಸ್ಟೇಬಲ್ ಪಲ್ಲವಿ ಸೋಲಂಕಿಯ ಕಾರು ಬೈಕ್‍ನಲ್ಲಿ ಹೋಗುತ್ತಿದ್ದ ಎಸ್ಐ ದೀಪಂಕರ್ ಗೌತಮ್‌ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ದೀಪಂಕರ್ ಗಂಭೀರವಾಗಿ ಗಾಯಗೊಂಡಿದ್ದು, ಪಲ್ಲವಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಎಸ್ಐ ಅವರನ್ನು ಬೀವಾರ್ನ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಆದರೆ ದೀಪಂಕರ್ ಅವರನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವ ಮೊದಲು, ಅವರು ಮಾರ್ಗಮಧ್ಯೆ ನಿಧನರಾಗಿದ್ದರು. ವಾಸ್ತವವಾಗಿ, ಮಹಿಳಾ ಕಾನ್ಸ್ಟೇಬಲ್ ಮತ್ತು ಆಕೆಯ ಸ್ನೇಹಿತ ಕರಣ್ ಸಂಬಂಧ ಹೊಂದಿದ್ದರು. ಕೆಲವು ದಿನಗಳ ಹಿಂದೆ ಪರಸ್ಪರ ಜಗಳದಿಂದಾಗಿ ಇಬ್ಬರೂ ಬೇರೆಯಾಗಿದ್ದರು. ಈ ಸಮಯದಲ್ಲಿ, ಎಸ್ಐ ದೀಪಂಕರ್ ಅವರ ಜೊತೆ ಪಲ್ಲವಿಗೆ ಸ್ನೇಹ ಬೆಳೆದಿದೆ. ಆದರೆ ಕರಣ್‍ಗೆ ಈ ವಿಚಾರ ತಿಳಿದು ಮತ್ತೆ ಪಲ್ಲವಿಯೊಂದಿಗೆ ಸಂಬಂಧ ಮುಂದುವರಿಸಿದ್ದಾನೆ.

ಇದನ್ನೂ ಓದಿ:ರೀಲ್‍ ಕ್ರೇಜ್‌; ಹರಿದ್ವಾರದಲ್ಲಿ ಗಂಗಾ ನದಿಗೆ ಬಿದ್ದ ಯುವತಿ!

ಇಬ್ಬರೂ ಮತ್ತೆ ಒಂದಾಗಿ ಎಸ್ಐ ಅನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಾರೆ. ಪಲ್ಲವಿ ತನ್ನ ಪೊಲೀಸ್ ಬುದ್ಧಿವಂತಿಕೆಯನ್ನು ಬಳಸಿಕೊಂಡು, ಎಸ್ಐ ಅನ್ನು ಕೊಲ್ಲಲು ಯೋಜನೆ ಹಾಕಿದ್ದಳು. ಈ ಯೋಜನೆಯಡಿ, ಮಂಗಳವಾರ, ಪಲ್ಲವಿ ದೀಪಂಕರ್ ಅವರನ್ನು ತನ್ನ ಬಳಿಗೆ ಕರೆದು ಕಾರಿನಿಂದ ಡಿಕ್ಕಿ ಹೊಡೆದು ಕೊಂದಿದ್ದಾಳೆ. ಆದರೆ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದವರಿಗೆ ಪೊಲೀಸರು ಸರಿಯಾಗಿ ವಿಚಾರಣೆ ನಡೆಸಿ ಸತ್ಯ ಬಾಯಿಬಿಡಿಸಿದ್ದಾರೆ. ಹಾಗಾಗಿ ಪ್ರಸ್ತುತ, ಕೊಲೆ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಅರೆಸ್ಟ್ ಮಾಡಿದ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.